ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಂ ಸಿಬ್ಬಂದಿ ನೇಮಕ ಕನಸು ನನಸು

ವಿವಿಯೊಳಗೊಂದು ಸುತ್ತು...
Last Updated 23 ಜುಲೈ 2013, 7:26 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ರಾಜ್ಯ ಕಾನೂನು ವಿವಿಗೆ ಕಾಯಂ ಸಿಬ್ಬಂದಿ ನೇಮಕದ ಕನಸು ಈಗ ನನಸಾಗತೊಡಗಿದೆ. ನೇಮಕ ಪ್ರಕ್ರಿಯೆಯ ಮೊದಲ ಹಂತ ಪೂರ್ಣಗೊಂಡಿದ್ದು ಕಾನೂನು ಶಾಲೆಗೆ ನೇಮಕಗೊಂಡ ಒಟ್ಟು ಹನ್ನೊಂದು ಮಂದಿ ಅಧ್ಯಾಪಕರು ಈಗಾಗಲೇ ಕರ್ತವ್ಯಕ್ಕೆ

ಹಾಜರಾಗಿದ್ದಾರೆ. ಈ ಬೆಳವಣಿಗೆ ಕಾನೂನು ಶಿಕ್ಷಣ ವಲಯದಲ್ಲಿ ಸಂತಸ ಮೂಡಿಸಿದ್ದು ವಿವಿಯ ಹೆಸರನ್ನು ಇನ್ನಷ್ಟು ಔನ್ನತ್ಯಕ್ಕೇರಿಸಲು ಈ ಹೆಜ್ಜೆ ನೆರವಾಗಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ನವನಗರದಲ್ಲಿ 2009ರಲ್ಲಿ ಆರಂಭಗೊಂಡ ವಿವಿಯಲ್ಲಿ ಕುಲಪತಿ ಒಳಗೊಂಡಂತೆ ಪ್ರಮುಖ ಮೂರು ಹುದ್ದೆಗಳನ್ನು ಬಿಟ್ಟರೆ ಯಾರೂ ಕಾಯಂ ಸಿಬ್ಬಂದಿ ಇರಲಿಲ್ಲ. ಇದರಿಂದ ವಿವಿಯ ಚಟುವಟಿಕೆಗಳಿಗೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕಾಯಂ ಸಿಬ್ಬಂದಿಯ ನೇಮಕಕ್ಕಾಗಿ ಸರ್ಕಾರಕ್ಕೆ ಸಲ್ಲಿಸಿದ ಕೋರಿಕೆಗೆ ಕೊನೆಗೂ ಹಸಿರು ನಿಶಾನೆ ಸಿಕ್ಕಿದೆ. ಕಾನೂನು ವಿಷಯದಲ್ಲಿ ಒಬ್ಬರು ಪ್ರಾಧ್ಯಾಪಕರು, ಇಬ್ಬರು ಸಹ ಪ್ರಾಧ್ಯಾಪಕರು, ಎಂಟು ಮಂದಿ ಸಹಾಯಕ ಅಧ್ಯಾಪಕರು ನೇಮಕಗೊಂಡಿದ್ದು ಈಗ ಕರ್ತವ್ಯದಲ್ಲಿ ನಿರತರಾಗಿದ್ದಾರೆ.

ಮುಂದಿನ ಹೆಜ್ಜೆಯಾಗಿ ಕಾನೂನೇತರ ವಿಭಾಗಗಳಿಗೂ ಕಾಯಂ ಅಧ್ಯಾಪಕರ ನೇಮಕಕ್ಕೆ ವಿವಿ ಮುಂದಾಗಿದೆ. ಇದಕ್ಕೆ ಸಂಬಂಧಪಟ್ಟ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದ್ದು ಇದಕ್ಕೆ ಶೀಘ್ರ ಅನುಮೋದನೆ ಸಿಗುವ ಭರವಸೆಯಲ್ಲಿದೆ ವಿವಿ ಆಡಳಿತ. ಇದಾದ ನಂತರ ಶೈಕ್ಷಣಿಕೇತರ ವಿಭಾಗಗಳಲ್ಲೂ ಸಿಬ್ಬಂದಿಯನ್ನು ಕಾಯಂಗೊಳಿಸುವ ಪ್ರಕ್ರಿಯೆ ನಡೆಯಲಿದೆ.

`ಸಿಬ್ಬಂದಿ ಕಾಯಂ ಆದ ನಂತರ ವಿವಿಯ ಗುಣಮಟ್ಟದಲ್ಲಿ ಇನ್ನಷ್ಟು ಪ್ರಗತಿ ಕಂಡುಬರಲಿದೆ. ಕಾನೂನು ಶಾಲೆಯಲ್ಲಿ ಪಾಠ ಮಾಡಲು ಇವರನ್ನು ನೇಮಕ ಮಾಡಿದ್ದರೂ ವಿವಿಯ ವಿವಿಧ ಚಟುವಟಿಕೆಗಳಿಗೆ ಇವರ ಸೇವೆಯನ್ನು ಬಳಸಿಕೊಳ್ಳಲಾಗುತ್ತದೆ. ಹೀಗಾಗಿ ಎಲ್ಲ ವಲಯದಲ್ಲೂ ವಿವಿ ಅಮೋಘ ಅಭಿವೃದ್ಧಿಯನ್ನು ಕಾಣಲಿದೆ. ದೇಶದ ಇತರ ಯಾವುದೇ ಕಾನೂನು ಶಾಲೆಗಳ ಜೊತೆ ಸ್ಪರ್ಧಿಸಲು ಕಾನೂನು ವಿವಿಗೆ ಸಾಧ್ಯವಾಗಲಿದೆ' ಎಂದು ಕುಲಸಚಿವ ಸುಭಾಷ ಮಾಳಖೇಡೆ `ಪ್ರಜಾವಾಣಿ'ಗೆ ತಿಳಿಸಿದರು.

`ಈಗ ನೇಮಕಗೊಂಡಿರುವವರ ಪೈಕಿ ಅನೇಕರು ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಕಾನೂನು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ ಇವರ ಸೇವೆ ವಿವಿಗೆ ಉಪಯುಕ್ತವಾಗಲಿದೆ. ದೇಶದ ಉತ್ತಮ ಕಾನೂನು ಶಾಲೆಯೊಂದು ಇಲ್ಲಿ ತಲೆ ಎತ್ತುವುದರ ಆರಂಭಿಕ ಹೆಜ್ಜೆ ಇದು' ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಕಾನೂನು ಶಿಕ್ಷಣದಲ್ಲಿ ಎರಡೂವರೆ ದಶಕಗಳ ಅನುಭವವಿರುವ, ಆಡಳಿತಾತ್ಮಕ ಜ್ಞಾನವೂ ಹೊಂದಿರುವ ಡಾ.ಜಿ.ಬಿ.ಪಾಟೀಲ ಅವರು ಕೂಡ ನೇಮಕಗೊಂಡ ಅಧ್ಯಾಪಕರಲ್ಲಿ ಒಬ್ಬರು. ಹುಬ್ಬಳ್ಳಿಯ ಜಿ.ಕೆ. ಕಾನೂನು ಕಾಲೇಜಿನ ಪ್ರಾಚಾರ್ಯರಾಗಿ 11 ವರ್ಷ ಸೇವೆ ಸಲ್ಲಿಸಿದ ಅವರು ವಿವಿಯಲ್ಲಿ ಕಾಯಂ ಅಧ್ಯಾಪಕರ ನೇಮಕಾತಿ ಮಾಡಿರುವ ಕುರಿತು ಸಂತೋಷ ವ್ಯಕ್ತಪಡಿಸಿದರು.

`ಆಡಳಿತಾತ್ಮಕ ಮತ್ತು ಶೈಕ್ಷಣಿಕವಾಗಿ ವರ್ಷಗಳಿಂದ ಸೇವೆ ಸಲ್ಲಿಸಿದವರಿಗೆ ಇದೊಂದು ಉತ್ತಮ ಅವಕಾಶ. ಅನುಭವಿ ಅಧ್ಯಾಪಕರಿಂದ ವಿಶ್ವವಿದ್ಯಾಲಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬಹುದು' ಎಂದರು.

ವಿವಿ ಆವರಣದಲ್ಲಿ ಉದ್ಯಾನ ನಿರ್ಮಾಣಕ್ಕೆ ಚಾಲನೆ
ಕಾನೂನು ವಿವಿಯ ಸುಂದರ ಆವರಣದಲ್ಲಿ ಖಾಲಿ ಜಾಗವನ್ನು ಉದ್ಯಾನವನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಆರಂಭಗೊಂಡಿದೆ.
ಕಾನೂನು ಶಾಲೆಯ ಹೊಸ ಕಟ್ಟಡದ ಮುಂಭಾಗ ಮತ್ತು ಎನ್‌ಎಸ್‌ಎಸ್ ಕಚೇರಿ ಸಮೀಪದ ಜಾಗವನ್ನು ಹದ ಮಾಡಿ ಹೂಗಿಡ, ಬಳ್ಳಿಯನ್ನು ನೆಡುವ ಕೆಲಸ ನಡೆಯುತ್ತಿದೆ.

ರಾಯಾಪುರದ ಬಸವರಾಜ ಮಲ್ಲಾಪುರ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಒಂದು ವಾರದಿಂದ ಕೆಲಸ ಮಾಡುತ್ತಿದ್ದು ಮೆಕ್ಸಿಕನ್ ಹುಲ್ಲು ಹಾಸುವ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ದೊಡ್ಡ ಮರಗಳ ನಡುವೆ ಹಳದಿ ಹೂ ಬಿಡುವ ಒಡೆಲಾ ಬಳ್ಳಿಯನ್ನು ಉದ್ಯಾನದ ಸುತ್ತ ಹರಡಲಾಗಿದೆ.

ಉದ್ಯಾನದ ನಿರ್ಮಾಣ ಕಾರ್ಯ ಪೂರ್ಣಗೊಂಡಾಗ ವಿವಿ ಆವರಣ ಇನ್ನಷ್ಟು ಕಳೆಗಟ್ಟಲಿದೆ ಎಂಬುದು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT