ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಮುಕ್ತ ನೈಸರ್ಗಿಕ ಕೃಷಿ

ಅಮೃತ ಭೂಮಿ
Last Updated 11 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಎಷ್ಟು ಹುಡುಕಿದರೂ ಫಲವತ್ತತೆ ಸಿಗದಂಥ ಕೆಂಪು ಭೂಮಿ, ಮಣ್ಣು ಕಾಣದಷ್ಟು ಕಸ ಕಡ್ಡಿಯ ಹೊದಿಕೆ, ಮೇಲುನೋಟಕ್ಕೆ ಕೃಷಿ ಉಳುಮೆಗೆ ಯೋಗ್ಯವಲ್ಲದ ಭೂಮಿ ಎನ್ನುವಂಥ ಚಿತ್ರಣ. ತೋಟದ ಒಳಗೆ ಹೋದಂತೆ ತೇವಾಂಶ ಉಳಿಸಿಕೊಂಡಿರುವ ಮಣ್ಣು, ಮಾವಿನ ಮರ, ನುಗ್ಗೆ ಮರ, ತೆಂಗಿನ ಮರ, ಕಬ್ಬು, ವಿಧವಿಧ ತರಕಾರಿ ಅಬ್ಬಾ..!

ರೈತರಿಗೆ ಸಾರ್ಥಕತೆ ತಂದುಕೊಡುವ ಉತ್ತಮ ಫಸಲು. ಇದು ಕಲ್ಪನೆಯಲ್ಲ. ವಾಸ್ತವ. ಎಂಟು ವರ್ಷಗಳಿಂದ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿ 10 ಎಕರೆ ಕೆಂಪು ಭೂಮಿಯಲ್ಲಿ ವಿವಿಧ ಬೆಳೆ ತೆಗೆದು ಯಶಸ್ಸು ಕಂಡಿರುವವರು ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಮುತ್ತಂಗಿ ಗ್ರಾಮದ ಕೃಷಿಕ ಮಲ್ಲಯ್ಯ ಸ್ವಾಮಿ ಮುತ್ತಂಗಿ.

`ಈ ಮುಂಚೆ ತೆರೆದ ಬಾವಿ ಇದ್ದರೂ ನೀರಿನ ಪ್ರಮಾಣ ಕಡಿಮೆ ಇತ್ತು. ಇದರಿಂದ ತುಂಬಾ ಕಷ್ಟಪಟ್ಟು ಬೇಸಾಯ ಮಾಡುತ್ತಿದ್ದೆ. ಲೆಕ್ಕಕ್ಕೆ ಉಂಟು ಲಾಭಕ್ಕಿಲ್ಲ ಎಂಬಂತಾಗಿತ್ತು ನಮ್ಮ ಪರಿಸ್ಥಿತಿ. ಕಷ್ಟಗಳ ಮೇಲೆ ಕಷ್ಟ. ಕೃಷಿಯೇ ಬೇಡ ಎನ್ನುವಷ್ಟರ ಮಟ್ಟಿಗೆ ಬೇಸರವೂ ಆಗಿತ್ತು. ಎಂಟು ವರ್ಷಗಳ ಹಿಂದೆ ಕೃಷಿ ಗಾಂಧಿ ಎಂದೇ ಹೆಸರಾದ ಸುಭಾಷ್ ಪಾಳೆಕಾರ್ ಅವರ ನೈಸರ್ಗಿಕ ಕೃಷಿ ಪದ್ಧತಿಗೆ ಮಾರುಹೋಗಿ ಅವರ ಮಾರ್ಗದರ್ಶನದಂತೆ ಸಂಪೂರ್ಣವಾಗಿ ನನ್ನ ತೋಟವನ್ನು ರಾಸಾಯನಿಕ ಮುಕ್ತ ಮಾಡಿದೆ.

ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಸಿಂಪರಣೆ ಎಲ್ಲವನ್ನೂ ಬಿಟ್ಟೆ. ಈಗ ನೋಡಿ ನನ್ನ ಜಮೀನು ಎಷ್ಟು ಹುಲುಸಾಗಿ ಬೆಳೆದಿದೆ' ಎಂದು ಹೆಮ್ಮೆಯಿಂದ ನುಡಿಯುತ್ತಾರೆ ಮಲ್ಲಯ್ಯ. `ಗೋ ಮೂತ್ರ, ಸಗಣಿ, ಕಸಕಡ್ಡಿ ಎಲ್ಲವನ್ನೂ ಗೊಬ್ಬರವಾಗಿ ಬಳಸಿಕೊಂಡು ಬೇಸಾಯ ಮಾಡುತ್ತ ಬಂದಿದ್ದು, ಇಂದು ಉಳಿದ ರೈತರಿಗೆ ದಾರಿ ದೀಪವಾಗಿದ್ದೇನೆ' ಎಂಬ ಹರ್ಷದ ನುಡಿ ಅವರದ್ದು.

ಶೂನ್ಯ ಬಂಡವಾಳ
`ನಿಸರ್ಗದಲ್ಲಿ ಸಿಗುವ ಕಸಕಡ್ಡಿ ಬಳಸಿಕೊಂಡು ಭೂಮಿಗೆ ಹೊದಿಕೆ ಮಾಡುತ್ತ್ದ್ದಿದೇನೆ. ಎಲ್ಲವೂ ನೈಸರ್ಗಿಕವಾಗಿಯೇ ನಡೆಯುವ ಕಾರಣ ಬೆಳೆಗಳೆಲ್ಲ ವಿಷ ಮುಕ್ತ. ಇದೊಂದು ಶೂನ್ಯ ಬಂಡವಾಳದಲ್ಲಿ ಹೆಚ್ಚು ಆದಾಯ ಪಡೆಯುವ ಪದ್ಧತಿ. ಎಂಟು ವರ್ಷಗಳಿಂದ ಒಮ್ಮೆಯೂ ತೋಟದಲ್ಲಿ ಕಳೆ ತೆಗೆಯಲು ಕಾರ್ಮಿಕರನ್ನು ಬಳಸಿಲ್ಲ. ಕಳೆ ಬರುವುದು ತೀರಾ ಕಡಿಮೆ. ಹಾಗೇನಾದರೂ ಕಳೆ ಬಂದಲ್ಲಿ ನಾನೇ ಸಿದ್ಧಪಡಿಸಿದ ಯಂತ್ರದಿಂದ ಮೂರು ಗಂಟೆಯಲ್ಲಿ ಒಂದು ಎಕರೆ ಬೆಳೆಯಲ್ಲಿ ಬೆಳೆದ ಕಳೆ ತೆಗೆಯುತ್ತೇನೆ' ಎಂದು ಹೆಮ್ಮೆಯಿಂದ ನುಡಿಯುತ್ತಾರೆ ಮಲ್ಲಯ್ಯ.

ಹುಲ್ಲು ಹಾಗೂ ಇನ್ನಾವುದೇ ಬೆಳೆಯನ್ನು ರಾಶಿ ಮಾಡಿದ ನಂತರ ಬರುವ ಹೊಟ್ಟು, ಕಸಕಡ್ಡಿ ಭೂಮಿಯ ಮೇಲೆ ಹಾಸಿಗೆಯಂತೆ ಹೊದಿಕೆ ಹಾಕುವುದರಿಂದ ಭೂಮಿಯಲ್ಲಿಯ ತೇವಾಂಶ ಉಳಿಯುತ್ತದೆ. ಫಲವತ್ತತೆ ಹೆಚ್ಚುತ್ತದೆ ಎನ್ನುತ್ತಾರೆ. ಒಂದು ದೇಶಿ ಆಕಳು ಇದ್ದು, ಅದರ ಮೂತ್ರ, ಸಗಣಿ ಮಾತ್ರ ನೈಸರ್ಗಿಕ ಕೃಷಿಯ ಮುಖ್ಯ ಅಸ್ತ್ರ.

ದ್ರವ ಜೀವಾಮೃತ: ದೇಶಿ ಆಕಳ 10 ಲೀಟರ್ ಮೂತ್ರ, 2 ಕೆ.ಜಿ ಬ್ಲ್ಲೆಲ, 2 ಕೆ.ಜಿ ಯಾವುದೇ ಬೇಳೆ ಕಾಳಿನ ಹಿಟ್ಟು, ಒಂದು ಹಿಡಿಯಷ್ಟು ಹೊಲದ ಬದುವಿನಲ್ಲಿಯ ಮಣ್ಣು, 200 ಲೀಟರ್ ನೀರಿನ ಜೊತೆಗೆ ಸೇರಿಸಿ ನಿರಂತರವಾಗಿ 2 ದಿನಗಳವರೆಗೆ ಕಟ್ಟಿಗೆಯಿಂದ ಮೇಲಿಂದ ಮೇಲೆ ಬೆರೆಸುತ್ತ ಇದ್ದಾಗ 3ನೇ ದಿನಕ್ಕೆ ಜೀವಾಮೃತ ಸಿದ್ಧವಾಗುತ್ತದೆ. ಹೀಗೆ ಸಿದ್ಧಪಡಿಸಿದ ಜೀವಾಮೃತವನ್ನು ಇವರು ತಮ್ಮ ತೋಟದ  ಭೂಮಿಗೆ ನೀರುಣಿಸುತ್ತಾರೆ.  ಹೀಗೆ ಬೆಳೆಗಳಿಗೆ ಜೀವಾಮೃತ ಕೊಡುವುದರಿಂದ ಯಾವುದೆ ರೋಗ ಬರುವುದಿಲ್ಲ, ಅಧಿಕ ಇಳುವರಿಯೂ ಬರುತ್ತದೆ ಎನ್ನುವುದು ಮಲ್ಲಯ್ಯ ಅವರ ಅಭಿಮತ.

`ಆರು ಎಕರೆ ಭೂಮಿಯಲ್ಲಿ 700 ಮಾವಿನ ಮರ ಬೆಳೆಸಿದ್ದು ಮಿಶ್ರ ಬೆಳೆಯಾಗಿ ಅದರಲ್ಲಿ ಕಬ್ಬು, ತೊಗರಿ, ಜೋಳ, ಸಜ್ಜೆ, ತರಕಾರಿ ಬೆಳೆದಿದ್ದು ಕಳೆದ ವರ್ಷ 40 ಟನ್ ಕಬ್ಬು, 4 ಕ್ವಿಂಟಾಲ್ ತೊಗರಿ, 6 ಟನ್ ಮಾವಿನ ಕಾಯಿ ಹೀಗೆ ಎಲ್ಲವೂ ಸೇರಿ ಸುಮಾರು 4 ಲಕ್ಷ ರೂ ವರೆಗೂ ಆದಾಯ ಪಡೆದಿದ್ದೇನೆ. ದ್ರವ ಜೀವಾಮೃತ, ಘನ ಜೀವಾಮೃತ ಬೆಳೆಗಳ ಪೋಷಣೆಗಾಗಿ ಪೋಷಕಾಂಶದ ರೂಪದಲ್ಲಿ ಕೊಡುತ್ತೇವೆ. ನೀಮ್ ಅಸ್ತ್ರ, ಬ್ರಹ್ಮ ಅಸ್ತ್ರ, ಅಗ್ನಿಅಸ್ತ್ರಗಳನ್ನಾಗಿ ತಯಾರಿಸಿಕೊಂಡು ಕೀಟ ಬಾಧೆ ನಿಯಂತ್ರಿಸಲು  ಸಿಂಪರಣೆ ಮಾಡುತ್ತೇವೆ' ಎನ್ನುತ್ತಾರೆ ಅವರು.

ಇವರ ತೋಟದ ಯಾವುದೇ ಮರ, ಸಸಿಯನ್ನು ಗಮನಿಸಿದರೂ ಅಲ್ಲಿ ಮರದ ಅಥವಾ ಸಸಿಯ ಸುತ್ತಲೂ ಇತರ ತರಕಾರಿ, ಬಳ್ಳಿಗಳ ಸಸಿಗಳು ಕಾಣುತ್ತೇವೆ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಮಿಶ್ರ ಬೆಳೆ ಬೆಳೆದು ಅಧಿಕ ಲಾಭ ಪಡೆಯುವ ತತ್ವ ಕಾಣಸಿಗುತ್ತಿದೆ.
ರಾಸಾಯನಿಕ ಗೊಬ್ಬರ ಬಳಸಿಕೊಂಡು ಕೃಷಿ ಮಾಡುವುದರಿಂದ ಭೂಮಿಯ ಫಲವತ್ತತೆ ಹಾಳಾಗುವುದರ ಜೊತೆಗೆ ಅವುಗಳ ದುಬಾರಿ ಬೆಲೆಯಿಂದಾಗಿ ರೈತ ಆರ್ಥಿಕವಾಗಿ ದಿವಾಳಿ ಆಗುತ್ತಾನೆ. ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ ಆರ್ಥಿಕವಾಗಿ ಸ್ವಾವಲಂಬಿ ಆಗಿ, ಆರೋಗ್ಯ ಪೂರ್ಣ ಆಹಾರ ಉತ್ಪಾದಿಸಬಹುದು ಎನ್ನುತ್ತಾರೆ ಮಲ್ಲಯ್ಯ ಸ್ವಾಮಿ. ಸಂಪರ್ಕಕ್ಕೆ 9902367156.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT