ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಸಂಗ್ರಹ ಯೋಜನೆ ಆರಂಭ

ಗೋಣಿಕೊಪ್ಪಲು ಸ್ವಚ್ಛತೆಗೆ ಸಿದ್ಧತೆ
Last Updated 13 ಡಿಸೆಂಬರ್ 2013, 7:30 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕಸದ ಕೊಂಪೆಯಾಗಿದ್ದ  ಗೋಣಿಕೊಪ್ಪಲನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಗ್ರಾಮ ಪಂಚಾಯಿತಿ ಇದೀಗ ಮುಂದಾಗಿದೆ. ಪ್ಲಾಸ್ಟಿಕ್‌ ಚೀಲ ಕೊಟ್ಟು ಕಸ ಸಂಗ್ರಹಿಸುವ ವಿನೂತನ ಯೋಜನೆಗೆ ಚಾಲನೆ ನೀಡಿದೆ.

ಈಚೆಗೆ ನಡೆದ ಗ್ರಾಮ ಪಂಚಾಯಿತಿ ಸಭೆಯಲ್ಲಿ ಕಸ ವಿಲೇವಾರಿ ಬಗ್ಗೆ ತೀರ್ಮಾನ ಕೈಗೊಂಡ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಪಟ್ಟಣದ ಅಂಗಡಿ, ಹೋಟೆಲ್‌, ಬೇಕರಿ ಹಾಗೂ ವಾಸದ ಮನೆಗಳಿಗೆ 50 ಕಿಲೋ ತೂಕ ತುಂಬಿಸುವ ಪ್ಲಾಸ್ಟಿಕ್‌ ನೆಟ್‌ ಚೀಲ ನೀಡುತ್ತಿದ್ದಾರೆ. ಕಸದಿಂದ ಪ್ಲಾಸ್ಟಿಕ್‌ ಬೇರ್ಪಡಿಸಿ ಪ್ರತ್ಯೇಕ ಚೀಲದಲ್ಲಿ ಹಾಕಬೇಕು. ಉಳಿದ ಎಲ್ಲ  ಕಸವನ್ನು ಮತ್ತೊಂದು ಚೀಲದಲ್ಲಿ ತುಂಬಿಸಬೇಕು. ಮೊದಲ ಬಾರಿಗೆ 7 ರೂಪಾಯಿ ನೀಡಿ ಚೀಲ ಖರೀದಿಸಬೇಕಾಗಿದೆ. ಬಳಿಕ ಉಚಿತವಾಗಿ ಸಿಗಲಿದೆ.

ಕಸ ಸಂಗ್ರಹಿಸಲು ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರು ಪ್ರತಿ ದಿನ ಬೆಳಿಗ್ಗೆ ಅಂಗಡಿ, ಹೋಟೆಲ್‌ ಬಳಿಗೆ ಬರಲಿದ್ದಾರೆ. ಈ ಸಂದರ್ಭದಲ್ಲಿ ಕಸ ತುಂಬಿದ ಬ್ಯಾಗ್‌ ಅನ್ನು ಪೌರ ಕಾರ್ಮಿಕರಿಗೆ ನೀಡಬೇಕು. ಪ್ಲಾಸ್ಟಿಕ್‌ ತುಂಬಿದ  ಚೀಲವನ್ನು  ವಾರಕ್ಕೆ ಒಂದು ಸಲ ಸಂಗ್ರಹಿಸಲಾಗುತ್ತದೆ. ಇದಕ್ಕಾಗಿ ನೇಮಕಗೊಂಡಿರುವ ನೌಕರ  ಪ್ಲಾಸ್ಟಿಕ್‌ ತುಂಬಿದ ಚೀಲ ಪಡೆದು ಮತ್ತೊಂದು ಖಾಲಿ ಚೀಲ ನೀಡಲಿದ್ದಾರೆ. ಕಸದ ಪಡೆದುಕೊಂಡ ನೌಕರ  ದಾಖಲೆಗೆ ಸಂಬಂಧಪಟ್ಟ ಪುಸ್ತಕದಲ್ಲಿ ಸಹಿ ಮಾಡಬೇಕಾಗಿದೆ.

ಯಾವುದೇ ಕಾರಣಕ್ಕೂ ಕಸದೊಂದಿಗೆ ಪ್ಲಾಸ್ಟಿಕ್ ಸೇರಿಸುವಂತಿಲ್ಲ. ಸೇರಿಸಿದ್ದು ಕಂಡರೆ ಮೊದಲ ಬಾರಿಗೆ ₨ 500 ದಂಡ ವಿಧಿಸಲಾಗುತ್ತದೆ. 2ನೇ ಬಾರಿಗೆ  ₨ 1,000  ದಂಡ  ಬೀಳಲಿದೆ.  ಮತ್ತೂ ಮುಂದುವರಿದರೆ ದಂಡದ  ಪ್ರಮಾಣ ದ್ವಿಗುಣಗೊಳ್ಳಲಿದೆ. ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯಿತಿ ಗಂಭೀರ ಚಿಂತನೆ ನಡೆಸಿದೆ.

ಕಸವನ್ನು ಹೊರಗೆ ಯಾರೂ ಚೆಲ್ಲುವಂತಿಲ್ಲ. ಕಾಲಿನಿಂದಾದ ಮಣ್ಣನ್ನು ಬಿಟ್ಟರೆ ಉಳಿದ ಎಲ್ಲ ಕಸವೂ ಚೀಲಕ್ಕೆ ಸೇರಿರಬೇಕು. ಮನೆಗಳಿಗೆ ಪ್ರತಿದಿನ ಕಸ ಸಂಗ್ರಹಿಸಲು ಗ್ರಾಮ ಪಂಚಾಯಿತಿ ಆಟೊ ಬರಲಿದೆ. ಎಲ್ಲಿಯೂ ಯಾವುದೇ ಕಸದ ತೊಟ್ಟಿಯಲ್ಲಿ ಕಸ ಹಾಕುವಂತಿಲ್ಲ. ಇದಕ್ಕಾಗಿ ಈಗಾಗಲೇ ಗ್ರಾಮ ಪಂಚಾಯಿತಿ ಕಸದ ತೊಟ್ಟಿಯನ್ನು ತೆಗೆಸಿದೆ.

ವಾಣಿಜ್ಯ ಪಟ್ಟಣವಾಗಿರುವ ಗೋಣಿಕೊಪ್ಪಲಿಗೆ ಕಸ ವಿಲೇವಾರಿ ಬಹುದೊಡ್ಡ ತಲೆ ನೋವಾಗಿತ್ತು. ಪಟ್ಟಣ ಚಿಕ್ಕದಾಗಿದ್ದರೂ  ವ್ಯಾಪರ ವಹಿವಾಟಿಗೆ ಹೊರಗಿನಿಂದ ಬರುವ ಜನರ ಪ್ರಮಾಣ ಅಧಿಕ. ಜತೆಗೆ ಭಾನುವಾರ ನಡೆಯುವ ಸಂತೆಯಿಂದ ಕಸದ ರಾಶಿಯೇ  ತುಂಬಿಕೊಳ್ಳುತ್ತಿದೆ.  ಇದರಿಂದ  ಪಟ್ಟಣದ ಯಾವ ಮೂಲೆ ನೋಡಿದರೂ, ಕಸದ ರಾಶಿಯೇ ಕಣ್ಣಿಗೆ ರಾಚುತ್ತಿದೆ.  ‘ಸ್ವಚ್ಛ ಕೊಡಗು’ ಎಂಬ ಘೋಷಣೆಗೆ ವ್ಯತಿರಿಕ್ತವಾಗಿದೆ. ರಸ್ತೆ ಬದಿ, ಕೀರೆಹೊಳೆ ದಡ ಕಸದ ಕೊಂಪೆಯಾಗಿದೆ. ಇದರಿಂದ ಪಟ್ಟಣಕ್ಕೆ ಕಸದ ಕೊಪ್ಪ ಎಂಬ ಪರ್ಯಾಯ ನಾಮವೇ ಬಂದಿದೆ.

ಇದರ ಬಗ್ಗೆ ಗಂಭಿರವಾಗಿ ಚಿಂತಿಸಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಲ್ಲಚಂಡ ಬೋಪಣ್ಣ ಹಾಗೂ ಅಧ್ಯಕ್ಷೆ ಪ್ರವಿ ಮೊಣ್ಣಪ್ಪ ಮತ್ತು ಸದಸ್ಯರು ಪಟ್ಟಣಕ್ಕೆ ಅಂಟಿರುವ ಕೊಳಕನ್ನು ನಿವಾರಿಸಿ ಸ್ವಚ್ಛಗೊಳಿಸುವ ದಿಕ್ಕಿನಲ್ಲಿ ದಿಟ್ಟ ಹೆಜ್ಜೆ ಇರಿಸಿದ್ದಾರೆ. ಸಂಗ್ರಹಿಸಿದ ಪ್ಲಾಸ್ಟಿಕ್‌ ಅನ್ನು ಮೈಸೂರಿಗೆ ಕಳಿಸಿ ಅದನ್ನು ಮರು ಉತ್ಪಾದನೆಗೊಳಿಸಲು  ಯತ್ನಿಸಲಾಗುತ್ತಿದೆ. ಉಳಿದ ಕಸವನ್ನು ಗೊಬ್ಬರಕ್ಕೆ ಬಳಸುವ ಬಗ್ಗೆ ಚಿಂತನೆ ನಡೆಸಿದೆ. 

ಉಪಾಧ್ಯಕ್ಷ ಕುಲ್ಲಚಂಡ ಬೋಪಣ್ಣ ಪ್ಲಾಸ್ಟಿಕ್‌ ನೆಟ್‌್ ಬ್ಯಾಗ್‌ ಹಿಡಿದು ಇಡಿ ಪಟ್ಟಣದ ಜನತೆಗೆ ವಿತರಿಸಿ ಅಂಗಡಿ, ಹೋಟೆಲ್‌ ಹಾಗೂ ಬಡಾವಣೆಗಳಿಗೆ ತೆರಳಿ  ಕಸ ಕೂಡಿಡುವ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.  ಗ್ರಾಮ ಪಂಚಾಯಿತಿ  ಅಧ್ಯಕ್ಷೆ ಪ್ರವಿ ಮೊಣ್ಣಪ್ಪ, ಸದಸ್ಯೆ ರೀನಾ ರಾಜೀವ್‌, ಸುರೇಶ್‌ ಸಹಕಾರ ನೀಡುತ್ತಿದ್ದಾರೆ.

ಮಾಹಿತಿ ಒದಗಿಸಲು ಮನವಿ 
ಮಡಿಕೇರಿ: 2013-–14ನೇ ಸಾಲಿನ ಲೆಕ್ಕ ಪರಿಶೋಧನೆಗೆ ಸಹಕಾರ ಸಂಘಗಳು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಲಂ 1959ರ ಕಲಂ  63(2)ರ ಅನ್ವಯ ಸಹಕಾರ ಸಂಘಗಳ ಲೆಕ್ಕಪರಿಶೋಧನೆ ನಿರ್ವಹಿಸಲು ಸೆಪ್ಟೆಂಬರ್ ತಿಂಗಳಿನಲ್ಲಿ ಜರುಗಿಸುವ ವಾರ್ಷಿಕ ಮಹಾಸಭೆಯಲ್ಲಿ ಕರ್ನಾಟಕ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರು ನಿರ್ವಹಿಸುವ ಪಟ್ಟಿಯಿಂದ ಲೆಕ್ಕಪರಿಶೋಧಕರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.

ಈ ಸಂಬಂಧ ಕರ್ನಾಟಕ ಸಹಕಾರ ಸಂಘಗಳ ನಿಯಮಗಳ ನಿಯಮ 29ಬಿ (8) ಪ್ರಕಾರ ಸಹಕಾರ ಸಂಘಗಳು ಸಾಮಾನ್ಯ ಮಹಾ ಸಭೆಯಲ್ಲಿ ಆಯ್ಕೆ ಮಾಡಿಕೊಂಡ ಲೆಕ್ಕಪರಿಶೋಧಕರ ಆಯ್ಕೆ ಮಾಹಿತಿಯನ್ನು, ಆಯ್ಕೆ ಮಾಡಿಕೊಂಡ 7 ದಿನಗಳ ಒಳಗೆ ಸಂಬಂಧಿಸಿದ ಲೆಕ್ಕಪರಿಶೋಧಕರಿಗೆ ಹಾಗೂ ಇಲಾಖೆಗೆ ಸಲ್ಲಿಸಬೇಕು. ತಪ್ಪಿದಲ್ಲಿ ಯಾವುದೇ ಸಮಸ್ಯೆಗಳಿಗೆ ಸಂಬಂಧಪಟ್ಟ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತ ಮಂಡಳಿಯೇ ಜವಾಬ್ದಾರರು. ಲೆಕ್ಕಪರಿಶೋಧನಾ ಇಲಾಖೆ ಜವಾಬ್ದಾರಿ ಅಲ್ಲ ಎಂಬುದನ್ನು ಮಡಿಕೇರಿ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕ ಷಣ್ಮುಖ ಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT