ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ್ಬಾ ಬೆಂಗ್ರೆ: ಮೈದಾನ ಉಳಿಸಿಕೊಳ್ಳಲು ಸಂಕಲ್ಪ

Last Updated 2 ಜನವರಿ 2012, 8:30 IST
ಅಕ್ಷರ ಗಾತ್ರ

ಮಂಗಳೂರು: ನಗರದ ಕಸ್ಬಾ ಬೆಂಗ್ರೆಯ ಆಟದ ಮೈದಾನದಲ್ಲಿ ಉದ್ಯಮ ಸ್ಥಾಪನೆಗೆ ಅವಕಾಶ ಕೊಡುವುದಿಲ್ಲ. ಮೈದಾನ ಉಳಿಸಿಕೊಳ್ಳುತ್ತೇವೆ ಎಂದು ಸ್ಥಳೀಯರು ಸಂಕಲ್ಪ ಮಾಡಿದರು.

ಕಸ್ಬಾ ಬೆಂಗ್ರೆ ಆಟದ ಮೈದಾನ ಉಳಿಸಲು ಆಗ್ರಹಿಸಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬೆಂಗ್ರೆ ಸೂಪರ್‌ಸ್ಟಾರ್ ಆಟದ ಮೈದಾನದಲ್ಲಿ ಭಾನುವಾರ ನಡೆದ ಬೃಹತ್ ಪ್ರತಿಭಟನೆ ಮತ್ತು ರ‌್ಯಾಲಿಯಲ್ಲಿ ಪಾಲ್ಗೊಂಡ ಸಾವಿರಕ್ಕೂ ಅಧಿಕ ಸ್ಥಳೀಯರು ಈ ನಿರ್ಧಾರಕ್ಕೆ ಬಂದರು.

ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಮಾತನಾಡಿ, ಕಸಬಾ ಬೆಂಗ್ರೆಯಲ್ಲಿ ಆಟದ ಮೈದಾನವಾಗಿ ಬಳಕೆಯಾಗುತ್ತಿರುವ ಜಾಗವನ್ನು ಖಾಸಗಿ ಸಂಸ್ಥೆಗೆ ನೀಡಬಾರದು. ಬೆಂಗ್ರೆಯ ಗುರುಪುರ ನದಿ ಪಕ್ಕದ ಜಾಗವನ್ನು 30 ವರ್ಷಗಳಿಂದ ಆಟದ ಮೈದಾನವಾಗಿ ಬಳಸಲಾಗುತ್ತಿದೆ. 2004 ಚದರಡಿ ಜಾಗವನ್ನು ಮಂಗಳೂರು ಹಳೆ ಬಂದರು ಇಲಾಖೆ ಅಧಿಕಾರಿಗಳು ಫಿಷ್‌ಮಿಲ್ ಘಟಕ ತೆರೆಯಲು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಇಲ್ಲಿ ಪಿಷ್‌ಮಿಲ್ ತೆರೆಯಲು ಬಿಡಬಾರದು.ಆಟದ ಮೈದಾನವಾಗಿಯೇ ಉಳಿಯಬೇಕು ಎಂದು ಒತ್ತಾಯಿಸಿದರು.

ಬೆಂಗ್ರೆಯಲ್ಲಿ ಶೇ 95 ಮಂದಿ ಮೀನುಗಾರಿಕೆ ಮಾಡುವವರು. ಸರ್ಕಾರ ಅವರ ಮನಸ್ಸಿಗೆ ನೋವಾಗುವ ಕೆಲಸ ಮಾಡುತ್ತಿದೆ. ಪ್ರಾಣ ಹೋದರೂ ಮೈದಾನ ಖಾಸಗಿ ಪಾಲಾಗಲು ಬಿಡುವುದಿಲ್ಲ. ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

ಯುವಜನೋತ್ಸವಕ್ಕೆ ಸರ್ಕಾರ ರೂ 14 ಕೋಟಿ ಖರ್ಚು ಮಾಡುತ್ತಿದೆ. ಇಲ್ಲಿನ ಮೈದಾನಕ್ಕೆ ಮೂಲ ಸೌಕರ್ಯ ಒದಗಿಸುತ್ತಿಲ್ಲ. ಇಲ್ಲಿನ ನಿವಾಸಿಗಳು ನೆಹರೂ ಮೈದಾನಕ್ಕೆ ಹೋಗಿ ಆಟ ಆಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಬೆಂಗ್ರೆಯನ್ನು ಜಿಲ್ಲಾಡಳಿತ ಕಂದಾಯ ಗ್ರಾಮವನ್ನಾಗಿ ಮಾಡಲು ಮುಂದಾಗಿದೆ. ಇಲ್ಲಿ 575 ಎಕರೆ ಜಾಗ ಇದೆ. 15 ಸಾವಿರ ಮಂದಿ ಇದ್ದಾರೆ. ಇಲ್ಲಿನ ಯುವಕರು ಆಟ ಆಡಲು ಎಲ್ಲಿಗೆ ಹೋಗಬೇಕು ಎಂದು ಅವರು ಕೇಳಿದರು.

ಕಸ್ಬಾ ಬೆಂಗ್ರೆ ಮಸೀದಿ ಅಧ್ಯಕ್ಷ ಮೊಹಮ್ಮದ್ ಸಾಲಿ, ಉಪಾಧ್ಯಕ್ಷ ಬಿಲಾಲ್ ಮೊಯ್ದಿನ್, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್, ಎಸ್‌ಡಿಪಿಐ ಅಧ್ಯಕ್ಷ ಅನ್ವರ್ ಸಾದತ್, ಜೆಡಿಎಸ್ ಮುಖಂಡ ಡಿ.ಎಂ. ಅಸ್ಲಾಂ, ಯುವ ಕಾಂಗ್ರೆಸ್ ದಕ್ಷಿಣ ವಲಯ ಅಧ್ಯಕ್ಷ ಪ್ರವೀಣಚಂದ್ರ ಆಳ್ವ, ತೋಟಬೆಂಗ್ರೆ ಮಹಾಜನ ಸಭಾ ಅಧ್ಯಕ್ಷ ಶೇಖರ್ ಸುವರ್ಣ, ಪಾಲಿಕೆ ಸದಸ್ಯ ಅಜೀಜ್ ಕುದ್ರೋಳಿ, ಮುಖಂಡರಾದ ಮೊಹಮ್ಮದ್ ಹನೀಫ್ ಬೆಂಗ್ರೆ, ಜಗದೀಶ ಶೆಟ್ಟಿ, ಜೆಡಿಎಸ್ ವಲಯ ಅಧ್ಯಕ್ಷ ಲತೀಫ್, ಮುಸ್ಲಿಂ ಲೀಗ್ ವಲಯ ಅಧ್ಯಕ್ಷ ಆದಂ ಬಾವಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT