ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಹಣ: ರಹಸ್ಯ ಪಾಲನೆ ಕಡಿವಾಣಕ್ಕೆ ಸಲಹೆ

Last Updated 13 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): `ಕಪ್ಪು ಹಣ~ಕ್ಕೆ ಸಂಬಂಧಿಸಿದಂತೆ ಕೆಲ ವಿದೇಶಿ ಬ್ಯಾಂಕ್‌ಗಳು ಅನುಸರಿಸುತ್ತಿರುವ ಗೋಪ್ಯತೆಗೆ ಕಡಿವಾಣ ವಿಧಿಸಲು ಬಹುರಾಷ್ಟ್ರೀಯ ಸಹಕಾರದ ಅಗತ್ಯ ಇದೆ ಎಂದು ಭಾರತ ವಿಶ್ವ ಸಮುದಾಯಕ್ಕೆ ಮನವಿ ಮಾಡಿಕೊಂಡಿದೆ.

ವಿದೇಶಗಳಲ್ಲಿನ `ಕಪ್ಪು ಹಣ~ ಸ್ವದೇಶಕ್ಕೆ ತರಲು ರಚನಾತ್ಮಕ ಮತ್ತು ಕಠಿಣ ಸ್ವರೂಪದ ಕ್ರಮಗಳನ್ನು ಕೈಗೊಳ್ಳಬೇಕೆಂದು ನಾಗರಿಕ ಸಮಾಜವು  ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ, ಠೇವಣಿ ಇರಿಸಿದವರ ಬಗ್ಗೆ ಮಾಹಿತಿ ನೀಡದ ದೇಶಗಳ ವಿರುದ್ಧ ಅಗತ್ಯ ಬಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ವಿದೇಶದ ಕೆಲ ಬ್ಯಾಂಕ್‌ಗಳಲ್ಲಿ `ಕಪ್ಪು ಹಣ~ ಠೇವಣಿ ಇರಿಸಿರುವವರ ಬಗ್ಗೆ ಮಾಹಿತಿ ನೀಡಲು ಸಹಕರಿಸದ ದೇಶಗಳ ವಿರುದ್ಧ ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಸೋಮವಾರ ಇಲ್ಲಿ ಅಭಿಪ್ರಾಯಪಟ್ಟರು.   ಸದ್ಯಕ್ಕೆ, ಮಾಹಿತಿ ನೀಡಲು `ಸಹಕರಿಸದ ದೇಶಗಳ ಪಟ್ಟಿ~ಯಲ್ಲಿ ಯಾವುದೇ ದೇಶವನ್ನು ಸೇರ್ಪಡೆ ಮಾಡಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

`ಕಪ್ಪು ಹಣ~ ಠೇವಣಿ ಇರಿಸಲಾಗಿರುವ `ತೆರಿಗೆ ಸ್ವರ್ಗ~ ದೇಶಗಳ ಜೊತೆ `ದುಪ್ಪಟ್ಟು ತೆರಿಗೆ ತಪ್ಪಿಸುವ ಒಪ್ಪಂದ~ ಮತ್ತು ತೆರಿಗೆ ಮಾಹಿತಿ ವಿನಿಮಯ ಒಪ್ಪಂದ ಮಾಡಿಕೊಳ್ಳಲು ಸಂಧಾನ ಮಾತುಕತೆಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು.

ಅಪಾರದರ್ಶಕ: `ಕಪ್ಪು ಹಣ ಮತ್ತು ತೆರಿಗೆ ಸುಧಾರಣೆಗೆ~ ಸಂಬಂಧಿಸಿದಂತೆ ಇಲ್ಲಿ ಸೋಮವಾರ ಆರಂಭವಾದ ಎರಡು ದಿನಗಳ  ಅಂತರರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದ ಪ್ರಣವ್ ಮುಖರ್ಜಿ, `ತೆರಿಗೆ ಇಲ್ಲದ ಮತ್ತು ಅತಿ ಕಡಿಮೆ ಪ್ರಮಾಣದ ತೆರಿಗೆ ವ್ಯವಸ್ಥೆ ಇರುವ ದೇಶಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯು ಇನ್ನೂ  ಪಾರದರ್ಶಕವಾಗಿಲ್ಲ~ ಎಂದು ವಿಷಾದ ವ್ಯಕ್ತಪಡಿಸಿದರು.

2009ರಲ್ಲಿ ಲಂಡನ್‌ನಲ್ಲಿ ನಡೆದ `ಜಿ-20~ ದೇಶಗಳ ಶೃಂಗಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಕಪ್ಪು ಹಣ ಠೇವಣಿ ಇರಿಸಿಕೊಳ್ಳುವ ಬ್ಯಾಂಕ್‌ಗಳು ಠೇವಣಿದಾರರ ಹೆಸರು ಬಹಿರಂಗಪಡಿಸಲು ಅನುಸರಿಸುತ್ತಿರುವ ಧೋರಣೆ ಸಡಿಲಿಸುವ ಘೋಷಣೆ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಠೇವಣಿದಾರರ ಬಗ್ಗೆ ಬ್ಯಾಂಕ್‌ಗಳು ಪಾಲಿಸುತ್ತಿರುವ ಗೋಪ್ಯತೆ ನಿಲುವು ಕೈಬಿಡುವುದಾಗಿ ಕೆಲ ದೇಶಗಳು ಸಮ್ಮತಿ ವ್ಯಕ್ತಪಡಿಸಿವೆ.

ಇನ್ನೂ ಕೆಲ ದೇಶಗಳು ನಿರ್ದಿಷ್ಟ ದಿನದಿಂದ ಈ ನಿಯಮ ಅನ್ವಯಿಸುವುದಾಗಿ ಮತ್ತು ಹಿಂದಿನ ಮಾಹಿತಿ ವಿನಿಮಯ ಮಾಡಿಕೊಳ್ಳುವುದಿಲ್ಲವೆಂದು ತಿಳಿಸಿವೆ. ಇದರಿಂದ ಬ್ಯಾಂಕಿಂಗ್ ಮಾಹಿತಿ ವಿನಿಮಯದ ಪ್ರಯೋಜನಗಳ ಬಗ್ಗೆಯೇ ಸಂದೇಹ ಮೂಡಲು ಕಾರಣವಾಗಿದೆ ಎಂದರು.

ಹಣಕಾಸು ಸಚಿವಾಲಯವು, ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆಯ (ಒಇಸಿಡಿ) ಸಹಯೋಗದಲ್ಲಿ ಈ ವಿಚಾರಗೋಷ್ಠಿ ಹಮ್ಮಿಕೊಂಡಿದೆ. ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಇಂತಹ    ಅಂತರರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿಯು ನವದೆಹಲಿಯಲ್ಲಿ       ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT