ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ 2.07 ಲಕ್ಷ ದಂಡ ವಸೂಲಿ

ಅವಳಿನಗರದಲ್ಲಿ ಹೆಲ್ಮೆಟ್ ಧರಿಸದವರ ವಿರುದ್ಧ 1681 ಪ್ರಕರಣ ದಾಖಲು
Last Updated 12 ಡಿಸೆಂಬರ್ 2012, 7:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿನಗರದಲ್ಲಿ ಹೆಲ್ಮೆಟ್ ರಹಿತ ಚಾಲಕರನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಕಾರ್ಯಾಚರಣೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಮಂಗಳವಾರ ಬೆಳಿಗ್ಗೆಯಿಂದ ರಾತ್ರಿವರೆಗೆ ಒಟ್ಟು 1681 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಒಟ್ಟು  2, 06, 900 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಸಂಚಾರ ಪೊಲೀಸರ ಪೈಕಿ ಎಎಸ್‌ಐ ಹಾಗೂ ಅದಕ್ಕಿಂತ ಮೇಲ್ದರ್ಜೆಯ ಪೊಲೀಸರಿಗೆ ದಂಡ ವಿಧಿಸುವ ಅಧಿಕಾರ ಇರುತ್ತದೆ. ಹುಬ್ಬಳ್ಳಿಯಲ್ಲಿ 12 ಎಎಸ್‌ಐ, ಏಳು ಇನ್‌ಸ್ಪೆಕ್ಟರ್‌ಗಳು ಒಳಗೊಂಡ 27 ತಂಡಗಳನ್ನು ರಚಿಸಲಾಗಿದೆ.

ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಎಸಿಪಿ (ಸಂಚಾರ) ಎನ್.ಎಸ್. ಪಾಟೀಲ ತಮ್ಮ ಸಿಬ್ಬಂದಿ ಜೊತೆಗೆ ಕಾರ್ಯಾಚರಣೆಗೆ ಇಳಿದಿದ್ದರು. ರಾತ್ರಿ ಎಂಟು ಗಂಟೆಯವರೆಗೂ ದಂಡ ವಿಧಿಸುವ ಪ್ರಕ್ರಿಯೆ ಮುಂದುವರಿದಿತ್ತು.

`ದಂಡ ವಿಧಿಸುವುದೇ ನಮ್ಮ ಮುಖ್ಯ ಉದ್ದೇಶವಲ್ಲ. ಅದಕ್ಕಿಂತ ಮುಖ್ಯವಾಗಿ ಜನರಲ್ಲಿ ಜಾಗೃತಿ ಮೂಡಬೇಕಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾ ಚರಣೆಯು ಮುಂದುವರಿಯಲಿದೆ' ಎಂದು ಅವರು ತಿಳಿಸಿದರು. `ಮಂಗಳವಾರ ರಾಣಿ ಚನ್ನಮ್ಮ ವೃತ್ತದಲ್ಲಿ ಕಾಣಿಸಿಕೊಂಡ ತಲಾ 10 ಬೈಕ್ ಸವಾರರಲ್ಲಿ ಐದು ಜನ ಹೆಲ್ಮೆಟ್ ಧರಿಸಿ ಬಂದಿದ್ದರು. ಇದು ಉತ್ತಮ ಬೆಳವಣಿಗೆ. ಹೆಲ್ಮೆಟ್ ಧರಿಸದವರಲ್ಲಿ ಯುವಕರೇ ಹೆಚ್ಚು. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು' ಎಂದರು. ಐಎಸ್‌ಐ ಗುಣಮಟ್ಟದ ಹೆಲ್ಮೆಟ್ ಧರಿಸುವಂತೆ ಸಲಹೆ ನೀಡಿದರು.

ಖರೀದಿ ಜೋರು
ನಗರದ ವಿವಿಧ ಭಾಗಗಳಲ್ಲಿ ಹೆಲ್ಮೆಟ್ ಖರೀದಿಯು ಮಂಗಳವಾರ ಭರ್ಜರಿಯಾಗಿ ನಡೆದಿತ್ತು. ದುರ್ಗದ ಬೈಲ್, ಕೊಪ್ಪಿಕರ ರಸ್ತೆಯಲ್ಲಿನ ಅಂಗಡಿಗಳ ಮುಂದೆ ಜನರು ಸೇರಿದ್ದರು. ಫುಟ್‌ಪಾತ್ ಮೇಲೂ ಖರೀದಿ ನಡೆಯಿತು. ಮುನ್ನೂರು ರೂಪಾಯಿಗಳಿಂದ ಹಿಡಿದು ಸಾವಿರದವೆರಗೂ ಬೆಲೆಯಿತ್ತು.

ಹೆಲ್ಮೆಟ್ ಕಡ್ಡಾಯದ ಹಿನ್ನೆಲೆಯಲ್ಲಿ ಬೆಲೆಯನ್ನು ಏರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಕೆಲವರು ಗೊಣಗಿಕೊಳ್ಳುತ್ತಲೇ ಹೆಲ್ಮೆಟ್ ಖರೀದಿ ಮಾಡಿದರು.

ಪೊಲೀಸರಿಗೇ ದಂಡ!
ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ ಮಾಡಿದ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರಿಗೆ ಮಂಗಳವಾರ 100 ದಂಡ ವಿಧಿಸಲಾಯಿತು. ಚನ್ನಮ್ಮ ವೃತ್ತದಲ್ಲಿ ಹೆಲ್ಮೆಟ್ ಇಲ್ಲದೇ ತಿರುಗಾಡುತ್ತಿದ್ದ ಈ ವ್ಯಕ್ತಿಯನ್ನು ಕಂಡ ಎಸಿಪಿ ಎನ್.ಎಸ್. ಪಾಟೀಲ ಸ್ಥಳದಲ್ಲೇ ದಂಡ ವಿಧಿಸಿ, ವಸೂಲಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT