ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸುಗಳ ನೇದು...

Last Updated 2 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಮಗ್ಗದ ಮೇಲೆ ಕನಸುಗಳ ನೇಯ್ದು ಕಾದಿದ್ದಾರೆ ನಮ್ಮ ನೇಕಾರ ಕುಟುಂಬದವರು. ನಾಲ್ಕು ಸಾವಿರ ವರ್ಷಗಳ ಇತಿಹಾಸದ ಅಪೂರ್ವ ಕಲೆಯಲ್ಲಿ ಪರಿಣತ ಕಲಾ ನಿಪುಣರು ಮಿನುಗುವ ರೇಷ್ಮೆ, ಅಪ್ಪಟ ಹತ್ತಿಯ ಎಳೆಗಳಿಗೆ ಕಲೆಯ ಮೌಲ್ಯ ತಂದುಕೊಟ್ಟಿದ್ದಾರೆ.

ಕರ್ನಾಟಕ, ಆಂಧ್ರ, ಪಶ್ಚಿಮ ಬಂಗಾಳ, ಜಮ್ಮು- ಕಾಶ್ಮೀರ, ಗುಜರಾತ್, ರಾಜಸ್ತಾನ ಸೇರಿದಂತೆ 12 ರಾಜ್ಯಗಳ 92 ಸ್ಟಾಲುಗಳಲ್ಲಿ ಒಂದೇ ಛಾವಣಿಯಡಿ ಬಗೆಬಗೆಯ ಜವಳಿಯೆಲ್ಲ ಲಭ್ಯ. ‘ಹರ್ಷಕಲಾ’ ರಾಷ್ಟ್ರೀಯ ಕೈಮಗ್ಗ ಮೇಳದಲ್ಲಿ ಸಾಂಪ್ರದಾಯಿಕ ಮಗ್ಗ ಮತ್ತು ಪ್ರಾಕೃತಿಕ ವೈಶಿಷ್ಟ್ಯಗಳನ್ನು ಪ್ರತಿನಿಧಿಸುವ ‘ಕೈಮಗ್ಗ- ಪ್ರಕೃತಿ ಹಾಗೂ ಪರಂಪರೆಯ ಸಮಾಗಮ’ವನ್ನು ಕಾಣಬಹುದು.

ಸುರಪುರ ತಾಲೂಕಿನ ರುಕ್ಮಾಪುರದ ಮಳಿಗೆಯಲ್ಲಿ ನಾರಾಯಣಪೇಟದ ಕಾಟನ್ ಸೀರೆಗಳ ಸೊಬಗು ತೆರೆದುಕೊಳ್ಳುತ್ತದೆ. ದಾವಣಗೆರೆಯ ಸ್ವಸಹಾಯ ಗುಂಪಿನವರ ಲಂಬಾಣಿ ಕಲೆಯ ದಿರಿಸುಗಳು, ಪರ್ಸುಗಳಿವೆ. ಸುಳೇಭಾವಿ ಸೊಸೈಟಿಯದು ಸೀರೆಯಂಚುಗಳಲ್ಲಿ ಬಹುವರ್ಣದ ಬಹುವಿಧದ ಪ್ರಯೋಗ. 

ಹಾವೇರಿಯ ಮಳಿಗೆಯಲ್ಲಿ ಕೆಂಪು ಚೌಕಳಿಯ ದೇವರ ವಸ್ತ್ರ, ಮೊದಲ ಬಾರಿ ತಯಾರಿಸಿದ ಪುಟ್ಟ ಲಿಂಗವಸ್ತ್ರಗಳಿವೆ. ಅಪರೂಪದ ಮೂರು ಆಯಾಮಗಳ ವಿನ್ಯಾಸದ ಕಾರ್ಪೆಟ್ ಮಧ್ಯಪ್ರದೇಶದ ಮಳಿಗೆಯಲ್ಲಿದೆ.

 ೊಳಕಾಲ್ಮೂರು ಮಳಿಗೆಯಲ್ಲಿ ಪ್ರಶಸ್ತಿ ಗಳಿಸಿದ ದಟ್ಟಗೆಂಪಿನ ರೇಷ್ಮೆಯ ಬಟ್ಟೆಯ ಮೇಲೆಲ್ಲ ಜರಿಯ ಶಿವಲಿಂಗ, ಅದರ ಮೇಲೆ ವಿಭೂತಿ ಪತ್ರಿದಳವೂ ಆಕರ್ಷಕವಾಗಿದ್ದು ಅದನ್ನು ನಂಜನಗೂಡಿನ ದೇವಸ್ಥಾನಕ್ಕೆ ದೇವರೆದುರಿನ ಪರದೆಯಾಗಿಸಲು ಅರ್ಪಿಸಲಿದ್ದಾರೆ. ದಿನಕ್ಕೆ ಮುಕ್ಕಾಲು ಗಜ ಮಾತ್ರ ನೇಯಲು ಸಾಧ್ಯವಿರುವ ಪಾರಂಪರಿಕ ಮೊಳಕಾಲ್ಮೂರು ಸೀರೆಯ ಮೇಲ್ಮೈ ಸವರಿದರೆ ಅಂಚು ಸೇರುವಲ್ಲಿ ಗೆರೆ ಕೂಡ ಅನುಭವಕ್ಕೆ ಬರದು. ಪ್ರತ್ಯೇಕ ಮೂರು ಲಾಳಿಯಲ್ಲಿ ನೇಯ್ದ ಸೀರೆಯ ಹೆಚ್ಚುಗಾರಿಕೆ ಅದು ಎನ್ನುತ್ತಾರೆ ರವೀಂದ್ರ. 

ಎಲ್ಲ ಸಾಂಪ್ರದಾಯಿಕ ಸೀರೆಗಳಲ್ಲೂ ಭಿನ್ನ ಕಲೆ ಸೇರಿಕೊಳ್ಳುತ್ತಿದೆ, ಬೇಡಿಕೆಗೆ, ಅಗತ್ಯಕ್ಕೆ ಕಲೆಯಲ್ಲಿ ಹೊಸತನ ಕಾಯ್ದುಕೊಂಡು ಮುನ್ನಡೆಯುತ್ತಿದೆ ಮಗ್ಗ ಕ್ಷೇತ್ರ ಎನ್ನುತ್ತಾರೆ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕರಾದ ಎಸ್.ಜಗದೀಶ್. 

ಟಸ್ಸರ್, ಮುಗಾ, ಮಲ್ಬರಿ, ಕ್ರೇಪ್‌ನಂತಹ ಅಪ್ಪಟ ರೇಷ್ಮೆ, ಅನುಕರಣೆಯ ರೇಷಮ್ ಎಂಬ ವಸ್ತ್ರದಲ್ಲಿ ಸೀರೆಗಳು, ಎಂಬೋಸ್ಡ್ ಸೀರೆಗಳು, ಹತ್ತಿ ಮತ್ತು ಕೃತಕ ಎಳೆ ಬೆರೆತ ಸೀರೆಗಳೂ ಇವೆ. ಬಾಂದಣಿ, ಕಲಂಕಾರಿ, ಬ್ಲಾಕ್ ಪ್ರಿಂಟ್, ಜರಿ ಕುಸುರಿ, ಬನಾರಸ್ ನೇಯ್ಗೆಯ ಬಟ್ಟೆ, ಗುಜರಾತಿ ಕಸೂತಿ ಮತ್ತು ಕನ್ನಡಿ ಕುಸುರಿ, ಎಂಬ್ರಾಯಿಡರಿಯಲ್ಲಿ ವಸ್ತ್ರ ಸೊಗಸು ಇನ್ನೂ ಹೆಚ್ಚಿದೆ. ಕಣ್ಣು ತಣಿಯುವಷ್ಟೂ ನೋಡುತ್ತ ಹೋದರೆ ಕಾಲು ನೋಯುವವರೆಗೂ ವೈವಿಧ್ಯಮಯ ಸೊಬಗು ಸವಿಯಬಹುದು.

ವಾರಾಂತ್ಯಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದು ಈ ಭಾನುವಾರ ಸಂಜೆ ಭರತನಾಟ್ಯವಿದೆ. ಫುಡ್‌ಕೋರ್ಟ್ ಸೌಲಭ್ಯವೂ ಇದೆ. ಪ್ರದರ್ಶನ ಫೆ. 8ಕ್ಕೆ ಮುಕ್ತಾಯ.

ಸ್ಥಳ: ಅರಮನೆ ಮೈದಾನ, ಗಾಯತ್ರಿ ವಿಹಾರ (ಬಳ್ಳಾರಿ ರಸ್ತೆ). ಬೆಳಿಗ್ಗೆ 10 ರಿಂದ ರಾತ್ರಿ 9. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT