ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್- ಎಸ್‌ಪಿ ಜಟಾಪಟಿ

ಐಎಎಸ್ ಅಧಿಕಾರಿ ದುರ್ಗಾಶಕ್ತಿ ಅಮಾನತು ಪ್ರಕರಣ
Last Updated 4 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಐಎಎಸ್ ಮಹಿಳಾ ಅಧಿಕಾರಿ ದುರ್ಗಾಶಕ್ತಿ ನಾಗಪಾಲ್ ಅವರ ಅಮಾನತು ಪ್ರಕರಣಕ್ಕೆ ಸಂಬಂಧಪಟ್ಟಂತೆ ಶೀಘ್ರವೇ ವರದಿ ನೀಡುವಂತೆ ಕೇಂದ್ರ ಸರ್ಕಾರ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.

ರಾಷ್ಟ್ರದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದ್ದ ಈ ಪ್ರಕರಣ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶನಿವಾರ ಪತ್ರ ಬರೆದ ಬೆನ್ನಲ್ಲೇ ಕೇಂದ್ರವು ಕ್ರಮಕ್ಕೆ ಮುಂದಾಗಿದೆ.

ಪತ್ರ ಕುರಿತು ಕೂಡಲೇ ಎಚ್ಚೆತ್ತುಕೊಂಡಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ), ಅಮಾನತು ಪ್ರಕರಣ ಕುರಿತು ತಕ್ಷಣ ವರದಿ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದೆ. ಐಎಎಸ್ ಸೇರಿದಂತೆ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದ ಸಿಬ್ಬಂದಿ ಸಚಿವಾಲಯದ ಜವಾಬ್ದಾರಿಯನ್ನು ಪ್ರಧಾನಿ ಸಿಂಗ್ ಅವರೇ ಹೊತ್ತಿರುವುದರಿಂದ, ಸೋನಿಯಾ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

`2010ನೇ ತಂಡದ ಐಎಎಎಸ್ ಅಧಿಕಾರಿಯಾದ ದುರ್ಗಾಶಕ್ತಿ ಅವರಿಗೆ ಅನ್ಯಾಯವಾಗುವಂತೆ ನಡೆದುಕೊಳ್ಳುವುದಿಲ್ಲ ಎಂಬುದನ್ನು ನಾವು ಖಾತ್ರಿಪಡಿಸಬೇಕು' ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಸೋನಿಯಾ ಪ್ರಸ್ತಾಪಿಸಿದ್ದರು.

ದುರ್ಗಾಶಕ್ತಿ ಅವರ ಅಮಾನತು ಪ್ರಕರಣ ಕುರಿತು ಡಿಒಪಿಟಿ ಬರೆದಿರುವ ಪತ್ರಕ್ಕೆ, ಎಸ್‌ಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಕಡ್ಡಾಯವಾಗಿ ವರದಿ ನೀಡಲೇಬೇಕಿದೆ ಎಂದು ಮೂಲಗಳು ತಿಳಿಸಿವೆ.

ನಿರ್ಮಾಣ ಹಂತದಲ್ಲಿದ್ದ ಮಸೀದಿಯೊಂದರ ಕಾಂಪೌಂಡ್ ತೆರವಿಗೆ ನಿಯಮಬಾಹಿರವಾಗಿ ಆದೇಶ ಹೊರಡಿಸಿದ್ದ ಆಪಾದನೆ ಮೇರೆಗೆ ದುರ್ಗಾ ಅವರನ್ನು  ಸರ್ಕಾರ ಇತ್ತೀಚೆಗೆ ಅಮಾನತುಗೊಳಿಸಿತ್ತು. ಅಮಾನತು ಕ್ರಮದ ಹಿಂದೆ ಮರಳು ಮಾಫಿಯಾ ಕೈವಾಡವಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಸಂಬಂಧ ಸಡಿಲ?
ಲಖನೌ:
ದುರ್ಗಾ ಶಕ್ತಿ ನಾಗಪಾಲ್ ಅವರ ಅಮಾನತು ಪ್ರಕರಣ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳ (ಎಸ್‌ಪಿ) ನಡುವಣ ಸಂಬಂಧ ಹದಗೆಡಲು ಕಾರಣವಾಗಿದೆ.

ಪ್ರಕರಣದ ಕುರಿತು ಬಹಿರಂಗ ಹೇಳಿಕೆ ನೀಡಿರುವ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಿರ್ಮಲ್ ಖಾತ್ರಿ, ಪ್ರಾಮಾಣಿಕ ಅಧಿಕಾರಿಯನ್ನು ಶಿಕ್ಷಿಸುವ ಮೂಲಕ ಎಸ್‌ಪಿ ಸರ್ಕಾರ ಮರಳು ಮಾಫಿಯಾದ ರಕ್ಷಣೆ ನಿಂತಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT