ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ ಪಾಂಡೆ ಶತಕದ ಬಲ

ರಣಜಿ: ಶತಕದಂಚಿನಲ್ಲಿ ಮತ್ತೆ ಎಡವಿದ ರಾಹುಲ್‌, ಪಂಜಾಬ್‌ ಬೌಲರ್‌ಗಳು ಸುಸ್ತು
Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಬಾಲ್‌ಬಾಯ್ಸ್‌ಗೆ ಭಾನುವಾರ ಎಡೆಬಿಡದ ಕೆಲಸ. ನಿರಂತರ ಬೌಂಡರಿಗಳ ಮಧ್ಯೆ ಆಗಾಗ ಸಿಡಿಯುತ್ತಿದ್ದ ಸಿಕ್ಸರ್‌ಗಳು ಅವರನ್ನು ಸುಮ್ಮನೆ ಇರಲು ಬಿಡಲಿಲ್ಲ. ನಾಲ್ವರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳ ಮೇಲೆ ಎರಗಿದ ಮನೀಶ್‌ ಪಾಂಡೆ ಹಾಗೂ ಕೆ.ಎಲ್‌.ರಾಹುಲ್‌ ಮೋಹಕ ಬ್ಯಾಟಿಂಗ್‌ ಪ್ರದರ್ಶಿಸಿ ಪ್ರವಾಸಿ ಪಂಜಾಬ್‌ ತಂಡದ ಬಯಕೆಗಳ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದರು.

ಮನ್‌ದೀಪ್ ಸಿಂಗ್‌ ಬಳಗದ ಕಡಿಮೆ ಮೊತ್ತವನ್ನು ಸುಲಭವಾಗಿ ಹಿಂದಿಕ್ಕಿದ ಕರ್ನಾಟಕ, ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್‌ನ ಎ ಗುಂಪಿನ ಪಂದ್ಯದ ಎರಡನೇ ದಿನ ಏಳು ವಿಕೆಟ್‌ಗಳಿಗೆ 367 ರನ್‌ ಗಳಿಸಿದ್ದು ಮೊದಲ ಇನಿಂಗ್ಸ್‌ನಲ್ಲಿ ಒಟ್ಟು 193 ರನ್‌ಗಳ ಮುನ್ನಡೆ ಸಾಧಿಸಿದೆ. ನಾಯಕ ವಿನಯ್‌ ಕುಮಾರ್‌ ಮತ್ತು ವೇಗಿ ಅಭಿಮನ್ಯು ಮಿಥುನ್‌ ಸೋಮವಾರಕ್ಕೆ ಆಟವನ್ನು ಕಾಯ್ದಿರಿಸಿದ್ದಾರೆ.

ಅಮೋಘ ಜೊತೆಯಾಟ: ಶನಿವಾರ ಅಜೇಯರಾಗಿ ಉಳಿದಿದ್ದ ಪಾಂಡೆ ಮತ್ತು ರಾಹುಲ್‌ ಸ್ಪಷ್ಟ ರಣ ನೀತಿಯೊಂದಿಗೆ ಭಾನುವಾರ ಮೈದಾನಕ್ಕೆ ಇಳಿದು ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ಪ್ರದರ್ಶಿಸಿದರು.

ಸಂಜೆ ವೇಳೆಗೆ ತಂಡದ ಖಾತೆಯಲ್ಲಿ ಸೇರಿದ 27 ಬೌಂಡರಿಗಳಲ್ಲಿ ಪಾಂಡೆ (15) ಅವರದ್ದೇ ಬಹುಪಾಲು. ಮೂರು ಸಿಕ್ಸರ್‌ಗಳು ಕೂಡ ಅವರ ಬ್ಯಾಟಿನಿಂದ ಚಿಮ್ಮಿದವು.

ಬೆಳಿಗ್ಗೆ ಬೌಲಿಂಗ್‌ ಆರಂಭಿಸಿದ ಸಂದೀಪ್‌ ಶರ್ಮಾ ಅವರ ಮೂರನೇ ಎಸೆತವನ್ನು ಮೋಹಕ ಕವರ್‌ ಡ್ರೈವ್ ಮೂಲಕ ಬೌಂಡರಿಗೆ ಅಟ್ಟಿದ ಮನೀಶ್‌, ದಿನದಾಟಕ್ಕೆ ಆರಂಭದಲ್ಲೇ ರಂಗು ತುಂಬಿದರು. ಶರ್ಮಾ ಹಾಕಿದ ಮುಂದಿನ ಓವರ್‌ನ 2ನೇ ಎಸೆತದಲ್ಲಿ ರಾಹುಲ್‌ ಕೂಡ ಬೌಂಡರಿ ಬಾರಿಸಿ ಆಕ್ರಮಣಕ್ಕೆ ಬಲ ತುಂಬಿದರು. ಇದರೊಂದಿಗೆ ಪಾಂಡೆ ಇನ್ನಷ್ಟು ಪುಳಕಗೊಂಡರು. ದಿನದ ಏಳನೇ ಓವರ್‌ನಲ್ಲಿ ಆನ್‌ಡ್ರೈವ್‌ ಮೂಲಕ ಸಂದೀಪ್‌ ಶರ್ಮಾ ಎಸೆತವನ್ನು ಸಿಕ್ಸರ್‌ಗೆ ಎತ್ತಿದ ಪಾಂಡೆ ಸಂಭ್ರಮದ ಅಲೆ ಎಬ್ಬಿಸಿದರು.

38ನೇ ಓವರ್‌ ಮಾಡಿದ ತರುವಾರ್ ಕೊಹ್ಲಿ ಮೂರನೇ ಎಸೆತವನ್ನು ಮಿಡ್‌ಆನ್‌ಗೆ ಡ್ರೈವ್‌ ಮಾಡಿ ಬೌಂಡರಿ ಗಳಿಸಿದ ರಾಹುಲ್‌ ಈ ಬೌಲರ್‌ನ ಮುಂದಿನ ಓವರ್‌ನಲ್ಲೂ ಬೌಂಡರಿ ಬಾರಿಸಿದರು. ಇನಿಂಗ್ಸ್‌ನ 42ನೇ ಓವರ್‌ನಲ್ಲಿ ಮೊಣಕಾಲೂರಿ ಕವರ್‌ ಕ್ಷೇತ್ರದಲ್ಲಿ ಚೆಂಡನ್ನು ಬೌಂಡರಿ ಗೆರೆಯಾಚೆ ಅಟ್ಟಿದ ರಾಹುಲ್‌ ಅರ್ಧ ಶತಕ ಪೂರೈಸಿದರು. ನಂತರದ ಎಸೆತವನ್ನು ಮಿಡ್‌ಆನ್‌ ಕಡೆಯಿಂದ ಬೌಂಡರಿಗೆ ಸಾಗಿಸಿದರು. ‘ಮ್ಯಾಂಡಿ’ ಬೌಲರ್‌ಗಳನ್ನು ಬದಲಿಸಿ ಸ್ಪಿನ್ ದಾಳಿ ನಡೆಸಿದರೂ ಪರಿಸ್ಥಿತಿಯಲ್ಲಿ ಬದಲಾವಣೆಯಾಗ ಲಿಲ್ಲ. ಎಡಗೈ ಸ್ಪಿನ್ನರ್ ಚೌಧರಿ ಎಸೆದ 50ನೇ ಓವರ್‌ನಲ್ಲಿ ಸಿಲ್ಲಿ ಮಿಡ್‌ಆಫ್‌ ಫೀಲ್ಡರ್‌ನನ್ನು ವಂಚಿಸಿ ಚೆಂಡು ಬೌಂಡರಿ ಗೆರೆ ದಾಟಿದಾಗ ಮನೀಶ್‌ ಪಾಂಡೆ ವೈಯಕ್ತಿಕ ಮೊತ್ತ 49ಕ್ಕೆ ಏರಿತು. ಚೌಧರಿ ಅವರ ಮುಂದಿನ ಓವರ್‌ನಲ್ಲಿ ಒಂಟಿ ರನ್‌ ಗಳಿಸಿದ ಪಾಂಡೆ ಅರ್ಧ ಶತಕ ಪೂರೈಸಿದರು. ಭೋಜನ ವಿರಾಮಕ್ಕೆ ಮೊದಲು ಗೋನಿ ಎಸೆತ ವನ್ನು ಹುಕ್‌ ಮಾಡಿದ ರಾಹುಲ್‌  ಫೈನ್‌ಲೆಗ್ ಮೂಲಕ ಬೌಂಡರಿ ಗಳಿಸಿದ ದೃಶ್ಯ ಮನೋಹರವಾಗಿತ್ತು.

ಮತ್ತೆ ನರ್ವಸ್‌ ನೈಂಟಿ: ಪಾಂಡೆ ಜೊತೆಗೂಡಿ ಮೂರನೇ ವಿಕೆಟ್‌ಗೆ 149 ರನ್‌ ಸೇರಿಸಿದ ರಾಹುಲ್‌ ಈ ಋತುವಿನಲ್ಲಿ ನಿರಂತರ ಎರಡನೇ ಬಾರಿ ‘ನರ್ವಸ್‌ ನೈಂಟಿ’ಗೆ ಒಳಗಾದರು. ಹರಿ ಯಾಣ ವಿರುದ್ಧ ಕಳೆದ ಪಂದ್ಯ ದಲ್ಲಿ 98 ರನ್‌ ಬಾರಿಸಿದ ಅವರು ಭಾನುವಾರ 92 (196 ಎಸೆತ, 12 ಬೌಂಡರಿ) ರನ್‌ ಗಳಿಸಿ ಸ್ಟಂಪ್‌ ಔಟ್‌ ಆದರು. ಆದರೆ ಅಷ್ಟರಲ್ಲಿ ಅವರು ತಂಡಕ್ಕೆ ಇನಿಂಗ್ಸ್‌ ಮುನ್ನ ಡೆಯನ್ನು ಒದಗಿಸಿಕೊಡುವಲ್ಲಿ ಸಫಲರಾಗಿದ್ದರು.

ನಂತರ ಬೆಳಗಿದ್ದು ಪಾಂಡೆ. 61 ರನ್‌ ಗಳಿಸಿದ್ದಾಗ ಮೊದಲ ಸ್ಲಿಪ್‌ನಲ್ಲಿ ಗುರ್‌ಕೀರತ್‌ ಸಿಂಗ್‌ ಅವರಿಂದ ಜೀವದಾನ ಪಡೆದ ಅವರು 99 ರನ್‌ ಗಳಿಸಿದ್ದಾಗ ಸ್ಟ್ರೇಟ್ ಸಿಕ್ಸರ್‌ ಮೂಲಕ ಶತಕದ ಸಂಭ್ರಮ ಅನುಭವಿಸಿದರು. ಈ ನಡುವೆ ಸ್ಟುವರ್ಟ್‌ ಬಿನ್ನಿ ಕೂಡ ಆಕ್ರಮಣಕಾರಿ ಆಟವಾಡಿ ರಂಜಿಸಿದರು. ಕರುಣ್‌ ನಾಯರ್‌ ಪದಾರ್ಪಣೆ ಪಂದ್ಯದಲ್ಲೇ ಮಿಂಚಿದರು. ಚಹಾ ವಿರಾಮದ ನಂತರ ಹತ್ತನೇ ಓವರ್‌ನಲ್ಲಿ ಚೌಧರಿ ಎಸೆತವನ್ನು ಸ್ಕ್ವೇರ್‌ಲೆಗ್ ಬೌಂಡರಿಗೆ ಅಟ್ಟಿ 150 ರನ್‌ ಗಳಿಸಿದ ಪಾಂಡೆ ವೈಯಕ್ತಿಕ ಮೊತ್ತಕ್ಕೆ ಮತ್ತೆ 11 ರನ್‌ ಸೇರಿಸಿ ಔಟಾದರು. ಆಫ್‌ ಬ್ರೇಕ್ ಬೌಲರ್‌ ಗುರ್‌ಕೀರತ್‌ ಸಿಂಗ್‌ ಎಸೆದ ಚೆಂಡು
ನಿರೀಕ್ಷಿತ ಬೌನ್ಸ್ ಪಡೆಯದೆ ನುಗ್ಗಿದಾಗ ರಕ್ಷಣೆಯ ಗೋಡೆ ಕಟ್ಟಲು ಶ್ರಮಿಸಿದ ಪಾಂಡೆ ಲೆಕ್ಕಾಚಾರ ತಪ್ಪಿತು; ಚೆಂಡು ಬೇಲ್ಸ್‌ ಎಗರಿಸಿತು. ನಂತರ ನಾಯಕ ವಿನಯ್ ಕುಮಾರ್ ಮತ್ತು ವೇಗಿ ಅಭಿಮನ್ಯು ಮಿಥುನ್‌ ವೇಗವಾಗಿ ರನ್‌ ಗಳಿಸಲು ಗಮನ ನೀಡಿದರು. ವಿನಯ್‌ ಒಂದು
ಸಿಕ್ಸರ್‌ ಮತ್ತು ಎರಡು ಬೌಂಡರಿಗಳೊಂದಿಗೆ ಮಿಂಚಿದರು.

‘ದ್ವಿಶತಕದ ಗುರಿ ಈಡೇರಲಿಲ್ಲ’
‘ದ್ವಿಶತಕ ಗಳಿಸುವುದೇ ನನ್ನ ಗುರಿಯಾಗಿತ್ತು. ಆದರೆ ಅದನ್ನು ಸಾಧಿಸಲಾಗಲಿಲ್ಲ. ವೈಯಕ್ತಿಕವಾಗಿ ಇನ್ನೂರು ರನ್‌ ಗಳಿಸಿದ್ದರೆ ಅದರಿಂದ ತಂಡಕ್ಕೆ ತುಂಬ ಪ್ರಯೋಜನವಾಗುತ್ತಿತ್ತು’ ಎಂದು ಮನೀಶ್‌ ಪಾಂಡೆ ಹೇಳಿದರು.

ಭಾನುವಾರದ ದಿನದಾಟದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ‘ಸಹಜವಾದ ಆಟವನ್ನು ಇಲ್ಲಿ ಆಡಿದ್ದೇನೆ. ಪ್ರತಿ ಎಸೆತದ ಮೇಲೆ ನಿಗಾ ಇರಿಸಿ ಸೂಕ್ಷ್ಮವಾಗಿ ಎದುರಿಸಿದ್ದೇನೆ. ಆದ್ದರಿಂದ ಹೆಚ್ಚು ಹೊತ್ತು ಬ್ಯಾಟಿಂಗ್ ಮಾಡಲು ಸಾಧ್ಯವಾಯಿತು. ಈ ಋತುವಿನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಲು ಸಾಧ್ಯವಾದದ್ದು ಖುಷಿ ತಂದಿದೆ’ ಎಂದು ಹೇಳಿದರು.

‘ತಂಡ ಈಗಾಗಲೇ 193 ರನ್‌ ಮುನ್ನಡೆ ಸಾಧಿಸಿದೆ. ಇನ್ನೂ ಸುಮಾರು 90 ರನ್‌ಗಳು ಖಾತೆಗೆ ಸೇರಿದರೆ ತಂಡದ ಬೌಲರ್‌ಗಳ ಕೆಲಸ ಸುಲಭವಾಗಬಹುದು’ ಎಂದು ಅವರು ಹೇಳಿದರು. 2008ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಾಂಡೆ ಗಳಿಸಿದ್ದು ಹನ್ನೆರಡನೇ ಶತಕ.

                                                                          ಸ್ಕೋರ್ ವಿವರ 
ಪಂಜಾಬ್‌: ಮೊದಲ ಇನಿಂಗ್ಸ್  54.5 ಓವರ್‌ಗಳಲ್ಲಿ 174

ಕರ್ನಾಟಕ: ಮೊದಲ ಇನಿಂಗ್ಸ್‌ 117 ಓವರ್‌ಗಳಲ್ಲಿ 7 ವಿಕೆಟ್‌ಗೆ 367
(ಶನಿವಾರ 27 ಓವರ್‌ಗಳಲ್ಲಿ 2 ವಿಕೆಟ್‌ಗೆ 59)
ಕೆ.ಎಲ್‌.ರಾಹುಲ್‌ ಸ್ಟಂಪ್ಡ್‌ ಜಿ.ಎಚ್‌.ಖೇರಾ  92
ಮನೀಶ್‌ ಪಾಂಡೆ ಬಿ.ಗುರ್‌ಕೀರತ್‌ ಸಿಂಗ್‌  161
ಸಿ.ಎಂ.ಗೌತಮ್‌ ಎಲ್‌ಬಿಡಬ್ಲ್ಯು ವಿ.ಆರ್‌.ವಿ.ಸಿಂಗ್‌  2
ಸ್ಟುವರ್ಟ್‌ ಬಿನ್ನಿ ಎಲ್‌ಬಿಡಬ್ಲ್ಯು ಸಂದೀಪ್‌ ಶರ್ಮಾ  19
ಕರುಣ್‌ ನಾಯರ್‌ ಬಿ. ಮನ್‌ಪ್ರೀತ್‌ ಗೋನಿ  21
ವಿನಯ್‌ ಕುಮಾರ್‌ ಬ್ಯಾಟಿಂಗ್‌  29
ಅಭಿಮನ್ಯು ಮಿಥುನ್‌ ಬ್ಯಾಟಿಂಗ್‌  8
ಇತರೆ: (ಲೆಗ್‌ಬೈ 6, ನೋಬಾಲ್‌ 6, ವೈಡ್‌ 1) 13
ವಿಕೆಟ್‌ ಪತನ: 3–189 (ರಾಹುಲ್‌, 67.5), 4–199 (ಗೌತಮ್‌, 70.6), 5–251 (ಬಿನ್ನಿ), 6–319 (ನಾಯರ್‌, 100.5), 7–354 (ಪಾಂಡೆ, 111.3)
ಬೌಲಿಂಗ್‌: ಸಂದೀಪ್‌ ಶರ್ಮಾ 29–3–86–1 (1 ನೋಬಾಲ್‌), ವಿ.ಆರ್‌.ವಿ.ಸಿಂಗ್  22–4–60–1 (2 ನೋಬಾಲ್‌), ತರುವಾರ್‌ ಕೊಹ್ಲಿ11–2–42–0, ಮನ್‌ಪ್ರೀತ್‌ ಗೋನಿ 23–3–70–3 (3 ನೋಬಾಲ್‌, 1 ವೈಡ್‌), ವಿ.ಎಂ.ಚೌಧರಿ 23–3–69–0, ಗುರ್‌ಕೀರತ್ ಸಿಂಗ್‌ 9–0–34–2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT