ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧ ಕೊರತೆ; ವೈದ್ಯ ರಾಜೀನಾಮೆ!

Last Updated 16 ಡಿಸೆಂಬರ್ 2013, 19:36 IST
ಅಕ್ಷರ ಗಾತ್ರ

ಹೊನ್ನಾಳಿ: ಔಷಧ ಕೊರತೆಯಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಲು ಸಾಧ್ಯ­ವಾಗದ ಹಿನ್ನೆಲೆಯಲ್ಲಿ ವೈದ್ಯರೊಬ್ಬರು ರಾಜೀನಾಮೆ ನೀಡಿ, ನಂತರ ಜನ­ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಒತ್ತಾಯಕ್ಕೆ ಮಣಿದು ರಾಜೀನಾಮೆ ವಾಪಸ್‌ ಪಡೆದ ಘಟನೆ ತಾಲ್ಲೂಕಿನ ಸಾಸ್ವೆಹಳ್ಳಿಯಲ್ಲಿ ಸೋಮವಾರ ನಡೆದಿದೆ.

ಸಾಸ್ವೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಿ.ಬಿ.­ಚಂದ್ರಪ್ಪ ರಾಜೀನಾಮೆ ನೀಡಿ, ವಾಪಸು ಪಡೆದ ವೈದ್ಯ.
‘ಸಾಸ್ವೆಹಳ್ಳಿ ದೊಡ್ಡ ಹೋಬಳಿ ಕೇಂದ್ರ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತಿ ದಿನ 300ಕ್ಕಿಂತ ಅಧಿಕ ಸಂಖ್ಯೆಯ ರೋಗಿಗಳು ಬರುತ್ತಾರೆ. ಸಾಸ್ವೆಹಳ್ಳಿ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಇಲಾಖೆ ವಾರ್ಷಿಕ ₨ 1.25ಲಕ್ಷ ಮೌಲ್ಯದ ಔಷಧ­ಗಳನ್ನು ನೀಡುತ್ತದೆ. ಈ ಔಷಧಗಳು ಒಂದು ತಿಂಗಳ ಕಾಲ ವಿತರಿಸಲೂ ಸಾಕಾ­ಗುವುದಿಲ್ಲ. ಗರ್ಭಿಣಿಯರ ಶುಶ್ರೂಷೆ, ಹೆರಿಗೆ, ಶಸ್ತ್ರಚಿಕಿತ್ಸೆಗಳಿಗೆ ಔಷಧಗಳು ಬೇಕೇ ಬೇಕು. ಆದರೆ, ಈ ಬಗ್ಗೆ ಯಾರೂ ವಿಚಾರಿಸುವುದಿಲ್ಲ. ರೋಗಿಗಳಿಗೆ ನೀಡಲು ಔಷಧ ಇಲ್ಲ ಎಂದ ಮೇಲೆ ನಾನು ಇಲ್ಲಿದ್ದು ಏನು ಮಾಡುವುದು ಎಂಬ ಕಾರಣಕ್ಕೆ ಮೇಲಧಿಕಾರಿಗೆ ರಾಜೀನಾಮೆ ಸಲ್ಲಿಸಿದ್ದೇನೆ’ ಎಂದು ಡಾ.ಚಂದ್ರಪ್ಪ ತಿಳಿಸಿದರು.

ಭದ್ರಾವತಿ ತಾಲ್ಲೂಕಿನ ಕೊನೆಯ ಭಾಗದ ಗ್ರಾಮ ಕಲ್ಲಹಳ್ಳಿ, ಚನ್ನಗಿರಿ ತಾಲ್ಲೂ­ಕಿನ ಕಂಚುಗಾರನಹಳ್ಳಿ, ಹಾಲೇ­ಶ­ಪುರ ಸೇರಿದಂತೆ ವಿವಿಧ ಗ್ರಾಮಗಳ ಜನರು ಸಾಸ್ವೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆಂದು ಆಗಮಿಸುತ್ತಾರೆ. ಕೆಲ ಗ್ರಾಮಗಳಲ್ಲಿ ಆಸ್ಪತ್ರೆ ಇದ್ದರೂ ಸಾಸ್ವೆಹಳ್ಳಿಗೇ ಬರುತ್ತಾರೆ. ಎಲ್ಲರಿಗೂ ಔಷಧ ವಿತರಿಸಲು ಆಗುವುದಿಲ್ಲ’ ಎಂದು ಡಾ.ಚಂದ್ರಪ್ಪ  ಅಸಹಾಯಕತೆ ತೋಡಿಕೊಂಡರು.

ವೈದ್ಯರ ವಿವರಣೆ ಆಲಿಸಿದ ಜಿಲ್ಲಾ ಪಂಚಾಯ್ತಿ ಸದಸ್ಯೆ ಶೀಲಾ ಗದ್ದಿಗೇಶ್‌ ಜಿಲ್ಲಾ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಅಗತ್ಯ ಔಷಧ­ಗಳನ್ನು ಸರಬರಾಜು ಮಾಡಲು ತಿಳಿಸಿ­ದರು. ಮಂಗಳವಾರ ನಡೆಯುವ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಈ ಬಗ್ಗೆ ಚರ್ಚಿ­ಸುವುದಾಗಿ ಭರವಸೆ ನೀಡಿದರು. ಸಾರ್ವ­ಜನಿಕರೂ ರಾಜೀನಾಮೆ ಹಿಂದಕ್ಕೆ ಪಡೆ­ಯು­ವಂತೆ ಒತ್ತಾಯಿಸಿದರು.

ಕೊನೆಗೆ ವೈದ್ಯರು ರಾಜೀನಾಮೆ ಹಿಂದಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT