ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ಸೇತರ ಪಕ್ಷಗಳಿಗೆ ಹೆಚ್ಚಿನ ಮನ್ನಣೆ

ಹಾವೇರಿ ಕ್ಷೇತ್ರ ಪರಿಚಯ
Last Updated 10 ಏಪ್ರಿಲ್ 2013, 8:31 IST
ಅಕ್ಷರ ಗಾತ್ರ

ಹಾವೇರಿ:  ಏಲಕ್ಕಿ ಕಂಪಿನ ನಗರ, ಮರಿ ಕಲ್ಯಾಣ ಎಂದೇ ಪ್ರಸಿದ್ಧಿ ಪಡೆದ `ಹಾವೇರಿ' ಜಿಲ್ಲಾ ಕೇಂದ್ರವೂ ಹೌದು. ದೊಡ್ಡ ಏಲಕ್ಕಿ ಮಾರುಕಟ್ಟೆ ಹೊಂದುವ ಮೂಲಕ ಅದರ ಕಂಪನ್ನು ದೇಶದಲ್ಲೆಡೆ ಪಸರಿಸಿದಂತೆ ರಾಜಕೀಯ ಕ್ಷೇತ್ರದಲ್ಲಿಯೂ ಹಾವೇರಿ ತನ್ನ ಹೆಸರು ಪಸರಿಸುವಂತೆ ಮಾಡಿದೆ.

ಹಾವೇರಿ ವಿಧಾನಸಭಾ ಕ್ಷೇತ್ರ ಹುತಾತ್ಮ ಮೈಲಾರ ಮಹಾದೇವಪ್ಪ ಅವರ ಪತ್ನಿ ಸಿದ್ದಮ್ಮ ಮೈಲಾರ ಅವರಂತಹ ಸ್ವಾತಂತ್ರ್ಯ ಹೋರಾಟಗಾರರು, ಗುದ್ಲೆಪ್ಪ ಹಳ್ಳಿಕೇರಿಯಂತಹ ಉಕ್ಕಿನ ಮನುಷ್ಯ, ಗಾಂಧಿವಾದಿ ಹಾಗೂ ಕನ್ನಡಪರ ಚಳುವಳಿಗಾರರು, ಡಾ.ಚಿತ್ತರಂಜನ್ ಕಲಕೋಟಿ ಅವರಂತಹ ಸಾತ್ವಿಕ ರಾಜಕಾರಣಿಗಳನ್ನು ರಾಜಕೀಯಕ್ಕೆ ಪರಿಚಯಿಸಿದೆ.

ಸ್ವಾತಂತ್ರ್ಯ ನಂತರ ಅಂದರೆ 1952 ರಿಂದ 2008 ರವರೆಗೆ ನಡೆದ 13 ಸಾರ್ವತ್ರಿಕ ಚುನಾವಣೆಗಳಲ್ಲಿ ಐದು ಬಾರಿ ಕಾಂಗ್ರೆಸ್‌ಗೆ, ಎರಡು ಬಾರಿ ಇಂದಿರಾ ಕಾಂಗ್ರೆಸ್ ಗೆಲುವು ಸಾಧಿಸಿದ್ದು ಬಿಟ್ಟರೆ, ಉಳಿದ ಆರು ಚುನಾವಣೆಗಳಲ್ಲಿ ತಲಾ ಎರಡು ಬಾರಿ ಜನತಾಪಕ್ಷ, ಜನತಾದಳ ಹಾಗೂ ಬಿಜೆಪಿಗೆ ಗೆಲುವು ದೊರೆತಿದೆ.

13 ಚುನಾವಣೆಗಳಲ್ಲಿ ಯಾರೊಬ್ಬರಿಗೂ ಹ್ಯಾಟ್ರಿಕ್ ಗೆಲುವಿನ ಸಿಕ್ಕಿಲ್ಲ. ಆದರೆ, ಕಾಂಗ್ರೆಸ್‌ನಿಂದ ಬಿ.ವಿ.ಮಾಗಾವಿ (1962,1967), ಕಾಂಗೈನಿಂದ ಎಫ್.ಎಸ್.ತಾವರೆ (1972, 1978), ಜನತಾ ಪಕ್ಷದಿಂದ ಡಾ.ಚಿತ್ತರಂಜನ್ ಕಲಕೋಟಿ (1983,1985, ಜನತಾದಳದಿಂದ ಬಸವರಾಜ ಶಿವಣ್ಣನವರ (1994, 1999) ಅವರು ತಲಾ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಪಿ.ಆರ್. ವಳಸಂಗದ ಎಂಬ ಅಭ್ಯರ್ಥಿ 1957, 1962, 1967, 1972, 1983ರ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಒಮ್ಮೆಯೂ ಗೆಲುವು ಕಾಣಲು ಅವರಿಗೆ ಸಾಧ್ಯವಾಗಲಿಲ್ಲ.

ಇಬ್ಬರು ಸಚಿವರು: ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದ ಗುದ್ಲೆಪ್ಪ ಹಳ್ಳಿಕೇರಿ ಅವರು 1952 ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದರೂ, ಸರ್ಕಾರದಲ್ಲಿ ಯಾವುದೇ ಹುದ್ದೆ ಪಡೆದಿಲ್ಲ. (1962 ಮತ್ತು 1967 ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ನೇಮಕರಾಗಿದ್ದ ಹಳ್ಳಿಕೇರಿ ಅವರು ಸತತ ಎರಡು ಅವಧಿಗೆ ವಿಧಾನ ಪರಿಷತ್ ಸಭಾಪತಿಗಳಾಗಿ ಕಾರ್ಯ ನಿರ್ವಹಿಸಿದ್ದರು.)

1967 ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಬಿ.ವಿ.ಮಾಗಾವಿ ಅವರು ಉಪ ಲೋಕೋಪಯೋಗಿ ಸಚಿವರಾಗಿ, 1994 ರಲ್ಲಿ ಜೆಡಿಎಸ್‌ನಿಂದ ಆಯ್ಕೆಯಾದ ಬಸವರಾಜ ಶಿವಣ್ಣನವರ ಪರಿಸರ ಹಾಗೂ ವಿಜ್ಞಾನ ಸಚಿವರಾಗಿ ಕಾರ್ಯ ನಿರ್ವಹಿಸಿದ್ದನ್ನು ಹೊರತುಪಡಿಸಿದರೆ, ಇಲ್ಲಿವರೆಗೆ ಬೇರೆ ಯಾರೂ ಸಚಿವರಾಗುವ ಭಾಗ್ಯ ಒದಗಿ ಬಂದಿಲ್ಲ.

ಮಹಿಳೆಯರಿಗೆ ಒಲಿಯದ ಕ್ಷೇತ್ರ: 1957 ರ ಎರಡನೇ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಸಿದ್ದಮ್ಮ ಮೈಲಾರ ಅವರು ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದನ್ನು ಹೊರತುಪಡಿಸಿದರೆ, ಈವರೆಗೆ ಕ್ಷೇತ್ರದ ಮತದಾರರು ಮಹಿಳೆಯರಿಗೆ ಈ ಕ್ಷೇತ್ರದಲ್ಲಿ ಒಲವು ತೋರಿಲ್ಲ. 1985 ಹಾಗೂ 1999 ರಲ್ಲಿ ಕಾಂಗ್ರೆಸ್‌ನಿಂದ ಮೀನಾಕ್ಷಿ ಗಿರ್ಜಿ, 2008 ರಲ್ಲಿ ಕಾಂಗ್ರೆಸ್‌ನಿಂದ ಶಾರದಾ ಬೆಟಗೇರಿ, ಜೆಡಿಎಸ್‌ನಿಂದ ಕಮಲಾ ನಾಯಕ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೂ ಗೆಲುವು ಸಾಧಿಸಲಾಗಿಲ್ಲ.

ಪ್ರಾರಂಭ ಚುನಾವಣೆಗಳಲ್ಲಿ ಸತತ ಮೂರು ಬಾರಿ ಕಾಂಗ್ರೆಸ್ ಹಾಗೂ ಎರಡು ಬಾರಿ ಇಂದಿರಾ ಕಾಂಗ್ರೆಸ್‌ಗೆ ಮಣೆ ಹಾಕಲಾಗಿದೆ. ಈ ಸಂದರ್ಭದಲ್ಲಿ ಕಮ್ಯುನಿಷ್ಟ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ ಅವರಿಗೆ ಮತದಾರರಿಗೆ ಯಾವುದೇ ಮನ್ನಣೆ ದೊರೆತಿಲ್ಲ. 1983 ರ ನಂತರ ನಡೆದ ಏಳು ಚುನಾವಣೆಗಳಲ್ಲಿ ಕಾಂಗ್ರೆಸ್(1989)ಗೆ ಒಮ್ಮ ಮಾತ್ರ ಅವಕಾಶ ನೀಡಲಾಗಿದೆ. ಉಳಿದ ಆರು ಅವಧಿಗೆ ಕಾಂಗ್ರೆಸ್ಸೇತರ ಪಕ್ಷಗಳೇ ಮೇಲುಗೈ ಸಾಧಿಸುತ್ತಾ ಬಂದಿರುವುದು ಈ ಕ್ಷೇತ್ರದ ವಿಶೇಷವಾಗಿದೆ.

ಚುನಾವಣಾ ಇತಿಹಾಸ: 1952ರ ಪ್ರಥಮ ಚುನಾವಣೆಯಲ್ಲಿ ಗುದ್ಲೆಪ್ಪ ಹಳ್ಳಿಕೇರಿ ತನ್ನ ಸಮೀಪದ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಶಾಂತಪ್ಪ ಮಾಗಾವಿ ಅವರಿಗಿಂತ ಕೇವಲ 250 ಮತಗಳ ಮುನ್ನಡೆಯಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಅಲೆ ಇದ್ದ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬ ಗುದ್ಲೆಪ್ಪ ಹಳ್ಳಿಕೇರಿ ಅವರಿಗೆ ತೀವ್ರ ಪೈಪೋಟಿ ನೀಡಿದ್ದಲ್ಲದೇ, ಫಲಿತಾಂಶದ ಸಮಯದಲ್ಲಿ ಎಲ್ಲರನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು ಎಂಬದನ್ನು ಹಿಂದಿನ ಹಿರಿಯರು ಈಗಲೂ ನೆನೆಪಿಸಿಕೊಳ್ಳುತ್ತಾರೆ.

1957ರ ಎರಡನೇ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಿದ್ದಮ್ಮ ಮಹಾದೇವಪ್ಪ ಮೈಲಾರ 17,286 ಮತಗಳನ್ನು ಪಡೆದು ಆಯ್ಕೆಯಾದರು. 1962 ರ ಚುನಾವಾಣೆಯಲ್ಲಿ ಕಾಂಗ್ರೆಸ್‌ನ ಬಿ.ವಿ. ಮಾಗಾವಿ  18,945 ಮತ ಪಡೆದು ಆಯ್ಕೆಯಾದರೆ, 1967 ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ವಿ. ಮಾಗಾವಿ 20,494 ಮತಗಳಿಸಿ ಪುನರಾಯ್ಕೆಯಾದರು. 

1972 ರ ಚುನಾವಣೆಯಲ್ಲಿ ಕಾಂಗೈನ ಎಸ್. ಎಫ್. ತಾವರೆ 25,061 ಮತಗಳಿಸಿ ಆಯ್ಕೆಯಾಗಿದ್ದರೆ, 1978 ರ ಚುನಾವಣೆಯಲ್ಲಿ ಎಸ್. ಎಫ್. ತಾವರೆ 34,069 ಮತ ಪಡೆದು ಅದೇ ಪಕ್ಷದಿಂದ ಪುನರಾಯ್ಕೆಯಾದರು.

1983 ರ ಚುನಾವಣೆಯಲ್ಲಿ  ಜನತಾ ಪಾರ್ಟಿ(ಜೆಎನ್‌ಪಿ)ಯ ಡಾ. ಚಿತ್ತರಂಜನ್ ಕಲಕೋಟಿ 33,316 ಮತಗಳಿಸಿ ಆಯ್ಕೆಯಾದರೆ, 1985 ರ ಚುನಾವಣೆಯಲ್ಲಿ ಡಾ. ಚಿತ್ತರಂಜನ ಕಲಕೋಟಿ 35,564 ಮತ ಪಡೆದು ಪುನರಾಯ್ಕೆಯಾದರು.

1989 ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ.ಡಿ. ಶಿವಪುರ 45,331 ಮತ ಪಡೆದು ಪ್ರಥಮ ಬಾರಿಗೆ ಆಯ್ಕೆಯಾದರೆ, 1994 ರ ಚುನಾವಣೆಯಲ್ಲಿ ಜನತಾದಳದ ಬಸವರಾಜ ಶಿವಣ್ಣನವರ 55,806 ಮತಗಳಿಸಿ ಆಯ್ಕೆಯಾದರು. 1999 ರ ಚುನಾವಣೆಯಲ್ಲಿ ಬಸವರಾಜ ಶಿವಣ್ಣನವರ ಜೆಡಿಎಸ್‌ನ 35,399 ಮತಗಳಿಸಿ ಪುನರಾಯ್ಕೆಯಾದರು. ಪಕ್ಷೇತರ ಅಭ್ಯರ್ಥಿ ಡಾ.ಚಿತ್ತರಂಜನ ಕಲಕೋಟಿ 32,704, ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ಗಿರ್ಜಿ 17,300, ಜೆಡಿಯು ಅಭ್ಯರ್ಥಿ ಎಂ.ಎಸ್. ಕೋರಿಶೆಟ್ಟರ 9,004 ಮತಗಳನ್ನು ಪಡೆದು ಸೋತರು.

2004 ರ ಚುನಾವಣೆಯಲ್ಲಿ ಬಿಜೆಪಿಯಿಂದ ಶಿವರಾಜ ಸಜ್ಜನರ 53,482 ಮತಗಳಿಸಿ ಆಯ್ಕೆಯಾದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಸವರಾಜ ಶಿವಣ್ಣನವರ 51,286, ಜೆಡಿಎಸ್ ಅಭ್ಯರ್ಥಿ ಶಿವಾನಂದ ಭೀಮಕ್ಕನವರ 7,029 ಮತಗಳಿಸಿ ಸೋಲುಂಡರು.

2008ರ ಚುನಾವಣೆಯಲ್ಲಿ ಹಾವೇರಿ ಮತಕ್ಷೇತ್ರ ಎಸ್‌ಸಿ ಮೀಸಲು ಕ್ಷೇತ್ರವಾಗಿ ಪರಿವರ್ತನೆಗೊಂಡಿತು. ಬಿಜೆಪಿಯ ನೆಹರೂ ಓಲೇಕಾರ 41,068 ಮತಗಳಿಸಿ ಆಯ್ಕೆಯಾದರೆ, ಪಕ್ಷೇತರ ಅಭ್ಯರ್ಥಿ ರುದ್ರಪ್ಪ ಲಮಾಣಿ 23,002, ಪಕ್ಷೇತರ ಡಾ. ಎಸ್.ಎಸ್. ಮಠದ 16,687, ಕಾಂಗ್ರೆಸ್ ಅಭ್ಯರ್ಥಿ ಶಾರದಾ ಬೆಟಗೇರಿ 14,902 ಸೋಲನುಭವಿಸಿದರು. ಈ ಸಂದರ್ಭದಲ್ಲಿ ಒಟ್ಟು 16ಜನ ಅಭ್ಯರ್ಥಿಗಳು ಕಣದಲ್ಲಿದ್ದರು.

ಹಣಾಹಣಿಗೆ ಸಜ್ಜಾದ ಕ್ಷೇತ್ರ: 2013ನೇ ಚುನಾವಣೆಗೆ ನಾಮಪತ್ರ ಸಲ್ಲಿಕೆ ಇದೇ 10 ರಿಂದ ಆರಂಭವಾಗುತ್ತಿದೆ. ಈಗಾಗಲೇ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅಂತಿಮಗೊಂಡ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸುವ ಮುನ್ನವೇ ಬಿಜೆಪಿಯ ಮಾಜಿ ಶಾಸಕ ಹಾಗೂ ಕೆಜೆಪಿ ಅಭ್ಯರ್ಥಿ ನೆಹರೂ ಓಲೇಕಾರ, ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ, ಬಿಜೆಪಿಯ ಡಾ.ಮಲ್ಲೇಶಪ್ಪ ಹರಿಜನ, ಬಿಎಸ್‌ಪಿಯ ಅಶೋಕ ಮರೆಣ್ಣವರ ಅಲ್ಲದೇ ಅನೇಕರು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯ ಬಹಳಷ್ಟು ಜನ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ದೊರೆಯದೇ ನಿರಾಶೆಯಾಗಿದ್ದು, ಕೆಲವರು ಈಗಾಗಲೇ ಬಂಡಾಯದ ಬಾವುಟ ಹಾರಿಸಲು ಸಜ್ಜಾಗಿದ್ದಾರೆ.

ಹಾವೇರಿ ಕ್ಷೇತ್ರ: 1,88,473 ಮತದಾರರು
1952 ರಿಂದ 2008 ರವರೆಗೆ ಹಾವೇರಿ ವಿಧಾನಸಭೆ ಕ್ಷೇತ್ರ ಹಾವೇರಿ ಸಾಮಾನ್ಯ ಕ್ಷೇತ್ರವಾಗಿತ್ತು. 2008ರಲ್ಲಿ ಎಸ್‌ಸಿ ಮೀಸಲು ಕ್ಷೇತ್ರವಾಗಿ ಪರಿವರ್ತನೆಗೊಂಡಿದೆ. ಹಾವೇರಿ ಕ್ಷೇತ್ರದ ವ್ಯಾಪ್ತಿಗೆ ಸವಣೂರು ತಾಲ್ಲೂಕಿನ ಹತ್ತಿಮತ್ತೂರ ಹೋಬಳಿಯ 32 ಗ್ರಾಮಗಳು, ಹಾವೇರಿಯ 61 ಗ್ರಾಮಗಳು ಸೇರಿ ಒಟ್ಟು 93 ಗ್ರಾಮಗಳು ಹಾಗೂ ಒಂದು ನಗರಸಭೆ ಬರುತ್ತದೆ.

ಕ್ಷೇತ್ರದಲ್ಲಿ 99335 ಪುರುಷ, 89,138 ಮಹಿಳಾ ಮತದಾರರು ಸೇರಿ 1,88,473 ಮತದಾರರಿದ್ದಾರೆ. ಕ್ಷೇತ್ರದಲ್ಲಿ 234 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಅದರಲ್ಲಿ 77 ಸೂಕ್ಷ್ಮ, 69 ಅತೀ ಸೂಕ್ಷ್ಮ ಹಾಗೂ 99 ಸಾಮಾನ್ಯ ಮತಗಟ್ಟೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT