ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಗುಣಮಟ್ಟ ಲೋಪ ಪ್ರಶ್ನಿಸಿ

Last Updated 14 ಸೆಪ್ಟೆಂಬರ್ 2011, 6:10 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಸರ್ಕಾರ ಅನುಷ್ಠಾನಗೊಳಿಸುವ ಅಭಿವೃದ್ಧಿ ಕಾರ್ಯಗಳ ಲೋಪದೋಷ ಗಳನ್ನು ಸ್ಥಳೀಯ ಜನರು ಪ್ರಶ್ನಿಸುವ ಸ್ವಭಾವ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪೊನ್ನುರಾಜ್ ಹೇಳಿದರು.

ತಾಲ್ಲೂಕಿನ ಕುಡುಮಲ್ಲಿಗೆ ಗ್ರಾಮ ಪಂಚಾಯ್ತಿಗೆ ಮಂಗಳವಾರ ಭೇಟಿ ನೀಡಿದ ವೇಳೆ ನಡೆದ ಗ್ರಾಮ ಪಂಚಾಯ್ತಿಯ ಜಮಾಬಂದಿ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗಳ ಕುರಿತು ಚರ್ಚಿಸಿ ಅವರು ಮಾತನಾಡಿದರು.

ಪ್ರಶ್ನಿಸುವುದರಿಂದ ಸರ್ಕಾರದ ಹಣ ಪೂಲಾಗದಂತೆ ತಡೆಯುವ ಜತೆಗೆ, ಉತ್ತಮ ಕಾಮಗಾರಿ ನಡೆಯಲು ಸಹಕಾರಿಯಾಗುತ್ತದೆ ಎಂದರು.ಗ್ರಾಮ ಪಂಚಾಯ್ತಿಗಳು ಗ್ರಾಮಮಟ್ಟದ ಸರ್ಕಾರ. ಇಲ್ಲಿನ ಆಡಳಿತ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಸ್ಥಳೀಯ ಜನರದ್ದು.

ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಮೂರು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಅನುಷ್ಠಾನಗೊಂಡ ಕುಡಿಯುವ ನೀರಿನ ಯೋಜನೆಗಳಲ್ಲಾದ ಲೋಪಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಅವರು, ಗ್ರಾಮ ಪಂಚಾಯ್ತಿಯ ಸಮಗ್ರ ಪ್ರಗತಿ ಕುರಿತು ಸಮಾಧಾನ ವ್ಯಕ್ತಪಡಿಸಿದರು.
 
ಸಾರ್ವಜನಿಕರ ಹಣದಿಂದ ಸರ್ಕಾರ ನಡೆಯುತ್ತಿದೆ. ಸರ್ಕಾರದ ಹಣ ಪೋಲಾಗಬಾರದು. ಹಿರಿಯರ ದೂರದೃಷ್ಟಿಯಿಂದಾಗಿ ನಮಗೆ ಈಗ ಗೋಮಾಳ, ಗ್ರಾಮಠಾಣ ಉಳಿಯುವಂತಾಗಿದೆ. ಇಂತಹ ದೂರದೃಷ್ಟಿಯ ಆಲೋಚನೆಯನ್ನು ಗ್ರಾಮ ಪಂಚಾಯ್ತಿ ಆಡಳಿತ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.

ಮಲೆನಾಡಿನ ಭಾಗಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದಾಗಿ ರೈತರು ಕೃಷಿಯನ್ನು ಮಾಡದೇ ಕೈಬಿಡಬೇಕಾದ ಪರಿಸ್ಥಿತಿ ಎದುರಾಗಿದೆ ಸರ್ಕಾರ ಈ ಕುರಿತು ಗಂಭೀರವಾಗಿ ಚಿಂತಿಸಿ ಪರಿಹಾರ ಹುಡುಕಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಹಾರೋಗೊಳಿಗೆ ಪದ್ಮನಾಭ್ ಹೇಳಿದರು.

ಅನಾದಿಕಾಲದಿಂದಲೂ ಮನೆ ಕಟ್ಟಿಕೊಂಡು ವಾಸಮಾಡುತ್ತಿರುವ ನಮಗೆ ಈವರೆಗೂ ಹಕ್ಕುಪತ್ರ ನೀಡಿಲ್ಲ. ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಗ್ರಾಮಸ್ಥರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.

ಬಾಳಗಾರು ಮಹಿಷಿ ಮಾರ್ಗದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ರಸ್ತೆ ನಿರ್ಮಾಣವಾಗಿ ತಿಂಗಳು ಕಳೆಯುವುದರೊಳಗೇ ರಸ್ತೆ ಹಾಳಾಗಿದೆ. ಈ ಕುರಿತು ಸ್ಥಳಪರಿಶೀಲನೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ನಂತರ ರಸ್ತೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಭಾಸ್ಕರಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಿ ರಾಮಪ್ಪ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ವಿನಂತಿ ಶಿವಮೂರ್ತಿ, ತಾ.ಪಂ. ಉಪಾಧ್ಯಕ್ಷೆ ಜೀನಾವಿಕ್ಟರ್‌ಡಿಸೋಜ, ಉಪ ವಿಭಾಗಾಧಿಕಾರಿ ವೈಶಾಲಿ, ತಹಶೀಲ್ದಾರ್ ಡಿ.ಬಿ. ನಟೇಶ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಪುಟ್ಟಸ್ವಾಮಿ, ಗ್ರಾ.ಪಂ. ಕಾರ್ಯದರ್ಶಿ ಮಂಜುನಾಥ್, ವಿವಿಧ ಇಲಾಖೆ  ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT