ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

Last Updated 29 ಫೆಬ್ರುವರಿ 2012, 8:45 IST
ಅಕ್ಷರ ಗಾತ್ರ

ಬೆಳಗಾವಿ: ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳನ್ನು ಖಂಡಿಸಿ ಕೇಂದ್ರ ಯುಪಿಎ ಸರ್ಕಾರದ ವಿರುದ್ಧ ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿ ಮಂಗಳವಾರ ಕರೆ ನೀಡಲಾಗಿದ್ದ `ಭಾರತ್ ಬಂದ್~ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಇಲಾಖೆಗಳ ಸಿಬ್ಬಂದಿಗಳು ಕೆಲಸದಿಂದ ದೂರ ಉಳಿದಿದ್ದನ್ನು ಬಿಟ್ಟರೆ, ಜನಜೀವನ ಎಂದಿನಂತೆ ಸಾಗಿತ್ತು.

ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿ ಆಶ್ರಯದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ಮಂಗಳವಾರ ಕಚೇರಿಯಿಂದ ದೂರ ಉಳಿದು ನಗರದ ಸಂಭಾಜಿ ವೃತ್ತದಲ್ಲಿ ಜವಾವಣೆಗೊಂಡರು. ಬಳಿಕ ಸಂಭಾಜಿ ವೃತ್ತದಿಂದ ಬೃಹತ್ ಮೆರವಣಿಗೆಯಲ್ಲಿ ಹೊರಟು ಕಾಲೇಜು ರಸ್ತೆ, ಚನ್ನಮ್ಮ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿದರು. ಕೇಂದ್ರ ಯುಪಿಎ ಸರ್ಕಾರದ ವೈಫಲ್ಯದ ವಿರುದ್ಧ ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

10 ಸಾವಿರ ರೂಪಾಯಿಗೆ ಕಡಿಮೆಗೊಳಿಸದಂತೆ ಶಾಸನ ಬದ್ಧ ಕನಿಷ್ಠ ಕೂಲಿಯನ್ನು ಜಾರಿಗೊಳಿಸಬೇಕು. ಎಲ್ಲ ಕಾರ್ಮಿಕರಿಗೆ ನಿವೃತ್ತಿ ವೇತನ ನೀಡಬೇಕು. 45 ದಿನಗಳ ಒಳಗೆ ಕಾರ್ಮಿಕ ಸಂಘಟನೆಗಳ ಕಡ್ಡಾಯ ನೋಂದಣಿ ಮತ್ತು ಐಎಲ್‌ಓನ 87 (ಸಂಘಟನಾ ಹಕ್ಕು) ಹಾಗೂ 98ನೇ (ಸಾಮೂಹಿಕ ಚೌಕಾಶಿ ಹಕ್ಕು) ನಿರ್ಣಯಗಳನ್ನು ಕೇಂದ್ರ ಸರ್ಕಾರ ದೃಢೀಕರಿಸಬೇಕು.
 
ಉರುವಲು ಹಾಗೂ ಸಾರಿಗೆ ವೆಚ್ಚವನ್ನು ಈಗಿನ ಸಾರಿಗೆ ವೆಚ್ಚದ ಅನುಗುಣವಾಗಿ ನೀಡಬೇಕು. ಬಾಡಿಗೆ ಹಣವನ್ನು ಸರಿದೂಗಿಸಬೇಕು. 5ನೇ ದಿನಾಂಕದೊಳಗೆ ವೇತನವನ್ನು ನೀಡಬೇಕು. ಬೋನಸ್, ಭವಿಷ್ಯನಿಧಿ ಪಾವತಿ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನೌಕರರ ಸಂಘ, ಜೀವ ವಿಮಾ ನೌಕರರ ಸಂಘ, ಭಾರತೀಯ ಮಜ್ದೂರ ಸಂಘ, ಸಿಐಟಿಯು, ಎಐಟಿಯುಸಿ, ಐಎನ್‌ಟಿಯುಸಿ ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳ ಸದಸ್ಯರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 

 ಗೋಕಾಕ ವರದಿ
ಬೆಲೆ ಏರಿಕೆ ತಡೆಗಟ್ಟುವಿಕೆ ಹಾಗೂ ಕನಿಷ್ಠ ವೇತನ ನೀಡುವುದು ಸೇರಿದಂತೆ ಮೊದಲಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕು ದಿನಗೂಲಿ ಹಮಾಲರ ಕ್ಷೇಮಾಭಿವೃದ್ಧಿ ವಿವಿಧ ಉದ್ಧೇಶಗಳ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ತಾಲ್ಲೂಕು ಸಮಿತಿ, ಅಕ್ಷರ ದಾಸೋಹ ನೌಕರರ ಸಂಘ, ಗ್ರಾ.ಪಂ. ನೌಕರರ ಸಂಘ ಹಾಗೂ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ವಾಲ್ಮೀಕಿ, ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿಯೊಂದಿಗೆ ರಸ್ತೆ ತಡೆ ನಡೆಸಿ, ತಹಶೀಲ್ದಾರ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ ಔದ್ರಾಮ ಅವರಿಗೆ ಮನವಿ ಸಲ್ಲಿಸಿದರು.

ಪೆಟ್ರೋಲಿಯಂ ಉತ್ಪನ್ನ ಬೆಲೆ ಗಗನಕ್ಕೇರಿರುವುದರಿಂದ, ಜನಸಾಮಾನ್ಯರು ಸಂಕಷ್ಟದಿಂದ ಬಳಲುತ್ತಿರುವುದರಿಂದ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, ಬಡ ಕಾರ್ಮಿಕರಿಗೆ ಸಕಲ ಸೌಲಭ್ಯ ಕಲ್ಪಿಸುವುದು, ಗ್ರಾ.ಪಂ. ನೌಕರರಿಗೆ ಕನಿಷ್ಠ ವೇತನ ನಿಗದಿ, ಪಡಿತರ ಚೀಟಿ ವಿತರಣೆ ವ್ಯವಸ್ಥೆ ಬಲಪಡಿಸುವಂತೆ ಮನವಿಯಲ್ಲಿ ಸಂಘಟಕರು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಗೈಬು ಜೈನೆಖಾನ್, ಎಲ್.ಬಿ.ಉಪ್ಪಾರ, ಬಸವರಾಜ ಆರೆನ್ನವರ, ದೊಡ್ಡವ್ವ ಪೂಜೇರಿ, ಎಂ.ವಿ.ಸೂರನ್ನವರ, ಎಂ.ವಾಯ್.ನಕೋಜಿ, ವಿ.ಬಿ.ಖಾನಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.

ಖಾನಾಪುರ ವರದಿ
 ಪಟ್ಟಣದ ಅಂಗನವಾಡಿ, ಗ್ರಾಮ ಪಂಚಾಯಿತಿ ಅಂಚೆ, ಕಂದಾಯ ಹಾಗೂ ವಿವಿಧ ಇಲಾಖೆಗಳ ಗುತ್ತಿಗೆ ಆಧಾರದ ನೌಕರರು ಶಿವಸ್ಮಾರಕದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರಮುಖ ಪ್ರದೇಶಗಳಾದ ಸ್ಟೇಷನ್ ರಸ್ತೆ, ಸಿಂಡಿಕೇಟ್ ಬ್ಯಾಂಕ್ ವೃತ್ತ, ಘೋಡೆ ಗಲ್ಲಿ, ನಿಂಗಾಪುರ ಗಲ್ಲಿ, ಮಠ ಗಲ್ಲಿ, ಫಿಶ್ ಮಾರ್ಕೆಟ್, ಗೋವಾ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. ನಂತರ ಪಟ್ಟಣದ ಮಿನಿವಿಧಾನಸೌಧದಲ್ಲಿ ಪ್ರಭಾರಿ ಜಿಲ್ಲಾಧಿಕಾರಿ  ಜ್ಯೋತ್ಸ್ನಾ ಅವರ ಮೂಲಕ  ಪ್ರಧಾನ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಗತ್ಯ ಪಧಾರ್ಥಗಳ ಬೆಲೆಏರಿಕೆಗೆ ಕಡಿವಾಣ ಹಾಕಬೇಕು, ಅಂಗನವಾಡಿ ಕಾರ್ಯಕರ್ತೆಯರಿಗೆ ಈಗಿರುವ ವೇತನವನ್ನು ರೂ.10,000 ಕ್ಕೆ, ಸಹಾಯಕರಿಗೆ ರೂ. 7000 ಕ್ಕೆ ಹೆಚ್ಚಿಸಬೇಕು.

ಗ್ರಾ.ಪಂ. ನೌಕರರ, ಅಂಚೆ ಸಿಬ್ಬಂದಿಯ ವೇತನ ಹೆಚ್ಚಿಸಬೇಕು, ನಿವೃತ್ತಿ ಹೊಂದಿದ ನೌಕರರಿಗೆ ಪಿಂಚಣಿ ಸಮಯದಲ್ಲಿ 1,00,000 ವರೆಗೆ ಧನಸಹಾಯ ನೀಡಬೇಕು. ಪ್ರತಿವರ್ಷ ದೀಪಾವಳಿ ಅಥವಾ ದಸರಾ ಹಬ್ಬದ ಸಮಯದಲ್ಲಿ ನೌಕರರಿಗೆ ರೂ. 5000ಗಳ ವರೆಗೆ ಬೋನಸ್ ನೀಡಬೇಕು ಹಾಗೂ ಪ್ರತಿಯೊಬ್ಬ ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ಬಿಪಿಎಲ್ ಪಡಿತರ ಚೀಟಿ ವಿತರಿಸಬೇಕು ಎಂದು ಮನವಿಯಲ್ಲಿ ಸರ್ಕಾರವನ್ನು  ಆಗ್ರಹಿಸಲಾಗಿದೆ. 

ಅಂಗನವಾಡಿ ಕಾರ್ಯಕರ್ತೆರ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಮೇಘಾ ಮಿಠಾರೆ, ಕಾರ್ಮಿಕ ಮುಖಂಡರಾದ ನಾಗೇಶ ಸಾತೇರಿ, ಫರ್ಜಾನಾ ನಾಯ್ಕ, ಶಕೀಲಾ ಫಾರಸ್, ಭಾರತಿ ಮುರಕುಟೆ, ಅನಿತಾ ಬೈಲಹೊಂಗಲ, ಸುಜಾತಾ ಘಂಟಿ, ಗಂಗಮ್ಮ ಕಳಸಣ್ಣನವರ, ಡೋಲಾರಿ ಅಪ್ಪಾ ಗಾವಡಾ, ಪ್ರಕಾಶ ಕರೆಣ್ಣವರ ಮತ್ತಿತರರು ಉಪಸ್ಥಿತರಿದ್ದು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಸವದತ್ತಿ ವರದಿ
`ವಿದೇಶಿ ಉದ್ಯಮಪತಿಗಳಿಗೆ ಹಾಗೂ ಕಾರ್ಪೋರೇಟ್ ಕಂಪೆನಿಗಳಿಗೆ ಸಹಾಯ ಧನ ಕೊಟ್ಟಿರುವುದರಿಂದ ಬೇಕಾಬಿಟ್ಟಿಯಾಗಿ ಬೆಲೆ ಏರಿಕೆ ಮಾಡಿ ದುಡಿಯುವ ಬಡ ಕಾರ್ಮಿಕರಿಗೆ ಸಿಗುವ ಸೌಲಭ್ಯ ಕಡಿತ ಮಾಡಿದ್ದರ ಪರಿಣಾಮ ಅವರೆಲ್ಲರೂ ಬೀದಿಪಾಲಾಗುವ ಸ್ಥಿತಿ ಬಂದಿದೆ~ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷ ಎಲ್.ಎಸ್. ನಾಯಕ ಹೇಳಿದರು.

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ಸ್ ಸಂಘಟನೆ ಸವದತ್ತಿ ತಾಲ್ಲೂಕು ಘಟಕವು ಮಂಗಳವಾರ ಬೆಲೆ ಏರಿಕೆ ತಡೆಗಟ್ಟಲು ಹಾಗೂ ಕನಿಷ್ಠ ವೇತನಕ್ಕಾಗಿ ಅಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದ ನಂತರ ಅವರು ಮಾತನಾಡಿದರು. ಸರ್ಕಾರಗಳ ದ್ವಂದ ನೀತಿಯಿಂದ ಲಕ್ಷಾಂತರ ಕಾರ್ಮಿಕರ ಬದುಕು ಸಾಗಿಸುವದು ಕಷ್ಟವಾಗಿದೆ ಎಂದರು.

ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಸರ್ಕಾರ ಸೂಕ್ತ ಬೆಂಬಲ ಬೆಲೆ ಕೊಡದಿರುವುದರಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಆರೋಪಿಸಿದ ಅವರು, ಆಹಾರ ಭದ್ರತೆ ಕಾಯ್ದೆ ಜಾರಿಗೆ ಬರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

 ಅಕ್ಷರ ದಾಸೋಹ ಸಿಬ್ಬಂದಿಗೆ ಕನಿಷ್ಠ 10 ಸಾವಿರ ವೇತನ ನಿಗದಿ ಪಡಿಸಲು ಪ್ರತೇಕ ಬಜೆಟ್ ಕಾಯ್ದಿರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಯಿತು.

ಮನವಿ ಸ್ವೀಕರಿಸಿದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶಿವಬನ್ನವರ ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದರು.

ಸಂಘಟನೆ ಕಾರ್ಯದರ್ಶಿ ಲಕ್ಷ್ಮಿ ಅಮಠೆ, ಉಪಾಧ್ಯಕ್ಷೆ ಸುಮತಿ ಕೊಲ್ಲಾಪುರೆ, ಶ್ರಿಕಾಂತ ಹಟ್ಟಿಹೊಳಿ ಮತ್ತು ಕಾರ್ಮಿಕ ಸಂಘಟಣೆಗಳ ನೂರಾರು ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT