ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಸಮಸ್ಯೆ ನಿವಾರಣೆಗೆ ಜಾನುವಾರು ಸಾಕಿ!

Last Updated 15 ಡಿಸೆಂಬರ್ 2012, 19:52 IST
ಅಕ್ಷರ ಗಾತ್ರ

ಬೆಂಗಳೂರು:  ನಗರದ ಜನತೆಯನ್ನು ಆರು ತಿಂಗಳಿಂದ ನಿರಂತರವಾಗಿ ಕಾಡುತ್ತಿರುವ ಕಸ ಸಮಸ್ಯೆಯನ್ನು ತಕ್ಕ ಮಟ್ಟಿಗೆ ಪರಿಹರಿಸಲು ಜಾನುವಾರುಗಳ ನೆರವು ಪಡೆಯಲು ಬಿಬಿಎಂಪಿ ಆಸಕ್ತಿ ತೋರಿಸಿದೆ.

ಬಿಬಿಎಂಪಿ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಶನಿವಾರ ನಡೆದ `ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಸರ್ವರ ಪಾಲ್ಗೊಳ್ಳುವಿಕೆ, ಪೌರ ಸೌಲಭ್ಯಗಳ ಅಭಿವೃದ್ಧಿ ಮತ್ತು ಪಾಲಿಕೆಯ ಆಡಳಿತ ಸುಧಾರಣೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆ' ಕಾರ್ಯಕ್ರಮದಲ್ಲಿ ತ್ಯಾಜ್ಯ ಸಮಸ್ಯೆ ಪರಿಹರಿಸಲು ಜಾನುವಾರು ಸಾಕಣೆಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಾಯಿತು.

ಸಮಾರಂಭದಲ್ಲಿ ಸ್ವಯಂಸೇವಾ ಸಂಘಟನೆ `ಸಿಟಿಜನ್ಸ್ ಆ್ಯಕ್ಷನ್ ಫೋರಂ' ನ ಸದಸ್ಯೆ ಡಾ.ಮೀನಾಕ್ಷಿ ಭರತ್ ಮಾತನಾಡಿ, `ಜಾನುವಾರು ಸಾಕಣೆಯಿಂದ ಸಾಕಷ್ಟು ಲಾಭ ಇದೆ. ಹಾಲಿನಲ್ಲಿ ಪೌಷ್ಟಿಕಾಂಶ ಇದೆ. ಅದರ ಸೆಗಣಿ ಸಾವಯವ ಗೊಬ್ಬರ ಆಗುತ್ತದೆ.

ಒಂದು ಅಂದಾಜಿನ ಪ್ರಕಾರ ಜಾನುವಾರು ದಿನಕ್ಕೆ 35 ಕೆ.ಜಿ. ಮೇವು ತಿನ್ನುತ್ತದೆ. ಜಾನುವಾರುಗಳಿಗೆ ತರಕಾರಿ ಹಾಗೂ ಅಡುಗೆ ಮನೆಯ ತ್ಯಾಜ್ಯಗಳನ್ನು ಹಾಕಬಹುದು. ಆಗ ತ್ಯಾಜ್ಯ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಬಗೆಹರಿಸಬಹುದು' ಎಂದು ಸಲಹೆ ನೀಡಿದರು.

`ನಗರ ವ್ಯಾಪ್ತಿಯಲ್ಲಿರುವ ಖಾಲಿ ಜಾಗಗಳಲ್ಲಿ ಜಾಗದ ಮಾಲೀಕರು ಮನೆಕಟ್ಟುವ ವರೆಗೆ ಸಣ್ಣ ಉದ್ಯಾನ ನಿರ್ಮಿಸಿ ಅಥವಾ ಹಸಿರು ಪ್ರದೇಶವನ್ನು ಅಭಿವೃದ್ಧಿಪಡಿಸಿ ಜಾನುವಾರು ಸಾಕಣೆಗೆ ನೆರವಾಗಬಹುದು' ಎಂದು ಅವರು ಕಿವಿಮಾತು ಹೇಳಿದರು.

ಬಿಬಿಎಂಪಿ ಆಯುಕ್ತ ರಜನೀಶ್ ಗೋಯಲ್ ಪ್ರತಿಕ್ರಿಯಿಸಿ, `ಈ ಸಲಹೆಯನ್ನು ಕಸದ ಬುಟ್ಟಿಗೆ ಎಸೆಯುವಂತಹುದು ಅಲ್ಲ. ಇದೊಂದು ಉತ್ತಮ ಸಲಹೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಗಮನ ಹರಿಸಲಿದೆ' ಎಂದು ಭರವಸೆ ನೀಡಿದರು.

`ನಗರದ ಮಾರುಕಟ್ಟೆಗಳಲ್ಲಿ ಪರ್ವತಗಳ ಮಾದರಿಯಲ್ಲಿ ರಾಶಿ ಬೀಳುತ್ತಿರುವ ತರಕಾರಿ ಕಸವನ್ನು ಕಡಿಮೆ ಮಾಡಲು ಗೋಶಾಲೆಗಳ (ಡೇರಿ) ನೆರವು ಪಡೆಯುವ ಯೋಜನೆ ಇದೆ. ತರಕಾರಿ ತ್ಯಾಜ್ಯಗಳನ್ನು ತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಕಳುಹಿಸುವುದನ್ನು ನಿಲ್ಲಿಸಿ ಗೋಶಾಲೆಗಳಿಗೆ ಕಳುಹಿಸುವ ಯೋಜನೆ ಇದೆ' ಎಂದು ಅವರು ತಿಳಿಸಿದರು.

`ತರಕಾರಿ ತ್ಯಾಜ್ಯಗಳನ್ನು ಖಾಲಿ ಮಾಡಲು ನಗರದ ಕೆಲವು ಡೇರಿಗಳು ಹಾಗೂ ಬಿಬಿಎಂಪಿ ಮಾರುಕಟ್ಟೆಗಳ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲು ಯೋಜಿಸಲಾಗಿದೆ. ಇಲ್ಲಿ ಯಶಸ್ಸು ಗಳಿಸಿದ ಬಳಿಕ ಉಳಿದ ಡೇರಿಗಳೊಂದಿಗೂ ಸಹಭಾಗಿತ್ವ ಹೊಂದುವ ಬಗ್ಗೆ ಗಮನ ಹರಿಸಲಾಗುವುದು. ಈ ನಿಟ್ಟಿನಲ್ಲಿ 800 ಗೋವುಗಳು ಇರುವ ಕೋರಮಂಗಲದ ಗೋಶಾಲೆ ಸೇರಿದಂತೆ ಆರು ಗೋಶಾಲೆಗಳನ್ನು ಈಗಾಗಲೇ ಗುರುತಿಸಲಾಗಿದೆ' ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT