ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರಿಂದ ರಂಗಭೂಮಿ ದೂರ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕಾರ್ಖಾನೆಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಬೀದಿ ನಾಟಕಗಳ ಸಂಖ್ಯೆ ಔದ್ಯೋಗಿಕ ಕ್ಷೇತ್ರದಲ್ಲಿನ ಬದಲಾವಣೆಯಿಂದ ಕಡಿಮೆಯಾಗಿದೆಯೇ ಹೊರತು ಜನರಂಗಭೂಮಿ ಇಂದಿಗೂ ಪ್ರಯೋಗಶೀಲತೆಯನ್ನು ಕಳೆದುಕೊಂಡಿಲ್ಲ~ ಎಂದು ನವದೆಹಲಿಯ `ಜನಮ್~ ಸಂಸ್ಥೆಯ ಸುಧನ್ವ ದೇಶಪಾಂಡೆ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿಯು ನಗರದಲ್ಲಿ ಭಾನುವಾರ ಆಯೋಜಿಸಿದ್ದ `ಜನರಂಗ ಭೂಮಿ ದಾರಿ-ದಿಕ್ಕು~ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

 `ಕಾರ್ಮಿಕರ ಅಭಿರುಚಿಗೆ ತಕ್ಕಂತೆ ನಾಟಕ ಪ್ರದರ್ಶಿಸಿ, ಅವರನ್ನು ಪ್ರೇರೇಪಿಸಿದರೂ, ಆ ತೃಪ್ತಿ ಹೆಚ್ಚು ಕಾಲ ಉಳಿಯುವುದಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕ ಪ್ರೇಕ್ಷಕನನ್ನು ರಂಗಭೂಮಿ ದೀರ್ಘಕಾಲ ಹಿಡಿದಿಡಲು ಸಾಧ್ಯವಾಗಿಲ್ಲ. ಹೀಗಾಗಿ ಕಾರ್ಮಿಕರಿಂದ ರಂಗಭೂಮಿ ಬಹುಮಟ್ಟಿಗೆ ದೂರ ಉಳಿದುಕೊಂಡಿದೆ~ ಎಂದರು.

`ಜನ ಸಾಮಾನ್ಯರ ಸಮಸ್ಯೆಗಳನ್ನೇ ಕೇಂದ್ರೀಕರಿಸಿಕೊಂಡು ಕಡಿಮೆ ಖರ್ಚಿನಲ್ಲಿ ತಯಾರಾಗುವ ಬೀದಿ ನಾಟಕಗಳಲ್ಲೂ ಸೃಜನಶೀಲತೆಗೆ ಹೆಚ್ಚು ಒತ್ತು ನೀಡಬೇಕು. ಜನರ ಮೌಢ್ಯವನ್ನು ಅಳಿಸುವ ಸಲುವಾಗಿ ಬೀದಿ ನಾಟಕಗಳು ರಚನೆಗೊಳ್ಳುತ್ತವೆ ಎನ್ನುವ ಧೋರಣೆಯನ್ನು ಬಿಟ್ಟು ಜನರೊಂದಿಗೆ ಬೆರತು ಸಂವಾದ ನಡೆಸಬೇಕು~ ಎಂದು ಸಲಹೆ ನೀಡಿದರು.

`ನಾಟಕಗಳನ್ನು ಪ್ರೇಕ್ಷಕನಿರುವ ಸ್ಥಳದಲ್ಲೇ ಪ್ರದರ್ಶನ ನಡೆಸುವಂತಾಗಬೇಕು. ದಲಿತರ ಹಟ್ಟಿಗಳಲ್ಲಿ ನಾಟಕ ಪ್ರದರ್ಶನಗಳನ್ನು ಆಯೋಜಿಸುವುದರಿಂದ ದಮನಿತರ ದನಿಯನ್ನು ವಾಸ್ತವದ ನೆಲೆಯಲ್ಲಿ ಪಾರದರ್ಶಕವಾಗಿ ಬಿಂಬಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ರಂಗಭೂಮಿಯಲ್ಲಿ ಹಲವು ಪ್ರಯೋಗಗಳು ನಿರಂತರವಾಗಿ ನಡೆಯಬೇಕಿದೆ~ ಎಂದರು.

ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, `ರಾಷ್ಟ್ರೀಯ ನಾಟಕ ಶಾಲೆ ಮತ್ತು ಅದರ ಪ್ರಾದೇಶಿಕ ಕೇಂದ್ರಗಳೂ ಸೇರಿದಂತೆ ಹಲವು ರಂಗಭೂಮಿ ಪಾಠ ಶಾಲೆಗಳಲ್ಲಿ ಬೋಧಿಸುವ ಪಠ್ಯವು ಈ ನೆಲದ ಪ್ರಸ್ತುತ ಸಂಸ್ಕತಿ ಮತ್ತು ಸಮಸ್ಯೆಯನ್ನು ಬಿಂಬಿಸುತ್ತಿದೆಯೇ?~ ಎಂದು ಪ್ರಶ್ನಿಸಿದರು.

`ಪ್ರಸ್ತುತ ನಮ್ಮ ನೆಲ ಎದುರಿಸುವ ಆಪತ್ತುಗಳನ್ನು ನಾಟಕ ಪ್ರಯೋಗಗಳಲ್ಲಿ ಅರ್ಥೈಸದೇ ಆತ್ಮ ದ್ರೋಹ ಮಾಡಿಕೊಳ್ಳುವ ಕಾರ್ಯ ರಂಗಭೂಮಿಯಲ್ಲಿ ನಡೆದೇ ಇದೆ. ರಂಗಭೂಮಿಯ ಮೂಲದ್ರವ್ಯವಾಗಿರುವ ಶ್ರಮ ಸಂಸ್ಕೃತಿಯ ವ್ಯಾಖ್ಯಾನ ಕಾಲಕ್ಕೆ ತಕ್ಕಂತೆ ಸಂಪೂರ್ಣ ಬದಲಾಗಿದ್ದು, ಬೀದಿ ನಾಟಕಗಳಲ್ಲಿ ಈ ನೆಲದ ಸಂಸ್ಕೃತಿಯ ಸೊಗಡನ್ನು ಅಳವಡಿಸುವ ಅವಶ್ಯಕತೆಯಿದೆ~ ಎಂದು ಹೇಳಿದರು.

`ಚೆನ್ನೈ ಕಲೈ ಕುಳು~ ಸಂಸ್ಥೆಯ ಪ್ರಳಯನ್, `ಜಾಗತಿಕವಾಗಿ ಗುರುತಿಸಿಕೊಂಡಿರುವ ದೇಶದಲ್ಲಿ ಬೀದಿ ನಾಟಕಗಳನ್ನು ಪ್ರದರ್ಶಿಸಲು ಸ್ಥಳವಕಾಶ, ಸಂಚಾರ ದಟ್ಟಣೆಯಂತಹ ಆಧುನಿಕ ಸಮಸ್ಯೆಗಳು ಎದುರುಗೊಳ್ಳುತ್ತವೆ. ಕಲಾವಿದರನ್ನು ಒಳಗೊಂಡಂತೆ ಒಟ್ಟು ರಂಗಭೂಮಿಯು ವಾಣಿಜ್ಯೀಕರಣದ ಸವಾಲನ್ನು ಸಮರ್ಥವಾಗಿ ಎದುರಿಸುವ ಅಗತ್ಯವಿದೆ~ ಎಂದರು.

ಲೇಖಕಿಯರಾದ ಡಾ.ವಿಜಯಾ, ದು.ಸರಸ್ವತಿ, ರಂಗಕರ್ಮಿ ಲಕ್ಷ್ಮಿಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT