ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿನಗುಡ್ಡದಲ್ಲಿ ಕಲ್ಲರಳಿ ಹಣ್ಣಾಗಿ...

40 ಬಗೆಯ ಹಣ್ಣಿನ ಸಸ್ಯಗಳ ಪೋಷಣೆ
Last Updated 16 ಸೆಪ್ಟೆಂಬರ್ 2013, 8:28 IST
ಅಕ್ಷರ ಗಾತ್ರ

ಚಿತ್ರದುರ್ಗ: ಕನ್ನಡದ ಚಲನಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ ಅವರು ಚಿತ್ರದುರ್ಗದಲ್ಲಿ ‘ಕಲ್ಲರಳಿ ಹೂವಾಗಿ’ ಚಿತ್ರ ನಿರ್ಮಿಸಿದರು. ಆದರೆ, ರಾಜ್ಯ ಸಾರಿಗೆ ಆಯುಕ್ತ ಕೆ.ಅಮರನಾರಾಯಣ್‌ ಕಲ್ಲಿನ ಗುಡ್ಡದಲ್ಲಿ 40 ಬಗೆಯ ಹಣ್ಣಿನ ಸಸಿಗಳನ್ನು ಬೆಳೆಸುವ ಕಾಯಕಕ್ಕೆ ಈಗಾಗಲೇ ಚಾಲನೆ ನೀಡಿದ್ದು, ಆ ಪ್ರದೇಶವನ್ನು ಕಲ್ಲರಳಿ ಹಣ್ಣಾಗಿ ಮಾಡಲು ಹೊರಟಿದ್ದಾರೆ.

ಇದು ತಾಲ್ಲೂಕಿನ ಕಾತ್ರಾಳ್‌ ಕೆರೆಯ ಬಳಿ ಇರುವ ಆದಿಚುಂಚನಗಿರಿ ಮಠದ ಗೋಶಾಲೆಯಲ್ಲಿ ಭಾನುವಾರ ನಡೆದ ಪರಿಸರ ನಡಿಗೆ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯ.

ರಾಜ್ಯ ಸಾರಿಗೆ ಆಯುಕ್ತ ಅಮರನಾರಾಯಣ್‌ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬೋಳು ಗುಡ್ಡಕ್ಕೆ ಬನದ ಮೆರುಗು, ಬೆಳ್ಳಿ ಗುಡ್ಡಕ್ಕೆ ಹಸಿರ ಚಿಗುರು’ ಎನ್ನುವ ಶೀರ್ಷಿಕೆಯೊಂದಿಗೆ ಬರದ ಈ ನಾಡನ್ನು ಬನಗಳ ಬೀಡಾಗಿ ಮಾಡುವ ಪ್ರಯತ್ನಕ್ಕೆ ನಾಗರಿಕರು, ಅಧಿಕಾರಿಗಳು, ಶಾಸಕರು, ಸಂಸತ್‌ ಸದಸ್ಯರು, ಸಚಿವರು ಸೇರಿದಂತೆ ಇಲ್ಲಿನ ಪ್ರತಿಯೊಬ್ಬ ಜನಪ್ರತಿನಿಧಿಗಳ ಹಾಗೂ ಸರ್ಕಾರದ ಸಹಕಾರ ಅತ್ಯಗತ್ಯ. ಈ ಮೂಲಕ ಚಿತ್ರದುರ್ಗ ಸೇರಿದಂತೆ ರಾಜ್ಯದ 30 ಜಿಲ್ಲೆಗಳು ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸಿ ಪ್ರವಾಸಿಗರನ್ನು ಕೈಬೀಸಿ ಕರೆಯುವಂತಹ ಸುಂದರ ಪ್ರವಾಸಿ ತಾಣವನ್ನಾಗಿ ಮಾಡುವ ಉದ್ದೇಶವಿದೆ ಎಂದರು.

ವಿಐಪಿಗಳು ಪರಿಸರ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೇವಲ ಗಿಡಗಳನ್ನು ನೆಟ್ಟು ಹೋಗುತ್ತಾರೆ. ಜತೆಗೆ ಅವುಗಳನ್ನು ಪೋಷಣೆ ಮಾಡಲು ಸಹ ಮುಂದಾಗುವುದಿಲ್ಲ. ಆದರೆ,
ಕಲ್ಲುಗಳೇ ಹೆಚ್ಚಿರುವಂಥ ಇಂತಹ ಪ್ರದೇಶದಲ್ಲಿ ನಾವು ನೆಡುತ್ತಿರುವ ಹಣ್ಣಿನ ಗಿಡಗಳನ್ನು ಎಲ್ಲ ರೀತಿಯಿಂದಲೂ ಸಂರಕ್ಷಿಸಿ ಪೋಷಿಸಲಾಗುವುದು. ಅದಕ್ಕಾಗಿ ಒಂದು ಗಿಡಕ್ಕೆ ` 1ಸಾವಿರ ಖರ್ಚಾಗುತ್ತದೆ. ಐದು ವರ್ಷಗಳ ಕಾಲ ಆ ಗಿಡವನ್ನು ರಕ್ಷಿಸುವ ಜವಾಬ್ದಾರಿ ನಮ್ಮದಾಗಿದೆ. ಇಲ್ಲಿ ಗಿಡ ನೆಡಲು ಇಚ್ಛಿಸುವ ನಾಗರಿಕರು ತಮ್ಮ ಪ್ರೀತಿ ಪಾತ್ರರ ಹೆಸರಿನಲ್ಲಿ ಗಿಡ ಬೆಳೆಸಲು ಅವಕಾಶವಿದ್ದು, ಖರ್ಚಿನ ಮೊತ್ತವನ್ನು ಅವರಿಂದ ಸಂಗ್ರಹಿಸಲಾಗುವುದು ಎಂದರು.

ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ಸನ್ಯಾಸಿ, ಸಾಧು ಹಾಗೂ ಸಂತರು ಮನಸ್ಸು ಮಾಡಿದರೆ ಕೇವಲ ರೋಗರುಜಿನಗಳು ಗುಣಮುಖ ವಾಗುವುದಷ್ಟೇ ಅಲ್ಲ. ದೇಶದಲ್ಲಿ ಪ್ರಾಕೃತಿಕ ಸಂಪತ್ತನ್ನು ವೃದ್ಧಿಸಬಹುದು ಎಂಬುದನ್ನು ಈ ಪ್ರದೇಶದಲ್ಲಿ ಆದಿಚುಂಚನಗಿರಿಯ ಬಾಲಗಂಗಾಧರ ನಾಥ ಸ್ವಾಮೀಜಿ ಮಾಡಿ ತೋರಿಸಿದ್ದಾರೆ ಎಂದರು.

ಈ ಗೋಶಾಲೆ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಸಮೀಪವಿರುವುದರಿಂದ ಮುಖ್ಯ ದ್ವಾರದಲ್ಲಿ ಸುಮಾರು 50 ಅಡಿ ಎತ್ತರದ ಈಶ್ವರ ವಿಗ್ರಹ ಹಾಗೂ ಸ್ವಾಮೀಜಿ ಅವರ ಜೀವನ ಚರಿತ್ರೆಯ ಮೂರ್ತಿಗಳನ್ನು ಸ್ಥಾಪಿಸುವ ಉದ್ದೇಶವಿದೆ ಎಂದರು. ಮಠದ ಆಡಳಿತಾಧಿಕಾರಿ ರಾಮಕೃಷ್ಣೇ ಗೌಡ, ನಾಗರಾಜ್‌ ಸಂಗಮ್‌, ಶೇಷಣ್ಣಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT