ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸರಿಗೆ ಸೂಚನೆ

ತಂಬಾಕು ಉತ್ಪನ್ನ ನಿಯಂತ್ರಣ ಕಾಯ್ದೆ
Last Updated 20 ಜುಲೈ 2013, 6:56 IST
ಅಕ್ಷರ ಗಾತ್ರ

ಧಾರವಾಡ: `ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪೊಲೀಸರು ತಂಬಾಕು ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದಾರೆ. ಈ ನಿಟ್ಟಿನಲ್ಲಿ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಯ ಪೊಲೀಸರೂ ಸಹ ದಿಟ್ಟ ಹೆಜ್ಜೆ ಇಡಬೇಕು' ಎಂದು ಬೆಂಗಳೂರಿನ ಕ್ಯಾನ್ಸರ್ ತಜ್ಞ ವೈದ್ಯ ಡಾ.ವಿಶಾಲರಾವ್ ಹೇಳಿದರು.

ಕ್ಯಾನ್ಸರ್ ನಿಯಂತ್ರಣ ಯೋಜನೆ, ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಹಾಗೂ ಪೊಲೀಸ್ ಇಲಾಖೆ ಸಂಯುಕ್ತವಾಗಿ, ಕೋಟ್ಪಾ ಕಾಯ್ದೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಧಾರವಾಡ, ಗದಗ ಹಾಗೂ ಹಾವೇರಿ (ಉತ್ತರ ವಲಯ) ಪೊಲೀಸ್ ಅಧಿಕಾರಿಗಳಿಗಾಗಿ ಶುಕ್ರವಾರ ಇಲ್ಲಿಯ ಜಿ.ಪಂ. ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

`ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆಯ ಕಾನೂನುಗಳು ಪೂರಕವಾಗಿವೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಕರ್ತವ್ಯ ನಿರ್ವಹಿಸಿ ಸಮಾಜದ ಉತ್ತಮ ಆರೋಗ್ಯಕ್ಕೆ ನಾಂದಿ ಹಾಡಬೇಕಿದೆ. ತಂಬಾಕು ಸೇವನೆಯಿಂದಾಗಿ ಶೇ 30ರಷ್ಟು ಕಡಿಮೆ ವಯೋಮಾನದವರು ಮರಣ ಹೊಂದುತ್ತಿದ್ದಾರೆ. ಉತ್ತಮ ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆಂದೇ ಸರ್ಕಾರದ ವಿವಿಧ ಇಲಾಖೆಗಳು ಈ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆಯನ್ನು ರಾಜ್ಯದಾದ್ಯಂತ ಜಾರಿಗೆ ತರುತ್ತಿವೆ' ಎಂದರು.

`ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು, ಮಹಾನಗರ ಪಾಲಿಕೆ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ.  ಅಲ್ಲದೇ, ಶಿಕ್ಷಣ ಇಲಾಖೆಯು, ತಂಬಾಕು ಸೇವನೆಯಿಂದ ಆಗುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಬೇಕು.

ಇಂದು ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಧೂಮಪಾನ ನಡೆಯುತ್ತಿದೆ, ಇದರಿಂದಾಗಿ ಸುಮಾರು ಆರು ಸಾವಿರ ಮಕ್ಕಳು ಪ್ರತಿವರ್ಷ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ರಾಜ್ಯದಲ್ಲಿ ಇಂದು ಗುಟ್ಕಾ ನಿಷೇಧ ಮಾಡಲಾಗಿದೆ. ಆದರೆ, ಗುಟ್ಕಾ ಕಂಪೆನಿಗಳು ಗುಟ್ಕಾವನ್ನು ಬೇರೆ ರೀತಿಯಿಂದಲೇ ಮಾರಾಟ ಮಾಡುತ್ತಿವೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಗುಟ್ಕಾವನ್ನು ನಿಷೇಧಿಸಬೇಕಾಗಿದೆ' ಎಂದರು.

ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ, `ಕೇಂದ್ರ ಸರ್ಕಾರದ ಆದೇಶದಂತೆ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಕೋಟ್ಪಾ ಕಾಯ್ದೆಯನ್ನು ಜಾರಿಗೆ ತಂದು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದ ಪ್ರಕರಣಗಳನ್ನು ಪ್ರತಿ ತಿಂಗಳು ದಾಖಲಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ತಂಬಾಕು ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಿ ಸಾರ್ವಜನಿಕರ ಆರೋಗ್ಯ ರಕ್ಷಣೆ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ' ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಮತ್ತು ನಿಷೇಧ ಕಾನೂನನ್ನು ಜಾರಿಗೆ ತರುವ ನಿಟ್ಟಿನಲ್ಲಿ ಇರುವ ಮಾರ್ಗಸೂಚಿಗಳ ಬಗ್ಗೆ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ನೂರಾರು ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ತರಬೇತಿ ಪಡೆದರು. ಅಲ್ಲದೇ, ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ಮಾಡಲಾಯಿತು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಬಿ.ಎ.ಪದ್ಮನಯನ, ಡಿವೈಎಸ್‌ಪಿಗಳಾದ ಆರ್.ಎಸ್.ಬನಹಟ್ಟಿ, ಬಿ.ವೈ.ಬೆಳ್ಳುಬ್ಬಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT