ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಪಕ್ಷಕ್ಕೆ ಎರಡು ವರ್ಷ ಅವಕಾಶ!

ಮಹಿಳೆಗೆ ವಿಧಾನಸಭೆಯ ದಾರಿ ತೋರಿಸಿದ ಕ್ಷೇತ್ರ/ ಕುಮಟಾ ವಿಧಾನಸಭಾ ಕ್ಷೇತ್ರ
Last Updated 5 ಏಪ್ರಿಲ್ 2013, 6:24 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಿಂದ ಏಕೈಕ ಮಹಿಳಾ ಪ್ರತಿನಿಧಿಯನ್ನು ವಿಧಾನಸಭೆಗೆ ಪರಿಚಯಿಸಿದ ಕ್ಷೇತ್ರ ಕುಮಟಾ. 1957 ಹಾಗೂ 62ರಲ್ಲಿ ಒಟ್ಟು ಎರಡು ಬಾರಿ ಈ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕಿಯಾಗಿ ವಸಂತಲತಾ ಮಿರ್ಜಾನಕರ್ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದಾರೆ.

ಆ ಬಳಿಕ, ಅಂದರೆ 1962ರ ನಂತರ ಒಟ್ಟು ಹತ್ತು ಸಲ ವಿಧಾನಸಭೆ ಚುನಾವಣೆಗೆ ನಡೆದಿದೆ. ಆದರೆ ಮಹಿಳೆ ಪ್ರತಿನಿಧಿಯೊಬ್ಬರು ಆಯ್ಕೆಯಾಗುವುದು ಒತ್ತಟ್ಟಿಗಿರಲಿ; ಚುನಾವಣೆಗೆ ಸ್ಪರ್ಧಿಸಿದ ಉದಾಹರಣೆಯೂ ವಿರಳ. ಮಿರ್ಜಾನಕರ್ ಅವರು ವಿಧಾನಸಭೆ ಪ್ರವೇಶ ಮಾಡಲು ನೆರವಾಗಿದ್ದು ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ. ಅಂದಿನ ಕುಮಟಾ ತಾಲ್ಲೂಕು ಬೋರ್ಡ್‌ನ ಅಧ್ಯಕ್ಷರಾಗಿದ್ದ ಬಿ.ಎಂ.ಪೈ ಅವರು ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರು ಅವರಿಗೆ ಆತ್ಮೀಯರಾಗಿದ್ದರು.

ಹೆಗಡೆ ಮತ್ತು ಪೈ ಅವರ ಮಧ್ಯೆ ಯಾವುದೋ ಕಾರಣದಿಂದ ವೈಮನಸ್ಸು ಬೆಳೆದಿತ್ತು. ಪೈ, ನೆಹರು ಅವರಿಗೆ ಆತ್ಮೀಯರಾಗಿರುವುದರಿಂದ ಕುಮಟಾ ಕ್ಷೇತ್ರದಿಂದ ಅವರೇ ಕಣಕ್ಕೆ ಇಳಿಯುತ್ತಾರೆ ಎನ್ನುವುದನ್ನು ಅರಿತಿದ್ದ ಹೆಗಡೆಯವರು ವಸಂತಲತಾ ಮಿರ್ಜಾನಕರ್ ಅವರ ರಾಜಕೀಯ ರಂಗ ಪ್ರವೇಶಕ್ಕೆ ವೇದಿಕೆ ಸಜ್ಜುಗೊಳಿಸಿದರು. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭವಾಯಿತು ಎಂಬಂತೆ ವಸಂತಲತಾ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಪೈ ಅವರ ವಿರುದ್ಧ ತೊಡೆ ತಟ್ಟಿದ್ದ ಹೆಗಡೆ, ವಸಂತಲತಾ ಅವರನ್ನು ಗೆಲ್ಲಿಸಲೇಬೇಕಾಗಿತ್ತು. ಸತತ ಪ್ರಯತ್ನಗಳ ನಂತರ ವಸಂತಲತಾ ಅವರನ್ನು ಗೆಲ್ಲಿಸುವಲ್ಲಿ ಹೆಗಡೆ ಯಶಸ್ವಿಯಾದರು.

ಜಿಲ್ಲೆಯಲ್ಲಿ ಕುಮಟಾ ಕ್ಷೇತ್ರವೂ ಕಾಂಗ್ರೆಸ್‌ನ ಭದ್ರಕೋಟೆ. ಒಟ್ಟು ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಇಲ್ಲಿ ಏಳು ಬಾರಿ ಜಯಗಳಿಸಿದೆ. 1989ರಲ್ಲಿ ಆಯ್ಕೆಯಾಗಿರುವ ಕೃಷ್ಣ ಗೌಡ ಹೊರತುಪಡಿಸಿ ವಸಂತಲತಾ ಮಿರ್ಜಾನಕರ್, ಸೀತಾರಾಮ ನಾಯ್ಕ, ಮೋಹನ ಶೆಟ್ಟಿ ಎರಡೆರಡು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ಕ್ಷೇತ್ರದಲ್ಲಿ ಶಾಸಕರೊಬ್ಬರು ಎರಡಕ್ಕಿಂತ ಹೆಚ್ಚುಬಾರಿ ಆಯ್ಕೆಯಾಗಿರುವ ಉದಾಹರಣೆಗಳಿಲ್ಲ. 1967ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ರಾಮಚಂದ್ರ ಹೆಗಡೆ, 1983, 94ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಡಾ. ಎಂ.ಪಿ.ಕರ್ಕಿ ಹಾಗೂ 2008ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ ದಿನಕರ ಶೆಟ್ಟಿ ಕಾಂಗ್ರೆಸ್ ಭದ್ರಕೋಟೆಯನ್ನು ಭೇದಿಸಿದವರಲ್ಲಿ ಪ್ರಮುಖರು.

ಕ್ಷೇತ್ರದ ಒಟ್ಟಾರೆ ಚಿತ್ರಣ ನೋಡಿದರೆ ಮತದಾರರು ಪಕ್ಷದೊಂದಿಗೆ ವ್ಯಕ್ತಿಗೂ ಆದ್ಯತೆ ನೀಡಿದೆ ಎನ್ನುವುದ ಸ್ಪಷ್ಟ. ವ್ಯಕ್ತಿ ಮತ್ತು ಪಕ್ಷಕ್ಕೆ ನೀಡಿರುವ ಆದ್ಯತೆ ಎರಡೇ ವರ್ಷಕ್ಕೆ ಸೀಮಿತ ಎನ್ನುವುದೂ ಇಲ್ಲಿ ಗಮನಾರ್ಹ.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ನಂತರ ಹೆಗಡೆ ವಂಶದ ಕುಡಿ ಶಶಿಭೂಷಣ ಹೆಗಡೆ ರಾಜಕೀಯ ಪ್ರವೇಶ ಮಾಡಲು ಆಯ್ಕೆಮಾಡಿಕೊಂಡ ಕ್ಷೇತ್ರ ಕುಮಟಾ ಎನ್ನುವುದು ಈ ಕ್ಷೇತ್ರದ ಮತ್ತೊಂದು ವಿಶೇಷ.

ವೃತ್ತಿಯಲ್ಲಿ ವಕೀಲರಾಗಿರುವ ಹೆಗಡೆ 2004 ಮತ್ತು 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದರು. ಮೊದಲ ಚುನಾವಣೆಯಲ್ಲಿ ಹೆಗಡೆ ಎರಡನೇ ಮತ್ತು ಎರಡನೇ ಚುನಾವಣೆಯಲ್ಲಿ ಅವರು ಮೂರನೇ ಸ್ಥಾನ ಪಡೆದಿದ್ದಾರೆ. ಸದ್ಯ ಕ್ಷೇತ್ರ ಬದಲಾಯಿಸಿರುವ ಹೆಗಡೆ ಸ್ವಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಮಂದಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT