ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್-ಆರ್‌ಎಲ್‌ಡಿ ಸ್ಥಾನ ಹೊಂದಾಣಿಕೆ

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮತ್ತು ಆರ್‌ಎಲ್‌ಡಿ ನಡುವೆ ಸೀಟು ಹೊಂದಾಣಿಕೆ ಬಹುತೇಕ ಅಂತ್ಯಗೊಂಡಿದ್ದು, ಅಧಿಕೃತ ಘೋಷಣೆ ಈ ವಾರ ಹೊರಬೀಳುವ ಸಾಧ್ಯತೆ ಇದೆ.

ಈಗಾಗಲೇ 135 ಅಭ್ಯರ್ಥಿಗಳ ಎರಡು ಪಟ್ಟಿ ಪ್ರಕಟಿಸಿರುವ ಕಾಂಗ್ರೆಸ್ ಚುನಾವಣಾ ಸಮಿತಿ ಅಕ್ಟೋಬರ್ 31 ರಂದು ಸಭೆ ಸೇರಿ ಮೂರನೇ ಪಟ್ಟಿ ಕುರಿತು ಚರ್ಚಿಸಲಿದೆ. ನವೆಂಬರ್ ಮೊದಲ ವಾರ ಪಟ್ಟಿ ಬಿಡುಗಡೆ ಆಗಲಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ನವೆಂಬರ್ 14ರಂದು ತಮ್ಮ ಮುತ್ತಜ್ಜ ಜವಾಹರಲಾಲ್ ನೆಹರು ಅವರ ಫೂಲ್‌ಪುರ ಕ್ಷೇತ್ರದಿಂದ ಪ್ರಚಾರ ಆರಂಭಿಸಲಿದ್ದಾರೆ.

ಕಾಂಗ್ರೆಸ್ ಮತ್ತು ಆರ್‌ಎಲ್‌ಡಿ ನಡುವಿನ ಮಹತ್ವದ ಸಭೆ ಬುಧವಾರ ನಡೆದಿದ್ದು, ಕಾಂಗ್ರೆಸ್ ಮುಖಂಡರಾದ ದಿಗ್ವಿಜಯ್ ಸಿಂಗ್ ಮತ್ತು ರಾಜ್ಯದ ಉಸ್ತುವಾರಿ ಹೊತ್ತಿರುವ ಮೋಹನ್ ಪ್ರಕಾಶ್ ಆರ್‌ಎಲ್‌ಡಿ ಮುಖಂಡ ಅಜಿತ್ ಸಿಂಗ್ ಜತೆ ಸುದೀರ್ಘ ಚರ್ಚೆ ನಡೆಸಿದರು.

ಪಶ್ಚಿಮ ಭಾಗದಲ್ಲಿ ಸಾಕಷ್ಟು ಪ್ರಾಬಲ್ಯ ಹೊಂದಿರುವ ಆರ್‌ಎಲ್‌ಡಿ ಜತೆ ಸೀಟು ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ರಾಹುಲ್ ರಾಜ್ಯ ಕಾಂಗ್ರೆಸ್ ನಾಯಕರ ಜತೆ ಸಮಾಲೋಚನೆ ನಡೆಸಿದ ಒಂದು ದಿನದ ಬಳಿಕ ಆರ್‌ಎಲ್‌ಡಿ ಮತ್ತು ಕಾಂಗ್ರೆಸ್ ನಾಯಕರ ಸಭೆ ನಡೆಯಿತು. ಮಾತುಕತೆ ಸೌಹಾರ್ದಯುತವಾಗಿತ್ತು ಎಂದು ಮೋಹನ್ ಪ್ರಕಾಶ್ ಹೇಳಿದ್ದಾರೆ.

ಸಭೆಯಲ್ಲಿ ಎಲ್ಲ ಅಂಶಗಳು ಚರ್ಚೆಯಾಗಿವೆ. ಬಹಳಷ್ಟು ವಿಷಯಗಳು ಇತ್ಯರ್ಥವಾಗಿವೆ. 70 ಸ್ಥಾನಗಳ ಬೇಡಿಕೆ ಇಟ್ಟಿದ್ದ ಅಜಿತ್ ಸಿಂಗ್ 40-50 ಸ್ಥಾನಗಳನ್ನು ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎಂದು ದಿಗ್ವಿಜಯ್ ತಿಳಿಸಿದ್ದಾರೆ. ವಿಧಾನಸಭೆ ಚುನಾವಣೆ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ನಡೆಯಲಿದೆ.

ಕಾಂಗ್ರೆಸ್ ಮತ್ತು ಆರ್‌ಎಲ್‌ಡಿ ನಡುವೆ ಸೀಟು ಹೊಂದಾಣಿಕೆ ಅಧಿಕೃತವಾಗಿ ಪ್ರಕಟವಾದ ಬಳಿಕ ಅಜಿತ್ ಕೇಂದ್ರ ಸಂಪುಟ ಸೇರುವ ಸಂಭವವಿದ್ದು, ಖಾತೆ ಕುರಿತಂತೆ ಇನ್ನೂ ತೀರ್ಮಾನ ಆಗಬೇಕಾಗಿದೆ. ಆದರೆ, ಕೈಗಾರಿಕಾ ಖಾತೆ ದೊರೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಸೀಟು ಹೊಂದಾಣಿಕೆ ಮಾತುಕತೆಯಲ್ಲಿ ಭಾಗವಹಿಸಿದ್ದ ಪಕ್ಷದ ಹಿರಿಯ ಮುಖಂಡರು ಸಚಿವ ಸ್ಥಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದಾರೆ. ಉಭಯ ಪಕ್ಷಗಳ ನಡುವಿನ ಒಪ್ಪಂದಕ್ಕೆ ಮಾತ್ರ ನಮಗೆ ಅಧಿಕಾರ ಕೊಡಲಾಗಿತ್ತು. ಸಚಿವ ಸ್ಥಾನದ ವಿಷಯ ಮೇಲಿನ ಮಟ್ಟದಲ್ಲಿ ನಿರ್ಧಾರ ಆಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT