ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಟೆ ವೀರ

Last Updated 16 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಅರುವತ್ತಾರರ ಪ್ರಾಯದ ಕಾರ್ಲೋಸ್ ರೇ ಅಮೆರಿಕದಲ್ಲಿ ಜನಪ್ರಿಯ. ಮಾರ್ಷಲ್ ಆರ್ಟ್ಸ್ ಹಾಗೂ ಸಿನಿಮಾ, ಟೀವಿ ತಾರೆಯಾಗಿ ಹೆಸರು ಮಾಡಿರುವ ಅವರು ಬ್ಲಾಕ್‌ಬೆಲ್ಟ್‌ನಲ್ಲಿ ‘8ನೇ ಡಿಗ್ರಿ’ ಪಡೆದ ಪಾಶ್ಚಿಮಾತ್ಯ ದೇಶಗಳ ಮೊದಲ ವ್ಯಕ್ತಿ. ಟೇಕ್ವಾಂಡೋದಲ್ಲಿ ಗ್ರ್ಯಾಂಡ್‌ಮಾಸ್ಟರ್ ಆಗಿಯೂ ಮೆರೆದವರು ಅವರು.

ಅಪ್ಪ- ಅಮ್ಮ ದಾಂಪತ್ಯ ಕಡಿದುಕೊಂಡು ಬೇರೆಯಾದಾಗ ಕಾರ್ಲೋಸ್ ರೇ ಇನ್ನೂ ಹತ್ತು ವರ್ಷದ ಹುಡುಗ. ಅಮ್ಮನ ಜೊತೆಗೇ ಬೆಳೆದ. ಜೊತೆಯಲ್ಲಿ ಇಬ್ಬರು ತಮ್ಮಂದಿರೂ ಇದ್ದರು. ಬದುಕಿನ ನೊಗಕ್ಕೆ ಬೇಗ ಹೆಗಲುಕೊಡುವುದು ಅನಿವಾರ್ಯವಾಯಿತು. ಹೈಸ್ಕೂಲ್ ಮುಗಿದದ್ದೇ ಅಮೆರಿಕದ ಏರ್‌ಫೋರ್ಸ್ ಸೇರಿದ. ಅಲ್ಲಿಂದ ತರಬೇತಿಗೆಂದು ದಕ್ಷಿಣ ಕೊರಿಯಾಗೆ ಕಳುಹಿಸಿದರು. ಅದೇ ಕಾರ್ಲೋಸ್ ಬದುಕಿನ ತಿರುವು. ಇದ್ದಬದ್ದ ಮಾರ್ಷಲ್ ಕಲಾಪ್ರಕಾರಗಳನ್ನೆಲ್ಲಾ ಅಲ್ಲಿ ಕಲಿತ. ಟ್ಯಾಂಗ್‌ಸುಡೋ, ಟೇಕ್ವಾಂಡೊ, ಶಿಂಟೊ-ರ್ಯು ಕರಾಟೆ, ಬ್ರೆಜಿಲಿಯನ್ ಜಿಯು-ಜಿಟ್ಸು ಈ ಎಲ್ಲಾ ಮಾರ್ಷಲ್ ಆರ್ಟ್ಸ್‌ನಲ್ಲೂ ಬ್ಲಾಕ್‌ಬೆಲ್ಟ್ ಪಡೆದ. 1962ರಲ್ಲಿ ಮಿಲಿಟರಿ ಸೇವೆಯಿಂದ ಹೊರಬಂದ ಕಾರ್ಲೋಸ್ ವಿವಿಧೆಡೆ ಮಾರ್ಷಲ್ ಕಲೆ ಹೇಳಿಕೊಡುವ ಶಾಲೆಗಳನ್ನು ಸ್ಥಾಪಿಸಿದ. ಹಾಲಿವುಡ್‌ನ ಸ್ಟೀವ್ ಮಕ್‌ಕ್ವೀನ್, ಪ್ರಿಸಿಲಾ ಪ್ರೆಸ್ಲಿ, ಡಾನಿ, ಮೇರಿ ಒಸ್ಮಾಂಡ್ ಮೊದಲಾದವರು ಕಲಿತದ್ದು ಕಾರ್ಲೋಸ್ ಶಾಲೆಗಳಲ್ಲೇ.

ವಿಶ್ವಮಟ್ಟದ ವೃತ್ತಿಪರ ಕರಾಟೆ ಸ್ಪರ್ಧೆಯ ಮಧ್ಯತೂಕದವರ ವಿಭಾಗದಲ್ಲಿ ಸ್ಪರ್ಧಿಸಿ ಸತತ ಆರು ವರ್ಷ ಚಾಂಪಿಯನ್ ಆಗಿ ಮೆರೆದ ಕಾರ್ಲೋಸ್ ಸಿನಿಮಾಲೋಕಕ್ಕೂ ಪ್ರವೇಶಿಸಿದ. 1969ರಲ್ಲಿ ‘ದಿ ರೆಕ್‌ನಿಂಗ್ ಕ್ರೂ’ ಚಿತ್ರದಲ್ಲಿ ನಟಿಸಿದ. 1972ರಲ್ಲಿ ಬ್ರೂಸ್ ಲೀ ಜೊತೆ ಭೇಟಿ ಸಾಧ್ಯವಾಯಿತು. ‘ರಿಟರ್ನ್ ಆಫ್ ಡ್ರಾಗನ್’ ಚಿತ್ರದಲ್ಲಿ ಪ್ರಮುಖ ಪಾತ್ರ ಕೂಡ ಸಿಕ್ಕಿತು. ಆನಂತರ ಹಲವಾರು ಆಕ್ಷನ್ ಚಿತ್ರಗಳಲ್ಲಿ ಕಾರ್ಲೋಸ್ ನಟಿಸಿದರು. ಟೀವಿ ಲೋಕದಲ್ಲೂ ಕಾರ್ಲೋಸ್ ಪರಿಚಿತ ಮುಖ. ವಾಕರ್, ಟೆಕ್ಸಾಸ್ ರೇಂಜರ್ ಕಾರ್ಯಕ್ರಮಗಳಿಗೆ ಉತ್ತಮ ಪ್ರತಿಕ್ರಿಯೆ ಇತ್ತು. ಕರಾಟೆ ಕಮಾಂಡೋಸ್ ಎಂಬ ಅನಿಮೇಟೆಡ್ ಸರಣಿಯಲ್ಲೂ ಕಾರ್ಲೋಸ್ ಚಹರೆ ಇತ್ತು.

‘ಚಕ್ ನಾರಿಸ್’ ಎಂದೇ ಜನಪ್ರಿಯರಾಗಿದ್ದ ಕಾರ್ಲೋಸ್, ಕಿಕ್ ಸ್ಟಾರ್ಟ್ ಫೌಂಡೇಷನ್ ಸ್ಥಾಪಿಸಿದರು. ಮಾದಕವ್ಯಸನಿಗಳು, ಮದ್ಯದ ದಾಸರು ಹಾಗೂ ಕೊಲೆಗಡುಕರಿಗೆ ಮಾರ್ಷಲ್ ಆರ್ಟ್ಸ್ ಹೇಳಿಕೊಡುವ ಮೂಲಕ ಮನಃಪರಿವರ್ತನೆ ಮಾಡುವ ಫೌಂಡೇಷನ್ ಇದು. ಕಾರ್ಲೋಸ್‌ಗೆ ಬಹುಪ್ರಿಯವಾದ ಕೆಲಸ ಇಲ್ಲಿ ಹೇಳಿಕೊಡುವುದಂತೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT