ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೇ ಸೆಡ್ಡು ಹೊಡೆದ ಮನೋರಮಾ, ಸೋತು ಗೆದ್ದ ಹೆಗ್ಡೆ

Last Updated 8 ಏಪ್ರಿಲ್ 2014, 10:09 IST
ಅಕ್ಷರ ಗಾತ್ರ

ಉಡುಪಿ: ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರಗೊಂಡು ಸ್ಪರ್ಧಿಸಿದ ಮನೋರಮಾ ಮಧ್ವರಾಜ್‌ ಅವರು 2004ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಲೋಕಸಭೆ ಪ್ರವೇಶಿಸಿದರು. ಉಡುಪಿ ಕ್ಷೇತ್ರದ ಮೊದಲ ಮಹಿಳಾ ಸಂಸದೆ ಎಂಬ ಖ್ಯಾತಿ ಅವರದ್ದಾ­ಯಿತು. ಈ ಚುನಾವಣೆಯ ನಂತರ ಅವರು ರಾಜಕೀಯ ನಿವೃತ್ತಿ ಪಡೆದರು ಎಂಬುದು ಉಲ್ಲೇಖನೀಯ.

ಉಡುಪಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮೂರು ಬಾರಿ ಸ್ಪರ್ಧಿಸಿ ಆಯ್ಕೆ­ಯಾಗಿದ್ದ ಮನೋರಮಾ ಸಚಿವರಾಗಿಯೂ ಕೆಲಸ ಮಾಡಿದ್ದರು. ರಾಜಕೀಯ ಸ್ಥಿತ್ಯಂತರದ ಪರಿಣಾಮ ಬಿಜೆಪಿ ಸೇರ್ಪಡೆಗೊಂಡು ಸ್ಪರ್ಧಿಸಿದ ಅವರಿಗೆ ಕ್ಷೇತ್ರದ ಮತದಾರರು ಆಶೀರ್ವಾದ ಮಾಡಿದರು. ಅವರ ಎದುರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ವಿನಯ ಕುಮಾರ್‌ ಸೊರಕೆ  ಸೋಲನ್ನು ಅನುಭವಿಸಿದರು.

ಮನೋರಮಾ ಅವರು 3,69,627 ಮತ ಪಡೆದರೆ ಸಮೀಪದ ಪ್ರತಿಸ್ಪರ್ಧಿಯಾಗಿದ್ದ ಸೊರಕೆ 3,40,624 ಮತ ಗಳಿಸಿದರು. ಜೆಡಿಎಸ್‌ನ ತಾರಾ­ನಾಥ ಶೆಟ್ಟಿ ಕೊಡವೂರು ಮತ್ತು ಪಕ್ಷೇತರ ಅಭ್ಯರ್ಥಿ ಓಸ್ವಾಲ್ಡ್‌ ಫರ್ನಾಂಡಿಸ್‌ ಅವರೂ ಕಣದಲ್ಲಿದ್ದರು.

ಮನೋರಮಾ ಅವರ ವೈಯಕ್ತಿಯ ವರ್ಚಸ್ಸು ಮತ್ತು ಬಿಜೆಪಿಯ ಸಾಂಪ್ರದಾಯಿಕ ಮತಗಳು ಅವರನ್ನು ಗೆಲುವಿನ ದಡ ಸೇರಿಸಿತ್ತು. ಭಾರಿ ಅಂತರ ಅಲ್ಲದಿದ್ದರೂ ಗಮನ ಸೆಳೆಯುವಂತೆ ಅವರು ವಿಜಯದ ಪತಾಕೆ ಹಾರಿಸಿದ್ದರು.

ಕಾಂಗ್ರೆಸ್‌ ಭದ್ರಕೋಟೆ ಎಂಬ ಬಲವಾದ ನಂಬಿಕೆಗೆ ಪೆಟ್ಟುಕೊಟ್ಟ ಫಲಿತಾಂಶ ಇದಾಗಿತ್ತು. ಆ ನಂತರ ಜಿಲ್ಲೆಯಲ್ಲಿ ಆರಂಭವಾದ ಕಾಂಗ್ರೆಸ್‌ ಮತ್ತು ಬಿಜೆಪಿಯ ಜಿದ್ದಾಜಿದ್ದಿನ ಹಣಾಹಣಿ ಈಗಲೂ ಮುಂದುವರೆದಿದೆ.

ಮನೋರಮಾ ಅವರು ಬಿಜೆಪಿಯಲ್ಲೇ ಉಳಿದು ಸಕ್ರಿಯ ರಾಜಕಾರಣ ಮಾಡಿದ್ದರೆ ಬಹುಶಃ ಉಡುಪಿ ಜಿಲ್ಲೆಯಲ್ಲಿ ರಾಜಕೀಯ ಚಿತ್ರಣ ಬದಲಾಗುವ ಸಾಧ್ಯತೆ ಇತ್ತು.

ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಎಡಪಕ್ಷಗಳು 2008ರಲ್ಲಿ ಹಿಂದಕ್ಕೆ ಪಡೆದ ಪರಿಣಾಮ ಸರ್ಕಾರ ಬಹುಮತ ಸಾಬೀತು ಮಾಡುವ ಸಂದರ್ಭ ಬಂತು. ಮತದಾನದ ವೇಳೆ ತಟಸ್ಥರಾಗಿ ಉಳಿದ ಮನೋರಮಾ ಪರೋಕ್ಷವಾಗಿ ಕಾಂಗ್ರೆಸ್‌ ಬೆಂಬಲಿಸಿ­ದರು. ಬಿಜೆಪಿ ತಮ್ಮನ್ನು ಕಡೆಗಣಿಸಿದ್ದು ಇದಕ್ಕೆ ಕಾರಣ ಎಂದು ಸಬೂಬು ನೀಡಿದ್ದರು.

ತಾಯಿ ಮನೋರಮಾ ಅವರು ಕಾಂಗ್ರೆಸ್‌ ತೊರೆದ ಸಂದರ್ಭದಲ್ಲಿ ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ­ರಾಗಿದ್ದ ಮಗ ಪ್ರಮೋದ್‌ ಮಧ್ವರಾಜ್‌ ಮಾತ್ರ ಪಕ್ಷ ಬಿಡಲಿಲ್ಲ.

ಕಾಂಗ್ರೆಸ್‌ಗೆ ನಿಷ್ಠೆ ತೋರಿದ ಅವರು ಪಕ್ಷದಲ್ಲೇ ಉಳಿದರು. ಈಗ ಅವರು ಶಾಸಕರಾ­ಗಿದ್ದಾರೆ. ಕಾಂಗ್ರೆಸ್‌ಗೆ ಮಧ್ವರಾಜ್‌ ಕುಟುಂಬದ ನಿಷ್ಠೆ ಮುಂದುವರಿದೇ ಇದೆ.

ಜನತಾದಳದಿಂದ ರಾಜಕೀಯ ಆರಂಭಿಸಿ ಎರಡು ಬಾರಿ ಪಕ್ಷದಿಂದ ಮತ್ತು ಒಂದು ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದ ಕೆ. ಜಯಪ್ರಕಾಶ್‌ ಹೆಗ್ಡೆ ಆ ನಂತರ ಕಾಂಗ್ರೆಸ್‌ ಸೇರ್ಪಡೆಗೊಂಡರು.

ಪುನರ್‌ವಿಂಗಡಣೆ ಬಳಿಕ:  ಕ್ಷೇತ್ರ ಪುನರ್‌ ವಿಂಗಡಣೆಯ ನಂತರ ಅಸ್ತಿತ್ವಕ್ಕೆ ಬಂದ ಉಡುಪಿಯ ನಾಲ್ಕು ಮತ್ತು ಚಿಕ್ಕ­ಮಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಉಡುಪಿ– ಚಿಕ್ಕಮಗಳೂರು ಕ್ಷೇತ್ರದಿಂದ 2009ರ ಚುನಾವಣೆಯಲ್ಲಿ ಹೆಗ್ಡೆ ಅವರು ಸ್ಪರ್ಧಿಸಿ ಸೋತರು. ಪುತ್ತೂರಿನಿಂದ ಬಂದು ಸ್ಪರ್ಧೆಗಿಳಿದ ಬಿಜೆಪಿಯ ಡಿ.ವಿ. ಸದಾನಂದ ಗೌಡರು ಜಯ ಗಳಿಸಿದರು.

ಆಡಳಿತ ವಿರೋಧಿ ಅಲೆ, ಬಿಜೆಪಿ ಪರ­ವಾದ ಒಲವು ಮತ್ತು ಹೆಗ್ಡೆ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರಿದರೂ ಆ ಪಕ್ಷದವರೇ ಅವರನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳದ, ಹೆಗ್ಡೆ ಅವರೂ ಹೊಸ ಪಕ್ಷಕ್ಕೆ ಒಗ್ಗಿಕೊಳ್ಳದ ವಿಚಿತ್ರ ಸ್ಥಿತಿಯ ಪರಿಣಾಮ ಅವರು ಪರಾಭವಗೊಂಡರು ಎಂದು ವಿಶ್ಲೇಷಿಸಲಾಗುತ್ತದೆ.

ಕೇವಲ ವ್ಯಕ್ತಿಯನ್ನು ನೋಡಿ ಮತ ಹಾಕುವುದಿಲ್ಲ. ರಾಜಕೀಯ ಸಂದರ್ಭ ಮುಂತಾದ ಅಂಶಗಳನ್ನೂ ನೋಡಿಯೇ ಮತ ಹಾಕುವುದು ಎಂಬುದನ್ನು ಉಡುಪಿ ಮತದಾರರು ಈ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತು ಮಾಡಿದರು.

ಉಡುಪಿ ಕ್ಷೇತ್ರಕ್ಕೆ ಪರಿಚಿತರೇ ಆದ ಹೆಗ್ಡೆ ಅವರು ಉಡುಪಿಯಲ್ಲಿಯೇ ಹಿನ್ನಡೆ ಅನುಭವಿಸಿದರು. ಉಡುಪಿ ಮತ್ತು ಚಿಕ್ಕಮಗಳೂರು ಎರಡೂ ಜಿಲ್ಲೆ­ಗಳಿಗೂ ಹೊಸಬರೆನಿಸಿದರೂ ಸದಾನಂದ ಗೌಡ ಅಚ್ಚರಿ ಎನಿಸುವ ರೀತಿಯಲ್ಲಿ ಯಶಸ್ಸು ಗಳಿಸಿದರು.

ಮುಖ್ಯಮಂತ್ರಿ ಆದ ನಂತರ ಸದಾನಂದಗೌಡ ಅವರು ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2012ರಲ್ಲಿ ನಡೆದ ಉಪ ಚುನಾವಣೆ­ಯಲ್ಲಿ ಹೆಗ್ಡೆ ಜಯ ಗಳಿಸಿದರು.

ರಾಜ್ಯದ ರಾಜಕೀಯಕ್ಕೆ ತಿರುವು ನೀಡಿದ ಚುನಾವಣೆ ಇದಾಗಿತ್ತು. ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಲೈಂಗಿಕ ಹಗರಣಗಳು, ಒಳಜಗಳಕ್ಕೆ ಈ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಿದರು. ಯಡಿಯೂರಪ್ಪ ಅವರು ತಟಸ್ಥರಾಗಿ ಉಳಿದ ಕಾರಣ ಬಿಜೆಪಿ ಸೋತಿತು ಎಂಬುದು ಬಿಜೆಪಿ ಮುಖಂಡರ ವಾದವಾಗಿದೆ. ಈ ಬಾರಿಯೂ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆಯೇ ನೇರ ಸ್ಪರ್ಧೆ ಇದೆ.

ಕ್ಷೇತ್ರ: ಉಡುಪಿ (2004);  ಚಲಾಯಿತ ಮತ: 7,80,356

1) ಮನೋರಮಾ ಮಧ್ವರಾಜ್‌           (ಬಿಜೆಪಿ)            3,69,627
2) ವಿನಯ ಕುಮಾರ್‌ ಸೊರಕೆ          (ಕಾಂಗ್ರೆಸ್‌)         3,40,624
3) ತಾರಾನಾಥ ಶೆಟ್ಟಿ ಕೊಡವೂರು      (ಜೆಡಿಎಸ್‌)            45,574
4) ಓಸ್ವಾಲ್ಡ್‌ ಫರ್ನಾಂಡಿಸ್‌             (ಸ್ವತಂತ್ರ)               24,531


ವರ್ಷ: 2009;                ಚಲಾಯಿತ ಮತ: 8,34,728 
1) ಡಿ.ವಿ.ಸದಾನಂದ ಗೌಡ       (ಬಿಜೆಪಿ)            4,01,441
2) ಕೆ.ಜಯಪ್ರಕಾಶ್‌ ಹೆಗ್ಡೆ         (ಕಾಂಗ್ರೆಸ್‌)        3,74,423
3) ರಾಧಾ ಸುಂದರೇಶ್‌          (ಸಿಪಿಐ)                24,991
4) ಶ್ರೀನಿವಾಸ ಪೂಜಾರಿ        (ಸ್ವತಂತ್ರ)              11,263
4) ಜೆ.ಸ್ಟೀವನ್‌ ಮೆನೇಜಸ್‌     (ಬಿಎಸ್‌ಪಿ)               9,971
5) ಗಣಪತಿ ಶೆಟ್ಟಿಗಾರ್‌          (ಸ್ವತಂತ್ರ)                2793
6) ವಿನಾಯಕ ಮಲ್ಯ            (ಸ್ವತಂತ್ರ)                 3096
7) ಡಾ. ಶ್ರೀಧರ ಉಡುಪ       (ಸ್ವತಂತ್ರ)                 3467

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT