ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾದಂಬರಿ ಬರೆಯೋದು ಅಂದ್ರೆ ಬಿಲ್ಡಿಂಗ್ ಕಟ್ಟಿದ ಹಾಗೆ...

Last Updated 4 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಅಂಜುಂ ಹಸನ್‌ರ ಈ ಹಿಂದಿನ ಎರಡು ಕಾದಂಬರಿಗಳೂ `ಕ್ರಾಸ್‌ವರ್ಡ್ ಬುಕ್ ಅವಾರ್ಡ್~ (ಲ್ಯೂನಾಟಿಕ್ ಇನ್ ಮೈ ಹೆಡ್) ಮತ್ತು  `ಹಿಂದೂ ಬೆಸ್ಟ್ ಬುಕ್ ಅವಾರ್ಡ್~ (ನೇತಿ ನೇತಿ)ಗಳ ಶಾರ್ಟ್‌ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದ್ದವು. ಅವರ ಮೊದಲ ಕವನ ಸಂಕಲನ, `ಸ್ಟ್ರೀಟ್ ಆನ್ ದ ಹಿಲ್~ ಅವರಿಗೆ ಹೆಸರು ತಂದುಕೊಟ್ಟ ಕೃತಿ.

ಇತ್ತೀಚೆಗಷ್ಟೇ ಬಿಡುಗಡೆಯಾದ `ಡಿಫಿಕಲ್ಟ್ ಪ್ಲೆಷರ್ಸ್~ ಹದಿಮೂರು ಕತೆಗಳ ಸಂಕಲನ. `ನೇತಿ ನೇತಿ~ ಕಾದಂಬರಿಯ ಪ್ರಧಾನ ಭೂಮಿಕೆ ನಮ್ಮ ಬೆಂಗಳೂರು ನಗರ ಎಂಬುದು ಕುತೂಹಲಕರ.

ಇಂಡಿಯನ್ ಫೌಂಡೇಶನ್ ಫಾರ್ ಆರ್ಟ್ಸ್‌ನಲ್ಲಿದ್ದಾಗ ಐಎಫ್‌ಎಯ ಪತ್ರಿಕೆ `ಆರ್ಟ್ ಕನೆಕ್ಟ್~ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿದ್ದ ಅಂಜುಂ ಹಸನ್ ಪ್ರಸ್ತುತ `ಕೆರವಾನ್~ ಪತ್ರಿಕೆಯ ಪುಸ್ತಕ ವಿಭಾಗವನ್ನು ನಿರ್ವಹಿಸುತ್ತಿದ್ದಾರೆ. ಅಧ್ಯಯನಶೀಲ ಪ್ರಬಂಧಗಳ ಮೂಲಕ ಪುಸ್ತಕಗಳೊಂದಿಗೆ `ಮಾತನಾಡುವ~ ಅಂಜುಂ ಹಸನ್‌ರ ಲೇಖನಗಳು ಹೀಗೆ ಓದಿ ಹಾಗೆ ಮರೆತುಬಿಡಬಹುದಾದ ಬರಹಗಳಲ್ಲ.
 
ಅವು ಆಳವಾದ ಗಮನ ಮತ್ತು ವಿಸ್ತಾರವಾದ ಓದನ್ನು ಬಯಸುವ, ಉತ್ತೇಜಿಸುವ ಬರಹಗಳು.`ಪ್ರಜಾವಾಣಿ~ಗಾಗಿ ನಡೆಸಿದ ಈ ಸಂದರ್ಶನದಲ್ಲಿ ಅಂಜುಂ ಹಸನ್ ತಮ್ಮ ಬರವಣಿಗೆ ಸಾಗಿಬಂದ ಬಗ್ಗೆ, ಅದರ ನೆಲೆ-ನಿಲುವುಗಳ ಬಗ್ಗೆ ಆತ್ಮೀಯವಾಗಿ ಹಂಚಿಕೊಂಡಿದ್ದಾರೆ.

`ಪ್ರಜಾವಾಣಿ~ಯ `ಸಾಹಿತ್ಯ ಪುರವಣಿ~ಗಾಗಿ ಈ ವಿಶೇಷ ಸಂದರ್ಶನ ನಡೆಸಿಕೊಟ್ಟವರು:  ನರೇಂದ್ರ ಪೈ

ಕವಿತೆಗಳ ಮೂಲಕ ನೀವು ಬರವಣಿಗೆಯನ್ನು ಸುರುಮಾಡಿದವರು. ಮೊತ್ತ ಮೊದಲಬಾರಿಗೆ ಬರೆಯಬೇಕು ಅಂತ ನಿಮಗೆ ಯಾವಾಗನ್ನಿಸಿತು ಮತ್ತು ಯಾಕೆ?
ನನಗೆ ನೆನಪಿರೋ ಮಟ್ಟಿಗೆ ಚಿಕ್ಕಂದಿನಿಂದಲೂ ನನಗೆ ಬರೆಯೋದು ಮತ್ತು ಅಂಥ ಎಲ್ಲ ಸಂಗತಿಗಳ ಬಗ್ಗೆ ಒಂಥರಾ ಮೋಹ ಇತ್ತು. ಹೊಸಾ ಪುಸ್ತಕದಿಂದ ಬರೋ ಪರಿಮಳ, ಒಬ್ಬ ಬರಹಗಾರನ ಬದುಕು, ಅವನು  ಸೃಷ್ಟಿಸಿದ ಕಾಲ್ಪನಿಕ ಜಗತ್ತಿನ ವಿವರಗಳು, ಬರವಣಿಗೆ ಜೊತೆ ಸಂಬಂಧಪಟ್ಟ ಬೇರೆ ಬೇರೆ ವಸ್ತುಗಳು, ಹೀಗೆ.

ನನಗೆ ಗೊಂಬೆಗಳಿಗಿಂತ ಪೆನ್ನು, ನೋಟ್‌ಬುಕ್ಕು ಹೆಚ್ಚು ಇಷ್ಟವಾಗ್ತಿತ್ತು. ನಾನೇನೋ ಒಬ್ಬ ಜೀನಿಯಸ್ ಅಂತಾನೊ, ಎಲ್ಲಾ ಖಾಲಿ ಪುಟಗಳನ್ನೂ ಬರೆದು ತುಂಬಿಸಿಬಿಡ್ತೇನೋ ಅಂತೆಲ್ಲ ಅಲ್ಲ. ಅದರಲ್ಲಿ ನನಗೇನೋ ಸಮಾಧಾನ ಇತ್ತು, ಖುಶಿ ಇತ್ತು ಅಷ್ಟೆ. ಹಾಗೆ ನನಗೆ ಕವನ ಬರೆಯೋದು ಅಂದ್ರೆ ಎಲ್ಲಕ್ಕಿಂತ ಹೆಚ್ಚಾಗಿ ಈ ಒಂದು ಪ್ರೀತಿಯ ಅಭಿವ್ಯಕ್ತಿನೇ ಆಗಿತ್ತು.

ಹೆಚ್ಚಿನ ಹೊಸ ಬರಹಗಾರರ ಹಾಗೆ ನಾನೂ ಕವನಗಳಿಂದ ಬರವಣಿಗೇನ ಸುರು ಮಾಡಿದೆ. ನಾನು ನನ್ನ ಹದಿಹರೆಯದ ದಿನಗಳನ್ನು ಷಿಲ್ಲಾಂಗಿನ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಕಳೆದೆ. ನನ್ನ ತಂದೆಯವ್ರ  ಯೂನಿವರ್ಸಿಟೀಲಿ ಪ್ರೊಫೆಸರ್ ಆಗಿದ್ರು. ನನ್ನ ಸುತ್ತಮುತ್ತ ಇದ್ದ ಅನೇಕ ಶಿಕ್ಷಕರು, ವಿದ್ಯಾರ್ಥಿಗಳು ಎಲ್ಲ ಕವನ ಬರೀತಾ ಇದ್ರು.

ಕವನದಲ್ಲಿ ನನ್ನ ಆರಂಭಿಕ ಆಸಕ್ತಿಯನ್ನ ಬಹುಶಃ ನಾನು ಆಗಲೇ ಕಂಡುಕೊಂಡಿರಬೇಕು ಅನಿಸುತ್ತೆ. ಆ ನಂತರದ ಬೆಳವಣಿಗೆಯಾಗಿ ಕತೆ-ಕಾದಂಬರಿಗಳಲ್ಲಿನ ಆಸಕ್ತಿಯನ್ನ ಕೆಲವು ವರ್ಷಗಳ ಹಿಂದೆ ಮಿಲನ್ ಕುಂದೇರಾನ ಒಂದು ಪ್ರಬಂಧ ಓದಿದಾಗ ಅರ್ಥ ಮಾಡಿಕೊಂಡೆ. ಅವನು ಹೆಗೆಲ್ ಅನ್ನ ಕೋಟ್ ಮಾಡಿ ಹೇಳ್ತಾನೆ, `ಒಂದು ಕವನದ ಭಾವ ಏನಿದೆ ಅದೇ ಆ ಕವಿ ಆಗಿರುತ್ತಾನೆ~ ಅಂತ.
 
ಅದು ಭಾವನಾತ್ಮಕ ನಿಲುವು, ಸ್ವಭಾವದ ಅಭಿವ್ಯಕ್ತಿ. ಯಾವಾಗ ನಮಗೆ ಈ ಜಗತ್ತಿನೊಂದಿಗೆ ನಮ್ಮ ಭಾವನೆಗಳನ್ನ ಮೀರಿದ್ದು, ಸ್ವಂತದ್ದನ್ನು ಮೀರಿದ್ದು ಇದೆ ಅನ್ನುವ ಅರಿವಾಗುತ್ತೋ ಆಗ ನಾವು ಕಾದಂಬರಿಯ ಮನೋಭಾವದತ್ತ ಹೊರಳುತ್ತೇವೆ.

“ಕಾವ್ಯದ ಭಾವಜಗತ್ತಿನ ಪಳೆಯುಳಿಕೆಗಳಿಂದ ಕಾದಂಬರಿಕಾರನ ಜನ್ಮವಾಗುತ್ತದೆ”. ಹಾಗೆ ನಾನು ಮತ್ತೆ ಆಗಾಗ ಕವನಗಳನ್ನು ಬರೆಯಲೂಬಹುದು, ಇಲ್ಲವೆಂದಲ್ಲ. ಆದರೆ ಒಂದು ಮನೋಧರ್ಮದ ನೆಲೆಯಿಂದ ಹೇಳುವುದಾದರೆ ನಾನು ಅದನ್ನು ಆಗಲೇ ದಾಟಿ ಬಂದಿದ್ದೇನೆ ಅನಿಸುತ್ತದೆ. 
 
ಬೆಂಗಳೂರು ನಿಮ್ಮ ಒಳಜಗತ್ತಿಗೆ ಹೇಗೆ ಕೊಡುಗೆಯನ್ನಿತ್ತಿದೆ? ನಿಮ್ಮ ಓದುಗ ಯಾರು ಅಥವಾ ನೀವು ಬರೆಯುತ್ತಿರುವುದು ಯಾರಿಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಿದೆಯೆ?
ನಾನು ನನ್ನದೇ ನೆಲೆಯನ್ನ ಬೇರೊಬ್ಬ `ಹೊರಗಿನ ವ್ಯಕ್ತಿ~ಯ ಸ್ಥಿತಿಯನ್ನು ಗ್ರಹಿಸುವ ಒಂದು ಸೃಜನಾತ್ಮಕ ಅವಕಾಶ ಅಂತ ತಿಳಿದು ಬಳಸಿಕೊಳ್ಳೋದಕ್ಕೆ ಪ್ರಯತ್ನಿಸುತ್ತೇನೆ. ಬಲವಾದ ಸಾಂಸ್ಕೃತಿಕ ನೆಲೆಗಟ್ಟುಗಳಿಲ್ಲದ ನಾನು ನಿರ್ದಿಷ್ಟವಾಗಿ ಎಲ್ಲಿಗೂ ಸಲ್ಲುವುದಿಲ್ಲ.
ನನ್ನ ಹೆತ್ತವರು ದಿಲ್ಲಿಯವರಾದರೂ ನಾನು ಬೆಳೆದಿದ್ದೆಲ್ಲ ಷಿಲ್ಲಾಂಗ್‌ನಲ್ಲಿ. ಬಹುತೇಕ ಕ್ರಿಶ್ಚಿಯನ್, ಇಂಗ್ಲಿಷ್ ಮಾತನಾಡುವವರಾದರೂ ಎಲ್ಲ ಬಗೆಯ ಜನರಿರುವ ನಗರ ಅದು. ಉದ್ಯೋಗ ನಿಮಿತ್ತ ತೊಂಬತ್ತರ ದಶಕದ ಕೊನೆಯಲ್ಲಿ ನಾನು ಬೆಂಗಳೂರಿಗೆ ಬಂದೆ. ಬೆಂಗಳೂರಿನಲ್ಲಿರುತ್ತ ನಾನು ಒಂದು ನಿರ್ದಿಷ್ಟ ಬಗೆಯ ಸಾಹಿತಿಯಾಗಿ ಬೆಳೆದಿದ್ದೇನೆ.

ಈ ನಗರದಲ್ಲಿ, ಅದರ ಹೊಸತನದಲ್ಲಿ ಮತ್ತು ನಿರಂತರ ಕಟ್ಟುವ, ಕೆಡಹಿ ಕಟ್ಟುವ ಬಗೆಯಲ್ಲೇ ಏನೋ ತೀರಾ ವಿಚ್ಛಿದ್ರಕವಾದದ್ದು ಮತ್ತು ಅದೇ ಕಾಲಕ್ಕೆ ಆಕರ್ಷಕವಾದದ್ದೂ ಇದೆ. ಇದು ಸೂಕ್ಷ್ಮವಾದ, ಜಾಗರೂಕತೆಯ ಅಗತ್ಯವಿರುವ ನಗರವಾಗಿರುವಾಗಲೇ ಸುಲಭವಾಗಿ ಗ್ರಹಿಸಲು ಸಾಧ್ಯವಿರುವ, ಹಂಚಿಕೊಳ್ಳುವುದು ಸಾಧ್ಯವಿರುವ ಒಂದು ಸ್ಥಳವಾಗಿದೆ.

 ಓದುಗರ ವಿಚಾರಕ್ಕೆ ಬಂದರೆ, ಆಧುನಿಕ ಬರಹಗಾರ ತನ್ನ ಓದುಗರನ್ನು ಯಾವುದೇ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿ ನೋಡುತ್ತಾನೆಂದು ನಾನು ಭಾವಿಸಿಲ್ಲ. ಬರಹಗಾರ ತನ್ನ ಓದುಗ ವಲಯದೊಂದಿಗೆ ನಿರಂತರವಾದ ಸಂಪರ್ಕದಲ್ಲಿರುವುದು ಒಂದು ಬಗೆಯ ಕಲ್ಪನೆಯಷ್ಟೇ, ಅದೇ ನಿಜವೇನಲ್ಲ. ನಾವು ಒಂದು ಚಲಿಸುತ್ತಿರುವ ಜಗತ್ತಿನಲ್ಲಿ ಬದುಕುತ್ತಿದ್ದೇವೆ.

ಪುಸ್ತಕ ಪ್ರಕಟಿಸುವುದು ಎನ್ನುವ ಪ್ರಕ್ರಿಯೆಯೇ ಒಂದು ವಿಧದಲ್ಲಿ ಅದನ್ನು ಚಲನೆಗೆ ಹಚ್ಚುವ ವಿಧಾನವಾಗಿದೆ. ಹಾಗೆ ನನ್ನ ಓದುಗರು ಎಲ್ಲಿಯೂ ಇರಬಹುದು ಮತ್ತು ನಾನವರನ್ನು ಎಲ್ಲಿಯೂ ಕಂಡುಕೊಳ್ಳಬಹುದು. ಅದೇ ಸಮಯಕ್ಕೆ ಬೆಂಗಳೂರಿನ ಓದುಗರು ಆರಂಭದಿಂದಲೂ ನನ್ನ ಕೃತಿಗಳಿಗೆ ಬೆಚ್ಚನೆಯ ಪ್ರತಿಸ್ಪಂದನವನ್ನು ತೋರಿಸುತ್ತ ಬಂದಿದ್ದಾರೆ. ಹಾಗಾಗಿ ನನ್ನ ಹೃದಯ ಇಲ್ಲಿದೆ ಮತ್ತು ಸದಾ ಇಲ್ಲಿಯೇ ಇರುತ್ತದೆ.
 
ನಗರವೂ ಪ್ರತಿಯೊಂದು ವರ್ಗವನ್ನು ನಿರ್ದಿಷ್ಟ ಮಟ್ಟದವರೆಗೆ ಮಾತ್ರ ತನ್ನಾಳಕ್ಕೆ ಇಳಿಯಲು ಅವಕಾಶವನ್ನೀಯುತ್ತದೆ. ಎಲ್ಲವನ್ನೂ ಬಿಟ್ಟುಕೊಡುವ ಒಂದು ಹಳ್ಳಿ ಅಥವಾ ಪುಟ್ಟ ಪಟ್ಟಣಕ್ಕೆ ತದ್ವಿರುದ್ಧವಾಗಿ ನಗರದಲ್ಲಿ `ನಿಷೇಧಿತ ವಲಯ~ ವೊಂದು ಇದ್ದೇ ಇರುತ್ತದೆ. ಷಿಲ್ಲಾಂಗ್‌ನಿಂದ ಬಂದ ನಿಮಗೆ ಇಲ್ಲಿ ಈ ತೊಡಕಿನಿಂದಾಗಿ ಕೊರತೆಯೆನಿಸಿದ್ದಿದೆಯೆ?
ಬೆಂಗಳೂರಿಗೆ ಬರುವ ಮತ್ತು ನಗರದ `ಹೊಸ~ ಸಂಸ್ಕೃತಿಯ ತೀರ ತುದಿಯಂಚಿಗೆ ನೂಕಲ್ಪಟ್ಟ ಒಬ್ಬ ತರುಣಿಯ ಪಯಣವಾಗಿ `ನೇತಿನೇತಿ~ ಕಾದಂಬರಿಯ ಪರಿಕಲ್ಪನೆಯಿತ್ತು. ಈ ಸಂಸ್ಕೃತಿಗೆ ಎರಡು ಪ್ರಮುಖ ಲಕ್ಷಣಗಳಿವೆ. ಒಂದು, ಮಹಾನ್ ಭೌತಿಕತೆ. ಭೌತಿಕವಾದ ವಸ್ತುಗಳ ಮತ್ತು ಅವುಗಳನ್ನು ಕೊಂಡುಕೊಳ್ಳಲು ಅಗತ್ಯವಾದ ಹಣದ ಮಹಾನ್ ಹಸಿವು.

ಇನ್ನೊಂದು, ಸಹಜವಾದ ಭಾವಕೋಶವನ್ನು ಕಳೆದುಕೊಂಡ ಅನುಭವ. ಬಹುಶಃ ಇದು ಮೌಲ್ಯಗಳನ್ನು ಕಳೆದುಕೊಂಡ, ಯಾವುದು ಮುಖ್ಯ, ಯಾವುದು ಸರಿ ಎನ್ನುವ ವಿವೇಚನೆಯನ್ನೇ ಕಳೆದುಕೊಂಡ ಫಲಶ್ರುತಿ. ನನ್ನ ಕಾದಂಬರಿಯ ಪಾತ್ರ ಸೋಫಿದಾಸ್ ಈ ಹೊಸ ವಾಸ್ತವದೊಂದಿಗೆ ಮುಖಾಮುಖಿಯಾಗಬೇಕಿದೆ ಮತ್ತಿದನ್ನು ಅವಳು ಬೆಂಗಳೂರಿನೊಂದಿಗೆ ಸಮೀಕರಿಸುತ್ತಾಳೆ.

ಅವಳ ಸಂದರ್ಭದಲ್ಲಿ ಅವಳು ಇಷ್ಟಪಡದ ಪ್ರತಿಯೊಂದನ್ನೂ ಬೆಂಗಳೂರು ಪ್ರತಿನಿಧಿಸುವುದಕ್ಕೆ ತೊಡಗುತ್ತದೆ. ಹಾಗೆ ನಗರದಿಂದ ತಪ್ಪಿಸಿಕೊಂಡು ತನ್ನ ಊರಿಗೆ ವಾಪಸ್ಸಾಗುವುದು ಪರಿಹಾರದಂತೆ ಕಾಣತೊಡಗುತ್ತದೆ.
 
ಜಗತ್ತಿನಿಂದ ರಕ್ಷಣೆ ಪಡೆಯಲು, ತಪ್ಪಿಸಿಕೊಳ್ಳಲು ಇರುವ ಆಶ್ರಯತಾಣದ ಪರಿಕಲ್ಪನೆ ನನಗಿಷ್ಟ. ಆದರೆ ಈ ಕಾದಂಬರಿಯಲ್ಲಿ ಇನ್ನೂ ಒಂದು ಪ್ರಶ್ನೆ ಇದೆ. ಇವತ್ತಿನ ಈ ಜಗತ್ತಿನಲ್ಲಿ ಅಂಥಾ ಒಂದು ಆಸರೆ ಎಂದು ನಾವು ಭಾವಿಸುವ ಸ್ಥಳವಾದರೂ ಎಷ್ಟರ ಮಟ್ಟಿಗೆ ನಮ್ಮ ಕಲ್ಪನೆಯ ಸ್ಥಳವಾಗಿಯೇ ಉಳಿದಿರುತ್ತದೆ ಎನ್ನುವುದೇ ಆ ಪ್ರಶ್ನೆ.   

ನೀವು ಒಬ್ಬ ಲೇಖಕನ ಒಂದು ಕೃತಿಯ ಬಗ್ಗೆ ಬರೆಯುವಾಗ ಆತನ ಹಿಂದಿನ ಕೃತಿಗಳು, ಆ ಕೃತಿಯ ಸಮಕಾಲೀನ ಇತರ ಕೃತಿಗಳು, ಅವುಗಳ ಸಾಮಾಜಿಕ ಸಂದರ್ಭ ಹೀಗೆ ಬಹಳಷ್ಟನ್ನು ಸೇರಿಸಿಕೊಂಡು ಬರೆಯುತ್ತೀರಿ. ಇದನ್ನು ಹೇಗೆ ರೂಢಿಸಿಕೊಂಡಿರಿ?
ಒಂದು ಕೃತಿಯನ್ನು ಅರಿಯುವ ಅತ್ಯುತ್ತಮ ಮಾರ್ಗವೆಂದರೆ ಇನ್ನೊಂದು ಕೃತಿಯನ್ನು ಓದುವುದೇ. ಒಳ್ಳೆಯ ಒಳನೋಟ ದಕ್ಕುವುದು ಪರಸ್ಪರ ಹೋಲಿಕೆಯಲ್ಲಿಯೇ. ನಾನು ಸಾಹಿತ್ಯವನ್ನು ಓದುವ ಸುಖವೇನಿದೆ, ಒಂಥರಾ ಪರಸ್ಪರ ಮಾತನಾಡಿದ ಹಾಗೆ, ಏಕಮುಖಿ ಸ್ವಗತದಂತಲ್ಲ, ಅದೇ ಬಗೆಯ ವಿಮರ್ಶೆಯನ್ನು ಬರೆಯಲು ಪ್ರಯತ್ನಿಸುತ್ತೇನೆ.

ಏನಿಲ್ಲವೆಂದರೂ ನಾವು ಸುಮಾರು ನೂರೈವತ್ತು ವರ್ಷಗಳಿಂದ ಇಂಗ್ಲಿಷ್‌ನಲ್ಲಿ ಕಾದಂಬರಿಗಳನ್ನು ಬರೆಯುತ್ತಿದ್ದೇವೆ. ಆದರೂ ನಮಗೆ ಇಷ್ಟೊಂದು ಕತೆ-ಕಾದಂಬರಿಗಳ ನಡುವಿನ ಅಂತರ್‌ಸಂಬಂಧ ಮತ್ತು ವೈರುಧ್ಯಗಳ ಬಗ್ಗೆ ಯಾವುದೇ ಆಸಕ್ತಿ ಇರುವಂತೆ ಕಾಣುವುದಿಲ್ಲ. 

 ಅರವಿಂದ ಕೃಷ್ಣ ಮಹರೋತ್ರರು ನನ್ನ ಜೊತೆ ಮಾತನಾಡ್ತಾ ನಾವೆಲ್ಲರೂ ಖಾಲೀ ಸ್ಲೇಟಿನ ಜೊತೆ ಸುರು ಮಾಡ್ತೇವೆ ಮತ್ತೆ ಹಾಗಾಗಿ ನಾವೆಲ್ರೂ ಅದೇ ಹೊಂಡಕ್ಕೆ ಬೀಳ್ತೇವೆ, ಮರೆಗುಳಿತನದ ಹೊಂಡ ಅಂತ ಹೇಳಿದ್ರು. ನೀವು ಹೇಳಿದ ಹಾಗೆ ಇದನ್ನ `ಕಾರವಾನ್~  ಪತ್ರಿಕೆಯ ನವೆಂಬರ್ 2010ರ ಸಂಚಿಕೆಯಲ್ಲಿ ಕೋಟ್ ಮಾಡಿದ್ದೀನಿ ಮತ್ತೆ ನಾನೂ ಅದನ್ನ ಒಪ್ತೀನಿ.
 
ಇವತ್ತೀಗ ನಮ್ಮ ಸಾಹಿತ್ಯ ಸಂಸ್ಕೃತಿ ಬರಹಗಾರನ ವ್ಯಕ್ತಿಗತ ಘನತೆ, ಅವನ ಕೃತಿ ಮತ್ತು ವ್ಯಕ್ತಿತ್ವದ ನಡುವಿನ ಸಂಬಂಧ ಇಂಥ ಸಂಗತಿಯತ್ತಲೇ ಹೆಚ್ಚು ಕೇಂದ್ರೀಕೃತವಾಗಿದೆ. ಆದರೆ ಒಂದು ಸಾಹಿತ್ಯ ಕೃತಿಗೂ ಇನ್ನೊಂದು ಕೃತಿಗೂ ನಡುವಿರುವ ಸಾಹಿತ್ಯಿಕ ಸಂಬಂಧವೇನಿದೆ ಅದು ಹೆಚ್ಚು ಮುಖ್ಯವಾದದ್ದು. ಆ ಬಗ್ಗೆ ನಾವು ಮಾತನಾಡುವುದೇ ಅಪರೂಪವಾಗಿಬಿಟ್ಟಿದೆ ಯಾಕೆಂದರೆ ನಮಗೆ ಅದರತ್ತ ಒಂದು ಬಗೆಯ ವಿಸ್ಮೃತಿಯಿದೆ.
 
ಇಂದಿನ ಓದುಗರು, ಪ್ರಕಟಣೆ ಮತ್ತು ವಿಮರ್ಶೆ - ಇವುಗಳ ಬಗ್ಗೆ ಏನನಿಸುತ್ತದೆ?
 2006ರಲ್ಲಿ ನನ್ನ ಮೊದಲ ಪುಸ್ತಕ ಪ್ರಕಟವಾಗುವಾಗಲೇ ಅಭಿವ್ಯಕ್ತಿಯ ಒಂದು ಹೊಸ ವೇದಿಕೆಯಾಗಿ ಇಂಟರ್ನೆಟ್ ರೂಪುಗೊಳ್ಳುವುದು, ಬ್ಲಾಗುಗಳು ಜನಪ್ರಿಯವಾಗುವುದು, ಫೇಸ್‌ಬುಕ್‌ನ ಉಗಮ ಮುಂತಾಗಿ ಎಲ್ಲವೂ ಕಾಕತಾಳೀಯವೆಂಬಂತೆ ನಡೆದವು. ನಾನೂ ನನ್ನ ಬೇರೆಬೇರೆ ಕೃತಿಗಳಿಂದ ದೇಶದ ಅನೇಕ ಕಡೆ ಹಲವಾರು ಕೃತಿವಾಚನ ನಡೆಸಿದ್ದೇನೆ.

ಹಾಗೆ ನನಗೆ ಯಾವಾಗಲೂ ಓದುಗರ ತತ್‌ಕ್ಷಣದ ಪ್ರತಿಕ್ರಿಯೆ ನೇರವಾಗಿಯೂ, ಇಂಟರ್ನೆಟ್ ಮೂಲಕ ಪರೋಕ್ಷವಾಗಿಯೂ ಸಿಕ್ಕಿದೆ. ಓದುಗರಲ್ಲಿ ಹೊಸ ಪುಸ್ತಕವೊಂದನ್ನು ಓದುವ, ಅದರ ಬಗ್ಗೆ ಯೋಚಿಸುವ, ಚರ್ಚಿಸುವ ಉತ್ಸಾಹ, ಒಳನೋಟ ಎಲ್ಲ ಇದೆಯಲ್ಲ, ಅದು ಯಾವಾಗಲೂ ನನ್ನನ್ನು ಮುಗ್ಧಳನ್ನಾಗಿಸುತ್ತದೆ.
 
ಈ ದಿನಗಳಲ್ಲಿ ನಮ್ಮ ಸಮಯ ಮತ್ತು ಗಮನವನ್ನು ಸೆಳೆದುಕೊಳ್ಳೋ ಅಸಂಖ್ಯ ಸಂಗತಿಗಳಿದ್ದರೂ ನಮ್ಮಂಥ ಕೆಲವರು ಇನ್ನೂ ಕೂಡ ಮೇಲ್ನೋಟಕ್ಕೆ ಕೆಲಸಕ್ಕೆ ಬಾರದ್ದೆನ್ನಿಸುವ ಈ ಕತೆ- ಕಾದಂಬರಿ- ಕವನಗಳನ್ನು ಓದುವುದರಲ್ಲಿ ತೊಡಗುತ್ತೇವಲ್ಲ, ಅದು ನನಗೆ ತುಂಬ ಭರವಸೆಯನ್ನು ಕೊಟ್ಟಿದೆ.ನನ್ನ ಎಲ್ಲ ನಾಲ್ಕೂ ಕೃತಿಗಳಿಗೆ ಸಾಕಷ್ಟು ಉತ್ತಮ ವಿಮರ್ಶೆಯನ್ನು ಪಡೆಯುವಲ್ಲಿ  ನಾನು ಅದೃಷ್ಟಶಾಲಿಯಂತಲೇ ಹೇಳಬೇಕು.

ಆದರೆ ಪದೇಪದೇ ನನಗೆ ಅನಿಸುವುದೇನೆಂದರೆ, ನಮ್ಮ ಹೆಚ್ಚಿನ ವಿಮರ್ಶಕರಿಗೆ ಆಧುನಿಕ ಸಾಹಿತ್ಯದ ಸರಿಯಾದ ಪರಿಕಲ್ಪನೆಯೇ ಇಲ್ಲ ಎನ್ನುವುದು. ಒಬ್ಬ ಮನುಷ್ಯನ ಮನಸ್ಸಿನೊಳಗೆ ಹೊಕ್ಕು ಬರೆಯುವುದು ಮತ್ತು ಜಗತ್ತನ್ನು ಅವನ ಅಥವಾ ಅವಳ ಕಣ್ಣುಗಳಿಂದ ಕಾಣುವುದು ಏನಿಲ್ಲವೆಂದರೂ ಒಂದು ಶತಮಾನದಷ್ಟು ಹಳೆಯ ಐಡಿಯಾ. ಆದರೆ ಅದು ಈಗಲೂ ಕೆಲವು ವಿಮರ್ಶಕರಿಗೆ ಹೊಸದೇ ಒಂದು ಐಡಿಯಾ ಆಗಿ ಕಾಣಿಸುತ್ತಿದೆ.
 
ನೀವು ಕಾದಂಬರಿ ಬರವಣಿಗೆಯನ್ನು ಹೇಗೆ ಪ್ಲಾನ್ ಮಾಡುತ್ತೀರಿ, ನಿಮ್ಮ ಬರವಣಿಗೆಯ ಕ್ರಮ ಯಾವುದು?
 ಖಂಡಿತವಾಗಿ ಪ್ರಜ್ಞಾಪೂರ್ವಕವಾದ ಯೋಜನೆ ಬಹಳಷ್ಟು ಇರುತ್ತೆ. ಅದು ಎಷ್ಟೆಂದರೆ ಕಾದಂಬರಿಯಷ್ಟೇ ಸಂಕೀರ್ಣವಾಗಿರುತ್ತೆ. ಈಚೆಗಿನ ಒಂದು ಸಂದರ್ಶನದಲ್ಲೂ ಹೇಳಿದ್ದೆ, ಒಂದು ಕಾದಂಬರಿ ಬರೆಯೋದು ಅಂದ್ರೆ ಒಂದು ಬಿಲ್ಡಿಂಗ್ ಕಟ್ಟಿದ ಹಾಗೆ ಅಂತ. ಎಲ್ಲಾ ಭಾಗಗಳೂ ಸೂಕ್ತವಾಗಿ ಹೊಂದಾಣಿಕೆಯಾಗಬೇಕು.

ಯಾವುದೋ ಸ್ವಲ್ಪ ಜಾಗ ಕೂಡಾ ಏನೂ ಉಪಯೋಗಕ್ಕಿಲ್ಲದ ಹಾಗೆ ಸುಮ್ನೆ ಹಾಗೇ ಬಿಟ್ಟು ಬಿಡೋ ಹಾಗಿಲ್ಲ. ಹಾಗೆ ನಿಮ್ಮ ಒಂದು ಭಾಗ ಒಬ್ಬ ಆರ್ಕಿಟೆಕ್ಟ್ ತರ ಕೆಲ್ಸ ಮಾಡ್ತಿರಬೇಕಾಗುತ್ತೆ. ಈ ತರದ ಶಿಲ್ಪ ಅಥವಾ ಆಕೃತಿಗೆ ಗಮನ ಕೊಡೋದಿದ್ಯಲ್ಲ, ನನಗಿಷ್ಟವಾದದ್ದು. ಆದ್ರೆ, ಕತೆಯ ಬಹಳಷ್ಟು ತಿರುವುಗಳು ಬರೇ ಪ್ರಜ್ಞಾಪೂರ್ವಕವಾದ ಯೋಜನೆಯ ಫಲವಾಗಿರುವುದೇ ಇಲ್ಲ.
 
ಈ ಸುಪ್ತಮನಸ್ಸು ನಿಯಂತ್ರಿಸುವ ಬರವಣಿಗೆಯ ಬಗ್ಗೆ ನನಗೆ ಹೆಚ್ಚು ಕುತೂಹಲವಿದೆ. ಒಂದು ಪಾತ್ರವನ್ನೇನೋ ಸೃಷ್ಟಿಸುತ್ತೇನೆ. ಆಮೇಲೆ ಅವಳ ಕತೆಯನ್ನು ಮುಂದಕ್ಕೊಯ್ಯಲು ನಾನು ಒಂದೆಡೆ ಕೂತು ಅವಳಿಗೆ ಏನಾಗುತ್ತೆ ಎನ್ನೋದನ್ನೆಲ್ಲ ಯೋಚಿಸಬೇಕಾಗುತ್ತೆ.

ಆದ್ರೆ ನನ್ನ ಸುಪ್ತಮನಸ್ಸಿಗೆ ಅದರದ್ದೇ ಆದ ಏನೋ ಒಂದು ಪ್ಲಾನ್ ಇರುತ್ತದೇನೊ, ಅದು ನಾನು ಮುಂದೆ ಮುಂದೆ ಹೋದಂತೆಲ್ಲ ನನಗೇ ತಿಳಿಯದ ಹಾಗೆ ತನ್ನ ಕೈವಾಡ ನಡೆಸುತ್ತಲೇ ಇರುತ್ತದೆ. ಬೆಳಿಗ್ಗೆ ಏಳುವಾಗ ಅಥವಾ ಕೆಲವೊಮ್ಮೆ ಇನ್ನೇನು ಮಲಗುವಾಗ ಒಂದು ಯೋಚನೆ ಇದ್ದಕ್ಕಿದ್ದಂತೆ ಅದೆಲ್ಲಿಂದಲೋ ಬಂದು ಬಿಡುತ್ತದೆ.

ಅಂಥ ಅನಿರೀಕ್ಷಿತವಾದ ಯೋಚನೆಗಳು ಅತ್ಯಂತ ಸೂಕ್ತವಾಗಿ ನನ್ನ ಬರವಣಿಗೆಗೆ ಹೊಂದಿಕೆಯಾಗುವಂತಿರುತ್ತವೆ. ಈ ಒಂದು ಬಗೆಯ ಮಿಡಿತಗಳನ್ನು ಕೂಡಾ ನಾವು ನೆಚ್ಚಿಕೊಳ್ಳಬೇಕಾಗುತ್ತದೆ. ಕಲ್ಪನೆ ಎಂಬುದು ವಿಚಿತ್ರ ಬಗೆಯಲ್ಲಿ ಕೆಲಸ ಮಾಡುತ್ತದೆ ಮತ್ತು ಬರಹಗಾರ ಅದಕ್ಕೆ ಸದಾ ತೆರೆದುಕೊಂಡಿರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT