ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ತೆರೆಯದ ಸರ್ಕಾರ: ಅತಂತ್ರರಾದ ಶಿಕ್ಷಕರು

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಧಾರವಾಡ: ಸಂಬಳವೂ ಇಲ್ಲ, ಅನುದಾನವೂ ಇಲ್ಲ, ಒಟ್ಟಾರೆ ಅನುದಾನರಹಿತ ಶಾಲೆಗಳ ಶಿಕ್ಷಕರ ಬದುಕು ಅತಂತ್ರವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಅನುದಾನಕ್ಕಾಗಿ ಅನುದಾನರಹಿತ ಶಿಕ್ಷಕರು ಹೋರಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ.

1991 ರಿಂದ 1994-95ರ ಅವಧಿಯಲ್ಲಿ ಆರಂಭವಾದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಲಾಗುವುದು ಎಂದು 2007ರಲ್ಲಿ ಸರ್ಕಾರ ಘೋಷಿಸಿ, ಬಜೆಟ್‌ನಲ್ಲಿ 176 ಕೋಟಿ ರೂಪಾಯಿ ಕಾಯ್ದಿರಿಸಿತ್ತು. ಅನುದಾನ ಸಿಕ್ಕಿತು ಎಂದು ಖುಷಿ ಪಟ್ಟಿದ್ದ ಶಿಕ್ಷಕರಿಗೆ, ಕಹಿ ಅನುಭವವೇ ಹೆಚ್ಚಾಯಿತು.

~ಶಾಲಾ ಸೇವೆಗೆ ಸೇರಿದ ಮೇಲೆ ಕನಿಷ್ಠ ಪ್ರಮಾಣದಲ್ಲಾದರೂ ಸಂಬಳ ಸಿಗುತ್ತಿತ್ತು. ಆದರೆ ಅನುದಾನ ನೀಡುವ ಬಗ್ಗೆ ಸರ್ಕಾರ ಘೋಷಣೆ ಮಾಡಿದ ನಂತರ ಇಂದಿನವರೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ಸಂಬಳ ನೀಡುತ್ತಿಲ್ಲ~ ಎಂದು ಅನೇಕ ಶಿಕ್ಷಕರು ದೂರಿದ್ದಾರೆ.

ಅನುದಾನಕ್ಕಾಗಿ ಹಿಂದೆ ಮೂರು ಬಾರಿ ಹೋರಾಟ ನಡೆಸಿದ ಸಂದರ್ಭದಲ್ಲೂ ಸರ್ಕಾರ ಭರವಸೆ ಮಾತ್ರ ನೀಡುತ್ತ ಬಂದಿದೆಯೇ ಹೊರತು, ಅದನ್ನು ಈಡೇರಿಸುವ ಗೋಜಿಗೆ ಹೋಗಿಲ್ಲ. ಇದರಿಂದ ಬೇಸತ್ತಿರುವ ಶಿಕ್ಷಕರು ಈ ಬಾರಿ ಲಿಖಿತ ಉತ್ತರ ನೀಡಿದರೆ ಮಾತ್ರ ಹೋರಾಟ ಹಿಂದಕ್ಕೆ ಪಡೆಯುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಅವರು ಕಳೆದ 15 ದಿನಗಳಿಂದ ಆಮರಣ ಉಪವಾಸ ಹಾಗೂ 55 ದಿನಗಳಿಂದ ಧರಣಿ ನಡೆಸಿದ್ದಾರೆ.

`ಸರ್ಕಾರ ಕೇವಲ ಭರವಸೆ ಮಾತ್ರ ನೀಡುತ್ತದೆ. ಹೋರಾಟವನ್ನು ಮೊಟಕುಗೊಳಿಸುವ ಬಗ್ಗೆಯೇ ಸರ್ಕಾರ ಹೆಚ್ಚಿನ ಆಸಕ್ತಿ ವಹಿಸಿದಂತಿದೆ. ಸರ್ಕಾರದ ಮೇಲೆ ನಂಬಿಕೆಯೇ ಇಲ್ಲದಂತಾಗಿದೆ. 1991 ರಿಂದ 1994-95ರ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದ ಶಾಲಾ-ಕಾಲೇಜುಗಳಿಗೆ ಅನುದಾನ ನೀಡಲು ಸರ್ಕಾರ ಬದ್ಧ ಎಂದು ಹೇಳುತ್ತಿದೆ.

ಆದರೆ ಬದ್ಧತೆ ಮಾತ್ರ ತೋರಿಸಿಲ್ಲ. ಇದೇ 8 ರಂದು ಸದನದಲ್ಲಿ ಉತ್ತರ ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ, ಆದರೆ ನಮಗೆ ಉತ್ತರ ಬೇಕಿಲ್ಲ. ಕ್ರಮ ಬೇಕಾಗಿದೆ. ಗುರುವಾರದಿಂದ (ಫೆ 9)  ಸಾಮೂಹಿಕ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ~ ಎಂದು ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ-ಕಾಲೇಜುಗಳ ಶಿಕ್ಷಕರ, ನೌಕರರ ಹಾಗೂ ಆಡಳಿತ ಮಂಡಳಿಗಳ ಸಂಘದ ಸಂಘಟನಾ ಕಾರ್ಯದರ್ಶಿ ಮುತ್ತುರಾಜ ಮತ್ತಿಕೊಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

`ಕಳೆದ ಮೂರು ವರ್ಷದಿಂದ ಸಂಬಳವಿಲ್ಲ. ಅನುದಾನ ನೀಡುವ ಬಗ್ಗೆ ಘೋಷಣೆ ಆಗುತ್ತಿದ್ದಂತೆ ನಮ್ಮ ಕಡತಗಳನ್ನು ಕಳುಹಿಸಲು, ಅಧಿಕಾರಿಗಳಿಗೆ ಹಣ ನೀಡಲು ಸಹ ಸಾಲ ಮಾಡಿದ್ದೇವೆ. ನಮ್ಮ ಜೀವನ ಸಾಲದಲ್ಲಿಯೇ ಮುಳುಗಿದ್ದು, ಇದರಲ್ಲಿಯೇ ಅಂತ್ಯ ಕಾಣುವ ಪರಿಸ್ಥಿತಿಯಿದೆ~ ಎಂದು ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆಂಕರೆಯ ಎಸ್‌ಸಿಬಿಎಸ್‌ಬಿಎಸ್ ಶಾಲೆಯ ಶಿಕ್ಷಕ ಕೊಟ್ಟೂರಯ್ಯ ಹೇಳುತ್ತಾರೆ.

`ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮನೆಗೂ ಹೋಗಿಲ್ಲ. ಪ್ರತಿಭಟನೆಯಲ್ಲಿ ಪಾಲ್ಗೊಂಡು ಬದುಕು ನೂಕುತ್ತಿದ್ದೇನೆ. ಜೂನ್ ನಂತರ ಬೇರೆ ದಾರಿ ಹಿಡಿಯುವ ಬಗ್ಗೆ ಯೋಚನೆ ಮಾಡಿದ್ದು, ಈಗ ನಮಗೆ ಆತ್ಮಹತ್ಯೆಯೊಂದೇ ಬಾಕಿ ಇದೆ~ ಎಂದು ಕೊಟ್ಟೂರಯ್ಯ ಕಣ್ಣೀರಿಟ್ಟರು.

`ಸಂಬಳವಿಲ್ಲದ ಕಾರಣ ಬಡಿಗೆ ಕೆಲಸ ಮಾಡಿಕೊಂಡು ಬದುಕು ನಡೆಸುತ್ತಿದ್ದೇನೆ. ಸೇವಾ ನಿವೃತ್ತಿಗೆ ಆರು ವರ್ಷ  ಉಳಿದಿದೆ. ಅನುದಾನ ಕೊಡುತ್ತೇವೆ ಎಂದು ಸರ್ಕಾರ ಘೋಷಿಸಿದ ಮೇಲೆ ಸಂಬಳ ಸಹ ದೊರಕುತ್ತಿಲ್ಲ. ಸರ್ಕಾರ ನಮ್ಮ ಬದುಕಿನೊಂದಿಗೆ ಚೆಲ್ಲಾಟ ನಡೆಸುತ್ತಿದೆ. ಸರ್ಕಾರದ ಇಂಥ ಧೋರಣೆಯಿಂದ ಇಡೀ ಕುಟುಂಬ ಬೀದಿಗೆ ಬಂದಂತಾಗಿದೆ~ ಎಂದು ನವಲಗುಂದ ತಾಲ್ಲೂಕಿನ ಹಳ್ಳಿಕೇರಿಯ ಕೃಷ್ಣ ಪ್ರೌಢಶಾಲೆಯ ಶಿಕ್ಷಕ ಎಂ.ಡಿ.ಬಡಿಗೇರ ತಮ್ಮ ಗೋಳು ತೋಡಿಕೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT