ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ಕ್ರಿಕೆಟ್ ಸಮಿತಿಗೆ ಕುಂಬ್ಳೆ ಮುಖ್ಯಸ್ಥ

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೊಲಂಬೊ (ಪಿಟಿಐ): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ಅನಿಲ್ ಕುಂಬ್ಳೆ ಅವರು ಐಸಿಸಿ ಕ್ರಿಕೆಟ್ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡರು.

ವೆಸ್ಟ್‌ಇಂಡೀಸ್‌ನ ಮಾಜಿ ಆಟಗಾರ ಕ್ಲೈವ್ ಲಾಯ್ಡ ಅವರಿಂದ ತೆರವಾದ ಸ್ಥಾನವನ್ನು ಕರ್ನಾಟಕದ ಮಾಜಿ ಆಟಗಾರ ತುಂಬಲಿದ್ದಾರೆ. ಈ ವಾರದ ಆರಂಭದಲ್ಲಿ ಕೊಲಂಬೊದಲ್ಲಿ ನಡೆದ ಸಭೆಯಲ್ಲಿ ಕುಂಬ್ಳೆ ಅವರ ಅವಿರೋಧ ಆಯ್ಕೆ ನಡೆಯಿತು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಗುರುವಾರ ತಿಳಿಸಿದೆ.

`ಅನಿಲ್ ಕುಂಬ್ಳೆ ಅವರು ಕ್ರಿಕೆಟ್ ಸಮಿತಿಯ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಒಬ್ಬ ಆಟಗಾರ ಮಾತ್ರವಲ್ಲ ಕೆಎಸ್‌ಸಿಎ ಅಧ್ಯಕ್ಷರಾಗಿದ್ದುಕೊಂಡು ಆಡಳಿತಗಾರನಾಗಿಯೂ ಅವರು ಅಪಾರ ಅನುಭವ ಹೊಂದಿದ್ದಾರೆ~ ಎಂದು ಐಸಿಸಿ ಅಧ್ಯಕ್ಷ ಅಲನ್ ಐಸಾಕ್ ಗುರುವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಹೇಳಿದರು.

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಅವರು ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ. ವೆಸ್ಟ್‌ಇಂಡೀಸ್‌ನ ಇಯಾನ್ ಬಿಷಪ್ ಇನ್ನೊಂದು ಅವಧಿಗೆ ಸಮಿತಿಯಲ್ಲಿ ಮುಂದುವರಿಯುವುದಿಲ್ಲ ಎಂದಿದ್ದರು. ಅವರಿಂದ ತೆರವಾದ ಸ್ಥಾನವನ್ನು ಸ್ಟ್ರಾಸ್ ತುಂಬಲಿದ್ದಾರೆ.

`ಕ್ಲೈವ್‌ಲಾಯ್ಡ ತಮ್ಮ ಅವಧಿಯಲ್ಲಿ ಮಾಡಿರುವ ಉತ್ತಮ ಕೆಲಸಗಳನ್ನು ಕುಂಬ್ಳೆ ಮುಂದುವರಿಸಿಕೊಂಡು ಹೋಗುವರು ಎಂಬ ವಿಶ್ವಾಸ ನನ್ನದು. ಇಂದು ಕ್ರಿಕೆಟ್ ಎದುರಿಸುತ್ತಿರುವ ಸಮಸ್ಯೆಗಳು ಏನು ಎಂಬುದರ ಬಗ್ಗೆ ಸ್ಪಷ್ಟ ಅರಿವು ಕುಂಬ್ಳೆ ಮತ್ತು ಸ್ಟ್ರಾಸ್‌ಗೆ ಇದೆ~ ಎಂದು ಐಸಾಕ್ ನುಡಿದಿದ್ದಾರೆ.

ಮುಂದಿನ ಎರಡು ವರ್ಷಗಳ ಅವಧಿಗೆ ಕುಂಬ್ಳೆ ನೇಮಕ ನಡೆದಿದೆ. ಐಸಿಸಿ ಕ್ರಿಕೆಟ್ ಸಮಿತಿ ವರ್ಷಕ್ಕೆ ಎರಡು ಸಲ ಸಭೆ ನಡೆಸಲಿದೆ. ಈ ವರ್ಷದ ಎರಡನೇ ಸಭೆ ಮುಂದಿನ ತಿಂಗಳು ನಡೆಯುವ ಸಾಧ್ಯತೆಯಿದೆ.

2008 ರಿಂದ ಕ್ರಿಕೆಟ್ ಸಮಿತಿ ಮುಖ್ಯಸ್ಥರಾಗಿದ್ದ ಲಾಯ್ಡ ಕಾರ್ಯವೈಖರಿಯ ಬಗ್ಗೆ ಐಸಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ. `ಐಸಿಸಿ ಮುಖ್ಯಸ್ಥರಾಗಿ ಲಾಯ್ಡ ಈ ಕ್ರೀಡೆಗೆ ನೀಡಿರುವ ಕೊಡುಗೆಗಾಗಿ ಅವರಿಗೆ ಅಭಿನಂದನೆ ಸಲ್ಲಿಸುವೆ. ಆದೇ ರೀತಿ ಇಯಾನ್ ಬಿಷನ್ ಕೂಡಾ ಉತ್ತಮ ಕೆಲಸ ನಿರ್ವಹಿಸಿದ್ದಾರೆ~ ಎಂದು ಐಸಾಮ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT