ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತೆ ಎರವಲು, ಮಸಾಲೆಯ ಘಮಲು (ಚಿತ್ರ: ಚಿಂಗಾರಿ)

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ಟೇಕನ್~ ಹಾಲಿವುಡ್ ಚಿತ್ರವನ್ನು ಜಾಣ್ಮೆಯಿಂದ ಭಟ್ಟಿ ಇಳಿಸಿದಂತೆ ತೋರುವ `ಚಿಂಗಾರಿ~ ಮಾನವ ಕಳ್ಳಸಾಗಣೆಯನ್ನು ವಸ್ತುವಾಗಿರಿಸಿಕೊಂಡ ಚಿತ್ರ. ಅಲ್ಲಿ ನಾಯಕ ತಂದೆ. ಇಲ್ಲಿ ನಾಯಕ ಪ್ರೇಮಿ. ಇಬ್ಬರೂ ತನಿಖಾ ತಂಡಕ್ಕೆ ಸೇರಿದವರು. ಅಲ್ಲಿಯಂತೆಯೇ ಇಲ್ಲಿಯೂ ವಿದೇಶದಲ್ಲಿ ಮಾನವ ಕಳ್ಳಸಾಗಾಣಿಕೆ ನಡೆಯುತ್ತದೆ. ಕಮಲಹಾಸನ್ ಅಭಿನಯದ ತಮಿಳಿನ `ಮಹಾನದಿ~ಯನ್ನು ಕೂಡ ಚಿತ್ರ ನೆನಪಿಗೆ ತರುತ್ತದೆ.

ಆದರೆ ಚಿಂಗಾರಿ ಭಿನ್ನವಾಗಿ ಕಾಣುವುದು ಅದರ ಓಘ ಮತ್ತು ನಿರೂಪಣೆಯಲ್ಲಿ. ನಿರ್ದೇಶಕ ಎ.ಹರ್ಷ ಮನರಂಜನೆಗೆ ಅಗತ್ಯವಾದ ಎಲ್ಲಾ ತಂತ್ರಗಳನ್ನು ಹೆಣೆದಿದ್ದಾರೆ. ಹೊಡೆದಾಟ, ಸೆಂಟಿಮೆಂಟ್, ಪ್ರೀತಿ, ಹಾಡು, ಗ್ಲಾಮರ್, ಹಾಸ್ಯ ಜತೆಗೆ ವೈಭವೋಪೇತ ದೃಶ್ಯಗಳು ಪ್ರೇಕ್ಷಕರನ್ನು ಮನತಣಿಸದೇ ಇರವು. ಚಿತ್ರಕ್ಕೆ ಕಳಶವಿಟ್ಟಂತೆ ಇರುವುದು ಯೋಗಾನಂದ್ ಮುದ್ದಾನ್ ಮತ್ತು ಸಂತೋಷ್ ಬರೆದಿರುವ ಸಂಭಾಷಣೆ. ಯಾವುದೇ ಅತಿರೇಕವಿಲ್ಲದೆ ಹಿತಮಿತವಾಗಿ ಬರುವ ಡೈಲಾಗ್‌ಗಳು ಪ್ರೇಕ್ಷಕರನ್ನು ತಣಿಸುವಲ್ಲಿ ಸಫಲವಾಗಿವೆ.

ನಾಯಕಿಯ (ದೀಪಿಕಾ ಕಮಯ್ಯ) ಸೋದರ ಮಾದಕ ವ್ಯಸನಿ. ಆದರೆ ಆಕೆ ಅದನ್ನು ತಿಳಿಯದ ಮುಗ್ಧೆ. ಆತನ ಸಾವು ನಾಯಕ (ದರ್ಶನ್) ಹಾಗೂ ಆಕೆಯ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣ ವಾಗುತ್ತದೆ. ಇದರಿಂದ ಬೇಸತ್ತು ಆಕೆ ಗೆಳತಿಯ (ಮಧು) ಜತೆ ಸ್ವಿಟ್ಸರ್‌ಲೆಂಡ್‌ಗೆ ತೆರಳುತ್ತಾಳೆ. ಅಲ್ಲಿ ಮಾನವ ಕಳ್ಳಸಾಗಣೆಯ ಜಾಲಕ್ಕೆ ಇಬ್ಬರೂ ಸಿಲುಕುತ್ತಾರೆ. ಇವರನ್ನು ಉಳಿಸಲು ನಾಯಕ ನಡೆಸುವ ತಂತ್ರಗಳೇನು? ಈ ತಂತ್ರಗಳು ಅವನಿಗೆ ಎಷ್ಟರ ಮಟ್ಟಿಗೆ ಯಶಸ್ಸು ತಂದವು ಎಂಬುದು ಕತೆ.

ದರ್ಶನ್ ಎಂದಿನಂತೆ ಆಕ್ಷನ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹಾಡು ಹೊಡೆದಾಟ ಎರಡರಲ್ಲೂ ಮೈ ಮರೆತು ಅಭಿನಯಿಸಿದ್ದಾರೆ. ಸೊಗಸುಗಾರಿಕೆಯಲ್ಲೂ ಹಿಂದೆ ಬಿದ್ದಿಲ್ಲ.

ಆದರೆ ಎಡವಿರುವುದು ದೀಪಿಕಾ ಅಭಿನಯ. ತಾವು ಈಗ ರೂಪದರ್ಶಿಯಲ್ಲ, ನಟಿ ಎಂಬುದನ್ನು ಅವರು ಮರೆತಂತಿದೆ. ಕತೆ ಕೂಡ ಆಕೆಯ ಅಭಿನಯಕ್ಕೆ ಪೂರಕವಾಗಿಲ್ಲ.

ಹೀಗಾಗಿ ಕೇವಲ ದಸರಾ ಗೊಂಬೆಯಂತೆ ಕಂಡರೆ ಅಚ್ಚರಿಯಿಲ್ಲ. ನಟಿ ಭಾವನಾ ಅವರದು ಮಾಗಿದ ಅಭಿನಯ. ದುಭಾಷಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು ನೃತ್ಯಕ್ಕೂ ಸೈ ಹೊಡೆದಾಟಕ್ಕೂ ಸೈ ಎಂದಿದ್ದಾರೆ. ಹಸಿಬಿಸಿ ದೃಶ್ಯಗಳಲ್ಲೂ ಕಾಣಿಸಿಕೊಂಡು ಪಡ್ಡೆಗಳಲ್ಲಿ ಪುಳಕ ಹುಟ್ಟಿಸುತ್ತಾರೆ. ಆಕೆ ಅನಿವಾಸಿ ಭಾರತೀಯಳಾಗಿ ಕಾಣುವಂತೆ ಮಾಡಿರುವ ಪ್ರಸಾಧನ ಕೂಡ ಗಮನಾರ್ಹ. ತಮ್ಮ ಡೈಲಾಗ್‌ಗಳಿಂದಾಗಿ ನಟಿ ಮಧು, ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಸೃಜನ್ ಲೋಕೇಶ್, ಭಾವಪೂರ್ಣ ಅಭಿನಯದಿಂದಾಗಿ ರಮೇಶ್ ಭಟ್, ಸುಮಿತ್ರಾ ಗಮನ ಸೆಳೆಯುತ್ತಾರೆ.

ಯೋಗರಾಜ್ ಭಟ್ಟರ `ಕೈ ಕೈಯ~ ಹಾಡಿನಲ್ಲಿ ಸಾಹಿತ್ಯ ಇಲ್ಲದಿದ್ದರೂ ಹೊಸತನದಿಂದ ಕೂಡಿದೆ. ಜಯಂತ್ ಕಾಯ್ಕಿಣಿ,  ಕವಿರಾಜ್ ಬರೆದಿರುವ `ಗಮನವ~, `ಬಾರೆ ಬಾರೆ~, `ನೀ ಮಿಡಿಯುವೆ~ ಹಾಡುಗಳಿಗೆ ಮಾಧುರ್ಯ ವಿದೆ. ಅನುಭವಿ ಛಾಯಾಗ್ರಾಹಕ ಎಚ್.ಸಿ. ವೇಣು ದೃಶ್ಯಗಳಿಗೆ ಸಮೃದ್ಧಿ ತಂದಿದ್ದಾರೆ. ದೇಶವೇ ಇರಲಿ ವಿದೇಶವೇ ಇರಲಿ ದೃಶ್ಯಗಳನ್ನು ಸುಂದರ ನುಡಿಗಟ್ಟಿಗೆ ಒಗ್ಗಿಸಿದ್ದಾರೆ. ಚಿತ್ರದಲ್ಲಿ ಒಟ್ಟು ಏಳು ಹೊಡೆದಾಟದ ದೃಶ್ಯಗಳಿವೆ. ರವಿವರ್ಮ ಅವರ ಸಾಹಸ ನಿರ್ದೇಶನ ಉತ್ತಮ ಫಲ ನೀಡಿದೆ. 

ನಾಯಕನ ಎದುರಿಗೆ ಅಷ್ಟೇ ಶಕ್ತಿಶಾಲಿಯಾದ ಒಬ್ಬನೇ ಖಳನಾಯಕ ನನ್ನು ಸೃಷ್ಟಿಸಿದ್ದರೆ ಚಿತ್ರದ ಒತ್ತು ಹೆಚ್ಚುತ್ತಿತ್ತು. ನಾಯಕನ ಅಬ್ಬರವೇ ಹೆಚ್ಚಿ ಖಳನಾಯಕರು (ಅರುಣ್ ಸಾಗರ್, ಯಶಸ್ ಸೂರ್ಯ ಇತ್ಯಾದಿ) ಸೊರಗಿದಂತೆ ಕಾಣುವುದು ಚಿತ್ರದ ಲೋಪ. ಮಾನವ ಕಳ್ಳಸಾಗಣೆ ಕೇವಲ ವಿದೇಶದಲ್ಲಿ ಮಾತ್ರ ನಡೆಯುತ್ತದೆ ಎಂಬಂತೆ ಚಿತ್ರಿಸಿರುವುದು ಪೊಳ್ಳಾಗಿ ತೋರುತ್ತದೆ.
 
ಸ್ವಿಟ್ಸರ್‌ಲೆಂಡ್‌ನ ಬದಲು ಭಾರತೀಯ ನಗರಗಳಲ್ಲಿ ನಡೆಯುವ ದಂಧೆಯನ್ನು ಅರ್ಥಪೂರ್ಣವಾಗಿ ಬಿಂಬಿಸಬಹುದಿತ್ತು. ನಿರ್ದೇಶಕರು ಕೇವಲ ವೈಭವದ ದೃಶ್ಯಗಳಿಗಾಗಿ ವಿದೇಶಕ್ಕೆ ಜೋತು ಬಿದ್ದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT