ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಗಣಿಗಾರಿಕೆ, ಜಲ್ಲಿ ಕ್ರಶರ್ ವಿರುದ್ಧ ಲೋಕಾಯುಕ್ತಕ್ಕೆ ದೂರು

Last Updated 17 ಜುಲೈ 2012, 9:45 IST
ಅಕ್ಷರ ಗಾತ್ರ

ಕೋಲಾರ: ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಶರ್‌ಗಳನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆಗಳನ್ನು ಹಮ್ಮಿಕೊಂಡರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಜಿಲ್ಲೆಯ ಮಾಲೂರು ತಾಲ್ಲೂಕಿನ ಕೆಜಿ ಹಳ್ಳಿ ಸೇರಿದಂತೆ 6 ಗ್ರಾಮದ ನಿವಾಸಿಗಳು ಈಗ ಲೋಕಾಯುಕ್ತದ ಮೊರೆ ಹೋಗಿದ್ದಾರೆ.

ಇಡೀ ಗ್ರಾಮ ಸಮುದಾಯದ ಜೀವನವೇ ಏರುಪೇರಾಗಲು ಕಾರಣರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿಗಳು ಮತ್ತು ಜಲ್ಲಿ ಕ್ರಶರ್ ನಡೆಸಲು ಪಡೆದ ಪರವಾನಗಿಯ ನಿಯಮಗಳನ್ನು ಮೀರಿ ದಂಧೆ ನಡೆಸುತ್ತಿರುವ ರಮೇಶಗೌಡ ಎಂಬುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜುಲೈ 4ರಂದು ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ. ಖುದ್ದು ಸ್ಥಳ ಪರಿಶೀಲನೆ ನಡೆಸಬೇಕು ಎಂದೂ ಕೋರಿದ್ದಾರೆ.

ತಾಲ್ಲೂಕಿನ ಟೇಕಲ್ ಹೋಬಳಿಯ ಕೆ.ಜಿ ಹಳ್ಳಿ, ಹುಣಸಿಕೋಟೆ, ದಾಸರಹಳ್ಳಿ, ವೆಂಕಟಾಪುರ, ಕೆಂಪನಹಳ್ಳಿ ಮತ್ತು ಉಳ್ಳೇರಹಳ್ಳಿಯಲ್ಲಿ ಜಲ್ಲಿಕ್ರಶರ್‌ನಿಂದ ಜೀವನ ಸಮಸ್ಯಾತ್ಮಕವಾಗಿದೆ.  ಕೆ.ಜಿ ಹಳ್ಳಿ ಗ್ರಾಮದ ಸರ್ವೆ ನಂ 73ರ ಗೋಮಾಳ ಹಾಗೂ ಆ ಗ್ರಾಮದ ಸಮೀಪದಲ್ಲಿರುವ ಕೊರಚನೂರು ಗ್ರಾಮದ ಸರ್ವೆ ನಂ 10ರ ಗೋಮಾಳದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ರದ್ದು ಮಾಡಬೇಕು.

ಅದಕ್ಕೆ ಅಕ್ರಮವಾಗಿ ಪರವಾನಗಿ ನೀಡಿರುವ ಹಿರಿಯ ಭೂ ವಿಜ್ಞಾನಿಗಳಾದ ಎಸ್.ಆರ್.ನಾಗರಾಜ್ ಮತ್ತು ಶಶಿಕಾಂತ್ ಹಾಗೂ ಸಂಬಂಧಿಸಿದ ಇತರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರ ಪರವಾಗಿ ಹುಣಸಿಕೋಟೆ ನಿವಾಸಿ, ಶಿಕ್ಷಕ ಎ.ಕೆ.ವೆಂಕಟೇಶ್ ಎಂಬುವವರು ದೂರಿನಲ್ಲಿ ಕೋರಿದ್ದಾರೆ. ಒಟ್ಟು 20 ಮಂದಿ ದೂರಿಗೆ ಸಹಿ ಮಾಡಿದ್ದಾರೆ.

ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸ್ಥಳದಿಂದ ಕೆ.ಜಿಹಳ್ಳಿಯ ನಾಡ ಕಚೇರಿ, ನೆಮ್ಮದಿ ಕೇಂದ್ರ, ಬಾಲಕರ ಸರ್ಕಾರಿ ವಿದ್ಯಾರ್ಥಿ ನಿಲಯ, ದೇವಾಲಯಗಳು, ಕೆರೆ, ಬಾವಿ, ಕುಂಟೆಗಳು, ಕೆ.ಜಿ ಹಳ್ಳಿಯ ಪರಿಶಿಷ್ಟ ಜಾತಿ, ವರ್ಗದವರ ವಾಸಸ್ಥಳ, ಹೋಟೆಲ್‌ಗಳು ಕೇವಲ 400 ಮೀಟರ್ ವ್ಯಾಪ್ತಿಯಲ್ಲಿವೆ.
 
ಸರ್ಕಾರಿ ಆಸ್ಪತ್ರೆ ಕೇವಲ ಅರ್ಧ ಕಿ.ಮೀ. ದೂರದಲ್ಲಿದೆ. ಕೆಂಪನಹಳ್ಳಿ, ದಾಸರಹಳ್ಳಿ ಗ್ರಾಮ, ಶಿವನ ದೇವಾಲಯ 1 ಕಿಮೀ ವ್ಯಾಪ್ತಿಯಲ್ಲಿದೆ. ಸುತ್ತಮುತ್ತಲಿನ ಗ್ರಾಮಸ್ಥರ ಹೊಲಗದ್ದೆಗಳು ಗಣಿಗಾರಿಕೆ ಪ್ರದೇಶದ ಆಸುಪಾಸಿನಲ್ಲೇ ಇವೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ವಿದ್ಯುತ್ ಸಂಗ್ರಹಣಾ ಮತ್ತು ನಿಯಂತ್ರಣ ಘಟಕದ ಅಂತರ ಕೇವಲ 20 ಮೀಟರ್ ಇದ್ದರೂ ಜಲ್ಲಿಕ್ರಶರ್ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ಸುಪ್ರಿಂ ಕೋರ್ಟ್: ಸುಪ್ರಿಂ ಕೋರ್ಟ್ ಅಧಿಸೂಚನೆ ಪ್ರಕಾರ ಯಾವುದೇ ಸ್ಥಳದಲ್ಲಿ ಗಣಿಗಾರಿಕೆ ನಡೆಯಬೇಕಾದರೆ ಅದು ಸಾರ್ವಜನಿಕ ಸ್ಥಳದಿಂದ ಕನಿಷ್ಠ 2 ಕಿ.ಮೀ ದೂರವಿರಬೇಕು. ಆದರೆ ಗಣಿ ಮಾಲೀಕರು ನಿಯಮಗಳನ್ನು ಉಲ್ಲಂಘಿಸಿ ಕೇವಲ 400 ಮೀಟರ್ ಅಂತರದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಅದರಿಂದ ಸಾರ್ವಜನಿಕರಿಗೆ ನಿತ್ಯವೂ ತೊಂದರೆ, ಕಿರಿಕಿರಿ ಉಂಟು ಮಾಡುತ್ತಿರುವುದು ಅಪರಾಧವಾಗಿದೆ ಎಂದು ದೂರಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಜಲ್ಲಿಕ್ರಶರ್ ನಡೆಸುವವರು ಬಂಡೆಗಳನ್ನು ಸಿಡಿಸಲು ಬಳಸುವ ಸ್ಫೋಟಕ ಸಿಡಿಮದ್ದುಗಳು ಮಾರಣಾಂತಿಕ ಪರಿಣಾಮ ಬೀರುತ್ತಿವೆ. ಈ ಸ್ಫೋಟಕಗಳಿಂದ ಹೊರಬರುವ ರಾಸಾಯನಿಕ ಹೊಗೆಯಿಂದ ಪ್ರಾಣಿ- ಪಕ್ಷಿಗಳು ಸಮೀಪದಲ್ಲಿರುವ ಅರಣ್ಯ ವಲಯದಿಂದ ವಲಸೆ ಹೋಗುತ್ತಿವೆ. ಸಿಡಿತದ ಸಂದರ್ಭದಲ್ಲಿ ಮನೆಗಳು ಭೂಕಂಪನಕ್ಕೆ ಒಳಗಾದ ರೀತಿ ಅದುರುತ್ತವೆ. ಕೆಲವು ಮನೆಗಳು ಬಿರುಕು ಬಿಟ್ಟಿವೆ. ಜನ ನೆಮ್ಮದಿಯಿಂದ ಬದುಕಲು ಭಯಪಡುವ ಸ್ಥಿತಿ ಎದುರಾಗಿದೆ ಎಂದು ಅಲವತ್ತುಕೊಂಡಿದ್ದಾರೆ.

ಸಾವು: ಬಂಡೆ ಸಿಡಿಯುವ ಸಂದರ್ಭದಲ್ಲಿ ಕೆಲವು ದಿನಗಳ ಹಿಂದೆ ಇಬ್ಬರು ಕೂಲಿಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅದೇ ರೀತಿ ಹಿಂದೆಯೂ ಸಾವು-ನೋವುಗಳು ಸಂಭವಿಸಿವೆ. ಈ ನಿಟ್ಟಿನಲ್ಲಿ ಕಲ್ಲು ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಖುದ್ದು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ಅಧಿಕಾರಿಗಳು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜಿಲ್ಲೆಯ ಲೋಕಾಯುಕ್ತ ಅಧೀಕ್ಷಕರಿಗೆ ದೂರು ನೀಡಿ 10 ದಿನಗಳಾಗಿವೆ. ಈ ನಡುವೆ ಬೆಂಗಳೂರಿಗೆ ತೆರಳಿ ಲೋಕಾಯುಕ್ತ ಡಿಐಜಿ ಅರುಣ್ ಚಕ್ರವರ್ತಿಯವರನ್ನೂ ಭೇಟಿ ಮಾಡಿ ನಮ್ಮ ಸಮಸ್ಯೆಗಳ ಕಡೆಗೆ ಗಮನ ಸೆಳೆಯಲಾಗಿದೆ. ಅವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ದೂರುದಾರ ವೆಂಕಟೇಶ್ ~ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT