ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾಯ ವಸೂಲಿ: ಸಚಿವ ಗರಂ

Last Updated 10 ಮೇ 2012, 8:45 IST
ಅಕ್ಷರ ಗಾತ್ರ

ಕೊಳ್ಳೇಗಾಲ:  ಬರದಿಂದ ತತ್ತರಿಸಿರುವ ಜನರಿಂದ ಪಡಿತರ ಚೀಟಿ ನೊಂದಣಿಗಾಗಿ ಕಂದಾಯ ಪಾವತಿಗೆ ಒತ್ತಾಯ ಮಾಡಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೂಚನೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಬರಪರಿಹಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಸಚಿವರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವಸ್ವಾಮಿ ಮತ್ತು ಜಿಲ್ಲಾ ಆಹಾರ ಇಲಾಖೆ ಉಪ ನಿರ್ದೇಶಕ ಮಹದೇವಪ್ಪ ಅವರನ್ನು  ತೀವ್ರ ತರಾಟೆಗೆ ತಗೆದುಕೊಂಡರು.

ಜಿಲ್ಲೆಯಲ್ಲಿ ಪಡಿತರ ಚೀಟಿ ನೊಂದಣಿಗೆ ಯಾವುದೇ ಕಾರಣಕ್ಕೂ ಕಂದಾಯವನ್ನು ಬಲವಂತವಾಗಿ ವಸೂಲಿ ಮಾಡಬಾರದು. ಬರದಲ್ಲೂ ಕಂದಾಯಕ್ಕಾಗಿ ಬಲ ವಂತ ಮಾಡಿದ ಅಧಿಕಾರಿಗಳ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ  ಸಚಿವರು `ನೀವೇ ಸುಪ್ರೀಂ ಏನು?~ ಎಂದು ಅಧಿಕಾರಿಗಳ ಮೇಲೆ ಹರಿಹಾಯ್ದರು.

ರಸ್ತೆ ಕಾಮಗಾರಿಗಳಿಗೆ ಕೆರೆಗಳಿಂದ ಯಾರ ಅನುಮತಿ ಪಡೆಯದೆ ಗುತ್ತಿಗೆದಾರರು ಆಳವಾಗಿ ಮಣ್ಣನ್ನು ತೆಗೆಯುತ್ತಿದ್ದರು ನೀರಾವರಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಶಾಸಕ ಆರ್. ನರೇಂದ್ರ ದೂರಿದರು. ಸಭೆಗೆ ನೀರಾವರಿ ಇಲಾಖೆ ಅಧಿಕಾರಿಗಳು ಗೈರುಹಾಜರಾಗಿದ್ದರು. ಗೈರು ಅಧಿಕಾರಿಗೆ ಕೂಡಲೇ ನೋಟೀಸು ನೀಡುವಂತೆ ಸಚಿವರು ಸೂಚಿಸಿದರು.

`ವಾಸ್ತವಾಂಶ ಹೇಳಿ, ಬರ ಎಂದರೆ ಮಳೆ ಬಂದ ಮೇಲೆ ಕೆಲಸ ಮಾಡುವುದೇ ? ಗುಣಮಟ್ಟದ ವಸ್ತುಗಳನ್ನು ಕಾಮಗಾರಿಗೆ ಬಳಸುತ್ತಿದ್ದೀರಾ?~ ಇವು ಸಚಿವರು ಅಧಿಕಾರಿಗಳನ್ನು ಬರಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳಿಗೆ ಹಾಕಿದ ಪ್ರಶ್ನೆಗಳು.  ಸೊಸೈಟಿಗಳಲ್ಲಿ ಡಿಮ್ಯಾಂಡ್ ಸೃಷ್ಟಿಸಿ, ರಸಗೊಬ್ಬರ ಕೃತಕ ಕೊರತೆ ನಿರ್ಮಿಸಿ ಕಾಳಸಂತೆ ಮಾರಾಟಕ್ಕೆ ಮುಂದಾಗುತ್ತಾರೆ.

ನನ್ನ ಕ್ಷೇತ್ರದಲ್ಲಿಯೇ ಕಳೆದ ವರ್ಷ ನಡೆದಿದೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು. ಜಿಲ್ಲೆಗೆ ಅಗತ್ಯ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಬೇಕು. ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ರಸಗೊಬ್ಬರ, ಬಿತ್ತನೆ ಬೀಜದ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕೈಗೊಳ್ಳ ಬೇಕು~ ಎಂದು ಸೂಚನೆ ನೀಡಿದರು.

ಸಂಧ್ಯಾ ಸುರಕ್ಷಾ ಅಂಗವಿಕಲರು, ವಿಧವೆಯರ ಮಾಸಾಸನ ಸೇರಿದಂತೆ ಇತರೆ ಯೋಜನೆಗಳ ಅನುಷ್ಠಾನದಲ್ಲಿ ರಾಜಸ್ವನಿರೀಕ್ಷಕರು, ಗ್ರಾಮಲೆಕ್ಕಿಗರು ರಾಜಕೀಯಮಾಡಿ ನಿಜವಾದ ಬಡವರು ಈ ಯೋಜನೆಯಿಂದ ಹೊರಗುಳಿಯುವಂತೆ ಮಾಡುತ್ತಿ ದ್ದಾರೆ. ಈ ಯೋಜನೆಯಿಂದ ವಂಚಿತರಾಗಿರುವ ಫಲಾನುಭವಿಗಳ ಬಗ್ಗೆ ಕೂಡಲೇ ಮರುಪರಿಶೀಲನೆ ನಡೆಸಿ ಆರ್ಥಿಕವಾಗಿ ಹಿಂದುಳಿದಿರುವ ಎಲ್ಲಾ ಫಲಾನುಭವಿಗಳಿಗೂ ಸರ್ಕಾರದ ಸೌಲಭ್ಯ ದೊರೆಯುವಂತೆ ಕ್ರಮವಹಿಸಲು ತಹಶೀಲ್ದಾರ್‌ಗಳಿಗೆ ಸೂಚಿಸಿದರು.

ಕೈಬಿಟ್ಟಿರುವ ಫಲಾನುಭವಿಗಳ ಮರುಪರಿಶೀಲನೆ ನಡೆಸಿ ಸರ್ಕಾರದ ಯೋಜನೆ ದೊರಕಿಸಬೇಕು. ಒಬ್ಬ ಬಡವರಿಗೂ ಅನ್ಯಾಯವಾಗದಂತೆ ತಹಶೀಲ್ದಾರರು ಆತ್ಮಸಾಕ್ಷಿಯಾಗಿ ಕೆಲಸಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಈಶ್ವರ್, ಉಪ ಕಾರ್ಯದರ್ಶಿ ಶಂಕರ್‌ರಾಜ್, ಜಿಲ್ಲಾಧಿಕಾರಿ ಸುಂದರ್, ಚಂದ್ರಶೇಖರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗಲಾಂಬಿಕ, ಉಪಾಧ್ಯಕ್ಷ ಮಲ್ಲಯ್ಯ, ಉಪವಿಭಾಗ ಅಧಿಕಾರಿ ಎ.ಬಿ. ಬಸವರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT