ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲುಮೆಯಿಂದ ಅಶ್ವಿನಿ...

Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಯೌವನದ ಕಾವು ಕರಗಿ, ಗಲ್ಲದ ಮೇಲೆ ಸುಕ್ಕು ಕಾಣಿಸುವಾಗ ಇಲ್ಲವೇ ಮುಖ್ಯಪಾತ್ರಗಳು ದೊರಕದೆ ಹೋದಾಗ ಪೋಷಕ ಪಾತ್ರಗಳತ್ತ ಹೊರಳುವ, ಕಿರುತೆರೆಯತ್ತ ಮುಖ ಮಾಡುವ ಕಲಾವಿದರಿದ್ದಾರೆ. ಕಿರುತೆರೆಯಲ್ಲಿ ಇಮೇಜು ಎತ್ತರಿಸಿಕೊಳ್ಳುತ್ತಲೇ ಬೆಳ್ಳಿತೆರೆಯತ್ತ ಕಣ್ಣು ಹಾಯಿಸುವುದು ಮತ್ತೊಂದು ನಟ ವರ್ಗವೂ ಇದೆ.

ಆದರೆ ನಟಿ ಅಶ್ವಿನಿಗೌಡ ಅವರ ದಾರಿಯೇ ಬೇರೆ. ಗ್ಲಾಮರ್‌, ಸೌಂದರ್ಯ... ಹೀಗೆ ಚಿತ್ರರಂಗ ಅಪೇಕ್ಷಿಸುವ ನಟನೆಯ ಭಾಷೆಗಳೆಲ್ಲ ತಮ್ಮಲ್ಲಿದ್ದೂ, ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರೂ ಸಿನಿಮಾ ಲೋಕ ಒಪ್ಪಿಕೊಳ್ಳದೇ ಹೋದಾಗ ಅವರು ಕಿರುತೆರೆಯತ್ತ ಮುಖಮಾಡಿದರು. ಸಾಲು ಚಿತ್ರಗಳಲ್ಲಿನ ಹಿನ್ನಡೆಯ ಕಹಿಯನ್ನು ಒಂದು ಧಾರಾವಾಹಿಯ ಸಿಹಿಯೇ ಮರೆಸುವಷ್ಟು ಯಶಸ್ಸು ಅವರಿಗೆ ಸಿಕ್ಕಿದೆ.

‘ನಿನ್ನೊಲುಮೆಯಿಂದಲೇ’ ಧಾರಾವಾಹಿಯ ಮಲ್ಲಿಕಾ ಪಾತ್ರದ ಮೂಲಕ ಅಶ್ವಿನಿ ಮನೆಮಾತಾಗಿದ್ದಾರೆ. ಬಬ್ಲಿ ಮತ್ತು ಹಾಸ್ಯ ವ್ಯಕ್ತಿತ್ವದ ಅವರಿಗೆ ಧಾರಾವಾಹಿಯಲ್ಲಿ ಗಂಭೀರ ಪಾತ್ರ. ಅಲ್ಲದೆ ತಮ್ಮ ವಯಸ್ಸಿಗಿಂತ ದುಪ್ಪಟ್ಟು ವಯಸ್ಸಿನ, ಅನುಭವಸ್ಥ ಗೃಹಿಣಿಯನ್ನು ಪ್ರತಿನಿಧಿಸಿದ್ದವರು. ‘ನಿನ್ನೊಲುಮೆಯಿಂದಲೇ’ ಒಲುಮೆಯೇ ಅವರನ್ನು ಮತ್ತೆ ಚಿತ್ರರಂಗಕ್ಕೆ ಕರೆದುಕೊಂಡು ಬಂದಿದೆ. ಅವರೀಗ ‘ಚೆಡ್ಡಿದೋಸ್ತ್‌’ ಚಿತ್ರದ ನಾಯಕಿ. ಹಾಸ್ಯ ಚಿತ್ರ ‘ಚೆಡ್ಡಿದೋಸ್ತ್‌’ನಲ್ಲಿ ಅಶ್ವಿನಿ ಅವರು ರಂಗಾಯಣ ರಘು ಅವರಿಗೆ ಜೋಡಿಯಾಗಿ ನಟಿಸುವಾಗ ಕೆಲ ವೇಳೆ ಭಯಬಿದ್ದಿದ್ದರಂತೆ.

ಅಶ್ವಿನಿ ಚಿತ್ರರಂಗ ಪ್ರವೇಶಿಸಿದ್ದು 2007ರಲ್ಲಿ ‘ವಾರಸ್ದಾರ’ ಚಿತ್ರದ ಮೂಲಕ. ‘ಮೂರನೇ ಕ್ಲಾಸ್‌ ಮಂಜ ಬಿಕಾಂ ಭಾಗ್ಯ’, ‘ಸೆಲ್ಯೂಟ್‌’, ‘ಶಂಭೋ ಶಂಕರ’, ‘ನಾವು ನಮ್ಮ ಹೆಂಡ್ತೀರು’, ‘ರಾಘವೇಂದ್ರ ಮಹಿಮೆ’, ‘ಕಲ್ಯಾಣಿ ಸ್ಕೂಲ್‌’, ‘ಚಿಕ್ಕಪೇಟೆ ಸಾಚಾಗಳು’ ಹೀಗೆ ಸಾಲಾಗಿ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು.

ಆದರೆ ಚಿತ್ರಜೀವನ ಅವರು ಅಂದುಕೊಂಡಷ್ಟು ಹೆಸರು ನೀಡಲಿಲ್ಲ. ಆ ಬೇಸರ ಮನದಲ್ಲಿ ಮನೆಮಾಡಿರುವಾಗಲೇ ಸಿಕ್ಕಿದ್ದು ‘ನಿನ್ನೊಲುಮೆ...’ಯ ಅವಕಾಶ. ಆರಂಭದಿಂದಲೂ ಒಂದೇ ಲಯ ಕಾಯ್ದುಕೊಂಡು ಪಾತ್ರವನ್ನು ಚೆನ್ನಾಗಿ ಪೋಷಿಸಿ ಜನಮನ್ನಣೆ ಪಡೆದರು. ಆ ಮನ್ನಣೆ ಅವರನ್ನು ಮತ್ತೆ ಸಿನಿಮಾಲೋಕದತ್ತ ಮುಖ ಮಾಡುವಂತೆ ಮಾಡಿದೆ. ಟಿ.ಎನ್‌. ಸೀತಾರಾಂ ಅವರ ‘ಮಹಾಪರ್ವ’ ಧಾರಾವಾಯಿಯಲ್ಲೂ ಅಶ್ವಿನಿ ಅವರಿಗೆ ಮುಖ್ಯ ಪಾತ್ರ ದೊರೆತಿದೆ.

ಅಶ್ವಿನಿ ನಟನೆಗೆ ಬಂದಿದ್ದು ಆಕಸ್ಮಿಕವಾಗಿ. ಚಿತ್ರೋದ್ಯಮದಲ್ಲಿ ನಿರ್ದೇಶಕಿಯಾಗಿ ಗುರ್ತಿಸಿಕೊಳ್ಳುವುದು ಅವರ ಬಾಲ್ಯದ ತುಡಿತ. ನಿರ್ದೇಶನ ಕಲಿಕೆಯ ಕೋರ್ಸ್‌ ಸೇರಿದಾಗ ‘ನೀನು ಚೆನ್ನಾಗಿದ್ದೀಯ, ನಟಿಸು’ ಎನ್ನುವ ಸ್ನೇಹಿತರ ಒತ್ತಾಸೆಗೆ ಕಟ್ಟುಬಿದ್ದು ಬಣ್ಣಹಚ್ಚಿದವರು. ಮೊದಲ ಚಿತ್ರದಲ್ಲಿ ಅವರು ಬಣ್ಣ ಹಚ್ಚಿದಾಗ ವಿದ್ಯಾರ್ಥಿಯ ಜೊತೆಗೆ ತಾಯಿಯ ಜವಾಬ್ದಾರಿಯ ಹೊಣೆಯೂ ಇತ್ತು.

ಆಗಲೇ ಒಂದೂವರೆ ವರ್ಷದ ಮಗನಿದ್ದ. ‘ಕಲಾವಿದೆಯಾಗಲು ಬಣ್ಣ ಹಚ್ಚಿದೆನೇ ಹೊರತು ನಾಯಕಿಯೇ ಆಗಬೇಕು ಎಂದಲ್ಲ’ ಎನ್ನುವ ಅಶ್ವಿನಿ ಇದೀಗ ಗ್ಲಾಮರ್‌ನಿಂದ ಒಂದು ಅಡಿ ದೂರವೇ ನಿಂತಿದ್ದಾರೆ. ಮದುವೆಯಾಗದಿದ್ದರೆ ಅವರು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದರಂತೆ. ನಿರ್ದೇಶಕ ಗುರುಪ್ರಸಾದ್‌ರ ಚಿತ್ರವೊಂದರಲ್ಲಿ ಐಟಂ ಹಾಡಿಗೆ ಕುಣಿಯುವ ಅವಕಾಶ ಅವರಿಗೆ ಬಂದಿತ್ತು. ಮೊದಲ ದಿನ ಚಿತ್ರೀಕರಣದಲ್ಲಿ ಪಾಲ್ಗೊಂಡರು ಕೂಡ. ಆನಂತರ ಮುಜುಗರವಾಗಿ ಹಿಂದೆ ಸರಿದರು.
  –ಡಿಎಂಕೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT