ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬುಬೆಳೆಗೆ ಹಾನಿ: ಪರಿಹಾರಕ್ಕೆ ಆಗ್ರಹಿಸಿ ಧರಣಿ

Last Updated 27 ಸೆಪ್ಟೆಂಬರ್ 2011, 8:10 IST
ಅಕ್ಷರ ಗಾತ್ರ

ಬೀಳಗಿ: ತಾಲ್ಲೂಕಿನಲ್ಲಿ ಗೊಣ್ಣೆಹುಳು ಬಾಧೆಯಿಂದ ಕಬ್ಬಿನ ಬೆಳೆ ಹಾಳಾಗಿ ನಷ್ಟಕ್ಕೀಡಾದ ರೈತರು ಆತ್ಮಹತ್ಯೆ ಮಾಡಿಕೊಂಡಲ್ಲಿ ಸರಕಾರವೇ ನೇರಹೊಣೆ ಹೊರಬೇಕಾಗುತ್ತದೆ ಎಂದು ಕಬ್ಬು ಬೆಳೆಗಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸುನಗ ಗ್ರಾಮದಿಂದ ಒಣಗಿ ಹೋದ ಕಬ್ಬಿನ ಜಲ್ಲೆಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು ಸರ್ಕಾರದ ವಿರುದ್ಧ, ಕೃಷಿ ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಸೋಮವಾರ ಪಾದಯಾತ್ರೆಯ ಮೂಲಕ ಹೊರಟ ರೈತರು, ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ನೆತ್ತಿ ಸುಡುವ ಉರಿಬಿಸಿಲಿನಲ್ಲಿ ಧರಣಿ ನಡೆಸಿದರು.

ಧರಣಿ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡರು, ಸರ್ಕಾರದ ಮೇಲೆ, ಇಂಥ ಸಂದಿಗ್ಧ ಸ್ಥಿತಿಯಲ್ಲೂ ಯಾವುದೇ ಕ್ರಮ  ಕೈಗೊಳ್ಳದ ಕೃಷಿ ಇಲಾಖೆಯ ಅಧಿಕಾರಿಗಳ ವಿರುದ್ಧ  ಹರಿಹಾಯ್ದರು.

ಕೃಷಿ ವಿಶ್ವ ವಿದ್ಯಾಲಯದ ತಜ್ಞರನ್ನು, ಕೃಷಿ ವಿಜ್ಞಾನಿಗಳನ್ನು ಕರೆತಂದು ಸದ್ಯದ ಪರಿಸ್ಥಿತಿಯನ್ನು ಅಧ್ಯಯನ ಮಾಡಿಸಬೇಕಾಗಿತ್ತು. ಆದರೆ ಗ್ರಾಮದತ್ತ ಮುಖ ತೋರಿಸದ ಅಧಿಕಾರಿಗಳು ಗೋಡೆಯ ಮೇಲೆ ಕರಪತ್ರಗಳನ್ನು ಅಂಟಿಸುವುದನ್ನು ಬಿಟ್ಟರೆ ಬೇರೇನೂ ಕೆಲಸ ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬಿನ ಜೊತೆಗೆ ಈರುಳ್ಳಿ, ಮೆಣಸಿನಕಾಯಿ, ಗೋವಿನಜೋಳದ ಬೆಳೆಗಳಿಗೂ ಗೊಣ್ಣೆಹುಳು ಬಾಧೆ ತಗುಲಿದೆ. ಸುನಗ ಗ್ರಾಮಕ್ಕೆ ಮಾತ್ರ ಸೀಮಿತಗೊಂಡಂತೆ ಅಂದಾಜು ರೂ 30ಕೋಟಿಯಷ್ಟು ನಷ್ಟವಾಗಿದ್ದು ಸರ್ಕಾರ ಪ್ರತಿ ಎಕರೆಗೆ ಕನಿಷ್ಠ 1ಲಕ್ಷ ರೂಪಾಯಿ ಪರಿಹಾರ ಧನ ಕೊಡಬೇಕೆಂದು ಒತ್ತಾಯಿಸಿದರು.
 
ಇಲ್ಲದೇ ಹೋದಲ್ಲಿ ಉಪವಾಸ ಸತ್ಯಾಗ್ರಹದೊಂದಿಗೆ ಉಗ್ರ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಸಿದರು. ಪ್ರಭಾರಿ ತಹಸೀಲ್ದಾರ ಕುಲಕರ್ಣಿ ಮನವಿ ಸ್ವೀಕರಿಸಿ ತಕ್ಷಣವೇ ಸರಕಾರಕ್ಕೆ ಕಳಿಸುವುದಾಗಿ ಹೇಳಿದರು.

ಹೆಸ್ಕಾಂ ಕಚೇರಿಗೆ ನುಗ್ಗಿದ ರೈತರ ದಂಡು:
ಮಿನಿ ವಿಧಾನ ಸೌಧದಿಂದ ಹೊರಟ ರೈತರು ಅನಿಯಮಿತ ವಿದ್ಯುತ್ ಸರಬರಾಜನ್ನು ಪ್ರತಿಭಟಿಸಿ ಹೆಸ್ಕಾಂ ಕಚೇರಿಗೆ ನುಗ್ಗಿ ನಿಯಮಿತವಾಗಿ ವಿದ್ಯುತ್ ಪೂರೈಸಲು ಮನವಿ ಸಲ್ಲಿಸಿದರು. ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟಕ್ಕಿಳಿಯುವುದಾಗಿ ಎಚ್ಚರಿಕೆ ನೀಡಿದರು.

ಡೋಂಗ್ರಿಸಾಬ ನದಾಫ, ಬಸವರಾಜ ಮೇಟಿ, ಮಲ್ಲಪ್ಪ ದೇವೀನವರ, ಮುದಕಪ್ಪ ಎರಡೆಮ್ಮಿ, ಗದಿಗೆಪ್ಪ ನಾಗರಾಳ, ಧರ್ಮಪ್ಪ ಮಾದರ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT