ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಹರ್ದಮನ್...

Last Updated 9 ಜನವರಿ 2014, 19:30 IST
ಅಕ್ಷರ ಗಾತ್ರ

ಮಡಿಕೇರಿ: ಸಾಹಿತ್ಯ ಸಮ್ಮೇಳನದ ಮುಖ್ಯವೇದಿ­ಕೆಯ ಎದುರು ಕೆಂಪುಮೊಗದ ವ್ಯಕ್ತಿಯೊಬ್ಬರತ್ತ ಕ್ಯಾಮೆರಾಗಳು ಬೆಳಕು ಬೀರತೊಡಗಿದವು. ಮೈಕುಗಳೂ ಅವರ ಮಾತನ್ನು ಹಿಡಿಯಲಾರಂಭಿಸಿದವು. ಅವರ ಕನ್ನಡಕ್ಕೆ ಬೇರೆಯದೇ ತೂಕ. ಯಾಕೆಂದರೆ, ಅವರು ಡೆನ್ಮಾರ್ಕ್‌­ನವರು. ಹೆಸರು- ಹೆಂದ್ರಿಕ್ ಹರ್ದಮನ್.

ಕಳೆದ ವರ್ಷ ವಿಜಾಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲೂ ತಮ್ಮ ಕನ್ನಡದ ಮೂಲಕ ಮಾಧ್ಯಮಮಿತ್ರರ ಕಣ್ಣಿಗೆ ಬಿದ್ದಿದ್ದ ಹರ್ದಮನ್, ಕಳೆದೊಂದು ವರ್ಷದಲ್ಲಿ ತಮ್ಮ ಕನ್ನಡವನ್ನು ಇನ್ನಷ್ಟು ಸುಧಾರಿಸಿ­ಕೊಂಡಿದ್ದಾರೆ.

ಸದ್ಯಕ್ಕೆ ಮೈಸೂರಿನಲ್ಲಿ ನೆಲೆಸಿರುವ ಅವರು, 1996ರಲ್ಲಿ ಪ್ರವಾಸಕ್ಕೆಂದು ಬೆಂಗಳೂರಿಗೆ ಬಂದಾಗ ಕನ್ನಡ ಮೋಹಕ್ಕೆ ಒಳಗಾದರು. ಆಮೇಲೆ ಅವರು ಪ್ರವಾಸಿಗರಷ್ಟೇ ಆಗದೆ ಬೆಂಗಳೂರಿನಲ್ಲಿ ನೆಲೆ ನಿಂತರು. ತಮ್ಮಿಷ್ಟದ ಅನುವಾದದ ಕೆಲಸ ಮಾಡಿಕೊಂಡು ಬಾಳ ಬಂಡಿ ಸಾಗಿಸಿದರು. 14 ತಿಂಗಳಿನಿಂದ ಮೈಸೂರು ಅವರ ಆವಾಸಸ್ಥಾನ. ಬೆಂಗಳೂರಿನಲ್ಲಿ ಒಳ್ಳೆಯ ಕನ್ನಡ ಕಲಿಯಲು ಸಾಧ್ಯವಿಲ್ಲ ಎಂದು ಅವರು ಮೈಸೂರಿಗೆ ಸ್ಥಳಾಂತರ­ಗೊಂಡ­ರೆಂಬುದು ಗಮನಾರ್ಹ ವಿಷಯ. ಮೈಸೂರಿನಲ್ಲಿ ಪ್ರತಿ ಶನಿವಾರ ನಡೆಯುವ ‘ಕತೆ ಕೇಳೋಣ ಬನ್ನಿ’ ಕಾರ್ಯಕ್ರಮದ ಕಾಯಂ ಪ್ರೇಕ್ಷಕ ಹರ್ದಮನ್. ಅಲ್ಲಿ ಕನ್ನಡದ ಸಾಹಿತಿಗಳು ಕತೆ ಹೇಳುವಾಗ ಇಂಗ್ಲಿಷ್ ಹೆಚ್ಚು ಬಳಸಿದರೆ ಇವರು ಎಚ್ಚರಿಕೆ ನೀಡುತ್ತಾರೆ.

ಸ್ವಂತ ಆಸಕ್ತಿಯಿಂದ ಕನ್ನಡ ಕಲಿತ ಅವರು ನಿಘಂಟುಗಳನ್ನು ಕೊಂಡು, ಪದಗಳ ಮೂಲಾರ್ಥ ಅರಿತರು. ಶಿವರಾಮ ಕಾರಂತರ ‘ಮೂಕಜ್ಜಿಯ ಕನಸು’, ಪಿ.ಲಂಕೇಶರ ‘ಕಲ್ಲು ಕರಗುವ ಸಮಯ’, ಕುವೆಂಪು ಅವರ ನಾಟಕ­ಗಳನ್ನು ಓದಿರುವ ಅವರಿಗೆ ತುಂಬಾ ಇಷ್ಟದ ಲೇಖಕ ಪೂರ್ಣಚಂದ್ರ ತೇಜಸ್ವಿ.

ತೇಜಸ್ವಿಯವರ ‘ಕರ್ವಾಲೋ’ ಕಾದಂಬ­ರಿಯ ಮಂದಣ್ಣ ಅವರ ಕಣ್ಣಿಗೆ ಕಟ್ಟಿದ್ದಾನೆ. ‘ಜುಗಾರಿ ಕ್ರಾಸ್’,­‘ಚಿದಂಬರ ರಹಸ್ಯ’ವನ್ನು ಪದೇಪದೇ ಓದಿ ಅವರು ಸುಖಿಸಿದ್ದಾರೆ. ‘ಕುವೆಂಪು ಹೆಚ್ಚು ಸಂಸ್ಕೃತದ ಪದಗಳನ್ನು ಬಳಸಿದ್ದಾರೆ. ಆದರೆ, ತೇಜಸ್ವಿ ಜನರಿಗೆ ಅರ್ಥವಾಗುವಂತೆ ಸರಳವಾಗಿ ಬರೆ­ಯುತ್ತಾರೆ. ಅದಕ್ಕೇ ನನಗೆ ತೇಜಸ್ವಿ ಇಷ್ಟ’ ಎನ್ನುವ ಹರ್ದಮನ್‌ ಅವರಿಗೆ ಕನ್ನಡದಲ್ಲಿ ಹೆಚ್ಚು ಇಂಗ್ಲಿಷ್ ಪದಗಳು ನುಸುಳಿ, ಭವಿಷ್ಯದಲ್ಲಿ ಕಷ್ಟ ಬರಬಹುದು ಎಂಬ ಆತಂಕವಿದೆ.

ಮರಾಠಿ ಮೂಲದ ಏಂಜಲಿನಾ ಎಂಬುವವರ ಜೊತೆ ದಾಂಪತ್ಯಗೀತೆ ಹಾಡುತ್ತಿರುವ 48 ವರ್ಷ ವಯಸ್ಸಿನ ಹರ್ದಮನ್, ಅವರೇ ಹೇಳಿಕೊಳ್ಳುವಂತೆ ಮನೆಯಲ್ಲಿ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಾರೆ. ಅಂದಹಾಗೆ, ಹರ್ದಮನ್ ಕನ್ನಡ ಲಿಪಿ ಕಲಿಯಲು ತೆಗೆದುಕೊಂಡಿದ್ದು ಒಂದು ವಾರವಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT