ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬಾಮ ಭರವಸೆ;ಭಾರತಕ್ಕೆ ಪರಮಾಣು, ಬಾಹ್ಯಾಕಾಶ ತಂತ್ರಜ್ಞಾನ

Last Updated 16 ಜುಲೈ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಅತ್ಯಾಧುನಿಕ ಪರಮಾಣು ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಭಾರತಕ್ಕೆ ನೀಡುವ ಸಂಬಂಧ ಇರುವ ಎಲ್ಲ ಅಡೆತಡೆ ನಿವಾರಿಸಲು ಅಮೆರಿಕ ಸರ್ಕಾರ ಮುಂದಾಗಿದೆ.ಇಂತಹ ಸೂಕ್ಷ್ಮ ತಂತ್ರಜ್ಞಾನಗಳನ್ನು ಹಸ್ತಾಂತರಿಸುವಾಗ ಅನುಸರಿಸಲಾಗುವ ನಿಬಂಧನೆಗಳನ್ನು ಸಡಿಲಿಸಿ, ಭಾರತವನ್ನು ವಿಶೇಷವಾಗಿ ಪರಿಗಣಿಸಿ ತಂತ್ರಜ್ಞಾನ ನೀಡಲಾಗುವುದು ಎಂದು ಸ್ವತಃ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.

 ಸುದ್ದಿಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ವಿಚಾರ ಬಹಿರಂಗಪಡಿಸಿರುವ ಒಬಾಮ ಈ ಕುರಿತು ಅಮೆರಿಕ ರಕ್ಷಣಾ ಇಲಾಖೆಯಲ್ಲಿ ಚರ್ಚೆ ನಡೆಯುತ್ತಿದೆ ಎಂದಿದ್ದಾರೆ.ಭಾರತಕ್ಕೆ ಇಂತಹ ತಂತ್ರಜ್ಞಾನ ನೀಡುವುದರಿಂದ ಲಾಭವಿದೆ ಎಂದಿರುವ ಒಬಾಮ, ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯಗಳು ಇದ್ದರೂ ನಾವು ಒಟ್ಟಾಗಿ ಕೆಲಸ ಮಾಡಬಹುದಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ, ಅಮೆರಿಕ ಸಂಬಂಧದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ ಕೆಲ ಕ್ಷೇತ್ರಗಳಲ್ಲಿ ಅದಕ್ಕೆ ಮತ್ತಷ್ಟು ಕಸುವು ತುಂಬಬೇಕಾಗಿದೆ. ವಾಣಿಜ್ಯ- ವ್ಯವಹಾರ, ಆರ್ಥಿಕ ಕ್ಷೇತ್ರಗಳಲ್ಲಿ ನಾವು ಮತ್ತಷ್ಟು ಪ್ರಗತಿ ಸಾಧಿಸಬಹುದಿತ್ತು ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.

ನಾಗರಿಕ ಪರಮಾಣು ಒಪ್ಪಂದ ಉಭಯ ದೇಶಗಳ ಸಂಬಂಧದಲ್ಲಿ ಮಹತ್ವದ ಮೈಲುಗಲ್ಲು ಎಂದು ಉಲ್ಲೇಖಿಸಿರುವ ಒಬಾಮ, ಆದರೆ, ಒಪ್ಪಂದದ ಅನುಷ್ಠಾನದಲ್ಲಿ ಅಂದುಕೊಂಡಷ್ಟು ಪ್ರಗತಿಯಾಗಿಲ್ಲ ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಪರಮಾಣು ಪೂರೈಕೆದಾರರ ಗುಂಪಿನಲ್ಲಿ ಭಾರತಕ್ಕೆ ಸದಸ್ಯತ್ವ ಗಳಿಸಿಕೊಳ್ಳಲು ಬೆಂಬಲ ನೀಡುವುದಾಗಿ ಈ ಸಂದರ್ಭದಲ್ಲಿ ಒಬಾಮ ಹೇಳಿದ್ದಾರೆ.ಹಿನ್ನೆಲೆ: ಭಾರತಕ್ಕೆ ಪರಮಾಣು ಹಾಗೂ ಬಾಹ್ಯಾಕಾಶ ತಂತ್ರಜ್ಞಾನ ನೀಡುವುದನ್ನು ನಿಷೇಧಿಸಿ ದಶಕಗಳ ಹಿಂದೆಯೇ ಅಮೆರಿಕ ಇವುಗಳನ್ನು ನಿರ್ಬಂಧಿತ ಪಟ್ಟಿಯಲ್ಲಿ ಸೇರಿಸಿದೆ. ಭಾರತದ ರಕ್ಷಣಾ ಸಂಸ್ಥೆಗಳು ಹಾಗೂ `ಡಿಆರ್‌ಡಿಒ~ ಸೇರಿದಂತೆ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳು ಈ ನಿರ್ಬಂಧಿತ ಪಟ್ಟಿಯಲ್ಲಿದ್ದವು.

2010ರಲ್ಲಿ ಒಬಾಮ ಭಾರತಕ್ಕೆ ಭೇಟಿ ನೀಡಿದ ನಂತರ 9 ಸಂಸ್ಥೆಗಳ ಮೇಲಿನ ನಿರ್ಬಂಧ ಸಡಿಲಿಸಲಾಗಿತ್ತು. ಆದರೆ, ಇದರಿಂದ ನಮಗೆ ಈವರೆಗೆ ಯಾವುದೇ ಲಾಭವಾಗಿಲ್ಲ ಎಂದು ಡಿಆರ್‌ಡಿಒ ಮುಖ್ಯಸ್ಥ ವಿ.ಕೆ.ಸಾರಸ್ವತ್ ಇತ್ತೀಚೆಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕದ ಭಾರತಕ್ಕೆ ಪರಮಾಣು ತಂತ್ರಜ್ಞಾನ ಹಸ್ತಾಂತರಿಸಿದಲ್ಲಿ ಅದು ದುರ್ಬಳಕೆಯಾಗುವ ಸಾಧ್ಯತೆಯಿದೆ ಎಂದು ಅಮೆರಿಕದ ಕೆಲ ವಲಯಗಳಲ್ಲಿ ಇರುವ ಆತಂಕದಿಂದಾಗಿ ಆ ದೇಶ ಭಾರತದೊಂದಿಗೆ ಪರಮಾಣು ತಂತ್ರಜ್ಞಾನ ಹಂಚಿಕೊಳ್ಳಲು ನಿರಾಕರಿಸುತ್ತಿತ್ತು. ಇದು ಉಭಯ ದೇಶಗಳ ಸಂಬಂಧದಲ್ಲಿ ಸಣ್ಣ ಮನಸ್ತಾಪಕ್ಕೂ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT