ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಬಂಗಾರ

Last Updated 14 ಅಕ್ಟೋಬರ್ 2012, 7:25 IST
ಅಕ್ಷರ ಗಾತ್ರ

ಶ್ರೀನಿವಾಸಪುರ ತಾಲ್ಲೂಕು ಮರಗಳ ತವರು. ಇಲ್ಲಿನ ನೆಲ ಮರಗಳಿಂದ ತುಂಬಿಹೋಗಿದೆ. ಮುಖ್ಯವಾಗಿ ಮಾವು, ಹುಣಸೆ, ಗೇರು ಮರಗಳು ಬಹುತೇಕ ನೆಲವನ್ನು ಆಕ್ರಮಿಸಿಕೊಂಡಿವೆ. ಇನ್ನು ಆಲ, ಬೇಲ, ಬೇವು, ಅರಳಿ, ಗೋಣಿ, ನೇರಳೆ, ಹೊಂಗೆಯಂಥ ಮರಗಳಿಗೂ ಅವಕಾಶ ಕಲ್ಪಿಸಲಾಗಿದೆ.

ಇದು ಇಲ್ಲಿನ ರೈತರು ಉಳಿಸಿಕೊಂಡು ಬಂದಿರುವ ಹಸಿರು ಸಂಸ್ಕೃತಿ. ಇದರ ಮಧ್ಯೆ ಕರ್ನಾಟಕ ಆಂಧ್ರಪ್ರದೇಶದ ಗಡಿ ಸಮೀಪ ತಾಲ್ಲೂಕಿನ ಮಲಮೊಟಕುಪಲ್ಲಿ ಗ್ರಾಮದ ಗುಡ್ಡದ ಬುಡದಲ್ಲಿನ ಒಂದು ಶತಮಾನಕ್ಕೂ ಹೆಚ್ಚು ಹಳೆಯದಾದ ಬೃಹತ್ ಹುಣಸೆ ಮರವೊಂದು ನೋಡುಗರ ಕಣ್ಣಿಗೆ ಹಸಿರು ಆಭರಣದಂತೆ ಕಾಣುತ್ತದೆ. ಮನಸ್ಸಿಗೆ ಮುದ ನೀಡುತ್ತದೆ.

ನಾಡಿನ ಖ್ಯಾತ ವಿಜ್ಞಾನಿ ಬಿ.ಜಿ.ಎಲ್.ಸ್ವಾಮಿ ಹಸಿರನ್ನು `ಹೊನ್ನು~  ಎಂದು ಕರೆದಿದ್ದಾರೆ. ಇನ್ನು ಹುಣಸೆ ಹಣ್ಣನ್ನು ಸ್ಥಳೀಯವಾಗಿ `ಕಪ್ಪು ಬಂಗಾರ~ ಎಂದು ಕರೆಯಲಾಗುತ್ತದೆ. ಈ ಅಪರೂಪದ ಹುಣಸೆ ಮರ ಹಸಿರು ಹೊನ್ನೂ ಹೌದು. ಕಪ್ಪು ಬಂಗಾರವೂ ಹೌದು!

ಸುಮಾರು ಅರ್ಧ ಎಕರೆಗೂ ಹೆಚ್ಚು ಸ್ಥಳವನ್ನು ಆಕ್ರಮಿಸಿ ವಿಶಾಲ ಹಾಗೂ ಎತ್ತರಕ್ಕೆ ಬೆಳೆದು ನಿಂತಿರುವ ಈ ಮರ, ನಿಜಕ್ಕೂ ಹಳ್ಳಿಗೆ ದೇವರ ವರ. ಈ ಮರದ ವಿಶೇಷವೆಂದರೆ ಕೊಂಬೆಗಳು ನೆಲ ಮಟ್ಟದಿಂದ ಹಂತ ಹಂತವಾಗಿ ಹರಡಿಕೊಂಡು ಬೆಳೆದಿರುವುದು. ಇದು ಆಂಧ್ರಪ್ರದೇಶದ ತಿಮ್ಮಮ್ಮನ ಆಲದ ಮರದಂತೆ ಪ್ರಸಿದ್ಧಿ ಪಡೆಯದಿದ್ದರೂ, ಮರದ ಎಲೆಗಳಲ್ಲಿ ಕಂಡುಬರುವ ವಿಶೇಷವಾದ ಹಸಿರು, ಕಲಾತ್ಮಕವಾಗಿ ಬೆಳೆದಿರುವ ಕೊಂಬೆ, ರೆಂಬೆಗಳು ಮರವನ್ನು ಸುಂದರಗೊಳಿಸಿವೆ.

ಈ ಮರ ಸೌಂದರ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರತಿ ವರ್ಷ ಉತ್ತಮ ಫಸಲನ್ನು ಕೊಡುತ್ತದೆ. ಅದರ ವೈಶಾಲ್ಯತೆಗೆ ತಕ್ಕಂತೆ ಒಂದು ತೋಟದಲ್ಲಿ ಸಿಗುವಷ್ಟು ಕಾಯಿ ಈ ಒಂದು ಮರದಿಂದಲೇ ಸಿಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಮರದ ಪಕ್ಕದ ರಸ್ತೆಯಲ್ಲಿ ಬಿಸಿಲಲ್ಲಿ ನಡೆದು ಹೋಗುವ ಪ್ರಯಾಣಿಕರು ತಣ್ಣನೆಯ ನೆರಳಲ್ಲಿ ಕುಳಿತು ವಿಶ್ರಮಿಸಿಕೊಳ್ಳುತ್ತಾರೆ. ಹಳ್ಳಿಯ ದನಕರುಗಳು ನೆರಳಿಗೆ ಈ ಮರವನ್ನೇ ಆಶ್ರಯಿಸುತ್ತವೆ. ಮರದ ಕೊಂಬೆಗಳು ನೆಲ ಮಟ್ಟದಲ್ಲಿಯೇ ಇರುವುದರಿಂದ, ಗ್ರಾಮದ ಮಕ್ಕಳು ಬಿಡುವಿನ ವೇಳೆಯಲ್ಲಿ ಮರಕೋತಿಯಾಟ  ಆಡುತ್ತಾರೆ. ಬೇಸಿಗೆಯಲ್ಲಿ ಹಣ್ಣಾಗಿ ಉದುರುವ ಎಲೆ ತಿಪ್ಪೆ ಸೇರಿ ಗೊಬ್ಬರವಾಗುತ್ತದೆ.

ಈ ಮರವನ್ನು ಕಂಡ ಯಾರಿಗೇ ಆದರೂ, ಅದರ ಸೌಂದರ್ಯದ ಗುಟ್ಟೇನು ಎಂಬ ಪ್ರಶ್ನೆ ಮೂಡುತ್ತದೆ. ಈ ಗ್ರಾಮದ ಸಮೀಪ ಇನ್ನೂ ಅಂತರ್ಜಲ ಮೇಲ್ಮಟ್ಟದಲ್ಲಿದೆ. ಈ ಗ್ರಾಮದ ನಿವಾಸಿಗಳು ಕುಡಿಯಲು ಇನ್ನೂ ಸೇದು ಬಾವಿಯ ನೀರನ್ನೇ ಬಳಸುತ್ತಿದ್ದಾರೆ. ಗ್ರಾಮದಿಂದ ತುಸು ದೂರದಲ್ಲಿರುವ ಪುರಾತನ ಸೇದುಬಾವಿಯಲ್ಲಿ ಸಾಕಷ್ಟು ನೀರು ಲಭ್ಯವಾಗುತ್ತಿದೆ. ಈ ಬಾವಿಯಿಂದ ಕೆಲವೇ ಮೀಟರ್ ಅಂತರದಲ್ಲಿ ಹುಣಸೆ ಮರ ಇರುವುದು ಅದರ ಕಡು ಹಸಿರು ಎಲೆ ಹಾಗೂ ಆರೋಗ್ಯಪೂರ್ಣ ಬೆಳವಣಿಗೆಯ ಹಿಂದಿನ ರಹಸ್ಯ ಎಂದು ಹೇಳಬಹುದು.

ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ಮರಗಳು ಒಣಗುತ್ತಿವೆ. ಬಹುತೇಕ ಮರಗಳ ಎಲೆಯಲ್ಲಿ ಕಡು ಹಸಿರು ಮರೆಯಾಗುತ್ತಿದೆ. ಮರಗಳು ಅಂದಗೆಡುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಮಲಮೊಟಕುಪಲ್ಲಿ ಸಮೀಪದ ಹುಣಸೆ ಮರ ಮರುಭೂಮಿಯ ಓಯಸಿಸ್‌ನಂತೆ ಕಂಡುಬರುತ್ತದೆ.

ತಾಲ್ಲೂಕಿನಲ್ಲಿ ಬೇರೆ ಬೇರೆ ಕಾರಣಗಳಿಂದ ಹುಣಸೆ ಮರಗಳು ಇಟ್ಟಿಗೆ ಗೂಡು ಸೇರಿವೆ. ಅದರಲ್ಲೂ ಅತ್ಯಂತ ಹಳೆ ಹುಣಸೆ ಮರಗಳನ್ನು ಕಡಿದು ಹಾಕಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ನಾಡಿನ ಗಡಿಯಲ್ಲಿ ಈ ಹಸಿರು ಆಭರಣವನ್ನು ಉಳಿಸಿಕೊಂಡಿರುವ ರೈತರಿಗೆ ಶರಣು ಎನ್ನಲೇಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT