ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ

Last Updated 17 ಅಕ್ಟೋಬರ್ 2012, 5:25 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಇಲ್ಲಿಗೆ ಸಮೀಪದ ಎಂ. ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಹಂಗಾಮಿಗೆ ಮಂಗಳವಾರ ಚಾಲನೆ ನೀಡಲಾಯಿತು. ಇಂಚಲದ ಸಾಧು ಸಂಸ್ಥಾನಮಠದ ಶಿವಾನಂದ ಭಾರತಿ ಸ್ವಾಮೀಜಿ, ದತ್ತವಾಡ ಅದೃಶ್ಯ ಶಿವಯೋಗಿಗಳು, ಕಾದರವಳ್ಳಿ ರಾಮಮಂದಿರದ ಗುರುಪುತ್ರ ಮಹಾರಾಜರು, ನೇಗಿನಹಾಳದ ಗುರುಮಡಿವಾಳೇಶ್ವರ ಮಠದ ಶಿವಬಸವ ಸಿದ್ಧಲಿಂಗ ಸ್ವಾಮೀಜಿ ಮತ್ತು ಇಂಚಲ ಶಾಖಾ ಮಠದ ಬಳ್ಳಾರಿ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಕಬ್ಬು ನುರಿಕೆ ಕಾರ್ಯ ಪ್ರಾರಂಭಗೊಂಡಿತು.

`ರಾಣಿ ಶುಗರ್ಸ್‌~ ಆಡಳಿತ ಮಂಡಳಿ ಕಚೇರಿಯಿಂದ ಪೂಜ್ಯರನ್ನು ಮಂಗಳವಾದ್ಯದೊಂದಿಗೆ ಕಬ್ಬು ಅರೆಯುವ ವಿಭಾಗಕ್ಕೆ ಕರೆತರಲಾಯಿತು. ವಿಧ್ಯುಕ್ತವಾಗಿ ಪೂಜೆ ನೆರವೇರಿದ ನಂತರ ನುರಿಕೆ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಹನಿ ನೀರಾವರಿ: ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಸುದ್ಧಿಗಾರರೊಂದಿಗೆ ಕಾರ್ಖಾನೆ ಅಧ್ಯಕ್ಷ ಡಿ. ಬಿ. ಇನಾಮದಾರ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಕಬ್ಬು ಪೂರೈಕೆ ಮಾಡಿದ ರೈತ ಸದಸ್ಯರ ಜಮೀನುಗಳಿಗೆ ಆದ್ಯತೆ ಮೇಲೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಪ್ರಕಟಿಸಿದರು.

`ಕಳೆದ ವರ್ಷ ಕಬ್ಬು ಪೂರೈಸಿದ ರೈತರಿಗೆ ವಾಗ್ದಾನ ಮಾಡಿದ ಹಾಗೆ ಎರಡು ಕಂತಿನಲ್ಲಿ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ಎರಡು ಸಾವಿರ ರೂಪಾಯಿ ನೀಡಲಾಗಿದೆ. ಪ್ರಸಕ್ತ ವರ್ಷವೂ ಕಾರ್ಖಾನೆಯು ಹೆಚ್ಚಿನ ಬೆಲೆ ನೀಡುವ ಗುರಿಯನ್ನು ಹೊಂದಿದೆ ಎಂದರು.

ಸಂಸ್ಥೆಯ ಉಪಾಧ್ಯಕ್ಷ ರಾಜೇಂದ್ರ ಅಂಕಲಗಿ, ವ್ಯವಸ್ಥಾಪಕ ನಿರ್ದೇಶಕ ಎಂ. ಡಿ. ಮಲ್ಲೂರ, ನಿರ್ದೇಶಕರಾದ ವಿ. ಬಿ. ಸಾಣಿಕೊಪ್ಪ, ಸಿ. ಸಿ. ಗಡಾದ, ಪಿ. ಜಿ. ಕಿಲ್ಲೇದಾರ, ಟಿ. ಎ. ಬಜೆಣ್ಣವರ, ಎಂ. ಬಿ. ಸಂಬರಗಿ, ಎಸ್. ವಿ. ಮೂಲಿಮನಿ, ಬಿ. ಎಸ್. ಅಷ್ಟಪುತ್ರಿ, ವಿ. ಬಿ. ಸಾಧುನವರ ಮತ್ತು ಎಸ್. ಎನ್. ಪಾಟೀಲ ಇದ್ದರು.

ಕಬ್ಬು ಸಾಗಾಟ ಪ್ರಾರಂಭೋತ್ಸವ
ಚಿಕ್ಕೋಡಿ:
ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ ಕೆಲವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡುವಲ್ಲಿ ವ್ಯತ್ಯಯ ಉಂಟು ಮಾಡುವ ಪ್ರಯತ್ನ ನಡೆಸುತ್ತಿರುವುದನ್ನು ತಡೆಯಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ, ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಹಾಂತೇಶ ಕವಟಗಿಮಠ ಹೇಳಿದರು.

ಸೋಮವಾರ ತಾಲ್ಲೂಕಿನ ತಾಲ್ಲೂಕಿನ ಮಾಂಜರಿ ಗ್ರಾಮದಲ್ಲಿ ಪ್ರಸಕ್ತ ಸಾಲಿನ ಹಂಗಾಮಿಗಾಗಿ ಕಬ್ಬು ಸಾಗಾಟ ಪ್ರಾರಂಭೋತ್ಸವದಲ್ಲಿ  ಮಾತನಾಡಿದರು. ಪ್ರಸಕ್ತ ವರ್ಷ ತೀವ್ರತರವಾದ ಬರಗಾಲ ಆವರಿಸಿದ ಪರಿಣಾಮವಾಗಿ ಕಬ್ಬು ಉತ್ಪಾದನೆ ಕುಂಠಿತವಾಗಿದೆ. ಈ ಹಿನ್ನಲೆಯಲ್ಲಿ ಕಬ್ಬನ್ನು ಬೇಗನೆ ನುರಿಸಿ ಕೃಷಿಕರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮನ್ನು ಬೇಗನೆ ಆರಂಭಿಸಿವೆ. ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯು ಕಬ್ಬು ಬೆಳೆಗೆ ಯೋಗ್ಯ ಬೆಲೆ ನೀಡುವ ಜೊತೆಗೆ ಕಾರ್ಖಾನೆಯನ್ನೂ ಸಾಲಮುಕ್ತಗೊಳಿಸಿದೆ ಎಂದು ತಿಳಿಸಿದರು.

ಕಾರ್ಖಾನೆಗೆ ಸುಗಮವಾಗಿ ಕಬ್ಬು ಸಾಗಾಟ ಮಾಡಲು ಅನುಕೂಲ ಕಲ್ಪಿಸಬೇಕು ಎಂದು ಪಿಎಸ್‌ಐ ಅನಿಲಕುಮಾರ ಎಚ್.ಡಿ. ಅವರಿಗೆ ರೈತರು ಮನವಿ ಸಲ್ಲಿಸಿದರು. ರೈತ ಮುಖಂಡರಾದ ಮಾಂಜರಿಯ ಅಣ್ಣಾಸಾಹೇಬ ಯಾದವ, ಇಂಗಳಿಯ ಅಪ್ಪಾಸಾಬ ಸೌಂದಲಗೆ, ಯಡೂರಿನ ಅಜಯ ಸೂರ್ಯವಂಶಿ ಮಾತನಾಡಿದರು. ಕಾರ್ಖಾನೆ ಉಪಾಧ್ಯಕ್ಷ ಅಜೀತ ದೇಸಾಯಿ, ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT