ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರ್‌ನಲ್ಲಿ ತಪ್ಪು ದಾಖಲೆ; ರೈತರ ಗೋಳು

ರೈತ ಸಂಘದ ಮುಖಂಡರ ಹೋರಾಟದ ಎಚ್ಚರಿಕೆ
Last Updated 4 ಡಿಸೆಂಬರ್ 2013, 6:27 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕು ಕಚೇರಿಯಲ್ಲಿ ಕಂಪ್ಯೂಟರ್ ನಿರ್ವಹಿಸುವ ನೌಕರರು ತಪ್ಪು ದಾಖಲಾತಿ ಮಾಡುವ ಕಾರಣದಿಂದ ಶೇ 60 ರಷ್ಟು ರೈತರು ಪಹಣಿ ಪಡೆಯುವಾಗ ತೊಂದರೆ ಅನುಭವಿಸುವಂತಾಗಿದೆ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎ.ಕೃಷ್ಣಸ್ವಾಮಿ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲ್ಲೂಕು ರೈತ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಮೀನಿನಲ್ಲಿ ಬೆಳೆದ ಬೆಳೆಯೇ ಒಂದಿದ್ದರೆ, ಕಂಪ್ಯೂಟರ್‌ನಲ್ಲಿ ದಾಖಲಾಗಿರುವುದು ಮತ್ತೊಂದು ಆಗಿರುತ್ತದೆ. ಇಂತಹ ತಪ್ಪುಗಳನ್ನು ಮಾಡುವ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳದ ಕಾರಣ ತಪ್ಪುಗಳಾಗುವುದು ಮುಂದುವರಿದಿದೆ. ಸರ್ವೇ ಇಲಾಖೆಯಲ್ಲಿ
ಪೋಡು ಮಾಡುವ, ಜಮೀನು ಅಳತೆ ಮಾಡಿಸುವ ಶುಲ್ಕವನ್ನು ಅವೈಜ್ಞಾನಿಕವಾಗಿ ಹೆಚ್ಚಿಸಿರುವ ಕಾರಣ ರೈತರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಅವರು ಹೇಳಿದರು.

ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳಿಗೆ ಸರ್ಕಾರದಿಂದ ಬರುವ ಸಹಾಯಧನ ಕೆಲವರಿಗೆ ಮಾತ್ರ ಸೀಮಿತವಾಗಿದ್ದು, ಹಣದ ಲಾಭಿ ನಡೆಯುತ್ತಿರುವುದಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ರೈತ ಸಂಘದ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದರು.

ಹುಳಿಯಾರು ರಸ್ತೆಯಲ್ಲಿ ಯಲ್ಲದಕೆರೆ ರಿ.ಸ. ನಂ. 228, 229, 230, 231, 232, 236ರಲ್ಲಿ 440.05 ಎಕರೆ ಭೂಮಿಯನ್ನು ಟ್ರಾನ್ಸ್ ಇಂಡಿಯಾ ಶಿಪ್ಪಿಂಗ್ ಒಯಸಿಸ್ ಕಂಪೆನಿಗೆ ಸರ್ಕಾರ ಮಂಜೂರು ಮಾಡಿದ್ದು, ಇದು ಅತ್ಯಂತ ಫಲವತ್ತಾದ ಭೂಮಿಯಾಗಿರುವ ಕಾರಣ ರೈತರ ಬದುಕಿಗೆ ಬರೆ ಎಳೆದಂತೆ ಆಗುತ್ತದೆ. ಖಾಸಗಿಯವರಿಗೆ ಲಾಭ ಮಾಡಿಕೊಡಲು ಸರ್ಕಾರ ಕೈಗೊಂಡಿರುವ ತೀರ್ಮಾನವನ್ನು ಮರುಪರಿಶೀಲನೆ ಮಾಡಿ  ಭೂಮಂಜೂರಾತಿಯನ್ನು ರದ್ದು ಪಡಿಸಬೇಕು ಎಂದು ಸಭೆಯಲ್ಲಿ ರೈತರು ಆಗ್ರಹಿಸಿದರು.

ರೈತ ಮುಖಂಡ ಸೋಮಗುದ್ದು ರಂಗಸ್ವಾಮಿ, ಹೊರಕೇರಪ್ಪ, ತುಳಸೀದಾಸ್, ಸಿದ್ದರಾಮಣ್ಣ, ವಿಶ್ವನಾಥ್, ಸತೀಶ್, ಮುದ್ದಣ್ಣ, ನೀಲಕಂಠಮೂರ್ತಿ, ಗಂಗಾಧರ್, ತವಂದಿ ತಿಪ್ಪೇಸ್ವಾಮಿ, ದಸ್ತಗೀರ್ ಸಾಬ್, ಕಂದಸ್ವಾಮಿ, ಸದಾಶಿವನ್, ತಿಮ್ಮದಾಸಪ್ಪ, ರಾಮಕೃಷ್ಣಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT