ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಗುರ್ಕಿಯಲ್ಲಿ ಜನಪದ ಕಲಾ ಸಂಭ್ರಮ

Last Updated 15 ಜನವರಿ 2012, 8:35 IST
ಅಕ್ಷರ ಗಾತ್ರ

ಕೊಲ್ಹಾರ: ಗ್ರಾಮೀಣ ಭಾಗದ ಜನರು ಕಾಯಕದಲ್ಲಿ ತೊಡಗಿದಾಗ, ಆಗುವ ಬೇಸರವನ್ನು ಕಳೆಯಲು ಅವರ ಹೃದಯದಲ್ಲಿ ಹುಟ್ಟಿ, ಬಾಯಿಂದ ಬಾಯಿಗೆ, ಜನರಿಂದ ಜನರಿಗೆ ಸಾಗಿ ಬಂದ ಸಾಹಿತ್ಯವೇ ಜನಪದ ಸಾಹಿತ್ಯ ಎಂದು ಶಾಸಕ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.

ಸಮೀಪದ ಕಲಗುರ್ಕಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹರ್ಷಿ ವಾಲ್ಮೀಕಿ ಸಾಂಸ್ಕೃತಿಕ, ಸಂರಕ್ಷಣಾ ಕಲಾ ಸಂಘ ಶನಿವಾರ ಹಮ್ಮಿಕೊಂಡಿದ್ದ `ವಿಜಾಪುರ ಜಿಲ್ಲೆಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಭ್ರಮ~ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನಪದ ಸಾಹಿತ್ಯ ಆಯಾ ಭೌಗೋಳಿಕ ವಾತಾವರಣಕ್ಕೆ ತಕ್ಕಂತೆ ಆಯಾ ಪ್ರದೇಶದಲ್ಲಿ ಹುಟ್ಟಿಕೊಂಡಿದೆ. ಅವುಗಳನ್ನು ಪ್ರತಿಯೊಬ್ಬರು ಉಳಿಸಿ, ಬೆಳೆಸಬೇಕಾಗಿದೆ ಎಂದರು.

ಮಾಜಿ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಗ್ರಾಮೀಣ  ಭಾರತ ಪ್ರತಿಭೆಗಳ ಕಣಜ, ಆ ಪ್ರತಿಭೆಗಳನ್ನು ಗುರುತಿಸಿ ಅವಕಾಶಗಳನ್ನು ಒದಗಿಸಿಕೊಡುವುದು ಸಾಮಾಜಿಕ ಜವಾಬ್ದಾರಿಗಳಲ್ಲಿ ಪ್ರಮುಖ ಕರ್ತವ್ಯವಾಗಿದೆ ಎಂದರು.

ವಿಜಾಪುರ ಜ್ಞಾನ ಯೋಗಾಶ್ರಮದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಾಹಿತ್ಯವು ಹಿಂಸೆಯ ಬದಲಾಗಿ ಅಹಿಂಸೆಯನ್ನು, ಕ್ರೌರ್ಯದ ಬದಲಾಗಿ ದಯೆಯನ್ನು ಬೆಳೆಸುವುದಾಗಿದೆ. ಇಂದಿನ ಜನತೆ ಗ್ರಾಮೀಣ ಭಾಗದ ಪದ್ಧತಿಯಿಂದ ಹಿಂದೆ ಸರಿದರೇ, ದೈಹಿಕ ಬೌದ್ಧಿಕ ಮನೋಸ್ವಾಸ್ಥ್ಯವನ್ನು ಕಳೆದುಕೊಳ್ಳುವ ಆತಂಕ ಎಲ್ಲರಲ್ಲಿಯೂ ಇದೆ ಎಂದರು.

ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿದರು. ಸೋಮನಗೌಡ ಪಾಟೀಲ, ತಾ.ಪಂ. ಅಧ್ಯಕ್ಷೆ ಕಸ್ತೂರಿಬಾಯಿ ಬಿಷ್ಟಗೊಂಡ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮೀತಿ ಅಧ್ಯಕ್ಷ ಶಿವಾನಂದ ಅವಟಿ, ತಾ.ಪಂ. ಸದಸ್ಯರಾದ ರಾಹುಲ ಕುಬಕಡ್ಡಿ, ನಾಗಪ್ಪ ಮೇಟಿ, ಜನಪದ ಸಾಹಿತಿ ಕಾ.ಹು. ಬಿಜಾಪುರ, ಗ್ರಾ.ಪಂ. ಅಧ್ಯಕ್ಷ ದ್ಯಾಮಣ್ಣ ಕಾಡಸಿದ್ದ, ನಿಂಗಪ್ಪ ಕೇಸಾಪೂರ, ವೀರಭದ್ರಪ್ಪ ದಳವಾಯಿ ಉಪಸ್ಥಿತರಿದ್ದರು.

ಕರ್ನಾಟಕ ಜನಪದ ಕಲಾ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕೆ. ನಾಗರಾಜ ಡೊಳ್ಳು ಬಾರಿಸಿ ಕಲಾ ಸಂಭ್ರಮವನ್ನು ಉದ್ಘಾಟಿಸಿದರು. ಕಲಗುರ್ಕಿಯ ತಾರಾನಾಥ ಸ್ವಾಮೀಜಿ, ಡಾ. ವಿಶ್ವನಾಥ ಮಠ, ರಾಚಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸ್ಫೂರ್ತಿ ಪಾಟೀಲ ಮತ್ತು ಶ್ರೇಯಾ ಪಾಟೀಲ ಸಹೋದರಿಯರು ಪ್ರಸ್ತುತಪಡಿಸಿದ ಪೌರಾಣಿಕ ಗೀತ ನೃತ್ಯ ಹಾಗೂ ಬೆಂಗಳೂರ ಜಿಲ್ಲೆಯ ಹೊಸಕೋಟೆಯ ಸ್ಪೂರ್ತಿ ಮಹಿಳಾ ತಂಡದ 20 ಜನ ಯುವತಿಯರು ಪ್ರಸ್ತುತ ಪಡಿಸಿದ ತಮಟೆ ವಾದ್ಯ ಎಲ್ಲ ಪ್ರೇಕ್ಷರನ್ನು ಮನಸೂರೆಗೊಳಿಸಿದವು.

ಎನ್.ಎಮ್. ಬಿರಾದಾರ (ಚಾಣಕ್ಯ ಕರಿಯರ್, ವಿಜಾಪುರ) ಅವರಿಗೆ ಶೈಕ್ಷಣಿಕ ಕ್ಷೇತ್ರ, ಮಲ್ಲಿಕಾರ್ಜುನ ಕೆಂಗನಾಳ (ಸಮಾಜ ಸೇವೆ), ವೈ.ವೈ. ಶಿರೂರ (ಕೃಷಿ ಕ್ಷೇತ್ರ), ಎಸ್.ಟಿ. ಕಾರಗನೂರ (ಸಾಹಿತ್ಯ ಕ್ಷೇತ್ರ), ಗುರುಪಾದಪ್ಪ ಚಲವಾದಿ (ಸಂಗೀತ ಕ್ಷೇತ್ರ), ಕಲ್ಲಪ್ಪ ಬಿರಾದಾರ (ಜನಪದ ವೈದ್ಯ), ಗಂಗಾಬಾಯಿ ನಡುವಿನಮನಿ (ಜನಪದ ಪದ), ಶ್ರುತಿ ದೇವರಮನಿ (ಕ್ರೀಡಾ ಕ್ಷೇತ್ರ), ಸ್ಫೂರ್ತಿ ಮತ್ತು ಶ್ರೇಯಾ (ನಾಟ್ಯ ಕ್ಷೇತ್ರ) ಇವರನ್ನು ಸನ್ಮಾನಿಸಲಾಯಿತು. ಸಾಹಿತಿ ಜಂಬುನಾಥ ಕಂಚ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಬಿ. ಪಾಟೀಲ ಸ್ವಾಗತಿಸಿದರು. ಚಂದ್ರಶೇಖರ ನುಗ್ಲಿ ಹಾಗೂ ಸಿದ್ದು ಭೂಸರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ಸಿದ್ದು ದಳವಾಯಿ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT