ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಕಳಪೆ ಸಾಬೀತಾದರೆ ನಿವೃತ್ತಿ: ಚಂದ್ರಪ್ಪ

Last Updated 22 ಫೆಬ್ರುವರಿ 2012, 5:35 IST
ಅಕ್ಷರ ಗಾತ್ರ

ಚಿತ್ರದುರ್ಗ: ಹೊಳಲ್ಕೆರೆ ಕ್ಷೇತ್ರದಲ್ಲಿ ಕೈಗೊಂಡಿರುವ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳಲ್ಲಿ ಕಳಪೆ ಅಥವಾ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ನಡೆದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಶಾಸಕ ಎಂ. ಚಂದ್ರಪ್ಪ ಪ್ರಕಟಿಸಿದರು.

ತಾವು ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದರಿಂದ ಕ್ಷೇತ್ರದ ಜನತೆ `ರಸ್ತೆ ರಾಜ~ ಎಂದು ಬಿರುದು ನೀಡಿದ್ದಾರೆ. ಇನ್ನೂ 10 ವರ್ಷಗಳ ಕಾಲ ಕ್ಷೇತ್ರದ ರಸ್ತೆಗಳಲ್ಲಿ ಗುಂಡಿ ಬೀಳಲು ಸಾಧ್ಯವಿಲ್ಲ. ಅಂತಹ ಗುಣಮಟ್ಟದ ರಸ್ತೆಗಳನ್ನು ಮಾಡಿಸಿದ್ದೇನೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು.

ಹೊಳಲ್ಕೆರೆ ಕ್ಷೇತ್ರದಲ್ಲಿ ಕೆರೆ ಅಭಿವೃದ್ಧಿ, ಮೊರಾರ್ಜಿ ಶಾಲೆಗಳು, ಕಿತ್ತೂರು ರಾಣಿ ಚನ್ನಮ್ಮ ಶಾಲೆಗಳಿಗೆ ಭವ್ಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇತ್ತೀಚೆಗಷ್ಟೇ ಭರಮಸಾಗರ ಕೆರೆ ಏರಿ ಅಭಿವೃದ್ಧಿಯನ್ನು ರೂ. 4 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಪಾರದರ್ಶಕ ಕಾಯ್ದೆ ಪ್ರಕಾರವೇ ಟೆಂಡರ್ ಕರೆದು ನೀಡಲಾಗಿದೆ.

ನಬಾರ್ಡ್, ವಿಶ್ವಬ್ಯಾಂಕ್, ಕೇಂದ್ರ ಸರ್ಕಾರದ ಅನುದಾನ ಮತ್ತು ಎಡಿಬಿ ಸಾಲದ ಮೂಲಕ ರಾಜ್ಯ ಸರ್ಕಾರ ಅನುದಾನ ನೀಡಿದೆ. ನಿಯಮಾವಳಿಗಳ ಪ್ರಕಾರ ಸ್ಥಳೀಯರಿಗೆ ಗುತ್ತಿಗೆ ನೀಡಲು ಸಾಧ್ಯವಿಲ್ಲ. ಕಾಯ್ದೆ ಪ್ರಕಾರ ಟೆಂಡರ್ ಮೂಲಕ ಕಾಮಗಾರಿ ಕೈಗೊಂಡಿದ್ದು, ಅಂತರರಾಷ್ಟ್ರೀಯ ಮಟ್ಟದ ರೀತಿಯಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.

ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸ್ವಜನಪಕ್ಷಪಾತ ಮಾಡಿಲ್ಲ. ಅರ್ಜಿ ಸಲ್ಲಿಸಿದವರಿಗೆ ನೀಡಲಾಗಿದೆ. ಅರ್ಜಿ ಜತೆ ಸಲ್ಲಿಸುವ ಪಹಣಿಯಲ್ಲಿ ಜಾತಿ ಇರುವುದಿಲ್ಲ. ಆದ್ದರಿಂದ ಸ್ವಜನಪಕ್ಷಪಾತ ಮಾಡುವ ವ್ಯವಸ್ಥೆ ಇಲ್ಲ. ನನ್ನ ರಾಜಕೀಯ ಜೀವನದಲ್ಲಿ ಜಾತಿಗೆ ಅಂಟಿಕೊಂಡಿಲ್ಲ. ಎಲ್ಲ ವರ್ಗದವರಿಗೆ ನೀಡಿದ್ದೇನೆ ಎಂದರು.

ಮಲ್ಲಾಡಿಹಳ್ಳಿಯಲ್ಲಿ ಜಾನುವಾರುಗಳನ್ನು ಖರೀದಿಸಿ ಕ್ರೂರವಾಗಿ ಕೇರಳಕ್ಕೆ ಸಾಗಿಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅಲ್ಲಿ ಸಂತೆಯನ್ನು ನಿಲ್ಲಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

ಹೊಳಲ್ಕೆರೆಯಲ್ಲಿನ ಅಂಬೇಡ್ಕರ್ ಭವನವನ್ನು ರೂ. 2.5 ಕೋಟಿ ವೆಚ್ಚದಲ್ಲಿ ಬೆಂಗಳೂರಿನಲ್ಲಿರುವ ಅಂಬೇಡ್ಕರ್‌ಭವನವನ್ನು ಹೋಲುವ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ, ಇದಕ್ಕೂ ವಿರೋಧ ಮಾಡುವುದು ಸರಿ ಅಲ್ಲ. ಇದುವರೆಗೂ ಹೊಳಲ್ಕೆರೆ ಮತ್ತು ಹೊಸದುರ್ಗಕ್ಕೆ ಸೇರಿ ಒಂದೇ ಎಪಿಎಂಸಿ ಇತ್ತು. ತಾವು ಶಾಸಕರಾದ ನಂತರ ಹೊಳಲ್ಕೆರೆಯನ್ನು ಪ್ರತ್ಯೇಕಗೊಳಿಸಿ ರೂ. 7-8 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.

ಮಾಜಿ ಶಾಸಕ ಎಚ್. ಆಂಜನೇಯ ತಮ್ಮ ವಿರುದ್ಧ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಆಂಜನೇಯ ಅವರು ಅಧಿಕಾರದಲ್ಲಿದ್ದಾಗ ಕ್ಷೇತ್ರದಲ್ಲಿ ಒಂದು ಕೋಟಿ ರೂಪಾಯಿ ಕಾಮಗಾರಿ ಮಾಡಿಸಲಿಲ್ಲ. ಅವರು ಶಾಸಕರಿದ್ದಾಗ ಮಾಡಿರುವ ಕೆಲಸಗಳ ಬಗ್ಗೆ ಮೊದಲು ಶ್ವೇತಪತ್ರ ಹೊರಡಿಸಲಿ ಎಂದು ಚಂದ್ರಪ್ಪ ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT