ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಗೆಲುವಿಗೆ ಬಿಜೆಪಿ ಕಡಿವಾಣ

Last Updated 29 ಡಿಸೆಂಬರ್ 2010, 10:50 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲಾ ಪರಿಷತ್ ಕಾಲದಿಂದಲೂ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಆದರೆ, ಈಗಿನ ಚಿತ್ರಣವೇ ಬೇರೆ. ಕಳೆದ ಜಿ.ಪಂ. ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಮಾತ್ರ ಗೆದ್ದಿದ್ದ ಬಿಜೆಪಿ ನಂತರದಲ್ಲಿ ವಿಧಾನಸಭೆ, ಲೋಕಸಭೆ ಹಾಗೂ ದಾವಣಗೆರೆ ಮಹಾನಗರಪಾಲಿಕೆ ಮತ್ತಿತರ ಚುನಾವಣೆಗಳಲ್ಲಿ ವಿಜಯಪತಾಕೆ ಹಾರಿಸಿ,  ಕಾಂಗ್ರೆಸ್‌ನ ಜಂಘಾಬಲವನ್ನೇ ಉಡುಗಿಸಿದೆ.

ಜಿಲ್ಲೆಯ ಏಳು ಶಾಸಕರ ಪೈಕಿ ಐದು ಸ್ಥಾನಗಳಲ್ಲಿ ಗೆದ್ದು ಬೀಗಿದ್ದ ಬಿಜೆಪಿ, ಇದ್ದ ಇಬ್ಬರು ಕಾಂಗ್ರೆಸ್ ಶಾಸಕರ ಪೈಕಿ ಜಗಳೂರಿನ ಶಾಸಕ ಎಸ್.ವಿ. ರಾಮಚಂದ್ರ ಅವರನ್ನು ಆಪರೇಷನ್ ಕಮಲದ ಮೂಲಕ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ಜಿಲ್ಲೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರನ್ನು ಏಕಾಂಗಿ ಶಾಸಕರನ್ನಾಗಿಸಿದೆ.ಜಿ.ಪಂ., ತಾ.ಪಂ. ಅಧಿಕಾರವನ್ನು ಉಳಿಸಿಕೊಳ್ಳುವ ಜತೆಗೆ ಸತತ ಸೋಲಿನ ಸುಳಿಯಿಂದ ಹೊರಬರಬೇಕಾದ ತುರ್ತು ಕಾಂಗ್ರೆಸ್‌ಗೆ ಎದುರಾಗಿದೆ. ಸಂತೇಬೆನ್ನೂರು, ನಲ್ಲೂರು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿಯೂ ತಟ್ಟಿದೆ. ಇವೆಲ್ಲ ಕಾರಣಗಳಿಂದ ತನ್ನದೇ ಓಟ್‌ಬ್ಯಾಂಕ್ ಹೊಂದಿರುವ ಕಾಂಗ್ರೆಸ್‌ಗೆ ಈ ಬಾರಿಯ ಚುನಾವಣೆ ‘ಮಾಡು ಇಲ್ಲವೇ ಮಡಿ’ ಎಂಬ ಸ್ಥಿತಿ ತಂದೊಡ್ಡಿದೆ. 

ಜೆಡಿಎಸ್ ಕಳೆದ ಬಾರಿಯ ಸಾಧನೆಯನ್ನು ಕಾಯ್ದುಕೊಳ್ಳುವುದು ಕಷ್ಟವೇ. ಆದರೂ, ಚನ್ನಗಿರಿ ಮತ್ತು ಹರಿಹರ ತಾಲ್ಲೂಕಿನಲ್ಲಿ ನೆಲೆಗಟ್ಟು ಹೊಂದಿದ್ದ ಜೆಡಿಎಸ್ ಉತ್ಸುಕತೆಯಿಂದಲೇ ಪ್ರಚಾರಕ್ಕೆ ಇಳಿದಿದೆ. ಕುಮಾರಸ್ವಾಮಿ ಅವರ ವರ್ಚಸ್ಸನ್ನು ಸ್ಥಳೀಯ ನಾಯಕರು ನೆಚ್ಚಿಕೊಂಡಿದ್ದಾರೆ.ಬಿಜೆಪಿ ಮತ್ತು ಕಾಂಗ್ರೆಸ್ ಜಿ.ಪಂ.ನ ಎಲ್ಲ 34 ಹಾಗೂ 6 ತಾ.ಪಂ.ನ 129 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರೆ; ಜೆಡಿಎಸ್ ಜಿ.ಪಂ.ನ 32 ಹಾಗೂ ತಾ.ಪಂ.ನ 111 ಕಡೆ ಸೆಣಸಾಟಕ್ಕೆ ಮುಂದಾಗಿದೆ.ಒಟ್ಟಾರೆ ತಾ.ಪಂ. ಕಣದಲ್ಲಿ 457 ಮಂದಿ ಹಾಗೂ ಜಿ.ಪಂ. ಕಣದಲ್ಲಿ 139 ಮಂದಿ ಇದ್ದಾರೆ. 

ಹೊಸಕೆರೆ ಜಿ.ಪಂ. ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ದಿವಂಗತ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಸೊಸೆ ಲತಾ ತೇಜಸ್ವಿ ಪಟೇಲ್, ಹದಡಿ ಕ್ಷೇತ್ರದಿಂದ ಸಚಿವ ಎಸ್.ಎ. ರವೀಂದ್ರನಾಥ್ ಅವರ ಪುತ್ರಿ ಸುಧಾ ವೀರೇಂದ್ರ ಪಾಟೀಲ್, ಬೇಲಿಮಲ್ಲೂರು ಕ್ಷೇತ್ರದಲ್ಲಿ ಸಚಿವ ರೇಣುಕಾಚಾರ್ಯ ಅವರ ಸಹೋದರ ಎನ್. ಬಸವರಾಜ್ ಅವರ ಪತ್ನಿ ಕವಿತಾ, ಕೊಂಡಜ್ಜಿ ಕ್ಷೇತ್ರದಲ್ಲಿ ಜಿ.ಪಂ. ಉಪಾಧ್ಯಕ್ಷರಾಗಿದ್ದ ಕಾಂಗ್ರೆಸ್ ಬಿ.ಎಚ್. ಗಿರಿಗೌಡ, ಕಣದಲ್ಲಿರುವ ಪ್ರಭಾವಿಗಳು.

ಮೇಲ್ನೋಟಕ್ಕೆ ಎಲ್ಲೆಡೆ ಕಾಂಗ್ರೆಸ್-ಬಿಜೆಪಿ ನೇರ ಹಣಾಹಣಿ ಇದೆ. ಹರಿಹರ ತಾಲ್ಲೂಕಿನಲ್ಲಿ ಜೆಡಿಎಸ್ ಪ್ರತಿರೋಧ ಒಡ್ಡಿರುವುದರಿಂದ ಕೆಲವೆಡೆ ತ್ರಿಕೋನ ಸ್ಪರ್ಧೆಗೆ ಎಡೆಯಾಗಿದೆ. ಪ್ರಚಾರದ ಭರಾಟೆಯಲ್ಲಿ ಒಂದು ಹೆಜ್ಜೆ ಮುಂದಿರುವ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ನೇತೃತ್ವದಲ್ಲಿ ಜಿಲ್ಲೆಯ ತ್ರಿಮೂರ್ತಿ ಸಚಿವರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಹರಪನಹಳ್ಳಿ ತಾಲ್ಲೂಕಿನಲ್ಲಿ ಪ್ರತಿಷ್ಠೆಯನ್ನು ಪಣಕ್ಕೆ ಇಟ್ಟಿರುವ ಸಚಿವ ಕರುಣಾಕರ ರೆಡ್ಡಿ ಕಾಂಗ್ರೆಸ್‌ನ ಎಂ.ಪಿ. ಪ್ರಕಾಶ್ ಮತ್ತು ಅವರ ಪುತ್ರ ಎಂ.ಪಿ. ರವೀಂದ್ರ ಅವರನ್ನು ಎದುರಿಸಬೇಕಿದೆ.

ಇತ್ತೀಚಿನ ರಾಜಕೀಯ ರಾಡಿಯಿಂದ ಅಂಟಿದ ಕಳಂಕವನ್ನು ತೊಡೆದುಕೊಳ್ಳಲು ಸಚಿವ ಎಂ.ಪಿ. ರೇಣುಕಾಚಾರ್ಯ ಅವರಿಗೆ ಹೊನ್ನಾಳಿ ತಾಲ್ಲೂಕಿನಲ್ಲಿ ಪಕ್ಷಕ್ಕೆ ಗೆಲುವು ತಂದುಕೊಡುವುದು ಅನಿವಾರ್ಯವಾಗಿದೆ. ಜಗಳೂರು ಕ್ಷೇತ್ರದ ಶಾಸಕ ಎಸ್.ವಿ. ರಾಮಚಂದ್ರ ಗುಡ್‌ಬೈ ಹೇಳಿದ್ದು ಕಾಂಗ್ರೆಸ್‌ಗೆ ಹೊಡೆತ ನೀಡಿದೆ. ಬಿಜೆಪಿಗೆ ಇದರ ಲಾಭ ಎಷ್ಟರಮಟ್ಟಿನದು ಎಂಬುದು ಫಲಿತಾಂಶ ಹೊರಬಿದ್ದಾಗಷ್ಟೇ ಗೊತ್ತಾಗಲಿದೆ.ಕೆಲವೆಡೆ ಸಿಪಿಐ(ಎಂ.ಎಲ್), ಸಿಪಿಐ, ಬಿಎಸ್‌ಪಿ, ರೈತ ಸಂಘದ ಅಭ್ಯರ್ಥಿಗಳು ಮತ್ತು ಪಕ್ಷೇತರರು ಕಣದಲ್ಲಿದ್ದು, ಪ್ರಮುಖ ಪಕ್ಷಗಳ ಲೆಕ್ಕಾಚಾರಕ್ಕೆ ತೊಡಕಾಗಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT