ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಒಡಿ ಅವ್ಯವಸ್ಥೆ ತಡೆಗೆ ಹೊಸ ವಿಧಾನ

ಮಡಿಕೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ
Last Updated 24 ಡಿಸೆಂಬರ್ 2013, 7:39 IST
ಅಕ್ಷರ ಗಾತ್ರ

ಮಡಿಕೇರಿ: ನಗರದಲ್ಲಿ ಜ. 7ರಿಂದ ಮೂರು ದಿನಗಳ ಕಾಲ ನಡೆಯುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಆಯಾ ಜಿಲ್ಲೆಗಳ ಕಸಾಪ ಅಧ್ಯಕ್ಷರು ಸಮ್ಮೇಳನದ ದಿನದಂದು ಒಒಡಿ (ಆನ್‌ ಅಫಿಷಿಯಲ್‌ ಡ್ಯೂಟಿ) ನೀಡಲಿದ್ದಾರೆ.

ಈ ಮೂಲಕ ಒಒಡಿಗಾಗಿ ನಡೆಯುತ್ತಿದ್ದ ಪರದಾಟವನ್ನು ತಪ್ಪಿಸಬಹುದಾಗಿದೆ ಎನ್ನುವುದು ಸಮ್ಮೇಳನದ ಆತಿಥ್ಯ ವಹಿಸಿರುವ ಕೊಡಗು ಜಿಲ್ಲಾ ಕಸಾಪ ಪದಾಧಿಕಾರಿಗಳ ಅನಿಸಿಕೆ.

ಪ್ರತಿ ಬಾರಿ ಸಾಹಿತ್ಯ ಸಮ್ಮೇಳನಗಳು ನಡೆದಾಗ ಒಒಡಿ ಫಾರಂ ಪಡೆಯಲು ಸರ್ಕಾರಿ ನೌಕರರು ಪರದಾಡುತ್ತಿದ್ದರು. ಈ ಸಮಸ್ಯೆಯನ್ನು ಬಗೆಹರಿಸಲು ಕೊಡಗು ಜಿಲ್ಲಾ ಕಸಾಪ ಘಟಕವು ಈ ಮಾರ್ಗ ಅನುಸರಿಸುತ್ತಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಪಟ್ಟಿಯನ್ನು ಪಡೆದು, ಆ ಸಂಖ್ಯೆಗೆ ಅನುಗುಣವಾಗಿ ಒಒಡಿ ಫಾರಂಗಳನ್ನು ಆಯಾ ಜಿಲ್ಲಾ ಕಸಾಪ ಅಧ್ಯಕ್ಷರಿಗೆ ನೀಡಲಾಗುತ್ತದೆ. ಈ ಅಧ್ಯಕ್ಷರೇ ತಮ್ಮ ಜಿಲ್ಲೆಗಳ ನೌಕರರಿಗೆ ಫಾರಂ ನೀಡಲಿದ್ದಾರೆ. ಹೀಗಾಗಿ, ಸಮ್ಮೇಳನದ ಮೈದಾನದಲ್ಲಿ ಒಒಡಿಗಾಗಿ ಪರದಾಡುವ ಅವಶ್ಯಕತೆ ಇಲ್ಲ.

ಕಳೆದ ವರ್ಷ ನಡೆದ ಸಮ್ಮೇಳನದಲ್ಲಿ ಅಂದಾಜು ಮೂರು– ಮೂರೂವರೆ ಸಾವಿರದಷ್ಟು ಸರ್ಕಾರಿ ನೌಕರರು ಭಾಗವಹಿಸಿದ್ದರು. ಆದರೆ, 30,000ಕ್ಕೂ ಹೆಚ್ಚು ಒಒಡಿ ಫಾರಂಗಳು ಮುದ್ರಣಗೊಂಡಿದ್ದವು.

ಹಲವು ಜಿಲ್ಲೆಗಳಿಂದ ಯಾರೋ ಒಬ್ಬ ನೌಕರರನ್ನು ಕಳುಹಿಸಿ, ಅವರಿಂದಲೇ ಒಒಡಿ ಫಾರಂಗಳನ್ನು ತರಿಸಿಕೊಂಡ ಪ್ರಸಂಗಗಳು ಕೇಳಿಬಂದಿದ್ದವು. ಅಲ್ಲದೇ, ಸಮ್ಮೇಳನದಲ್ಲಿಯೇ ಒಒಡಿ ಅರ್ಜಿಗಳನ್ನು ದುಡ್ಡು ಕೊಟ್ಟು ಪಡೆದಂತಹ ಉದಾಹರಣೆಗಳು ಕೂಡ ನಮ್ಮಲ್ಲಿವೆ. ಇವುಗಳಿಗೆ ತಡೆ ಹಾಕುವ ಉದ್ದೇಶದಿಂದ ಈ ಸಲ ಹೊಸ ಪ್ರಯತ್ನಕ್ಕೆ ಕೈಹಾಕಿದ್ದೇವೆ’ ಎಂದು ಕೊಡಗು ಕಸಾಪ ಅಧ್ಯಕ್ಷ ಟಿ.ಪಿ. ರಮೇಶ್‌ ತಿಳಿಸಿದರು.

‘ಪ್ರತಿ ಜಿಲ್ಲಾ ಕಸಾಪ ಘಟಕಕ್ಕೆ ಮಳಿಗೆಯೊಂದನ್ನು ನೀಡಲಾಗುತ್ತದೆ. ಇಲ್ಲಿ ಆಯಾ ಜಿಲ್ಲೆಗಳಿಂದ ಬರುವ ನೌಕರರಿಗೆ ಒಒಡಿ ಅರ್ಜಿ ನೀಡುವುದು, ಪ್ರತಿನಿಧಿಗಳ ಕೂಪನ್‌ ವಿತರಿಸುವ ಕೆಲಸ ಮಾಡಲಾಗುವುದು. ಈ ಮೂಲಕ ಎಲ್ಲಿಯೂ ಜನದಟ್ಟಣೆ ಉಂಟಾಗದಂತೆ ನೋಡಿಕೊಳ್ಳಲಾಗುವುದು’ ಎಂದರು.

ಶಿಕ್ಷಕರು ಪಾಲ್ಗೊಳ್ಳಲೇಬೇಕು
ಸಮ್ಮೇಳನ ನಡೆಯುವ ಮೂರು ದಿನಗಳು ಹಾಗೂ ಅದಕ್ಕೂ ಮುಂಚೆ ಒಂದು ದಿನ ಸಿದ್ಧತೆಗಾಗಿ ಜಿಲ್ಲೆಯ ಎಲ್ಲ ಶಾಲಾ–ಕಾಲೇಜುಗಳಿಗೆ ರಜೆ ನೀಡಬೇಕೆಂದು ಜಿಲ್ಲಾಧಿಕಾರಿ ಅವರನ್ನು ಕೋರಲಾಗಿದೆ.

ಸಮ್ಮೇಳನದ ಬಹುಮುಖ್ಯ ಭಾಗವಾಗಿರುವ ಶಿಕ್ಷಕರು, ವಿದ್ಯಾರ್ಥಿಗಳು ಮೂರು ದಿನಗಳ ಕಾಲ ತಪ್ಪದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು, ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಬೇಕು, ಹೊರಜಿಲ್ಲೆಗಳಿಂದ ಬರುವ ಸಾಹಿತಿಗಳ ಜೊತೆ ಬೆರೆತು ಈ ಕ್ಷಣವನ್ನು ಅವಿಸ್ಮರಣೀಯಗೊಳಿಸಬೇಕು ಎಂದು ರಮೇಶ್‌ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT