ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲ ಬದಲಾಗಿದೆ... ಪ್ರೇಮದ ಪರಿಯೂ

Last Updated 17 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಗರಿಗರಿ ಸೀರೆ ತೊಡುವ ಅಮ್ಮ ಮಕ್ಕಳ ನಡುವೆ ಕೂತು `ರೂಪ್ ತೇರಾ ಮಸ್ತಾನಾ~ ಹಾಡನ್ನು ನೋಡಲು ನಾಚಿಕೊಂಡಿದ್ದ ದಿನಗಳಿದ್ದವು. ಎಲ್ಲವೂ ಹೀಗೇ ಇರಬೇಕು, ಹೀಗೇ ಆಗಬೇಕು ಎಂಬ ಗತ್ತಿನ ಆ ಅಮ್ಮನ ಪ್ರೀತಿ-ಪಾಠ ಕೇಳಿ ಬೆಳೆದ ಮಕ್ಕಳನ್ನು ಕಂಡು ಅನೇಕರು ಚಕಿತರಾಗುವುದುಂಟು. ಯಾಕೆಂದರೆ, ಆ ಅಮ್ಮ ಶರ್ಮಿಳಾ ಟ್ಯಾಗೋರ್. ಮಕ್ಕಳು- ಸೈಫ್ ಅಲಿ ಖಾನ್ ಹಾಗೂ ಸೋಹಾ ಅಲಿ ಖಾನ್.

ಸೋಹಾ ಬದುಕೀಗ ಸ್ಪಷ್ಟ ತಿರುವಿನಲ್ಲಿ ನಿಂತಿದೆ. ಅವರ ಜೊತೆ ಈಗ ಕುನಾಲ್ ಖೇಮು ಎಂಬ ಸಂಗಾತಿ. ಹಿಂದಿನಂತೆಯೇ ಗರಿಗರಿ ಸೀರೆಯುಟ್ಟು ಅಮ್ಮ ನಡುಮನೆಯಲ್ಲಿ ದಿವಿನಾಗಿ ಕೂತಿರುವಾಗಲೇ ಮಗಳು ಸೋಹಾ, ಕುನಾಲ್ ಖೇಮು ಹೆಗಲ ಮೇಲೆ ಕೈಹಾಕಿಕೊಂಡು ಬಿಂದಾಸ್ ಆಗಿ ಓಡಾಡುತ್ತಾರೆ. ಅಮ್ಮನ ನೋಟದಲ್ಲಿ ಆ ಕುರಿತು ತಕರಾರೇನೂ ಇಲ್ಲ.

`ಅಮ್ಮ ಕಷ್ಟಪಟ್ಟು ಮೇಲೆ ಬಂದವರು. ಅವರಿಗೆ ಬಣ್ಣದ ಬದುಕು ಚೆನ್ನಾಗಿ ಗೊತ್ತು. ಪ್ರೀತಿ, ನಟನೆ, ಮದುವೆ, ಸುತ್ತಾಟ ಇವೆಲ್ಲಾ ನಮ್ಮ ಬದುಕಿನ ಭಾಗ. ನಾನು ಯಾವುದನ್ನೂ ಮುಚ್ಚಿಡುವ ಜಾಯಮಾನದವಳಲ್ಲ. ಅಮ್ಮನಿಗಾಗಲೀ ನಾನು ತಪ್ಪು ಹೆಜ್ಜೆ ಇಡಬಾರದು ಎಂಬ ಕಳಕಳಿ ಇದೆ. ಅದರ ಪ್ರಜ್ಞೆ ನನಗೂ ಉಂಟು.

ಕುನಾಲ್‌ನ ಪ್ರೀತಿಯಲ್ಲಿ ನಾನು ಅಕಸ್ಮಾತ್ತಾಗಿ ಸಿಲುಕಿಲ್ಲ ಅಥವಾ ನನ್ನ ಒತ್ತಾಯದ ಪ್ರೀತಿಯೂ ಇದಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ ನಂತರವಷ್ಟೆ ನಾವು ಪ್ರೀತಿಸುತ್ತಿದ್ದೇವೆ ಎಂಬುದು ಗೊತ್ತಾದದ್ದು~- ಸೋಹಾ ಮಾತು ಹೀಗೆ ಸೂರ್ಯಸ್ಪಷ್ಟ.

ಎರಡು ವರ್ಷಗಳ ಹಿಂದೆ `ಢೂಂಡ್ರೆ ರೆಹ್ ಜಾವೋಗೆ~ ಚಿತ್ರದಲ್ಲಿ ಸೋಹಾ ಹಾಗೂ ಕುನಾಲ್ ಮೊದಲು ಜೋಡಿಯಾದದ್ದು. ಆಮೇಲೆ `99~ ಎಂಬ ಇನ್ನೊಂದು ಚಿತ್ರದಲ್ಲೂ ಇಬ್ಬರೂ ಒಟ್ಟಾಗಿ ನಟಿಸಿದರು.

`ಕುನಾಲ್ ವೃತ್ತಿಪರತೆ ಕಂಡು ಮೊದಲು ನಾನು ದಂಗಾಗಿದ್ದೆ. ನಾನಾಗಲೀ ಅವರಾಗಲೀ ಬಿಡುವಿನ ವೇಳೆ ಹೆಚ್ಚು ಮಾತನಾಡುತ್ತಿರಲಿಲ್ಲ. ಅದಕ್ಕೆ ಮೊದಲೇ ನಾನು `ಕಲಿಯುಗ್~ ಚಿತ್ರದಲ್ಲಿ ಅವರ ಅಭಿನಯ ಕಂಡು ಮೆಚ್ಚಿದ್ದೆ.

ಕುನಾಲ್ ಕಣ್ಣುಗಳಲ್ಲಿನ ತೇಜಸ್ಸು, ನಗುವಿನಲ್ಲಿ ತುಂಬಿಕೊಂಡ ಮುಗ್ಧತೆ ನನ್ನನ್ನು ಸೆಳೆಯಿತು. ಮೊದಲು ಆಗೊಮ್ಮೆ ಈಗೊಮ್ಮೆ ಮಾತು. ಆಮೇಲೆ ಕಣ್ಣಲ್ಲೇ ಮಾತು. ಹೀಗೇ ಮುಂದುವರಿದು ಅದ್ಯಾವ ಗಳಿಗೆಯಲ್ಲಿ ನಾನು ಪ್ರೇಮ ನಿವೇದನೆ ಮಾಡಿದೆ ಎಂಬುದೇ ಮರೆತುಹೋಗಿದೆ.~- ಪ್ರೇಮ ಪಲ್ಲವಿಸಿದ ಪರಿಯನ್ನು ಸೋಹಾ ಬಯಲು ಮಾಡುವುದು ಹೀಗೆ.

ಸೋಹಾಗೆ ಇನ್ನೊಂದು ಖುಷಿ ಇದೆ. ತಮಗೆ  ಬಾರದ ಎಷ್ಟೋ ಕೆಲಸಗಳು ತಮ್ಮ ಪ್ರಿಯಕರನಿಗೆ ಮಾಡಲು ಬರುತ್ತದೆಂಬುದೇ ಆ ಖುಷಿಗೆ ಕಾರಣ. ಕುನಾಲ್ ಅಡುಗೆ ಮಾಡುವುದರಲ್ಲಿ ನಿಸ್ಸೀಮರಂತೆ.
 
ಆದರೆ, ಸೋಹಾಗೆ ಕಾಫಿ ಮಾಡುವುದೂ ಕಷ್ಟ. `ಕಾಲ ಬದಲಾಗಿದೆ. ನನಗೆ ಅಡುಗೆ ಮಾಡಲು ಬರುವುದಿಲ್ಲ ಎಂಬ ಬಗ್ಗೆ ಕುನಾಲ್ ಆಕ್ಷೇಪಿಸುವುದಿಲ್ಲ. ಮುಂದೊಂದು ದಿನ ಅವರಿಂದಲೇ ನಾನು ಅಡುಗೆ ಕಲಿಯಬಹುದೆಂಬ ನಂಬಿಕೆ ಇದೆ~ ಎಂದು ಸೋಹಾ ನಿಸ್ಸಂಕೋಚವಾಗಿ ಹೇಳಿಕೊಳ್ಳುತ್ತಾರೆ.

ಈಗಾಗಲೇ ಸಂಸಾರಸ್ಥನಾಗಿರುವ ಅಣ್ಣ ಸೈಫ್ ಅಲಿ ಖಾನ್ ಮತ್ತೊಬ್ಬ ನಟಿ ಕರೀನಾ ಜೊತೆ ಪ್ರೇಮಸಲ್ಲಾಪದಲ್ಲಿ ತೊಡಗಿರುವುದರ ಕುರಿತೂ ಸೋಹಾಗೆ ತಕರಾರಿಲ್ಲ.

ಯಾವುದೇ ಪ್ರಶ್ನೆಗೆ ಉತ್ತರಿಸುವಾಗಲೂ ಅವರು ಪದೇಪದೇ ಹೇಳುವುದು `ಕಾಲ ಬದಲಾಗಿದೆ~ ಎಂಬ ಮಾತನ್ನೇ. ಸಮಾನಮನಸ್ಕರಿಬ್ಬರು ಪ್ರೀತಿಸುವುದರಲ್ಲಿ ತಪ್ಪೇನೂ ಇಲ್ಲ. ಅದರಿಂದ ಅವರನ್ನು ನೆಚ್ಚಿಕೊಂಡ ಯಾರಿಗೂ ತೊಂದರೆಯಾಗಬಾರದೆಂಬ ಎಚ್ಚರಿಕೆ ಇದ್ದರೆ ಸಾಕೆನ್ನುವುದು ಅವರ ಅಭಿಪ್ರಾಯ. 

`ಸೈಫ್ ನನ್ನ ಅಣ್ಣ. ಅವನ ಮನಸ್ಸನ್ನು ನಾ ಬಲ್ಲೆ. ಹದಿನೈದು ವರ್ಷ ಅವನು ಬಣ್ಣದಲೋಕದಲ್ಲಿ ಬದುಕಿದ್ದಾನೆ. ಕಳೆದ ಐದು ವರ್ಷಗಳಿಂದಷ್ಟೇ ನಿರಂತರವಾಗಿ ಯಶಸ್ಸನ್ನು ಕಂಡಿರುವುದು. ನನಗೂ ವಯಸ್ಸು ಮೂವತ್ತು ದಾಟಿದೆ. ನಾವು ಜೀವನದಲ್ಲಿ ನಿರಂತರವಾಗಿ ಪ್ರೀತಿಗಾಗಿ ಹುಡುಕುತ್ತಿರುತ್ತೇವೆ.

ಯಾರಾದರೂ ನಮ್ಮ ಬಗ್ಗೆ ಕಕ್ಕುಲತೆ ತೋರಿಬಿಟ್ಟರಂತೂ ಕರಗಿಹೋಗುತ್ತೇವೆ. ಅವನ ಹಾಗೂ ಕರೀನಾ ಪ್ರೀತಿಯ ನಿಲ್ದಾಣವನ್ನು ನಾನೂ ಹತ್ತಿರದಿಂದ ಕಂಡಿದ್ದೇನೆ. ಕರೀನಾ ಈ ಕಾಲಮಾನದ ಹೆಣ್ಣುಮಗಳು. ಅಣ್ಣನ ಬಗ್ಗೆ ಎಲ್ಲಾ ಗೊತ್ತಿದ್ದೇ ಪ್ರೀತಿಸುತ್ತಿರುವ ಆ ಹುಡುಗಿಯ ಮನಸ್ಸು ಟೊಳ್ಳಲ್ಲ.

ಮನೆಯಲ್ಲಿಯೂ ಎಲ್ಲರೂ ಬದಲಾಗುವ ಸಂಬಂಧಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ~ ಎನ್ನುವ ಸೋಹಾ ಮಾತು ಮುಗಿಯುವುದೂ `ಕಾಲ ಬದಲಾಗಿದೆ~ ಎಂಬ ಅವರ ನೆಚ್ಚಿನ ನುಡಿಯಿಂದ! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT