ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಮ್‌ಜಿತ್‌, ಅರ್ಜುನ್‌ಗೆ ಮುನ್ನಡೆ

ಐಎನ್‌ಆರ್‌ಸಿ ರ್‍ಯಾಲಿ: 19 ಸ್ಪರ್ಧಿಗಳು ರ್‍ಯಾಲಿಯಿಂದ ಹೊರಕ್ಕೆ
Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಎಲ್ಲರೂ ನಿರೀಕ್ಷಿಸಿದಂತೆ ಅತ್ಯಂತ ಸವಾಲಿನಿಂದ ಕೂಡಿದ ಕಾಫಿ ಕಣಿವೆಯ ದುರ್ಗಮ  ಮತ್ತು ಇಕ್ಕಟ್ಟಾದ ಮಾರ್ಗದಲ್ಲಿ ಚಾಲನೆ ಮಾಡುವುದು ಅತ್ಯಂತ ಕಠಿಣ ಸಾಹಸ ಎನ್ನುವುದು ಸಾಬೀತಾಯಿತು. ಇಲ್ಲಿ ನಡೆಯುತ್ತಿರುವ ಐನ್‌ಆರ್‌ಸಿ  5ನೇ ಹಾಗೂ ಕೊನೆ ಸುತ್ತಿನ ರ್‍ಯಾಲಿಯಲ್ಲಿ ಶುಕ್ರವಾರ 38 ಸ್ಪರ್ಧಿಗಳ ಪೈಕಿ 19 ಕಾರುಗಳು ಹೊರ ನಡೆದವು. ಆದರೆ, ಮಾಜಿ ವಿಶ್ವ ಚಾಂಪಿಯನ್‌ ಮಲೇಷ್ಯಾದ ಕರಮ್‌ ಜಿತ್‌ ಸಿಂಗ್‌ (ಸಹ ಚಾಲಕ ಜಗದೇವ್‌ ಸಿಂಗ್‌) ಮತ್ತು ಮಂಗಳೂರಿನ ಅರ್ಜುನ್‌ ರಾವ್ (ಸಹ ಚಾಲಕ ಸತೀಶ್‌ ರಾಜಗೋಪಾಲ್‌) ಅದ್ಭುತ ಚಾಲನಾ ಕೌಶಲ್ಯ ತೋರಿ ರ್‍ಯಾಲಿಯಲ್ಲಿ ಮುನ್ನಡೆ ಕಾಯ್ದುಕೊಂಡರು.

ಚೀಕನಹಳ್ಳಿ ಸಮೀಪದ ಚಟ್ನಹಳ್ಳಿ, ಚಂದ್ರಾಪುರ, ಕಮ್ಮರಗೋಡು ಕಾಫಿ ಎಸ್ಟೇಟ್‌ನ ಅತ್ಯಂತ ಕಿರಿದಾದ ಮತ್ತು ಸಾಕಷ್ಟು ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ಮೂರು ವಿಶೇಷ ಹಂತದ ಸ್ಪರ್ಧೆಯಲ್ಲಿ ತಾವು ಚಲಾಯಿಸಿದ ಫೋಕ್ಸ್‌ ವ್ಯಾಗನ್‌ ಪೋಲೊ ಆರ್‌2 ಕಾರಿನ ಮೇಲೆ ನಿಯಂತ್ರಣ ಸಾಧಿಸಿದ ಕರಮ್‌ಜಿತ್‌ /ಜಗದೇವ್‌ ಸಿಂಗ್‌ ಜೋಡಿ,  ನಿಗದಿತ ಗುರಿಯನ್ನು  1 ಗಂಟೆ, 27 ನಿಮಿಷ ಹಾಗೂ 58.2 ಸೆಕೆಂಡು (01:27:58.2)ಗಳಲ್ಲಿ ತಲುಪಿ ಅತ್ಯಂತ ವೇಗದ ಚಾಲಕರಾಗಿ ಹೊರಹೊಮ್ಮಿದರು.

ಫೋಕ್ಸ್ ವ್ಯಾಗನ್‌ ಪೋಲೊ ಚಲಾಯಿಸಿದ ಅರ್ಜುನ್‌ ರಾವ್‌/ಸತೀಶ್‌ ರಾಜಗೋಪಾಲ್‌ ಜೋಡಿ ಕರಮ್‌ಜಿತ್‌ಗೆ ನಿಖಟ ಪೈಪೋಟಿ ನೀಡಿತು. ನಿಗದಿತ ಗುರಿ ಸೇರಲು ಒಂದು ಗಂಟೆ, 29 ನಿಮಿಷ ಹಾಗೂ 42.7 ಸೆಕೆಂಡ್‌ ತೆಗೆದುಕೊಂಡು ಐಎನ್‌ಆರ್‌ಸಿ ಸಮಗ್ರ ವಿಭಾಗ ಮತ್ತು 1600 ಸಿಸಿ ವಿಭಾಗದಲ್ಲಿ ಮುನ್ನಡೆ ಸಾಧಿಸಿದರು.

2014ರ ಏಷ್ಯ ಕಪ್‌ ಪೂರ್ವ ಸಿದ್ಧತಾ ರ್‍ಯಾಲಿ ಎಂದೇ ಪರಿಗಣಿತವಾ ಗಿರುವ ಈ ರ್‍ಯಾಲಿಯಲ್ಲಿ ಏಷ್ಯ ಫೆಸಿಫಿಕ್‌ ರ್‍ಯಾಲಿ ಚಾಂಪಿಯನ್‌ ಗೌರವ್‌ಗಿಲ್‌ (ಸಹ ಚಾಲಕ ಮೂಸಾ ಷರೀಫ್‌) 3ನೇ ಹಂತದಲ್ಲಿ ಕಲ್ಲಿಗೆ ಡಿಕ್ಕಿ ಹೊಡೆದು ಹೊರ ನಡೆದರು. ಸೂಪರ್‌ ಸ್ಪೆಷಲ್‌ ಸ್ಟೇಜ್‌ನಲ್ಲಿ ವೇಗದ ಚಾಲಕರಾಗಿ ಪ್ರೇಕ್ಷಕರ ಮನಗೆದ್ದಿದ್ದ ದೆಹಲಿಯ ಸಮೀರ್‌ ಥಾಪರ್‌ (ಸಹ ಚಾಲಕ ಜಿ.ಎಸ್‌.ಮಾನ್‌) ಅವರ ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿ ಮೂರನೇ ಹಂತದ ಸ್ಪರ್ಧೆಯಲ್ಲಿ ಹೊರಬಿದ್ದರು. ಈ ರ್‍ಯಾಲಿಯ ಆಕರ್ಷಣೆಯ ಕೇಂದ್ರಬಿಂದು ವಾಗಿದ್ದ ಗೌರವ್‌ಗಿಲ್‌ ಮೇಲೆ ಎಲ್ಲರ ಕಣ್ಣು ಸಹಜವಾಗಿಯೇ ನೆಟ್ಟಿದ್ದವು. ಚಾಪಿಯನ್‌ ಚಾಲಕನಿಗೆ ಅದೃಷ್ಟ ಕೈಹಿಡಿಯದಿದ್ದು ಪ್ರೇಕ್ಷಕ ವರ್ಗದಲ್ಲೂ ನಿರಾಸೆಯ ಕಾರ್ಮೋಡ ಕವಿಯುವಂತೆ ಮಾಡಿತು.

ಅತ್ಯಂತ ಕಿರಿಯ ಸ್ಪರ್ಧಿಯಾಗಿ ಎಲ್ಲರ ಚಿತ್ತ ಸೆಳೆದಿದ್ದ ಮಂಗಳೂರಿನ ಡೀನ್‌ ಮಸ್ಕರೇನಸ್‌ (ಸಹಚಾಲಕ ಎಸ್‌.ಎಂ. ಷಣ್ಮುಗ) ಅವರು ಚಾಲನೆ ಮಾಡುತ್ತಿದ್ದ ವೋಕ್ಸ್ ವ್ಯಾಗನ್‌ ಕಾರು 5ನೇ ಹಂತದಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಯಿತು. ಅದೃಷ್ಟ ವಶಾತ್‌ ಯಾವುದೇ ಅಪಾಯವಿಲ್ಲದೆ ಪಾರಾ ದರೂ ಅವರಿಗೆ ಸ್ಪರ್ಧೆ ಪೂರ್ಣಗೊಳಿಸ ಲಾಗದೆ, ನಿರಾಸೆ ಅನುಭವಿಸಿದರು. 1600 ಸಿಸಿ ವಿಭಾಗದಲ್ಲಿ ಭರವಸೆ ಮೂಡಿಸಿದ್ದ ಕಳಸದ ಗಿರಿಜಾಶಂಕರ ಜೋಷಿ (ಸಹಚಾಲಕ ಎಂ.ಚಂದ್ರಮೌಳಿ) ಅವರಿಗೂ ಕೊನೆ ಹಂತದಲ್ಲಿ ಕಾರು ಕೈಕೊಟ್ಟಿತು.

ಎಲ್ಲರ ನಿರೀಕ್ಷೆ ಮೀರಿ ಅತ್ಯದ್ಭುತವಾಗಿ ಕಾರು ಚಲಾಯಿಸಿದ ಮಡಿಕೇರಿಯ ಎಂ.ಕೆ.ಸುಹೆಮ್‌ (ಸಹ ಚಾಲಕ ಜೀವರತಿನಂ) ಜೋಡಿ ಜೆಎನ್‌ಆರ್‌ಸಿ ವಿಭಾಗದಲ್ಲಿ ಮುನ್ನಡೆ (01:34: 19.1)ಕಾಯ್ದುಕೊಳ್ಳುವ ಜತೆಗೆ ಸಮಗ್ರ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಕುತೂಹಲ ಮೂಡಿಸಿದ್ದಾರೆ. ಅಂತಿಮ ಸುತ್ತಿನ ಸ್ಪರ್ಧೆ ಶನಿವಾರ ನಡೆಯಲಿದೆ.

ಫಲಿತಾಂಶ: ಐಎನ್‌ಆರ್‌ಸಿ ಓವರ್‌ ಆಲ್‌: ಅರ್ಜುನ್‌ ರಾವ್‌/ಸತೀಶ್‌ ರಾಜಗೋಪಾಲ್‌ (ವೋಕ್ಸ್ ವ್ಯಾಗನ್‌ ಪೋಲೊ)–1 (1 ಗಂ. 29 ನಿ, 42.7 ಸೆ.), ವಿಕ್ರಮ್‌ ದೇವದಾಸನ್‌/ ಅಶ್ವಿನ್‌ ನಾಯಕ್‌ (ಮಿಸ್ತುಬಿಸಿ ಸಿಡಿಯಾ)–2 (01:34:12.3), ಎಂ.ಕೆ.ಸುಹೆಮ್‌/ಜೀವರತಿನಂ (ಮಾರುತಿ ಬೆಲೆನೊ)–3 (01:34:19.1).

ಐಎನ್‌ಆರ್‌ಸಿ 2000 ಸಿಸಿ: ವಿಕ್ರಮ್‌ ದೇವದಾಸನ್‌/ ಅಶ್ವಿನ್‌ ನಾಯಕ್‌ (ಮಿಸ್ತುಬಿಸಿ ಸಿಡಿಯಾ)–1 (01:34:12.3), ಡಾ.ಬಿಕ್ಕುಬಾಬು/ ಜಾರ್ಜ್‌ ವರ್ಗೀಸ್‌ (ಮಿಸ್ತು ಬಿಸಿಯಾ)–2(01:34:44.6), ಪೃಥ್ವಿ ಡಾಮಿನಿಕ್‌/ ಎಂ.ಎಸ್‌.ರವೀಂಂದ್ರ (ಮಿಸ್ತುಬಿಸಿ ಸಿಡಿಯಾ)–3 (01:34:53.3).

ಐಎನ್‌ಆರ್‌ಸಿ 1600 ಸಿಸಿ: ಅರ್ಜುನ್‌ ರಾವ್‌/ಸತೀಶ್‌ ರಾಜಗೋಪಾಲ್‌ (ವೋಕ್ಸ್ ವ್ಯಾಗನ್‌ ಪೋಲೊ)–1 (1 ಗಂ. 29 ನಿ, 42.7 ಸೆ.), ಸಿರಿಶ್‌ ಚಂದ್ರನ್‌/ ನಿಖಿಲ್‌ ಪೈ (ಸ್ಲೈಡ್‌ವೇಸ್‌ ಇಂಡಸ್ಟ್ರಿಸ್‌, ವೋಕ್ಸ್ ವ್ಯಾಗನ್‌ ಪೋಲೊ)–2 (01:34:45.8), ಹೃಷಿಕೇಷ್‌ ಥ್ಯಾಕರಸೆ/ ನಿನಾದ್‌ ಮಿರಜ್‌ಗಾವಂಕರ್‌ (ವೋಕ್ಸ್ ವ್ಯಾಗನ್‌  ಪೋಲೊ)–3(01:40:05.5).

ಜೆಐಎನ್‌ಆರ್‌ಸಿ: ಎಂ.ಕೆ.ಸುಹೆಮ್‌/ಜೀವರತಿನಂ (ಮಾರುತಿ ಬೆಲೆನೊ)–1(01:34:19.1). ರೋಹನ್‌ ಪವಾರ್‌/ಅರ್ಜುನ್‌ಮೆಹತಾ (ಸ್ಲೈಡ್‌ವೇಸ್‌ ಇಂಡಸ್ಟ್ರಿಸ್‌, ವೋಕ್ಸ್ ವ್ಯಾಗನ್‌ ಪೋಲೊ)–2 (01:37:44.0), ಸಿ.ಧ್ರುವ /ಬಿ.ಸಿ.ರೂಪೇಶ್‌ (ಮಾರುತಿ ಎಸ್ಟೀಮ್‌)–3 (01:38:55.7).

ಎಸ್‌ಯುವಿ ಎನ್‌ಆರ್‌ಸಿ: ಸನ್ನಿ ಸಿದ್ಧು/ ಪಿ.ವಿ.ಎಸ್‌.ಮಾರುತಿ (ಮಹಿಂದ್ರ ಅಡ್ವೆಂಚರ್‌ ರ್‍ಯಾಲಿ, ಎಕ್ಸ್‌ಯುವಿ 500)–1(01:31:24.8), ಲೋಹಿತ್‌ ಅರಸ್‌/ ಬೋನಿ ಥಾಮಸ್‌ (ಮಹಿಂದ್ರ ಅಡ್ವೆಂಚರ್‌ ರ್‍ಯಾಲಿ, ಎಕ್ಸ್‌ಯುವಿ 500)–2 (01:36:03.4).

ಐಆರ್‌ಸಿ: ಕರಮ್‌ಜಿತ್‌ ಸಿಂಗ್‌/ಜಗದೇವ್ ಸಿಂಗ್‌ (ಸ್ಲೈಡ್‌ವೇಸ್‌ ಇಂಡಸ್ಟ್ರಿಸ್‌, ವೋಕ್ಸ್ ವ್ಯಾಗನ್‌ ಪೋಲೊ ಆರ್‌2)–1 (01:27:58.2), ಸುಮಿತ್‌ ಪಂಜಾಬಿ/ ವೇಣು ರಮೇಶ್‌ಕುಮಾರ್‌ (ಮಿಸ್ತುಬಿಸಿ ಸಿಡಿಯಾ)–2(01:40:15.0), ಶ್ಯಾಮ್‌ ಚೆಲ್ಲಪ್ಪನ್‌/ ಸೋಬ್‌ ಜಾರ್ಜ್‌ (ಮಾರುತಿ ಬೆಲೆನೊ)–3(01:52:46.4).

ಹೊಸಬರು: ವಿಕ್ರಮ್‌ ಮಥಾಯ್ಸ್‌/ ವಿವೇಕ್‌ ಪೊನ್ನುಸ್ವಾಮಿ (ಟೀಮ್‌ ಜಂಗಲ್‌ ಹಟ್‌, ವೋಕ್ಸ್‌ ವ್ಯಾಗನ್‌ ಪೋಲೊ ಟಿಡಿಐ)01:39:26.9.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT