ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸವನ್ನೇ ರಸ ಮಾಡಿ ಯಶಸ್ಸು ಕಂಡ ರೈತ

ಕೃಷಿ ಖುಷಿ
Last Updated 10 ಜನವರಿ 2014, 5:55 IST
ಅಕ್ಷರ ಗಾತ್ರ

ಕೊಲ್ಹಾರ (ಜಿ.ವಿಜಾಪುರ): ‘ಕಸಾ ಇದ್ದ ಹೊಲಾ ಕಸುವಿನಿಂದ ಕೂಡಿರತ್ತೈತ್ರೀ....’ ಎಂದು ಮಾತು ಆರಂಭಿಸಿದರು ವಿಜಾಪುರ ಜಿಲ್ಲೆಯ ಚಿಕ್ಕ ಆಸಂಗಿ ಗ್ರಾಮದ ರೈತ ಭೀಮಣ್ಣ ಗೂಗಿಹಾಳ.

ಹೊಲದಲ್ಲಿ ಬೆಳೆಯುವ ಕಸ ರೈತನಿಗೆ ಅಪಾಯಕಾರಿ ಅಲ್ಲ. ಅದನ್ನು ಗೊಬ್ಬರವಾಗಿಸುವ ಕಲೆಯನ್ನು ಎಲ್ಲ ರೈತರು ಕರಗತ ಮಾಡಿಕೊಂಡರೆ ಕೃಷಿ ಲಾಭದಾಯಕ ವೃತ್ತಿಯಾಗುತ್ತದೆ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.

‘ಈಗ ನಮಗೆ ಮುಳವಾಡ ಏತ ನೀರಾವರಿಯಿಂದ ಸಾಕಷ್ಟು ನೀರು ಸಿಗುತ್ತಿದೆ. ಆದರೆ, ಅತಿಯಾದ ನೀರು, ರಾಸಾಯನಿಕ ಗೊಬ್ಬರ, ಕಳೆನಾಶಕಗಳ ಬಳಕೆಯಿಂದ ಹುಲುಸಾದ ಬೆಳೆ ಬೆಳೆಯುತ್ತೇವೆ ಎನ್ನುವುದು ಕೇವಲ ಭ್ರಮೆ. ಹತ್ತಾರು ಜನರಿಗೆ ಕೂಲಿ ನೀಡಿ, ಕಳೆ ತೆಗೆಸುವುದು ಅನವಶ್ಯಕ ವೆಚ್ಚಕ್ಕೆ ಮೂಲ. ಇದರಿಂದ ಭೂಮಿಯ ಫಲವತ್ತತೆಯೂ ಹಾಳಾಗುತ್ತದೆ. ಆ ಕಸವನ್ನು ಮಣ್ಣಿನಲ್ಲಿಯೇ ಮುಚ್ಚುವಂತೆ ಮಾಡಿದರೆ ಇಳುವರಿಯೂ ಚೆನ್ನಾಗಿ ಬರುತ್ತದೆ’ ಎನ್ನುತ್ತಾರೆ ಅವರು.

‘ಉತ್ತಮ ನಿರ್ವಹಣೆಯ ಶೂನ್ಯ ಬಂಡವಾಳ ಕೃಷಿ ಕಾಯಕದಲ್ಲಿ ಕೈತುಂಬ ಕಾಸು ಗಳಿಸಲು ಮಿಶ್ರ ನೈಸರ್ಗಿಕ ಕೃಷಿ ಪದ್ಧತಿಯೇ ಉತ್ತಮ’ ಎನ್ನುವುದು ಅವರ ಅಭಿಮತ. ತಮ್ಮ 12 ಎಕರೆ ಹೊಲದಲ್ಲಿ ಇದನ್ನು ಅಳವಡಿಸಿಕೊಂಡು ಯಶಸ್ವಿಯೂ ಆಗಿದ್ದಾರೆ.

ಮಿಶ್ರ ಬೆಳೆಗಳ ಸಮ್ಮಿಲನ
‘ಜಾಣ ರೈತ ಎಲ್ಲ ಕೋಳಿ ಮೊಟ್ಟೆಗಳನ್ನು ಒಂದೇ ತಟ್ಟೆಯಲ್ಲಿ ಇಡಲಾರ’ ಎಂಬ ಚೀನಿ ದೇಶದ ಗಾದೆಯನ್ನು ಇವರು ಅನುಸರಿಸುತ್ತಿದ್ದಾರೆ. ತಮ್ಮ 12 ಎಕರೆ ಹೊಲದಲ್ಲಿ ಬಹುವಿಧದ ಮಿಶ್ರ ಬೆಳೆಗಳಾದ ಮೆಕ್ಕೆಜೋಳ, ಕಬ್ಬು, ಮೆಣಸಿನಕಾಯಿ, ಗಜ್ಜರಿ, ಈರುಳ್ಳಿ, ತೆಂಗು, ಕೊತ್ತಂಬರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಒಂದು ಬೆಳೆ ಕೈಕೊಟ್ಟರೂ ಇನ್ನೊಂದರಲ್ಲಿ ಲಾಭ ಸಿಕ್ಕೇ ಸಿಗುತ್ತದೆ. ಅಲ್ಪಾವಧಿ ಬೆಳೆಯಿಂದ ಮೂರು ತಿಂಗಳಿಗೆ ಹಾಕಿದ ಬಂಡವಾಳ ಮರಳಿ ತೆಗೆಯುತ್ತಾರೆ. ವರ್ಷಕ್ಕೆ ಎಲ್ಲ ಖರ್ಚು ಕಳೆದು ರೂ. 3ರಿಂದ  ರೂ. 4 ಲಕ್ಷ  ಲಾಭ ತೆಗೆಯಬಹುದು’ ಎಂದು ಭೀಮಣ್ಣ ಗೂಗಿಹಾಳ ಲೆಕ್ಕ ಹೇಳುತ್ತಾರೆ.

ಜೀವಸಾರ ಘಟಕ
ತಮ್ಮ ಹೊಲದಲ್ಲಿ ಬೆಳೆಯುವ ಎಲ್ಲ ಬೆಳೆಗಳು ಹುಲುಸಾಗಿರಲು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಭೀಮಣ್ಣ, ತಮ್ಮ ಹೊಲದಲ್ಲಿ ಜೀವಸಾರ (ಜಾನುವಾರುಗಳ ಮೂತ್ರ ಮತ್ತು ಸಗಣಿ ಸಂಗ್ರಹ) ಘಟಕವನ್ನು ರೂ. 80,000 ವೆಚ್ಚದಲ್ಲಿ ನಿರ್ಮಿಸಿಕೊಂಡಿದ್ದಾರೆ. ಹೊಲದ ಶೆಡ್ಡಿನಲ್ಲಿ 6 ಎಮ್ಮೆ, 4 ಆಕಳು ಮತ್ತು ಕರುಗಳ ಸಹಿತ 14 ಜಾನುವಾರುಗಳನ್ನು ಸಾಕಿದ್ದಾರೆ. ಅವುಗಳ ಸಗಣಿ ಮತ್ತು ಮೂತ್ರಗಳನ್ನು ಬೇರೆ ಬೇರೆಯಾಗಿ ಸಂಗ್ರಹಿಸಲು 10 ಅಡಿ ಉದ್ದ–ಅಗಲ ಮತ್ತು 8 ಅಡಿ ಆಳದ ಹೊಂಡ ನಿರ್ಮಿಸಿದ್ದಾರೆ. ಬೆಳೆಗಳಿಗೆ ನೀರುಣಿಸುವ ಕಾಲುವೆಗೆ ಜೋಡಿಸಿ ಬೆಳೆಗಳಿಗೆ ಇದನ್ನು ಪೂರೈಸಲಾಗುತ್ತದೆ.

‘ಇಡೀ 12 ಎಕರೆ ಹೊಲದ ಬೆಳೆಗೂ ಇದನ್ನು ಬಳಸುತ್ತಾ ಬಂದಿರುವುದರಿಂದ ಈವರೆಗೂ ಯಾವುದೇ ರಾಸಾಯನಿಕ ಗೊಬ್ಬರ ಹಾಕುವ ಪ್ರಮೇಯವೇ ಬಂದಿಲ್ಲ. ನನ್ನ ಹೊಲದ ಮಣ್ಣನ್ನು ಸಂಪೂರ್ಣವಾಗಿ ರಾಸಾಯನಿಕ ಗೊಬ್ಬರದಿಂದ ಮುಕ್ತ ಮಾಡಿದ ಖುಷಿ ನನ್ನದಾಗಿದೆ’ ಎನ್ನುತ್ತಾರೆ ಭೀಮಣ್ಣ.

ನೀರಿನ ಹಿತ–ಮಿತ ಬಳಕೆ, ಜೀವಸಾರ  ಪೂರೈಕೆ, ಕೃಷಿ ತ್ಯಾಜ್ಯದ ಸದ್ಬಳಕೆ.  ಸೂಕ್ತ ಅಂತರದಲ್ಲಿ ಬೆಳೆಗಳ ನಿರ್ವಹಣೆ ಮಾಡಿ ಹೊಲದ ಮಣ್ಣನ್ನು ಸಂಪದ್ಭರಿತಗೊಳಿಸಿದ್ದಾರೆ.

‘ಗಾಳಿ, ಮಣ್ಣು, ನೀರು ಮತ್ತು ಸೂರ್ಯನ ಬೆಳಕನ್ನು ಸಮರ್ಥವಾಗಿ ಕೃಷಿಯಲ್ಲಿ ಬಳಸಿಕೊಂಡರೆ ನಮ್ಮ ದೇಶದ ರೈತರು ಇನ್ನೊಬ್ಬರ ಮುಂದೆ ಕೈಚಾಚುವ ಪ್ರಮೇಯವೇ ಬರಲಾರದು. ಜೀವ ವೈವಿಧ್ಯತೆಯನ್ನು ಉಳಿಸಿಕೊಂಡು ಅದನ್ನು ಸದ್ಬಳಕೆ ಮಾಡಿಕೊಳ್ಳುತ್ತ ಕೃಷಿಯಲ್ಲಿ ಖುಷಿ ಕಾಣಬಹುದು’ ಎಂದು ಅವರು ಸಮರ್ಥಿಸಿಕೊಳ್ಳುತ್ತಾರೆ.

ಹೆಚ್ಚಿನ ಮಾಹಿತಿಗೆ ಭೀಮಣ್ಣ ಗೂಗಿಹಾಳ ಅವರನ್ನು ಈ ಮೊಬೈಲ್‌ಗೆ (ಮೊ.9986162326) ಸಂಪರ್ಕಿಸಬಹುದು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT