ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕೆಲೆಬ್ಬಿಸುವ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

Last Updated 19 ಸೆಪ್ಟೆಂಬರ್ 2013, 6:18 IST
ಅಕ್ಷರ ಗಾತ್ರ

ಮದ್ದೂರು: ತಾಲ್ಲೂಕಿನ ಬೆಸಗರಹಳ್ಳಿಯ ಸೇರಿದ ಗ್ರಾಮಠಾಣಾ ಸ್ಥಳದಲ್ಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಗ್ರಾಮ ಪಂಚಾಯಿತಿ ಕ್ರಮ ಖಂಡಿಸಿ ಅಲ್ಲಿನ ನಿವಾಸಿಗಳು ಬುಧವಾರ ಇಲ್ಲಿನ ತಾಲ್ಲೂಕು ಕಚೇರಿ ಎದುರು  ಪ್ರತಿಭಟನೆ ನಡೆಸಿದರು.

ಬೆಸಗರಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಮೊಳಗಿಸಿದ ಅವರು, ಬಳಿಕ ತಹಶೀಲ್ದಾರ್ ಡಾ.ಎಚ್.ಎಲ್. ನಾಗರಾಜು ಅವರಿಗೆ ಮನವಿ ಸಲ್ಲಿಸಿ ತಮಗೆ ಸದರಿ ಸ್ಥಳದ ಹಕ್ಕುಪತ್ರ ಕೊಡಿಸಬೇಕೆಂದು ವಿನಂತಿಸಿದರು.

ಯುವ ಮುಖಂಡ ಬಿ.ಎಂ. ಮಧುಕುಮಾರ್ ಮಾತನಾಡಿ, ಕಳೆದ 60ಕ್ಕೂ ಹೆಚ್ಚು ವರ್ಷಗಳಿಂದ ಬೆಸಗರಹಳ್ಳಿಯ 2ನೇ ವಾರ್ಡ್‌ನ ಈ ಗ್ರಾಮಠಾಣಾ ಸ್ಥಳದಲ್ಲಿ ನಾವು ವಾಸವಾಗಿದ್ದೇವೆ. ಈ ಕೆಲದಿನಗಳ ಹಿಂದೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳ ತೆರವುಗೊಳಿಸುವಂತೆ ಆಗ್ರಹಿಸಿ ನೋಟಿಸ್ ನೀಡಿದ್ದಾರೆ. ಈ ಸ್ಥಳ ಹೊರತಪಡಿಸಿ ಎಲ್ಲಿಯೂ ನಿವೇಶನ ಹೊಂದದ ನಾವು ಇಲ್ಲಿಂದ ಎಲ್ಲಿಗೆ ಹೋಗಿ ಜೀವನ ಮಾಡುವುದು ಎಂಬುದೇ ದಿಕ್ಕುತೋಚದಂತಾಗಿದೆ. ತಹಶೀಲ್ದಾರ್ ಅವರು ಕೂಡಲೇ ನಮಗೆ ಅಲ್ಲಿಯೇ ವಾಸವಾಗಲು ಅಗತ್ಯ ಕ್ರಮ ಕೈಗೊಂಡು ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿದರು.

ಪ್ರತಿಭಟನಾನಿರತರ ಆಗ್ರಹಕ್ಕೆ ಸ್ಪಂದಿಸಿದ ತಹಶೀಲ್ದಾರ್ ಡಾ.ಎಚ್.ಎಲ್. ನಾಗರಾಜು, ಅಲ್ಲಿಂದಲೇ ತಾಲ್ಲೂಕು ಪಂಚಾಯಿತಿ ಕಾರ್ಯನಿವಾರ್ಹಣಾಧಿಕಾರಿ ಕುಮಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಗ್ರಾಮ ಠಾಣಾ ಜಾಗದಲ್ಲಿನ ರಸ್ತೆ ಬದಿಯ ಅಕ್ರಮ ಅಂಗಡಿಗಳನ್ನು ತೆರವುಗೊಳಿಸಿ ಅಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಳಿಸಿ. ಆದರೆ ಇದರ ಹಿಂದಿನ ಸ್ಥಳವನ್ನು ಇಲ್ಲಿಯೇ ಹಲವು ವರ್ಷಗಳಿಂದ ವಾಸವಾಗಿರುವ ಜನರಿಗೆ ಹಕ್ಕುಪತ್ರ ನೀಡುವ ಮೂಲಕ ವಿತರಿಸಿ ಎಂದು ಸಲಹೆ ನೀಡಿದರು. ತಹಶೀಲ್ದಾರ್‌ ಅವರ ಸಲಹೆಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿಗಳು ಒಪ್ಪಿಗೆ ಸೂಚಿಸಿದ  ಬಳಿಕ ನಿವಾಸಿಗಳು ತಮ್ಮ ಪ್ರತಿಭಟನೆ ಹಿಂಪಡೆದರು.

ನಿವಾಸಿಗಳಾದ  ಸುಧಾ, ಭವ್ಯ, ಅರ್ಮುಗಂ, ಮೇರಮ್ಮ, ಸಾಕಮ್ಮ, ಪುಟ್ಟಮ್ಮ, ಪವಿತ್ರ, ರತ್ನಮ್ಮ, ಮಹದೇವು,ಅಂತೋಣಿ, ಮಂಜುಳ, ವೆಂಕಟೇಶ್, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT