ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ ಸ್ಮಶಾನ ಭೂಮಿ: ತೆರವಿಗೆ ಚಾಲನೆ

Last Updated 19 ಫೆಬ್ರುವರಿ 2011, 5:10 IST
ಅಕ್ಷರ ಗಾತ್ರ

ಮಂಡ್ಯ: ಹೊಳಲು ರಸ್ತೆಯಲ್ಲಿನ ಸ್ಮಶಾನ ಒತ್ತುವರಿ ತೆರವು ಕಾರ್ಯದ ಹಿಂದೆಯೇ ಒತ್ತುವರಿ ಆಗಿದೆ ಎನ್ನಲಾಗಿರುವ ಇನ್ನು ಕೆಲ ಸ್ಮಶಾನ ಭೂಮಿಯ ತೆರವು ಕಾರ್ಯಕ್ಕೆ ನಗರಸಭೆ ಮತ್ತು ತಾಲ್ಲೂಕು ಆಡಳಿತ ಚಾಲನೆ ನೀಡಿದೆ.

ಅದರ ಕಾರ್ಯಕ್ರಮವಾಗಿ ಶುಕ್ರವಾರ ನಾಲಬಂದವಾಡಿ ಸ್ಮಶಾನದ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಈ ಸ್ಮಶಾನ ವ್ಯಾಪ್ತಿ 1.26 ಎಕರೆ ಎನ್ನಲಾಗಿದ್ದು, ಈ ಪೈಕಿ 15 ಗುಂಟೆ ಭೂಮಿ ಒತ್ತುವರಿಯಾಗಿದೆ ಎಂದು ಹೇಳಲಾಗಿದೆ.

ತಹಶೀಲ್ದಾರ್ ಡಾ. ರಾಜೇಂದ್ರ ಪ್ರಸಾದ್ ಮತ್ತು ಸಿಬ್ಬಂದಿ ಇಂದು ಪೂರ್ವಭಾವಿ ಸಮೀಕ್ಷೆ ನಡೆಸಿದರು. ಒತ್ತುವರಿ ಹಿನ್ನೆಲೆಯಲ್ಲಿ ಈ ಸ್ಮಶಾನಕ್ಕೆ ಸುತ್ತುಗೋಡೆ ನಿರ್ಮಿಸುವ ಕಾರ್ಯವು ನೆನೆಗುದಿಗೆ ಬಿದ್ದಿತ್ತು.

ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಹಿಂದೆ ಸುಮಾರು4 ಲಕ್ಷ ರೂಪಾಯಿ ಸುತ್ತುಗೋಡೆ ನಿರ್ಮಿಸಲು ಮಂಜೂರಾಗಿತ್ತು. ಆದರೆ, ಆಸು ಪಾಸಿನ ಜನರು ಗೋಡೆ ನಿರ್ಮಿಸುವ ಕಾರ್ಯಕ್ಕೆ ತಕರಾರು ತೆಗೆದಿದ್ದ ಹಿನ್ನೆಲೆಯಲ್ಲಿ ಕೈಗೂಡಿರಲಿಲ್ಲ.

ಈಗ ಮತ್ತೆ ಸಮೀಕ್ಷೆ ನಡೆಸಲಾಗುತ್ತಿದ್ದು, ಹದ್ದುಬಸ್ತು ನಿಗದಿಪಡಿಸಿದ ಬಳಿಕ ಹಣಕಾಸು ಲಭ್ಯತೆ ಆಧರಿಸಿ ಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ನಗರಸಭೆ ಅಧ್ಯಕ್ಷ ಅರುಣ್‌ಕುಮಾರ್ ಹೇಳಿದರು.

ಇನ್ನು ಎರಡು ಸ್ಮಶಾನ: ಜೊತೆಗೆ, ಶಂಕರಮಠ ಮತ್ತು ಯತ್ತಗದಹಳ್ಳಿ ಸ್ಮಶಾನದ ಭೂಮಿಯ ವ್ಯಾಪ್ತಿ ಕುರಿತಂತೆಯೂ ಸಮೀಕ್ಷೆ ಕಾರ್ಯ ನಡೆಯಬೇಕಿದ್ದು, ಹದ್ದು ಬಸ್ತು ಗುರುತಿಸಿ ಸುತ್ತು ಗೋಡೆಯನ್ನು ನಿರ್ಮಾಣ ಮಾಡಬೇಕಿದೆ ಎಂದರು.

ಶಂಕರಮಠ ಸ್ಮಶಾನವು ಭಾಗಶಃ ಒತ್ತುವರಿಯಾಗಿದೆ. ಅದನ್ನು ಇತ್ಯರ್ಥಪಡಿಸ ಬೇಕಾಗಿದೆ. ಯತ್ತಗದಹಳ್ಳಿ ಸ್ಮಶಾನ ಬಳಿಯೂ ಸ್ವಲ್ಪ ಭೂಮಿ ಒತ್ತುವರಿಯಾಗಿದೆ. ಅಲ್ಲಿ, ರಸ್ತೆ ಅಭಿವೃದ್ಧಿಯೂ ಸೇರಿದಂತೆ ಸುತ್ತುಗೋಡೆ ನಿರ್ಮಾಣ ಮಾಡಬೇಕಿದೆ ಎಂದರು.

ಈ ನಡುವೆ, ಇತ್ತೀಚೆಗೆ ಒತ್ತುವರಿ ತೆರವು ಕಾರ್ಯ ಆಗಿರುವ ಹೊಳಲು ರಸ್ತೆಯ ಸ್ಮಶಾನಕ್ಕೆ ಸುತ್ತುಗೋಡೆ ನಿರ್ಮಾಣ ಮತ್ತು ಇತರ ಕಾಮಗಾರಿ ಕುರಿತಂತೆ ಅಂದಾಜು ರೂಪುರೇಷೆಯನ್ನು ಅನುಮೋದನೆಗೆ  ಕಳುಹಿಸಲಾಗಿದೆ ಎಂದು ನಗರಸಭೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT