ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು ನಿಕ್ಷೇಪ ಮಂಜೂರಾತಿ : ದಾಖಲೆ ಸಂಗ್ರಹ ಆರಂಭಿಸಿದ ಸಿಬಿಐ

Last Updated 5 ಜೂನ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2006-09ರ ಅವಧಿಯಲ್ಲಿ ಕಲ್ಲಿದ್ದಲು ನಿಕ್ಷೇಪಗಳ ಮಂಜೂರಾತಿ ಪಡೆದ ಕಂಪೆನಿಗಳ ದಾಖಲೆಗಳನ್ನು ಕಲೆ ಹಾಕುವ ಪ್ರಕ್ರಿಯೆಯನ್ನು ಸಿಬಿಐ ಆರಂಭಿಸಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಸಿಬಿಐ ಈಗಾಗಲೇ ಕಲ್ಲಿದ್ದಲು ಸಚಿವಾಲಯವನ್ನು ಕೋರಿದೆ.

ಕಲ್ಲಿದ್ದಲು ನಿಕ್ಷೇಪಗಳ ಮಂಜೂರಾತಿ ಮತ್ತು ಅವುಗಳ ಬಳಕೆಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಕೇಂದ್ರ ವಿಚಕ್ಷಣಾ ಆಯೋಗ ಪ್ರಸ್ತಾಪಿಸಿರುವ ಅಂಶಗಳ ಬಗ್ಗೆಯೂ ಸಿಬಿಐ ಕೂಲಂಕಷ ಪರಿಶೀಲನೆ ನಡೆಸುತ್ತಿದೆ.

ಸಿಬಿಐ ಈ ಕುರಿತು ಶುಕ್ರವಾರ ಪ್ರಾಥಮಿಕ ತನಿಖೆಯನ್ನು ಆರಂಭಿಸಿದೆ. ಯಾವುದೇ ವ್ಯಕ್ತಿಯನ್ನು ತನಿಖೆಗೆ ಒಳಪಡಿಸುವ ಅಧಿಕಾರ ಕೂಡ ಸಿಬಿಐಗೆ ಇದೆ.

ಕಲ್ಲಿದ್ದಲು ನಿಕ್ಷೇಪ ಮಂಜೂರಾತಿ ವೇಳೆ ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಸರ್ಕಾರ `ಮೊದಲು ಬಂದವರಿಗೆ ಮೊದಲು ಆದ್ಯತೆ~ ನೀತಿ ಅನುಸರಿಸಿತ್ತು ಎಂದು ಬಿಜೆಪಿ ನಾಯಕರಾದ ಪ್ರಕಾಶ್ ಜಾವಡೇಕರ್ ಮತ್ತು ಹಂಸರಾಜ್ ಅಹಿರ್ ಅವರು ಕೇಂದ್ರ ವಿಚಕ್ಷಣಾ ಆಯೋಗಕ್ಕೆ ದೂರು ನೀಡಿದ್ದರು. ನಂತರ ಆಯೋಗವು ಈ ಕುರಿತ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತ್ತು.

ಕಲ್ಲಿದ್ದಲು ನಿಕ್ಷೇಪಗಳ ಹರಾಜು ಪ್ರಕ್ರಿಯೆಯನ್ನು ಎರಡು ವರ್ಷಗಳ ಕಾಲ ವಿಳಂಬಗೊಳಿಸಲಾಗಿತ್ತು. ಇದರ ಹಿಂದೆ ಖಾಸಗಿ ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವ ದುರುದ್ದೇಶವಿತ್ತು ಎಂದೂ ದೂರಲಾಗಿದೆ.

ಕಲ್ಲಿದ್ದಲು ನಿಕ್ಷೇಪಗಳ ಮಂಜೂರಾತಿಯಲ್ಲಿ ಸರ್ಕಾರ ಅನುಸರಿಸಿದ ದೋಷಪೂರಿತ ನೀತಿಯಿಂದ ಖಾಸಗಿ ಕಂಪೆನಿಗಳಿಗೆ ಅನಾಯಾಸವಾಗಿ 1.80 ಲಕ್ಷ ಕೋಟಿ ರೂಪಾಯಿ ಲಾಭವಾಗಿರುವ ಕುರಿತು ಮಹಾಲೇಖಪಾಲರ ವರದಿ ಪ್ರಸ್ತಾಪಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ಆದರೆ  ಸರ್ಕಾರ, ಅಂತಹ ಯಾವ ಸಿಎಜಿ ವರದಿಯೂ ತನಗೆ ಸಲ್ಲಿಕೆಯಾಗಿಲ್ಲ ಎಂದು ಸಮರ್ಥಿಸಿಕೊಂಡಿತ್ತು.

ಮಂಜೂರಾತಿಗೆ ಮೂರು ಮಾರ್ಗ: ಈ ಮಧ್ಯೆ, ನಿಕ್ಷೇಪಗಳ ಮಂಜೂರಾತಿಗೆ ಸಂಬಂಧಿಸಿದ ವಿವಾದಗಳ ನಡುವೆಯೇ, ವಿವಿಧ ಬಗೆಯ ಕಂಪೆನಿಗಳಿಗೆ ಗಣಿ ಪ್ರದೇಶ ಮಂಜೂರು ಮಾಡಲು ಮೂರು ವಿಧಾನಗಳನ್ನು ಅನುಸರಿಸಲು ನಿರ್ಧರಿಸಿರುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

ಹರಾಜು, ಶುಲ್ಕಾಧಾರಿತ ಸ್ಫರ್ಧಾತ್ಮಕ ಹರಾಜು ಮತ್ತು ಸರ್ಕಾರಿ ಹಂಚಿಕೆ- ಇವು ಮೂರು ವಿಧಾನಗಳಾಗಿವೆ. ಈ ಕುರಿತು ಕಲ್ಲಿದ್ದಲು ಸಚಿವಾಲಯವು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನೂ ಬರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT