ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ದಿನಾಚರಣೆಯಲ್ಲಿ ಕಿಸಾನ್‌ಸಭಾದ ಪ್ರಧಾನ ಕಾರ್ಯದರ್ಶಿ ಗೋಪಾಲ್ ಕರೆ

Last Updated 2 ಮೇ 2012, 9:55 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಂಘಟಿತ ಹೋರಾಟದ ಮೂಲಕ ಕಾರ್ಮಿಕರ ಶೋಷಣೆ ತಡೆಗಟ್ಟಬೇಕು ಎಂದು ಅಖಿಲ ಭಾರತ ಕಿಸಾನ್‌ಸಭಾ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಗೋಪಾಲ್ ಕರೆ ನೀಡಿದರು.
ನಗರದ ಬಿ.ಡಿ. ರಸ್ತೆಯ ಸಿಪಿಐ ಕಚೇರಿ ಮುಂಭಾಗ ಮಂಗಳವಾರ ಮೇ ದಿನ ಹಾಗೂ ಹುತಾತ್ಮರ 35ನೇ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಮಿಕರ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರ ಸುಮಾರು 55 ಕಾನೂನುಗಳನ್ನು ರೂಪಿಸಿದ್ದರೂ ಸಮರ್ಪಕ ಅನುಷ್ಠಾನವಾಗಿಲ್ಲ. ಇಂದಿಗೂ ಕಾರ್ಮಿಕರ ಶೋಷಣೆ ಅವ್ಯಾಹತವಾಗಿ ನಡೆಯುತ್ತಿದೆ. ಸರ್ಕಾರದ ಕಾನೂನಿನ ಪ್ರಕಾರ 8 ಗಂಟೆಗಳ ಕಾಲ ಮಾತ್ರ ಕೆಲಸ ಮಾಡಬೇಕು. ಆದರೆ, ಇಂದು ಐಟಿ, ಬಿಟಿ ಕಂಪೆನಿಗಳಲ್ಲಿ ಸಹ 12 ಗಂಟೆಗಳ ಕಾಲ ದುಡಿಸಿಕೊಳ್ಳುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಆದ್ದರಿಂದ ಕಾರ್ಮಿಕ ವಿರೋಧಿ ನೀತಿ ಖಂಡಿಸಲು ಸಂಘಟಿತರಾಗಿ ಹೋರಾಟ ಮಾಡಬೇಕು. ಆಗ ಮಾತ್ರ ಕಾರ್ಮಿಕರು ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದು ಪ್ರತಿಪಾದಿಸಿದರು.ಕೇಂದ್ರ ಸರ್ಕಾರದ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಧೋರಣೆಯಿಂದ ಲಕ್ಷಾಂತರ ಟನ್ ಆಹಾರ ಧಾನ್ಯಗಳು ಉಗ್ರಾಣಗಳಲ್ಲಿ ಕೊಳೆತು ಇಲಿ, ಹೆಗ್ಗಣಗಳ ಪಾಲಾಗುತ್ತಿವೆ. ಆದರೆ, ಬಡ ಹಾಗೂ ಕೂಲಿಕಾರ್ಮಿಕರಿಗೆ ಸಬ್ಸಿಡಿ ದರದಲ್ಲಿ ನೀಡಲು ಆಹಾರ ಧಾನ್ಯಗಳು ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಕೊಳೆಯುತ್ತಿರುವ ಆಹಾರ ಧಾನ್ಯಗಳ ಬಗ್ಗೆ ಸುಪ್ರೀಂಕೊರ್ಟ್ ಸಹ ಆತಂಕ ವ್ಯಕ್ತಪಡಿಸಿತ್ತು. ಕೃಷಿ ಸಚಿವ ಶರದ್ ಪವಾರ್‌ಗೆ ಛಾಟಿ ಏಟು ನೀಡಿತ್ತು. ಬಡವರಿಗೆ ಆಹಾರ ಧಾನ್ಯಗಳನ್ನು ಪೂರೈಸದಿರುವುದು ಅಪರಾಧಕ್ಕೆ ಸಮಾನ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು. ಆದರೂ, ಕೇಂದ್ರ ಸರ್ಕಾರ ಹಾಗೂ ಕೃಷಿ ಸಚಿವರು ಈ ಬಗ್ಗೆ ಕಿಂಚಿತ್ ಕಾಳಜಿ ವಹಿಸದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ 25 ಲಕ್ಷ ಟನ್ ಆಹಾರ ಉತ್ಪಾದನೆ ಆಗುತ್ತಿದೆ ಎಂದು ಸರ್ಕಾರ ಹೇಳುತ್ತಿದ್ದರೂ ಬಡವರಿಗೆ ಆಹಾರ ಧಾನ್ಯಗಳು ದೊರೆಯುತ್ತಿಲ್ಲ. ವಿದೇಶಿ ಹಾಗೂ ಖಾಸಗಿ ಕಂಪೆನಿಗಳಿಗೆ ಮಾರು ಹೋಗಿರುವ ಸರ್ಕಾರ ಎಲ್ಲ ನೀತಿಗಳನ್ನು ವಿದೇಶಿ ಹಾಗೂ ಖಾಸಗಿ ಕಂಪೆನಿಗಳಿಗೆ ಅನುಕೂಲ ಆಗುವಂತೆ ರೂಪಿಸುತ್ತಿದೆ. ಕಳೆದ 5 ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ಪ್ರಕಾರ ಸುಮಾರು ರೂ 25 ಲಕ್ಷ ಕೋಟಿಯಷ್ಟು ಸಬ್ಸಿಡಿ ಖಾಸಗಿ ಕಂಪೆನಿಗಳಿಗೆ ಸರ್ಕಾರ ನೀಡಿದೆ ಎಂದು ದೂರಿದರು.

ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲಿ ಅತಿ ಕಡಿಮೆ ದರದಲ್ಲಿ ಬಡವರಿಗೆ ಪೂರೈಸಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಕಡಿಮೆ ದರದಲ್ಲಿ ಅಕ್ಕಿ ಕೊಡಲು ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರಕ್ಕೂ ನೀಡಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.

ಶಾಸಕ ಎಸ್.ಕೆ. ಬಸವರಾಜನ್ ಮಾತನಾಡಿ, ರಾಜಕೀಯ ಪಕ್ಷಗಳ ಇಚ್ಛಾಶಕ್ತಿ ಕೊರತೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದ ಕಾರ್ಮಿಕರ ಹಿತಾಸಕ್ತಿ ಕಾಪಾಡಲು ಸಾಧ್ಯವಾಗಿಲ್ಲ. ಕಾರ್ಮಿಕರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದೇ ಧೋರಣೆ ಹೊಂದಿವೆ. ರೈತರು ಹಾಗೂ ಕಟ್ಟಡ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಇಲ್ಲ.

ಕನಿಷ್ಠ ವೇತನವೂ ಸಿಗುತ್ತಿಲ್ಲ. ಮನೆಗೆಲಸ ಮಾಡುವವರು ಸಹ ಶೋಷಣೆಗೆ ಒಳಗಾಗುತ್ತಿದ್ದಾರೆ. ಅವರು ಸಹ ಸಂಘಟಿತರಾಗಿ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.ಸಿಪಿಐ ಜಿಲ್ಲಾ ಮಂಡಳಿ ಪ್ರಧಾನ ಕಾರ್ಯದರ್ಶಿ ಜಿ. ಚಂದ್ರಪ್ಪ, ಎಐಟಿಯುಸಿ ಜಿಲ್ಲಾ ಮಂಡಳಿ ಕಾರ್ಯದರ್ಶಿ ಟಿ.ಆರ್. ಉಮಾಪತಿ, ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷ ಬಿ. ಬಸವರಾಜು, ಕೆನರಾ ಬ್ಯಾಂಕ್ ನೌಕರರ ಸಂಘದ ವಿಶ್ವನಾಥ್ ಮತ್ತಿತರರು ಹಾಜರಿದ್ದರು.

ಹಿರಿಯೂರು ವರದಿ
ಏಳೆಂಟು ವರ್ಷಗಳಿಂದ ಕನಿಷ್ಠ ವೇತನಕ್ಕೆ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಸರ್ಕಾರ ತಕ್ಷಣ ಕಾಯಂಗೊಳಿಸಬೇಕು. ಜತೆಗೆ ಭವಿಷ್ಯದಲ್ಲಿ ಗುತ್ತಿಗೆ ಪದ್ಧತಿಯಲ್ಲಿ ನೇಮಕಾತಿ ಮಾಡುವುದನ್ನು ಕೈಬಿಡಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಎಸ್.ಸಿ. ಕುಮಾರ್ ಒತ್ತಾಯಿಸಿದರು.

ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಮಂಗಳವಾರ ಎಐಟಿಯುಸಿ ವತಿಯಿಂದ ನಡೆದ ಮೇ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಹಿಂದಿನ ಮೂರು ದಶಕಗಳಿಂದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು, ಆಶಾ ಕಾರ್ಯಕರ್ತೆಯರ ಹುದ್ದೆಗಳನ್ನು ಕಾಯಂಗೊಳಿಸದೆ, ಕನಿಷ್ಟ ಗೌರವ ಧನ ಕೊಟ್ಟು ದುಡಿಸಿಕೊಳ್ಳಲಾಗುತ್ತಿದೆ.

ಇಂತಹ ಹುದ್ದೆಗಳಿಗೆ ಬರುವವರೆಲ್ಲ ಶೇ. 100 ರಷ್ಟು ಬಡ ಕುಟುಂಬಗಳಿಂದ ಬಂದವರಾಗಿದ್ದಾರೆ. ಸರ್ಕಾರ ಬಡಜನರನ್ನು ಶೋಷಣೆ ಮಾಡುತ್ತಿರುವುದಕ್ಕೆ ಇದು ಜ್ವಲಂತ ಉದಾಹರಣೆ ಎಂದು ಅವರು ತಿಳಿಸಿದರು.
ಎಐಟಿಯುಸಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎನ್. ಶ್ರೀನಿವಾಸ್ ಮಾತನಾಡಿ, ಕಾರ್ಖಾನೆಗಳಲ್ಲಿ ದುಡಿಯುತ್ತಿರುವ, ಹೆದ್ದಾರಿಯಲ್ಲಿ ಕಾರ್ಯ ನಿರ್ವಹಿಸಿದ ಕಾರ್ಮಿಕರಿಗೆ ಅನ್ಯಾಯವಾದಾಗ ಸಂಘಟನೆ ಮಾಡಿ ಅವರಿಗೆ ನ್ಯಾಯ ಒದಗಿಸಿದ್ದೆವು.

ಅವರ ಬೇಡಿಕೆ ಈಡೇರಿದ ನಂತರ ಕಾರ್ಮಿಕರು ಸಂಘಟನೆಯ ಕಡೆ ತಿರುಗಿಯೂ ನೋಡಲಿಲ್ಲ. ಸಂಘಟನೆಯಿಂದ ಲಾಭ ಪಡೆದವರು ಅದನ್ನು ಉಳಿಸಿ ಬೆಳೆಸುವ ಬಗ್ಗೆ ಚಿಂತಿಸುತ್ತಿಲ್ಲ. ಮತ್ತೆ ಕೆಲವು ಮುಖಂಡರು ಕಂಪೆನಿಗಳ ಮಾಲೀಕರು ಕೊಡುವ ಎಂಜಲಿಗೆ ಬಲಿಯಾಗುತ್ತಿರುವುದು ವಿಷಾದದ ಸಂಗತಿ. ಸಂಘಟನೆ ಗಟ್ಟಿಯಾಗಿದ್ದಲ್ಲಿ ಮಾತ್ರ ಕಾರ್ಮಿಕರ ಬದುಕು ಹಸನಾಗಲು ಸಾಧ್ಯ ಎಂದರು.

ರಾಜ್ಯದಲ್ಲಿ ರೈತರು-ಕಾರ್ಮಿಕರ ಹಿತ ಕಾಯುವ ಜನಪ್ರತಿನಿಧಿಗಳಿಲ್ಲ. ನೀಲಿಚಿತ್ರ ನೋಡುವವರು, ವಿದೇಶ ಪ್ರವಾಸ, ರೆಸಾರ್ಟ್‌ಗಳಲ್ಲಿ ಮೋಜು ಮಾಡುವವರು ಇದ್ದಾರೆ. ಸೋನಿಯಾ ಗಾಂಧಿ ಅವರಿಗೆ ದೆಹಲಿಯಲ್ಲಿ ಇದ್ದು ಬೇಜಾರಾಗಿತ್ತೇನೊ, ಬರ ಪರಿಶೀಲನೆ ನೆಪದಲ್ಲಿ ಬಂದು 12 ನಿಮಿಷದಲ್ಲಿ ಅಧ್ಯಯನ ಮುಗಿಸಿ ಹೊರಟರು. ಇದರಿಂದ ಬರ ಹೋಗುತ್ತದೆಯೇ  ಎಂದು ಪ್ರಶ್ನಿಸಿದರು.

ಕಾರ್ಮಿಕ ಮುಖಂಡ ಜೈರಾಂರೆಡ್ಡಿ ಮಾತನಾಡಿದರು. ಭರತರೆಡ್ಡಿ, ಸಿ. ತಿಪ್ಪಮ್ಮ, ಸಾವಿತ್ರಮ್ಮ, ರಂಗಸ್ವಾಮಿ ನಾಯಕ ಮತ್ತಿತರರು ಉಪಸ್ಥಿತರಿದ್ದರು.ಸೌಭಾಗ್ಯಮ್ಮ ಸ್ವಾಗತಿಸಿದರು. ನಳಿನಾಕ್ಷಮ್ಮ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT