ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಲಾಶೃಂಗ'ದಲ್ಲಿ ಸಂಗೀತೋಪಾಸನೆ

Last Updated 10 ಡಿಸೆಂಬರ್ 2012, 21:01 IST
ಅಕ್ಷರ ಗಾತ್ರ

ಕೆಲವು ಜೀವಗಳಿಗೆ ಸಂಗೀತದ ಹೊರತು ಬೇರೇನೂ ಗೊತ್ತಿರುವುದಿಲ್ಲ. ನುಡಿದರೆ ಸಂಗೀತ. ನಡೆದರೆ ಸಂಗೀತ. ಯಾವುದೋ ಒಂದು ಕೆಲಸವನ್ನು ಕೈಗೆತ್ತಿಕೊಂಡಾಗಲೂ, ಅದಕ್ಕೂ ಸಂಗೀತದ ಸ್ಪರ್ಶವಿರುತ್ತದೆ. ಅಂಥವರಲ್ಲಿ ಖ್ಯಾತ ತಬಲಾ ವಾದಕ ಪಂ. ರವೀಂದ್ರ ಯಾವಗಲ್ ಒಬ್ಬರು.

ಬಾಲ್ಯದಲ್ಲಿ ಅಂಟಿಕೊಂಡ ತಬಲಾ ಸಂಗೀತದ ನಂಟೇ ಇವರ ಜೀವಾಳ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ಪಡೆಯುತ್ತಿದ್ದರೂ ತಮ್ಮ ಮಣ್ಣಿನ ಕಲಾವಿದರಿಗೆ ಏನಾದರೂ ಸಹಾಯ ಮಾಡಬೇಕೆಂಬ ಹಂಬಲ ಇವರದ್ದು. ಇಂಥ ಸಂಗೀತಜೀವಿ ಮಕ್ಕಳ ಕಲೆಯನ್ನು ಪ್ರೋತ್ಸಾಹಿಸು ತ್ತಿರುವ ಪೋಷಕರನ್ನು ಮನದಲ್ಲಿಟ್ಟುಕೊಂಡು `ಶ್ರೀರಾಮ ಕಲಾ ವೇದಿಕೆ'ಯನ್ನು 1978ರಲ್ಲೇ ಸ್ಥಾಪಿಸಿದರು. 2005ರಿಂದ ಸಂಗೀತ ಕಲಾವಿದರಿಗೆ ಸನ್ಮಾನ ಹಾಗೂ ಬಡ ಕಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿದ್ದಾರೆ. ಜೊತೆಗೆ ಸಂಗೀತವನ್ನೇ ಜೀವಿಸುತ್ತಿರುವ ಕಲಾವಿದರಿಗೆ ಏಳು ವರ್ಷಗಳಿಂದ `ಕಲಾಶೃಂಗ' ಎಂಬ ಪ್ರಶಸ್ತಿಯನ್ನು ನೀಡಿ ಸನ್ಮಾನಿಸುತ್ತ ಬಂದಿದೆ.

ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಂಗೀತ ಸಮ್ಮೇಳನ ಕಳೆದ ವಾರ ನಗರದ ವೈಯಾಲಿಕಾವಲ್‌ನಲ್ಲಿರುವ `ಕೃಷ್ಣದೇವರಾಯ ಕಲಾ ಮಂದಿರ'ದಲ್ಲಿ ಜರುಗಿತು.

`ಕಲಾಶೃಂಗ' ಪ್ರಶಸ್ತಿಯನ್ನು ಶ್ರೇಷ್ಠ ಪಿಟೀಲು ವಿದ್ವಾಂಸ ಎಂ. ಎಸ್. ಗೋಪಾಲಕೃಷ್ಣನ್ ಅವರಿಗೆ ನೀಡಲು ತೀರ್ಮಾನಿಸಿದ್ದ ಸಂಸ್ಥೆ, ಅವರ ಅನುಪಸ್ಥಿತಿಯ ಕಾರಣ ಅವರು ಇದ್ದಲ್ಲಿಗೇ ಹೋಗಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಪ್ರಕಟಿಸಿದರು. ಕಾರ್ಯಕ್ರಮದಲ್ಲಿ ಎನ್.ವಿ. ಗೋಪಿನಾಥ್ (ಸಂಗೀತ ಗುರು), ಅಶ್ವಥಮ್ಮ ಅನಂತರಾಮಯ್ಯ (ವಾದ್ಯ ತಯಾರಕರು), ಎಸ್.ಎನ್. ಚಂದ್ರಶೇಖರ್ (ಸಂಗೀತ ವಿಮರ್ಶಕ) ಡಿ.ಆರ್. ಬದ್ರಿನಾಥ್ (ಶ್ರೋತೃ) ಹಾಗೂ ಬಾಬುರಾವ್ ಹಾನಗಲ್ (ಸಂಗೀತ ಸಂಯೋಜಕ) ಹೀಗೆ ಸಂಗೀತ ಕ್ಷೇತ್ರದ ಬೇರೆ ಬೇರೆ ಮಜಲುಗಳಲ್ಲಿ ದುಡಿಯುತ್ತಿರುವ ಹಿರಿಯ ಜೀವಗಳನ್ನು ಸನ್ಮಾನಿಸಲಾಯಿತು. ಅಲ್ಲದೇ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿ ಪ್ರೋತ್ಸಾಹಿಸಿದರು.

ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಅತಿಥಿಯಾಗಿ ಪಾಲ್ಗೊಂಡಿದ್ದರು. `ಕಣ್ಣಿಗೆ ಕಾಣುವ ಸಾಹಿತ್ಯವು ಮನಸ್ತಾಪಗಳನ್ನು ಹುಟ್ಟುಹಾಕುತ್ತದೆ. ಆದರೆ ಕಿವಿಗೆ ಕೇಳಿಸುವ ನಾದ, ಮೈಯನ್ನೆಲ್ಲಾ ಆವರಿಸಿಕೊಂಡು ಮನಸ್ಸಿಗೆ ಸಂತೋಷ ಕೊಡುತ್ತದೆ. ನಾದವನ್ನು ಅನುಭವಿಸಲು ಕಿವಿಯೊಂದಿದ್ದರೆ ಸಾಕು' ಎಂದ ಅವರು, ಯಾವಗಲ್ ಅವರ ಕಲೋಪಾಸನೆಯನ್ನು ಮುಕ್ತ ಕಂಠದಿಂದ ಹೊಗಳಿದರು.

ಸಭಾ ಕಾರ್ಯಕ್ರಮದ ಮುನ್ನ ಮಾ. ಹೇಮಂತ್ ಜೋಷಿ ಹಾಗೂ ಮಾ. ರೂಪಕ್ ವೈದ್ಯ ಅವರ ತಬಲಾ ಜುಗಲ್ಬಂದಿ ನಡೆಯಿತು. ತೀನ್ ತಾಳದಲ್ಲಿ ಆರಂಭವಾದ ಇವರಿಬ್ಬರ ತಬಲಾ ವಾದನ ಹಿರಿಯರ, ಶ್ರೋತೃಗಳ ಮೆಚ್ಚುಗೆಯ ಹೂನಗೆ ಹಾಗೂ ಕರತಾಡನವನ್ನು ಪಡೆಯುತ್ತಾ ಹೋಯಿತು. ಒಂದಷ್ಟೂ ಅಳುಕಿಲ್ಲದೇ ಬೋಲ್ ತಾನ್‌ಗಳನ್ನು ತಾಳಕ್ಕೆ ಸರಿಯಾಗಿ ಹೇಳಿ ಅದೇ ತಾಳವನ್ನು ತಬಲಾ ನಾದದಿಂದಲೂ ಹೊಮ್ಮಿಸುತ್ತಿದ್ದ ಹೇಮಂತ್ ಹಾಗೂ ಏಳರ ಹರೆಯದ ಪುಟ್ಟ ಹುಡುಗ, ಕುಳಿತಾಗ ತಬಲಾದಷ್ಟೇ ಎತ್ತರ ಇರುವ ರೂಪಕ್‌ನ ತಬಲಾ ನುಡಿಸಾಣಿಕೆ ಎಲ್ಲರನ್ನೂ ಬೆರಗುಗೊಳಿಸಿತು.

ಕೊನೆಯಲ್ಲಿ ಪಂ. ಶ್ರೀಪಾದ ಹೆಗಡೆ (ಗಾಯನ) ಹಾಗೂ ಪಂ. ಪ್ರವೀಣ್ ಗೋಡ್ಖಿಂಡಿ (ಬಾನ್ಸುರಿ) ಅವರ ಜುಗಲ್‌ಬಂದಿಯಿತ್ತು. ಮೊದಲಿಗೆ ಸೋಲೊ ಪ್ರದರ್ಶನ ನೀಡಿದ ಶ್ರೀಪಾದರು ಯಮನ್ ರಾಗ (ಥಾಟ್‌ಯಮನ್ ಕಲ್ಯಾಣ್ )ವನ್ನು ಹಾಡಿದರು. ಧೃತ್ ತೀನ್ ತಾಳದಲ್ಲಿ ಆರಂಭವಾದ ರಾಗ `ಬದರ ಮೋರಾ' ಎಂಬ ಬಂದೀಶ್‌ನಲ್ಲಿ ತೆರೆದುಕೊಳ್ಳುತ್ತಾ ಹೋಗಿ `ಜಾನೆ ನಹಿ ದೇ' ಎಂಬ ಚೀಸ್‌ನಲ್ಲಿ ವೇಗವನ್ನು ಪಡೆದುಕೊಂಡಿತು. ಕೊನೆಯಲ್ಲಿ ಪ್ರಸ್ತುತಪಡಿಸಿದ ತರಾನಾ ಹಾಗೂ ಸರ್ಗಮ್‌ಗಳ ಗಾಯನ ಶ್ರೋತೃ ವರ್ಗದ ಮನಸೂರೆಗೊಂಡಿತು.

ಹಂಸಧ್ವನಿ (ಥಾಟ್‌ಬಿಲಾವಲ್ ) ರಾಗದಲ್ಲಿ ಆರಂಭವಾದ ಜುಗಲ್‌ಬಂದಿ ರೂಪಕ್ ತಾಳದಲ್ಲಿ ಸಾಗಿತು. ಆರಂಭದಲ್ಲಿ `ಬಾನ್ಸುರಿಯ ನಾದ ಕೇಳುತ್ತಿಲ್ಲವಲ್ಲ' ಎಂದುಕೊಳ್ಳುವಷ್ಟರಲ್ಲಿ `ಸಕಲ ದುಖಃ' ಬಂದಿಶ್‌ನ ಆಗಮನ ಅದಕ್ಕೆ ಜೀವಕಳೆಯನ್ನು ತಂದಿತು. ಕೊನೆಯಲ್ಲಿ ಜನಪ್ರಿಯ ಬಂದಿಶ್ `ಲಾಗಿ ಲಗನ ಪತಿ ಸಖಿ'ಯ ಗಾಯನ ಹಾಗೂ ವಾದನ ಶ್ರೋತೃಗಳಿಗೆ ಖುಷಿ ನೀಡಿತು. ಬಾನ್ಸುರಿ ಹಾಗೂ ತಬಲಾಗಳ `ಸವಾಲ್ ಜವಾಬ್'ಗಳು ಶ್ರೋತೃಗಳನ್ನು ರಂಜಿಸಿದವಲ್ಲದೇ ತಬಲಾ ವಾದಕರ ಕ್ರಿಯಾಶೀಲತೆಯನ್ನು ಅನಾವರಣಗೊಳಿಸಿದವು. ತಬಲಾದಲ್ಲಿ ರವೀಂದ್ರ ಯಾವಗಲ್ ಹಾಗೂ ಅವರ ಪುತ್ರ ಕಿರಣ್ ಯಾವಗಲ್ ಅವರ ಜುಗಲ್‌ಬಂದಿ ಸಾಥ್ ಗಮನ ಸೆಳೆಯಿತು. ಸತೀಶ್ ಕೊಳ್ಳಿ ಹಾರ್ಮೋನಿಯಂನಲ್ಲಿ ಉತ್ತಮ ಸಾಥ್ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ವಾನ್ ಆರ್. ಕೆ. ಶ್ರೀಕಂಠನ್, ಹಿರಿಯ ತಬಲಾ ವಿದ್ವಾಂಸ ಶ್ರೇಷ್ಠ ತಬಲಾ ಗುರು ಪಂ. ಶೇಷಗಿರಿ ಹಾನಗಲ್ಲ ಹಾಗೂ ಪಂ. ವಿನಾಯಕ ತೊರವಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT