ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಾಂತರಗೊಳಿಸುವ ಕವಿತೆ

ಕಾವ್ಯ ಕಾರಣ
ಅಕ್ಷರ ಗಾತ್ರ

ಮೇಲ್ನೋಟಕ್ಕೆ ಇದು ಮುಕ್ತಛಂದದ ನವ್ಯಕವನದಂತೆ ಕಾಣಬಹುದು. ಆದರೆ ಒಳಗಿಳಿದಂತೆ ಇಲ್ಲಿನ ಬಿಕ್ಕಟ್ಟಿನ ಭಾಷೆ, ರೂಪಕ ಪ್ರತಿಮೆಗಳ ಪ್ರಭೆ, ವರ್ಣಿತ ವ್ಯಕ್ತಿತ್ವಗಳ ಆಳ ಅಗಲ, ಮುಖ್ಯವಾಗಿ ಇಲ್ಲಿನ ಅನುಭಾವಿಕ ಝಳ ಅರಿವಿಗೆ ತಾಗುತ್ತಿದ್ದಂತೆ ಈ ಕವಿತೆ ಶರಣರ ವಚನದ ಸಂರಚನೆ ಹೊಂದಿರುವುದು ಫಕ್ಕನೆ ಗಮನಕ್ಕೆ ಬರುತ್ತದೆ.

ವಿಶ್ವದ ಚರಿತ್ರೆ ಪುರಾಣ ಜಾನಪದ ದಂತಕತೆಗಳಿಂದ ಸಂಸ್ಕೃತಿಯ ಆಯಕಟ್ಟಿನ ಪ್ರಸಂಗವನ್ನೊ ನಿಗೂಢ ವ್ಯಕ್ತಿತ್ವವನ್ನೊ ಆಯ್ದುಕೊಂಡು ಕವಿತೆ ಕಟ್ಟುವಲ್ಲಿ ನಿಷ್ಣಾತರಾದ ಈ ಕವಿ ಕಾಲಾಂತರಗೊಂಡವರಂತೆ ಆ ಯುಗದ ಆ ಜಗದ ವಾತಾವರಣವನ್ನು ಸಜೀವವಾಗಿ ಓದುಗರ ಮುಂದಿಳಿಸುತ್ತಾರೆ. ವರ್ತಮಾನಕ್ಕೆ ಗತದ ಪ್ರಭಾವಳಿ ಒದಗಿಸುತ್ತಲೆ, ಗತವನ್ನು ವರ್ತಮಾನದ ಅಗತ್ಯಕ್ಕೆ ಹಣಿಯುತ್ತಲೆ, ಭವಿಷ್ಯ ಸೂಚಕ ಕಾಣ್ಕೆಯ ಬಾಣಬಿಡುವುದು - ಹೀಗೆ ಮೂರು ಪ್ರಕ್ರಿಯೆಗಳನ್ನು ಒಳಗೊಂಡಿರುತ್ತವೆ ಅವರ ಮಹತ್ವದ ಕವಿತೆಗಳು. ಓದುಗರನ್ನು ಕಾಲಾಂತರಗೊಳಿಸಿಬಿಡುವ `ಮರುಳ ಶಂಕರದೇವ'  ಅಂಥ ಕವಿತೆಗಳಲ್ಲೊಂದು. ನಮ್ಮನ್ನು ಸುತ್ತುವರೆದಿರುವ ಕಾಲವೆ ಬದಲಾಗಿ ಕವಿತೆ ಪ್ರಸ್ತಾಪಿಸುವ ಹಿಂದಣ ಯುಗವೊಂದು ನಮ್ಮ ಸುತ್ತಲೂ ಪಸರಿಸಿಕೊಳ್ಳುತ್ತದೆ.

ಸಾಗರೋಪಮವಾದ ಎರಡು ಮಾತುಗಳಲ್ಲಿ ಅಲ್ಲಮ ಬಸವನಿಗೆ ಮರುಳ ಶಂಕರನ ಪರಿಚಯ ಮಾಡಿಕೊಡುತ್ತಿದ್ದಾನೆ. ವಚನಕಾರರು ನೆಲದ ಮರೆಯ ನಿಧಾನದ ಬಗ್ಗೆ ಹೇಳಿದ್ದಾರೆ. ಆದರಿಲ್ಲಿನ ಮಾರ್ಮಿಕ ಪ್ರಶ್ನೆ  `ಮರಹು ಮರೆಯ ನಿದಾನವನಾರು ಬಲ್ಲರು?' ಎಂಬುದು. ಮಹಾಮನೆಯ ಸಿದ್ಧಿ ಸಾಧನೆಗಳ ಬಗ್ಗೆ ಬಸವ ತಳೆದ ಸಾಫಲ್ಯಭಾವದ ಹಿಂದಣ ಅಹಂಕಾರದ ಮರವೆಯೆ ಇದು? ಬಹಿರಂಗದ ಸಮೃದ್ಧಿ ಸಫಲತೆಗಳೆ ಅಂತರಂಗದ ಅಜ್ಞಾನ ದಾರಿದ್ರ್ಯಕ್ಕೆ ಕಾರಣವಾದಾವೆಂಬ ಆತಂಕವಿದೆ ಇಲ್ಲಿ.

`ಬಸವಡಣ್ಣಾಯಕ' ಎಂಬ ಸಂಬೋಧನೆಯ ವ್ಯಂಗ್ಯಧ್ವನಿ ಕಿವಿಗೆ ತಾಗುವಂತಿದೆ. ಅರೆಶರಣರನ್ನೂ ಹುಸಿಶರಣರನ್ನೂ ಕೂಡಿಹಾಕಿಕೊಂಡಿರುವ ಪಂಜರದಂಥ ಬಸವನ ಮಹಾಮನೆ ಅಚ್ಚಶರಣರನ್ನ ಕಂಡೂ ಕಾಣದಂತೆ ಕಡೆಗಣಿಸುತ್ತಿದೆ ಎಂಬುದೆ ಅಲ್ಲಮನ ಆರೋಪ. ಮರುಳಶಂಕರ ಶಾರೀರಿಕ ಆಧ್ಯಾತ್ಮಿಕ ಸೂಕ್ಷ್ಮಜೀವಿ. ಅವ ಮಹಾಮನೆಗೆ ಕರೆಯದೇ ಬಂದವ. ಇನ್ನೇನು ಹೇಳದೇ ಹೋಗಿಬಿಡುವುದರಲ್ಲಿದ್ದ. ಅಷ್ಟರಲ್ಲಿ ಅವನ ಇರವು ಅಲ್ಲಮನಿಂದ ಜಗಜ್ಜಾಹೀರಾಯಿತು. 

`ಬೆವರು ನುಂಗಿದ ಮೈಯ ಬಯಲ ಹೀರಿ ಹೀರಿ ಕುಳವೋದ ಕೆನ್ನೆಗಳ'  ಮರುಳ ಶಂಕರದೇವನ  `ತಲೆಗೂದಲಿನ ಕಾನನದ ಕೆಳಗೆ'  ಅಡಗಿರುವ ಆಧ್ಯಾತ್ಮಿಕ `ಖನಿಜಗಳ ಖನಿ'ಯನ್ನು ಅಗೆದು ತೆಗೆದು ತೋರುವೆ ಬಾ ಕಣ್ಣಾರೆ ನೋಡು ಎಂದು ಬಸವನನ್ನು ಕರೆಯುತ್ತಿದ್ದಾನೆ ಅಲ್ಲಮ. ಮಹಾಮನೆಯ ಎಂಜಲೆಲೆ ತೊಟ್ಟಿಯ ಒಕ್ಕುಮಿಕ್ಕ ಪ್ರಸಾದ ಮೆಲ್ಲುತ್ತ ಹನ್ನೆರಡು ವರ್ಷ ಅಲ್ಲಮನಿಗಾಗಿ ಕಾಯುತ್ತಿದ್ದ  ಮರುಳ ಶಂಕರನ ಸುಳಿವು ಬಸವನೂ ಸೇರಿದಂತೆ ಯಾವ ಶರಣ ಶರಣೆಯರಿಗೂ ಸಿಕ್ಕಲೇ ಇಲ್ಲ ಎಂಬುದು ಸಖೇದಾಶ್ಚರ್ಯ ಸಂಗತಿ. `ಈ ಸುಟ್ಟ ಕಣ್ಣುಗಳ ಮಧ್ಯೆ ಬೆಳ್ಳಿಬೆಳಕುಲಿವ ಪರುಷದ ಪಕ್ಷಿ' ಎಂದು ಸತ್ತು ಸುಟ್ಟುಹೋಗಬಹುದಾದ ಮಣ್ಣಿನ ಕಣ್ಣುಗಳ ನಡುವೆ ತೆರೆದ ಮಾತಾಡುವ ಮೂರನೆ ಕಣ್ಣನ್ನು ತೋರಿಸಿ ಇದು ಅವಿನಾಶಿ, ಇದೆ ಅಚ್ಚ ಶರಣನ ಕುರುಹು ಎಂದು ಮನದಟ್ಟು ಮಾಡಿಸುತ್ತಾನೆ.

ಪರಂಪರೆಯ `ಅವಶೇಷಗಳ ಗಾಳಿ ಹುಯ್ಯಲಿನಲ್ಲಿ'  ಮಾನವೀಯ  `ಸತ್ಯವನೆರೆದೆ' ಎಂಬ ಮುಂದಿನ ಪಂಕ್ತಿಯಲ್ಲಿ ಬಸವ ಅಸಾಮಾನ್ಯಪುರುಷ ಎಂಬ ನಂಬಿಕೆ ವ್ಯಕ್ತವಾಗಿದೆ.  `ಬೆಟ್ಟಗಳಿಗೆಣೆಯಾಗಿ ಕೊಬ್ಬಿದ ನದಿ' ಮತ್ತು  `ಬಡಬಾಗ್ನಿ ಸೀಳಿದ ಸಮುದ್ರದ ಬಸಿರಿನ ನೀರು'  ಮಹಾ ಪ್ರಳಯದ ಸಂಕೇತಗಳು. ಅಂಥ ಅವಘಡದ ನಂತರ ಮತ್ತೆ ಮರಳುವ ಸಮಸ್ಥಿತಿಯನ್ನು  `ದೋಣಿ ಹಡಗುಗಳ ತಳದ ಸೋಂಕಲ್ಲಿ ಪುಳಕ'ಗೊಳ್ಳುವ ಪ್ರಕ್ರಿಯೆ ಸೂಚಿಸುತ್ತದೆ. ಅಲ್ಲದೆ ಈ ಸಾಲುಗಳು ಅಲೌಕಿಕ ಸಿದ್ಧಿಯ ಶಿಖರವೇರಿದ ನಂತರವೂ ಲೌಕಿಕ ವಾಂಛೆಗಳ ತಳಕ್ಕಿಳಿಯುವ ಸಾಧಕರ ಪಾಲಿನ ವಿಧಿವಿಲಾಸವನ್ನು ಸೂಚಿಸುವಂತೆಯೂ ಕಾಣುತ್ತವೆ. ಏನೇನೆಲ್ಲ ಕಂಡುಂಡ ಬಸವನಿಗೂ ಮರುಳ ಶಂಕರನ ಗುಪ್ತ ಅಸ್ತಿತ್ವ ತಿಳಿಯದೆ ಹೋಯಿತಲ್ಲ ಎಂಬುದೆ ಅಲ್ಲಮನ ವಿಷಾದಾಲಾಪ.

ಮಹಾಮನೆಯ ಒಡೆಯ ಬಸವನ `ಪ್ರಸಾದಕುಳದೆಂಜಲೆಲೆ ದಡದಲ್ಲಿನಾ-ಹಡಗು'  ಆತ್ಮಪ್ರತ್ಯಯದ ಹಡಗೊ? ದಾಸೋಹ ಧನ್ಯತೆಯ ಹಡಗೊ? ಕಲ್ಯಾಣ ಕ್ರಾಂತಿಯ ಹುಮ್ಮಸ್ಸಿನ ಹಡಗೊ? ಅಂಥ ` ಹಡಗನಪ್ಪಳಿಸಿ ಗಳಿಸಿ ಬದುಕಿದ ವಣಿಜ ಮರುಳ ಶಂಕರದೇವ `ಅದಿನ್ನೆಂಥ ದಿವ್ಯ ಆಧ್ಯಾತ್ಮಿಕ ಆನುಭಾವಿಕ ಸರಕು ಹೊತ್ತು ತಂದಿದ್ದಾನು? ಅವನ ಬಳಿ ಇರುವುದು  `ಹಡಗಲ್ಲ'.  ಕೇವಲ `ಕಜ್ಜಿನಾಯಿಯ ತುರಿತುರಿ ಮೈಯ್ಯ' ಇರವು. `ದಿಕ್ಕೆಟ್ಟ ಮೋಡಗಳ ಹರುಕನ್ನು'  ಅರಿವೆಯಂತೆ ಹೊದ್ದ ನಿಲುವು. ಹೊರನೋಟಕ್ಕೆ ` ಮರೆವ ಹಿಂದಣ ಮರಣ'ದಂತೆ ಭಾಸವಾಗುವ ಈ ಮರುಳಶಂಕರದೇವ ಎಲ್ಲ ಮರೆವಿನ ಕತ್ತಲೆಯನ್ನು ಕೊಲ್ಲಬಲ್ಲ ಜ್ಯೋತಿಸ್ವರೂಪ.

ಎರಡನೆ ಭಾಗದ `ಈ ಕಳ್ಳ ನಗುವಿನ ಸವಿಯ ಸಾರದ'  ಎಂಬ ಸಾಲಿನ ಭಾವಸಂದಿಗ್ಧತೆ ಗಮನಾರ್ಹ. ಸಾಮಾನ್ಯ ನುಡಿಗಟ್ಟಾಗಿ  `ಕಳ್ಳನಗು'  ಸುಳ್ಳು ಮೋಸ ನಯವಂಚನೆಯನ್ನು ಸೂಚಿಸುತ್ತದೆ. ಆದರಿಲ್ಲಿ  `ಅಲ್ಲಮ ಬರುವವರೆಗೂ ಅದೃಶ್ಯನಾಗಿ ನಿನ್ನ ಕಣ್ಣೆದುರೆ ಇದ್ದೆನಲ್ಲ' ಎಂಬ ಮರುಳ ಶಂಕರನ ತುಂಟನಗುವಾಗಿ ಪರಿಣಮಿಸುತ್ತದೆ. ಅಲ್ಲದೆ `ಈ ಕಣ್ಣ ಗೊಂಬೆಯ ಸೂತ್ರದ ಈ ಕಳ್ಳ'  ಎಲ್ಲ  `ನಗುವಿನ ಸವಿಯ ಸಾರದ' ವಣಿಜ ಎಂಬ ನಿಂದಾಸ್ತುತಿಯ ನುಡಿಯನ್ನಾಗಿಯೂ ಓದಬಹುದಾಗಿದೆ. `ಈ ಮೈಗೆ ಬಿದ್ದ ಕೂರಗಳ ಪಡೆಯ'  ಶ್ವಪಚನೆ ಅಚ್ಚಶರಣ ಎಂಬ ಅಲೌಕಿಕ ಪಾಠ ಹೇಳುತ್ತಿರುವ ಅಲ್ಲಮ ಮುಂದೆ ಮತ್ತೆ ಹನ್ನೆರಡು ವರ್ಷಗಳ ನಂತರ ತಾನೆ `ಕೆದರಿದ ತಲೆಯ...ಹಣೆಯ ಬುಗುಟಿನ ...ಬಿದ್ದು ಮೊಣಕಾಲೊಡೆದ...ಉರುಗು ಟೊಂಕದ ಪಿರುಪುಗುಂಟನ'  ಅವತಾರದಲ್ಲಿ ಮಹಾಮನೆಗೆ ಮರಳಿಬಂದು (ಶೂನ್ಯಸಂಪಾದನೆ, ಸಂ: ಡಾ.ಎಲ್.ಬಸವರಾಜು, 1969, ವಚನ 691) ಶೂನ್ಯಸಿಂಹಾಸನ ಏರಲಿರುವುದರ ಸೂಚನೆ ನೀಡುತ್ತಿರುವಂತೆ ಕಾಣುತ್ತದೆ. ಅಕ್ಕ ಅಲ್ಲಮ ಮರುಳಶಂಕರರಂಥ ವಿಚಿತ್ರ ಮಹಾಶರಣರ ಜೊತೆ ತೋರುಗಾಣಿಕೆ ಶರಣರನ್ನೂ `ಹಡೆದ ಕರುಳಿರದ ತಾಯಿ'  ಬಸವನ `ಮಹಾಮನೆಯ ಲಕ್ಷ್ಮಿ'  ಮತ್ತು ಅಧಿಕಾರಕ್ಕೆ ಕಚ್ಚಾಡುವ ರಾಜವಂಶಸ್ಥರನ್ನು ಹಡೆದು ಹಗೆತನ ಹೆಚ್ಚಿಸಿದ ತಾಯಿ ` ಕಲಚೂರ್ಯ' ವಂಶದ ಬಿಜ್ಜಳನ  `ವಿಜಯಲಕ್ಷ್ಮಿ'  ಇಬ್ಬರೂ ಮಲಸೋದರಿಯರು ಎಂಬ ರಾಜಕೀಯ ಒಳನೋಟ ತೀಕ್ಷ್ಣವಾದದ್ದು.

`ಕಾಯುವಿಕೆ ಕಾಯಿ ಮಾಗಿ... ಹಣ್ಣು ರಸವೂರುತಿದೆ' ಕಾಯುತ್ತಲೆ ಆಯುಷ್ಯ ಸವೆಸಿದ  `ಮರುಳಶಂಕರಗೀಗ ಕಂಗಳೇ ಪ್ರಾಣ' .  ಪ್ರಾಣವನ್ನೆಲ್ಲ ಕಣ್ಣಲ್ಲೆ ಕೇಂದ್ರೀಕರಿಸಿ ಅಲ್ಲಮನೆಂಬ ಅಮೃತ ಹೀರುತ್ತಿದ್ದಾನೆ. ಇಲ್ಲಿಗೆ ಅವ ಭೂಮಿಗೆ ಬಂದ ಮಣಿಹವೆ ಮುಗಿದಿದೆ.  `ತೊಟ್ಟಗಳಚುವ ಮೊದಲೆ/  ಕಿತ್ತು ಒಪ್ಪಿಸು ನಿನ್ನ ಶರಣ ಸಂದೋಹಕ್ಕೆ'  ಎಂಬ ಮಾತು ಮರುಳ ಶಂಕರ ನಿಂತುನಿಂತಲ್ಲೆ ಪ್ರಾಣ ಬಿಡಲಿರುವುದನ್ನು ಸೂಚಿಸುತ್ತ, ಅದಕ್ಕೂ ಮುಂಚೆ ಶರಣಗಡಣ ಅವನ ಆತ್ಮಪ್ರಸಾದವನ್ನು ಸ್ವೀಕರಿಸಬೇಕೆಂಬ ಇಂಗಿತ ವ್ಯಕ್ತಪಡಿಸುತ್ತದೆ. `ಹಣ್ಣಲ್ಲ, ಮಣ್ಣು ಹುಳುಗಳ ಹಬ್ಬ' ಎಂಬಲ್ಲಿ ಮತ್ತೆ ಅರ್ಥ ಜಟಿಲಗೊಳ್ಳುತ್ತದೆ.

ಮರುಳ ಶಂಕರ ಬರಿ ಹೊಟ್ಟೆ ಹಸಿವು ತಣಿಸುವ ಹಣ್ಣಲ್ಲ, ಮಣ್ಣಜೀವಿಗಳಿಗೆಲ್ಲ ಹಬ್ಬಮಾಡಿಸುವಂಥ ಸಂತ ಎಂಬುದು ಒಂದು ಅರ್ಥ; ಅವ ಹಣ್ಣಲ್ಲ ಮಣ್ಣು- ಎಲ್ಲ ಹುಳುಗಳಿಗೆ ಹಬ್ಬವಾಗುವ ಅಪ್ಪಟ ದೇಸಿ ಮಣ್ಣು ಎಂಬುದು ಇನ್ನೊಂದು ಅರ್ಥ; ಬಸವನ ಸುತ್ತ ನೆರೆದಿರುವ ಶರಣರು ಇನ್ನೂ ಮರುಳ ಶಂಕರನಂತೆ ಹಣ್ಣಾಗಿಲ್ಲ, `ಮಣ್ಣು ಹುಳುಗಳ' ಹಾಗೆ `ಹಬ್ಬ'  ಮಾಡುತ್ತಿರುವ ಲೌಕಿಕ ಜೀವಿಗಳೆ ಹೆಚ್ಚು ಅವರಲ್ಲಿ ಎಂಬುದು ಮತ್ತೊಂದು ಅರ್ಥ. ಈ ಮೂರನ್ನೂ ಮೀರಿಸುವ ಮಗದೊಂದು ಅರ್ಥವೂ ಇದ್ದೀತು. ವಿವಿಧಾರ್ಥಗಳಿಗೆ ಲಗ್ಗೆಯಿಕ್ಕಿ ಚಿಂತನೆ ಹರಿತಗೊಳಿಸಿ ಹೃತ್ಪೂರ್ವಕವಾಗಿ ಸ್ವೀಕೃತವಾಗುವುದೆ ಅತ್ಯುತ್ತಮ ಕವಿತೆಯ ಮುಖ್ಯ ಲಕ್ಷಣವಲ್ಲವೆ?

ಅಂಥ ಮಣ್ಣು ಹುಳುಗಳು ಕಟ್ಟಿರುವ ` ಮೃತ್ತಿಕೆಯ ಮಹಮನೆ'ಯಲ್ಲಿ  `ಬೀಜ ಗರ್ಭಿಣಿ ಹೆರುವ ಕಾಮಲತೆಯರು' ನೆರೆದಿದ್ದಾರೆ. ಅಲ್ಲಮನಿಗೆ ಪ್ರಚಂಡ ಪ್ರೇಮಾನುಭವ ನೀಡಿದ ಕಾಮಲತೆ ಅಕಾಲಿಕವಾಗಿ ಮಡಿದಮೇಲಷ್ಟೆ ಅವ ಅನುಭಾವದ ಬೆಳಕಲ್ಲಿ ಎಚ್ಚರಗೊಂಡದ್ದು. ಅಂದರೆ ಕಾಮಲತೆ ಜೀವಿತವಾಗಿದ್ದಷ್ಟೂ ಕಾಲ ಅಲ್ಲಮ ಪ್ರೇಮಸರಸ್ಸಿನ ಕಾಮಸಲಿಲದಲ್ಲಿ ಮುಳುಗಿ ಮೈಮರೆತಿದ್ದ.  ಈ ಕವಿತೆಯಲ್ಲಿನ  ಕಾಮಲತೆಯರು  ಸಶಕ್ತ ನೈಸರ್ಗಿಕ ಸೆಳೆತದ ಪ್ರತೀಕವಾಗಿದ್ದಾರೆ. ಕಾಮದ ಅಯಸ್ಕಾಂತೀಯ ಅನುಭವದಿಂದೆದ್ದು ನಿಷ್ಕಾಮದ ಅನುಭಾವ ವಲಯಕ್ಕೆ ಸಲ್ಲುವುದು ಸುಲಭಸಾಧ್ಯವಲ್ಲ. ಮಹಾಮನೆಗೂ ಕಾಮದ ಸೋಂಕಿತ್ತು ಎಂಬ ದಿಟ್ಟ ಹೊಳಹು ವಾಸ್ತವಿಕತೆಗೆ ಹತ್ತಿರವಾದದ್ದು. ಕರೆಯದೇ ಬಂದವರ, ಮಿಂದುಣದೆ, ಹೇಳದೇ ಹೋದವರ ಹೆಜ್ಜೆ ಸಾಲು...  ಎಂಬ ಸಾಲು ಮುಂದೆ ಹೇಳದೇ ಬಿಡುವ ಶಬ್ದಗಳ ಧ್ವನಿಪೂರ್ಣ ಮೌನ ಓದುಗರನ್ನು ಬಹಳ ಕಾಲ ಕಾಡುತ್ತಲೇ ಇರುತ್ತದೆ. ಶರಣಾಂದೋಲನದ ಸಂಘಟನೆಗೆ ಬದ್ಧರಾದವರ ಜೊತೆಗೆ ವಿಘಟನೆಗೆ ಕಾರಣರಾದವರನ್ನೂ ನೆನಪಿಸುವ ವೈರುಧ್ಯವಿದೆ ಇಲ್ಲಿ.  ಬೆಚ್ಚಿದೆಯ ಹೇಳು  ಎಂಬ ಕೊನೆ ಸಾಲಿನ ಚಾಟಿಯೇಟು ನಿಂತಲ್ಲೆ ಕಳೆಹೋದಂಥ ಬಸವನನ್ನು ತಟ್ಟಿ ಎಚ್ಚರಿಸುತ್ತ ಅವನ ಆತಿಥೇಯ ಭಾವವನ್ನೆ ಅಸ್ತವ್ಯಸ್ತಗೊಳಿಸಿಬಿಡುತ್ತದೆ. ಅಂತೆಯೆ ಓದುಗರನ್ನೂ ಅವಾಕ್ಕಾಗಿಸಿ ಕವಿತೆ ತಟಕ್ಕನೆ ಮುಗಿಯುತ್ತದೆ.

ವಿಶಾಲ ವಿಶ್ವದ ಎಲ್ಲ ಬಹಿರಂಗ ಕ್ರಾಂತಿಗಳಿಗೂ ಮುನ್ನ ಆಳವಾದ ಅಂತರಂಗ ಕ್ರಾಂತಿ ಆಗಬೇಕೆಂಬ ಇಂಗಿತವುಳ್ಳ ಈ ಸಾರ್ಥಕ ಕವಿತೆ, ಶರಣರ ವಚನಗಳನ್ನೆ ಸಂಭಾಷಣೆ ಸ್ವರೂಪದಲ್ಲಿ ಹೇಳಿ ಅಂತರಂಗ ಮಂಥನ ಮಾಡುವ ಆಶಯ ಹೊತ್ತಿರುವ ಮಹಾನಾಟಕ  `ಶೂನ್ಯಸಂಪಾದನೆ' ಗೆ ಕುತೂಹಲದ ತೋರುಬೆರಳೂ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT