ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪಿಗಳಿಗೆ ಬಾಲವಿತ್ತೇ ?

Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಇತಿಹಾಸ ಕಾವ್ಯಗಳೆಂದು ಕರೆಯಿಸಿಕೊಂಡಿರುವ ರಾಮಾಯಣ, ಮಹಾಭಾರತಗಳಲ್ಲಿನ ಅನೇಕ ಘಟನೆಗಳು ಅತಿಮಾನುಷ ರೀತಿಯಲ್ಲಿದ್ದು ವಾಸ್ತವಿಕತೆಗೆ ದೂರವೆನಿಸಿವೆ. ಆದರೆ ಈ ಅತಿಮಾನುಷ ಪ್ರಭಾವಳಿಯನ್ನು ಕಳಚಿದರೆ ವಾಸ್ತವಿಕತೆಯ ದರ್ಶನವಾಗಬಹುದು. ಸಾಂಕೇತಿಕವಾಗಿರತಕ್ಕ ಅಂಥ ವ್ಯಕ್ತಿತ್ವವನ್ನು ಗ್ರಹಿಸಬೇಕಾದುದು ಮುಖ್ಯ. ಹಿಂದೆ ಜನಾಂಗ ಲಾಂಛನಗಳು ಸಂಕೇತಮಯವಾಗಿರುತ್ತಿದ್ದವು.

ಉದಾ: ನಾಗ, ಗರುಡ, ಪಕ್ಷಿ, ಕಪಿ, ಕರಡಿ, ಮಹಿಷ – ಇತ್ಯಾದಿ. ಈ ಎಲ್ಲವೂ ವಿವಿಧ ಲಾಂಛನಗಳಿಂದ ಕೂಡಿದ, ಮನುಷ್ಯ ಭಾಷೆಗಳನ್ನೇ ಆಡುತ್ತಿದ್ದವು. ಪ್ರಕೃತ ಕಪಿಲಾಂಛನದ ವರ್ಗವನ್ನೇ ತೆಗೆದುಕೊಳ್ಳೋಣ: ರಾಮಾಯಣದಂಥ ಪುರಾಣ ಕಾವ್ಯದಲ್ಲಿ ಕಪಿಗಳೆಂದರೆ ಬಾಲ ಇರುವ ಶಾಖಾಮೃಗಗಳೆಂದೂ, ಹನುಮಂತನ ಬಾಲಕ್ಕೆ ಬಟ್ಟೆಸುತ್ತಿ ಬೆಂಕಿ ಕೊಟ್ಟದ್ದರಿಂದ ಲಂಕಾದಹನವಾಯಿತೆಂದೂ ವರ್ಣನೆ ಇದೆ ತಾನೆ? ರಾಮ ಲಕ್ಷ್ಮಣರಿಗೆ ಆಂಜನೇಯನು ನಿಜರೂಪವಾದ ಬ್ರಹ್ಮಚಾರಿ ರೂಪದಲ್ಲಿ ಕಾಣಿಸಿಕೊಂಡನೆಂದು ಹೇಳಲಾಗಿದೆ. ಆಗ ಅವನಿಗೆ ಬಾಲ ಇರಲಿಲ್ಲ. ಯಥಾರ್ಥವೆಂದರೆ ಕಪಿಜನಾಂಗ ಕಿಷ್ಕಿಂಧೆಯನ್ನು ಕೇಂದ್ರೀಕರಿಸಿದ ಒಂದು ವಿಶಿಷ್ಟ ಮನುಷ್ಯ ಜನಾಂಗ.

ಕಪಿ ವರ್ಗದ ಸ್ತ್ರೀಯರು ಸಾಮಾನ್ಯ ಮನುಷ್ಯ ಸ್ತ್ರೀಯರಂತೆಯೇ ಇದ್ದವರು. ಅವರಿಗೆ ಬಾಲವಿದ್ದ ಉಲ್ಲೇಖವಿಲ್ಲ.
ಕಾವ್ಯ ರೂಪೀ ಪುರಾಣ ಕಾವ್ಯಗಳಲ್ಲಿ ಅತಿಶಯೋಕ್ತಿಗಳೂ ಅತಿಮಾನುಷ, ಅವಾಸ್ತವ ವಿವರಗಳೂ ಇರುವುದು ಸ್ವಾಭಾವಿಕ. ಇಂಥ ವಿವರಗಳನ್ನು ಕಲ್ಪನಾ ಪ್ರಧಾನವಾದ ನಾಟಕ, ಯಕ್ಷಗಾನಾದಿ ರಂಗ ಪ್ರಕಾರಗಳಲ್ಲೂ, ಹರಿಕಥೆ, ಪ್ರವಚನಾದಿಗಳಲ್ಲೂ ಆಸ್ವಾದಿಸುವುದು ತಪ್ಪೇನಲ್ಲ. ಹಾಗೆಂದು ಆ ವಿವರಗಳನ್ನು ಯಥಾರ್ಥವೆಂದು ನಂಬಬೇಕಾಗಿಲ್ಲ.

ಕಪಿಗಳಿಗೆ ಬಾಲವಿತ್ತೆಂದೂ, ರಾವಣನಿಗೆ ಹತ್ತು ತಲೆಗಳಿದ್ದವೆಂದೂ ನಂಬುವುದು ಹಾಸ್ಯಾಸ್ಪದ. ಕಲ್ಪಿಸಿ ಬರೆದ ಚಿತ್ರಗಳಲ್ಲಿ ರಾವಣನನ್ನು ಸಾಲಾಗಿ ತಲೆಗಳಿದ್ದ ದಾನವನೆಂದು ಚಿತ್ರಿಸಲಾಗಿದೆ. ಆ ದೃಷ್ಟಿಯಿಂದ ಯಕ್ಷಗಾನದ ರಾವಣನಿಗೆ ಒಂದೇ ತಲೆ ಇರುವುದು ಲಕ್ಷಿಸತಕ್ಕುದಾಗಿದೆ. ಯಕ್ಷಗಾನದ ಹನುಮಂತನಿಗೆ ಬಾಲವೂ ಇಲ್ಲ. ಆದರೆ ನಾಟಕದ ಹನುಮಂತನಿಗೆ ಹಸುರಂಗಿ, ಚಲ್ಲಣಗಳನ್ನು ತೊಡಿಸಿ ರಂಗಕ್ಕೆ ತರುವುದು ವಿಚಿತ್ರವಾಗಿದೆ. ಯಕ್ಷಗಾನದ ತೆಂಕುತಿಟ್ಟಿನಲ್ಲಿ ಹನುಮಂತನಿಗೇ ಪ್ರತ್ಯೇಕವಾದ ಬಹುಸುಂದರವಾದ ವಿಶಿಷ್ಟ ಕಿರೀಟವಿದೆ. ಹನುಮಂತನ ಮುಖವರ್ಣಿಕೆಯೂ ಸೊಗಸಾಗಿದೆ.

ಆಧುನಿಕ ನಾಗರಿಕತೆಯ ಬೆಳಕಿಗೆ ಅಷ್ಟಾಗಿ ತೋರಿಬರದ ಕೆಲವು ಜನಾಂಗಗಳ ಉಡುಪಿನಲ್ಲಿ ಹಿಂಬದಿಯಲ್ಲಿ ಬಾಲದಂತೆ ಕಾಣಿಸುವ ವಸ್ತ್ರದ ಪಟ್ಟಿಯೊಂದಿರುತ್ತದೆ. ಕೆಲವರಿಗೆ ಅದು ಬಾಲದಂತೆ ತೋರಬಹುದು.

ಕಪಿ ಜನಾಂಗವನ್ನು ಮಂಗಗಳೆಂದು ಭಾವಿಸುವವರು ಈಗಲೂ ಇದ್ದಾರೆ. ದೂರದರ್ಶನ ‘ಚಂದನ’ದಲ್ಲಿ ಕೇಳುಗರ ಸಮಸ್ಯೆಗಳನ್ನು ಬಿಡಿಸುತ್ತಾ ಪ್ರವಚನ ನಡೆಸುವ ವಿದ್ವಾಂಸರಾದ ಪಾವಗಡ ಪ್ರಕಾಶ ರಾವ್‌ ಈಚೆಗೆ ‘ವಾಲಿವಧಾ ಪ್ರಸಂಗ’ವನ್ನು, ವಾಲಿಯು ಒಂದು

ಪ್ರಾಣಿಯಾದುದರಿಂದ ಅವನನ್ನು ಬೇಟೆಯ ಧರ್ಮದಂತೆ ಮರೆಯಲ್ಲಿ ನಿಂತು ಬಾಣ ಹೂಡಿ ಸಂಹರಿಸಿದ್ದು ನ್ಯಾಯವೇ ಆಗಿದೆ ಎಂದು ವಾದಿಸಿದ್ದರು. ಅವರಿಗೆ ನಾನು  ಪತ್ರ ಬರೆದು ಕಪಿವರ್ಗವನ್ನು ಮನುಷ್ಯೇತರ ಪ್ರಾಣಿವರ್ಗವೆಂದು ಭಾವಿಸುವುದು ಸಮಂಜಸವಲ್ಲವೆಂದು ಸೂಚಿಸಿದೆ.

ಕಾವ್ಯವೊಂದರ ಔಚಿತ್ಯವನ್ನು ಮುಖ್ಯವಾಗಿ ಎರಡು ರೀತಿಗಳಲ್ಲಿ ಸಂಗ್ರಹಿಸಬಹುದು. ಒಂದು ಆಸ್ವಾದನ ದೃಷ್ಟಿ; ಇನ್ನೊಂದು ವಿಶ್ಲೇಷಕ ದೃಷ್ಟಿ. ಮೊದಲನೆಯದರಲ್ಲಿ ಹೃದಯ ವ್ಯಾಪಾರ ಮುಖ್ಯವಾದುದು. ಎರಡನೆಯದರಲ್ಲಿ ಬುದ್ಧಿಕೌಶಲ್ಯ ಪ್ರಧಾನವಾದುದು. ಒಂದೇ ಕೃತಿಯನ್ನು ಎರಡೂ ದೃಷ್ಟಿಗಳಿಂದ ಪರಿಶೀಲಿಸುವುದು ಸಾಧ್ಯ. ರಾಮಾಯಣದ ಚಿತ್ರಣದಲ್ಲಿ ಕುಂಭಕರ್ಣ ದೀರ್ಘದೇಹಿಯೂ ದೀರ್ಘ ನಿದ್ರಾಲೋಲನೂ ಆದ ಘೋರದಾನವ. ವರಬಲದಿಂದ ಕೊಬ್ಬಿದ ಆತನನ್ನು ನಿದ್ರೆಯಿಂದ ಎಬ್ಬಿಸುವುದೇ ಹರಸಾಹಸದ ಕೆಲಸವಾಗಿತ್ತು. ಅಕಾಲದಲ್ಲಿ ಎಬ್ಬಿಸಿದೊಡನೆ ಅವನಿಗೆ ಬೃಹತ್‌ ಪ್ರಮಾಣದ ‘ಬಾಧ್ಯತೆ’ ಒಪ್ಪಿಸುವುದೂ ಸುಲಭವಾಗಿರಲಿಲ್ಲ. ಯಕ್ಷಗಾನ ಬಯಲಾಟದಲ್ಲಿ ಈ ದೃಶ್ಯಾವಳಿಗಳನ್ನು ಅದ್ಭುತವಾಗಿ ಪ್ರದರ್ಶಿಸುತ್ತಾರೆ.

ಶ್ರೀರಾಮನ ತಂದೆ ದಶರಥ ಭೂಪಾಲ ಅರುವತ್ತು ಸಾವಿರ ವರ್ಷ ರಾಜ್ಯವಾಳಿದನೆಂದೂ, ಮುಂದೆ ಶ್ರೀರಾಮನು ಹನ್ನೊಂದು ಸಾವಿರ ವರ್ಷ ರಾಜ್ಯಭಾರ ಮಾಡಿದನೆಂದೂ ವರ್ಣನೆ ಇದೆಯಷ್ಟೆ? ಇಲ್ಲಿ ಸೊನ್ನೆಗಳಿಗೆ ಮೌಲ್ಯವಿಲ್ಲವೆಂದು ತೋರುತ್ತದೆ. ‘ವಿಪುಲ’ ಎಂಬ ಅರ್ಥವನ್ನಿದು ಧ್ವನಿಸುತ್ತದೆ ಎನಿಸುತ್ತದೆ.

ನಗರ ರಾಜ ಪುತ್ರನಾದ ಅರವತ್ತು ಸಾವಿರ ಮಂದಿ ಭೂಮಿಯನ್ನು ಅಗೆದು ಸಾಗರವನ್ನು ಉಂಟುಮಾಡಿದರೆಂಬುದು ಮೇಲಿನ ರೀತಿಯ ನಿರೂಪಣೆ. ಇನ್ನು ರಾಕ್ಷಸರು ಅದ್ಭುತ ಗಾತ್ರದವರೆಂಬುದು ಕಾವ್ಯ ಕಲ್ಪನೆಯ ಮಾತಷ್ಟೆ. ರಾಕ್ಷಸರು ಎಂದರೆ ಮನುಷೇತರ ವರ್ಗದ ಒಂದು ಅದ್ಭುತ ತಳಿಯೆಂದಾದರೆ ರಾವಣಾನುಜ ವಿಭೀಷಣ ಸಾಧಾರಣ ಗಾತ್ರದವನಾಗಿರಲು ಕಾರಣವೇನು? ಅಂತೆಯೇ ರಾಕ್ಷಸ ಸ್ತ್ರೀಯರೂ ಸಾಮಾನ್ಯ ಗಾತ್ರದವರೇ ಆಗಿದ್ದರು.

ಉದಾ: ರಾವಣನ ಪತ್ನಿ ಮಂಡೋದರಿ. ಶೂರ್ಪನಖೆಯನ್ನು ಘೋರ ರೂಪಿಣಿಯಾಗಿ ಚಿತ್ರಿಸಿದ್ದು ಅವಳ ಸ್ವಭಾವಕ್ಕಾಗಿ. ಯಕ್ಷಗಾನ ಬಯಲಾಟದಲ್ಲಿ ಘೋರ ಶೂರ್ಪನಖೆ ಹಾಗೂ ಮಾಯಾ ಶೂರ್ಪನಖೆ ಎಂಬ ಎರಡು ಸ್ವರೂಪಗಳಿವೆ. ವಾಲ್ಮೀಕಿ ರಾಮಾಯಣದಲ್ಲಿ ಹಾಗಿಲ್ಲ. ಕಥೆಯ ಸ್ವಾರಸ್ಯಕ್ಕಾಗಿ ಹೀಗೆ ಚಿತ್ರಿಸಲಾಗಿದೆ.

ಒಟ್ಟಿನಲ್ಲಿ ಸಾಹಿತ್ಯದಲ್ಲಾಗಲೀ ಕಲೆಯಲ್ಲಾಗಲೀ ಸಂಕೇತಗಳು ಮುಖ್ಯಪಾತ್ರವನ್ನು ನಿರ್ವಹಿಸುತ್ತವೆ. ನಾಗ, ಗರುಡ, ಜಟಾಯು, ಕಪಿ, ಕರಡಿ, ಮಹಿಷ ಮೊದಲಾದ ಲಾಂಛನ ಸೂಚೀ ಜನವರ್ಗಗಳ ಎಲ್ಲ ದೃಷ್ಟಿಯಿಂದಲೂ ಮನುಷ್ಯವರ್ಗಗಳೆಂದೇ ಪರಿಗಣಿಸುವುದು ಸೂಕ್ತವಾಗಿದೆ. ಸಂಕೇತಗಳ ಮರೆಯಲ್ಲಿ ನಿಜರೂಪಗಳು ಅಡಗಿರುತ್ತವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT