ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಗುಣಮಟ್ಟ ಸುಧಾರಣೆ ಯೋಜನೆ

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಶಾಲಾ- ಕಾಲೇಜು ಯಾವುದೇ ಇರಲಿ ಅಲ್ಲಿ ಗುಣಮಟ್ಟಕ್ಕೆ ಆದ್ಯತೆ ಇರಬೇಕು. ವಿದ್ಯಾರ್ಥಿಗಳು, ಬೋಧಕರು, ಬೋಧಕೇತರರು ಯಾರಿಗೂ ಯಾವುದೇ ಕೊರತೆ ಇರಬಾರದು. ಎಲ್ಲಕ್ಕಿಂತ ಹೆಚ್ಚಾಗಿ ಕಲಿಕೆಯ ವಾತಾವರಣ ಇರಬೇಕು.
 
ಇದೆಲ್ಲವೂ ಇದ್ದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯತ್ತ ಆಸಕ್ತಿ ಮೂಡುತ್ತದೆ; ಉತ್ತಮ ಫಲಿತಾಂಶವನ್ನು ಸಹ ಕಾಣಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ, ಕಾಲೇಜುಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ವಿಶ್ಲೇಷಣೆ ಮಾಡುವ ಕ್ರಮಕ್ಕೆ ಮುಂದಾಗಿದೆ.

ರಾಜ್ಯದಲ್ಲಿ ಕಾಲೇಜು ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಕಾಲೇಜು ಶಿಕ್ಷಣ ಇಲಾಖೆ ವಿನೂತನ ಕಾರ್ಯಕ್ರಮ ರೂಪಿಸಿದೆ. ದೇಶದಲ್ಲಿಯೇ ಪ್ರಥಮ ಬಾರಿಗೆ, ಕಾಲೇಜುಗಳ ವಸ್ತುಸ್ಥಿತಿ ವರದಿ ಸಿದ್ಧಪಡಿಸುವ- ವಿಶ್ಲೇಷಣೆ ಮಾಡುವ ಯೋಜನೆ ಜಾರಿಗೊಳಿಸಿದೆ. ನ್ಯಾಕ್ ಆಗಾಗ ಬಂದು ಪರಿಶೀಲಿಸಿ, ಅರ್ಹವಿದ್ದಲ್ಲಿ ಮಾನ್ಯತೆ ನೀಡುತ್ತದೆ. ಆದರೆ, ಇಲಾಖೆಯ ವತಿಯಿಂದ ನಿರಂತರವಾಗಿ ನಡೆಸಲು ಉದ್ದೇಶಿಸಿರುವ ಮೌಲ್ಯಮಾಪನ ಆಯಾ ಕಾಲೇಜುಗಳ ಸುಧಾರಣೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

`ಗುಣಮಟ್ಟ ಸಾಧನೆ ಮತ್ತು ಉತ್ಕೃಷ್ಟತೆಗಾಗಿ ನಿರಂತರ ಮೌಲ್ಯಮಾಪನ~ (ಸಿಇಕ್ಯೂಇ) ಎಂಬ ವಿನೂತನ ಯೋಜನೆಯನ್ನು ಬೆಂಗಳೂರು, ಮೈಸೂರು, ಧಾರವಾಡ, ಗುಲ್ಬರ್ಗ, ಶಿವಮೊಗ್ಗ ಹಾಗೂ ಮಂಗಳೂರು ವಿಭಾಗದಲ್ಲಿ ತಲಾ 10 ಕಾಲೇಜುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾದೆ. ಇಲ್ಲಿ ಯಶಸ್ವಿಯಾದರೆ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ಸರ್ಕಾರಿ ಕಾಲೇಜುಗಳಲ್ಲಿಯೂ ಜಾರಿಗೊಳಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ.

ಸಿಇಕ್ಯೂಇ ಪ್ರಥಮ ಹಂತದ `ಆಸ್-ಇಸ್- ಅನಾಲಿಸಿಸ್~ (ವಸ್ತುಸ್ಥಿತಿ ಅಧ್ಯಯನ- ವಿಶ್ಲೇಷಣೆ) ಜನವರಿಯಿಂದ ಪ್ರಾರಂಭವಾಗಿದೆ. ಇದಕ್ಕಾಗಿ ಪ್ರತಿ ಕಾಲೇಜಿಗೆ ಇಬ್ಬರು ಕ್ವಾಲಿಟಿ ಫೆಸಿಲಿಟೇಟರ್ (ಗುಣಮಟ್ಟ ಅನುವುಗಾರರು)ಗಳನ್ನು ನಿಯೋಜಿಸಲಾಗಿದೆ. ಇವರು ಕಾಲೇಜುಗಳಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಲಿದ್ದಾರೆ. ನ್ಯಾಕ್ (ನ್ಯಾಷನಲ್ ಅಸೆಸ್‌ಮೆಂಟ್ ಅಂಡ್ ಅಕ್ರಿಡಿಷನ್ ಕೌನ್ಸಿಲ್) ನಡೆಸುವ ಮಾದರಿಯಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ.

ಏನಿದು ವಸ್ತುಸ್ಥಿತಿ ಅಧ್ಯಯನ- ವಿಶ್ಲೇಷಣೆ?
ಕಾಲೇಜುಗಳಲ್ಲಿ ಇರುವ ವಸ್ತುಸ್ಥಿತಿಯನ್ನು ಅರಿಯಲು ನಡೆಸುವ ಪ್ರಕ್ರಿಯೆ. ಪೂರ್ವನಿರ್ಧರಿತ ಕಾರ್ಯಕ್ರಮದ ಅನ್ವಯ ಮಾಪನ ವಿಧಾನಗಳನ್ನು ತಯಾರಿಸಿ, ಅದರಂತೆ ಕಾಲೇಜುಗಳ ವಸ್ತುಸ್ಥಿತಿ ವಿಶ್ಲೇಷಣೆ ನಡೆಸಿ, ಮುಂಬರುವ ಒಂದು ವರ್ಷದ ಅವಧಿಯಲ್ಲಿ ಕಾಲೇಜು ಸಾಧಿಸಬಹುದಾದ ಗುರಿಗಳನ್ನು ನಿರ್ಧರಿಸಲಾಗುವುದು.
 
ಗುಣಮಟ್ಟ ಸಾಧನೆಗಾಗಿ ನಕ್ಷೆ (ರೋಡ್ ಮ್ಯಾಪ್), ಯೋಜನೆ ಹಾಗೂ ವಸ್ತುಸ್ಥಿತಿ ವರದಿ- ವಿಶ್ಲೇಷಣೆ ಸಿದ್ಧಪಡಿಸಲಾಗುವುದು. ಗುಣಮಟ್ಟ ಸಾಧಿಸಿ, ವೃದ್ಧಿಸಿ, ಉತೃಷ್ಟತೆ ಸಾಧಿಸುವ ನಿಟ್ಟಿನಲ್ಲಿ ಕಾಲೇಜುಗಳು ವರದಿಯ ಅನ್ವಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ಅರ್ಧವಾರ್ಷಿಕ ಆಧಾರದ ಮೇಲೆ ವರದಿ ತಯಾರಿಸಿ, ನಿರಂತರವಾಗಿ ಗುಣಮಟ್ಟ ಕಾಯ್ದುಕೊಂಡು ಹೋಗುವ ಪ್ರಯತ್ನ ನಡೆಸುತ್ತಿರಬೇಕು. ವಾರ್ಷಿಕ ಸಿಇಕ್ಯುಇ ವರದಿ ತಯಾರಿಸಿ ಸಲ್ಲಿಸಿದ ನಂತರ ಮತ್ತೊಮ್ಮೆ ಕ್ವಾಲಿಟಿ ಫೆಸಿಲಿಟೇಟರ್‌ಗಳು ಕಾಲೇಜುಗಳಿಗೆ ಭೇಟಿ ನೀಡಿ ವಾರ್ಷಿಕ ಮೌಲ್ಯಮಾಪನ ನಡೆಸುವರು.

ಅವರು ಸಲ್ಲಿಸಿದ ವರದಿಯ ಆಧಾರದ ಮೇಲೆ 1 ರಿಂದ 5ರ ವರೆಗೂ ಗ್ರೇಡ್ ನೀಡಲಾಗುವುದು. ಇದರಿಂದ ಪ್ರತಿ ಕಾಲೇಜು ವರ್ಷದಿಂದ ವರ್ಷಕ್ಕೆ ಗುಣಮಟ್ಟದ ನಕ್ಷೆಯಲ್ಲಿ ಉತ್ತಮ ರೀತಿಯಲ್ಲಿ ಪ್ರಗತಿ ಸಾಧಿಸುವ ಪ್ರಯತ್ನ ನಡೆಸುವುದು ಸಾಧ್ಯವಾಗಲಿದೆ ಎಂಬುದು ಇಲಾಖೆಯ ಉದ್ದೇಶ.

ಕ್ವಾಲಿಟಿ ಫೆಸಿಲಿಟೇಟರ್‌ಗಳು ಕಾಲೇಜಿನ ಪ್ರಾಂಶುಪಾಲರು, ಎಲ್ಲ ಪಾಲುದಾರರ ಜತೆ ಸಮಾಲೋಚಿಸುತ್ತಾರೆ. ವಸ್ತುಸ್ಥಿತಿ ಪರಾಮರ್ಶಿಸುತ್ತಾರೆ. ಕಾಲೇಜಿನಲ್ಲಿರುವ ಸೌಲಭ್ಯಗಳನ್ನು ಪರಿಶೀಲಿಸಬೇಕು. ಅಧ್ಯಾಪಕರು, ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸುತ್ತಾರೆ. ದಾಖಲೆಗಳನ್ನು ಪರಿಶೀಲಿಸುತ್ತಾರೆ.

ಕಾಲೇಜಿನ ಗುಣಮಟ್ಟ ವೃದ್ಧಿಸಲು ನಕ್ಷೆ ಸಿದ್ಧಪಡಿಸುತ್ತಾರೆ. ಕಾಲೇಜುಗಳು ಆಸ್-ಇಸ್- ಅನಾಲಿಸಿಸ್ ನಮೂನೆಯಲ್ಲಿ ಮಾಹಿತಿ ಸಿದ್ಧಪಡಿಸಬೇಕು. ಹಿಂದಿನ 5 ವರ್ಷದ ಮಾಹಿತಿಯನ್ನೂ ನೀಡಬೇಕು.
 
ಕ್ವಾಲಿಟಿ ಫೆಸಿಲಿಟೇಟರ್‌ಗಳಿಗೆ ಸಹಕಾರ ನೀಡಬೇಕು. ಗುಣಮಟ್ಟ ಅನುವುಗಾರರು, ಕಾಲೇಜುಗಳು ಒದಗಿಸಿದ ನಮೂನೆಯಂತೆ ಸಮೀಕ್ಷೆ ನಡೆಸಿ, ತಮ್ಮ ಅಭಿಪ್ರಾಯ ನಮೂದಿಸುತ್ತಾರೆ. ಇಲಾಖೆಯ ಜಂಟಿ ನಿರ್ದೇಶಕರಿಗೆ ವರದಿ ಸಲ್ಲಿಸುತ್ತಾರೆ.

ಗುಣಮಟ್ಟ ಭರವಸೆ ಕೋಶ
ಕಾಲೇಜುಗಳನ್ನು ನ್ಯಾಕ್ ಮೌಲ್ಯಮಾಪನ/ ಮರು ಮೌಲ್ಯಮಾಪನಕ್ಕೆ ಒಳಪಡಿಸುವುದರ ಜತೆ, ಮಾನ್ಯತೆ ಪಡೆಯದ ಕಾಲೇಜುಗಳಲ್ಲಿ ಗುಣಮಟ್ಟ ನಿರ್ವಹಣೆ ಅತ್ಯಂತ ಮಹತ್ವದ ವಿಷಯವಾಗಿದೆ.
 
ಈ ಹಿನ್ನೆಲೆಯಲ್ಲಿ ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ರಾಜ್ಯ ಗುಣಮಟ್ಟ ಭರವಸೆ ಕೋಶ (ಸ್ಟೇಟ್ ಕ್ವಾಲಿಟಿ ಅಶೂರೆನ್ಸ್ ಸೆಲ್) ಹಲವಾರು ಕಾರ್ಯಕ್ರಮಗಳ ಮೂಲಕ ಕಾಲೇಜುಗಳನ್ನು ನ್ಯಾಕ್ ಮೌಲ್ಯಮಾಪನ, ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಮಾನ್ಯತೆಗೆ ಒಳಪಡಿಸುವುದು, ಈಗಾಗಲೇ ಯುಜಿಸಿ ಮಾನ್ಯತೆ ಪಡೆದ ಕಾಲೇಜುಗಳು ಹೆಚ್ಚು ಅನುದಾನ ಪಡೆಯುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ.
 
ಇದೀಗ ಸಿಇಕ್ಯುಇ ಯೋಜನೆಯ ಅನುಷ್ಠಾನಕ್ಕಾಗಿ ಕಾಲೇಜಿನ ಹಂತದ ಚಟುವಟಿಕೆಗಳಿಗಾಗಿ ರೂ 10 ಸಾವಿರ ಒದಗಿಸಲಾಗಿದೆ. ಈ ಹಣವನ್ನು ಕಾಲೇಜುಗಳು ಕಡ್ಡಾಯವಾಗಿ ಬಳಸಿಕೊಳ್ಳಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು `ಪ್ರಜಾವಾಣಿ~ಗೆ ಮಾಹಿತಿ ನೀಡಿದ ಇಲಾಖೆಯ ಸಂಯೋಜನಾಧಿಕಾರಿ ಡಾ. ಕೆ. ಮಹೇಶ್, ಗುಣಮಟ್ಟ ಸಾಧನೆ ಮತ್ತು ಉತ್ಕೃಷ್ಟತೆಗಾಗಿ ನಿರಂತರ ಮೌಲ್ಯಮಾಪನ (ಸಿಇಕ್ಯೂಇ) ಯೋಜನೆಯಿಂದ ಕಾಲೇಜುಗಳ ಮೂಲಸೌಕರ್ಯ ವೃದ್ಧಿಗೆ ಸಹಾಯವಾಗಲಿದೆ. ದೇಶದಲ್ಲಿಯೇ ಪ್ರಥಮ ಬಾರಿಗೆ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.

`ನ್ಯಾಕ್ ವತಿಯಿಂದ ಕಾಲೇಜುಗಳಿಗೆ ಪರಿಶೀಲನೆಗಾಗಿ 5 ವರ್ಷಕ್ಕೊಮ್ಮೆ ಮೂವರ ತಂಡ ಭೇಟಿ ನೀಡಿ ಪರಿಶೀಲಿಸುತ್ತದೆ. ಈ ಕೆಲಸ ತುಂಬಾ ನಿಧಾನವಾಗಿ ನಡೆಯುತ್ತಿದೆ. ದೇಶದಲ್ಲಿ 40 ಸಾವಿರಕ್ಕೂ ಅಧಿಕ ಕಾಲೇಜುಗಳಿದ್ದು, ಈವರೆಗೆ ನ್ಯಾಕ್‌ಗೆ 4,500 ಕಾಲೇಜುಗಳ ಪರಿಶೀಲನೆಯನ್ನು ಮಾತ್ರ ಮಾಡಲಾಗಿದೆ.
 
ಹೀಗಾಗಿ, ನಾವಾಗಿಯೇ ವಸ್ತುಸ್ಥಿತಿ ಮೌಲ್ಯಮಾಪನವನ್ನು ಏಕೆ ಮಾಡಿಕೊಳ್ಳಬಾರದು ಎಂಬ ಉದ್ದೇಶ ಇದರಲ್ಲಿದೆ. 6 ತಿಂಗಳಿಗೊಮ್ಮೆ ಮೌಲ್ಯಮಾಪನ ನಡೆಯಲಿದೆ. ಕಾಲೇಜುಗಳು ಎಷ್ಟು ಮಟ್ಟಿಗೆ ಸುಧಾರಣೆಆಗುತ್ತಿವೆ ಎಂಬುದನ್ನು ಕಂಡುಕೊಳ್ಳಲು ಇದರಿಂದ ಸಾಧ್ಯವಾಗಲಿದೆ. ಈ ಬಗ್ಗೆ ನ್ಯಾಕ್ ಅಧಿಕಾರಿಗಳ ಜತೆಯೂ ಚರ್ಚಿಸಲಾಗಿದೆ.

ಉತ್ತಮ ಪ್ರಯೋಗ ಎಂಬ ಮೆಚ್ಚುಗೆ ಅವರಿಂದಲೂ ದೊರೆತಿದೆ~ ಎಂದು ವಿವರಿಸಿದರು.
ಕಾಲೇಜುಗಳವರು, ನ್ಯಾಕ್ ತಂಡ ಭೇಟಿ ನೀಡುತ್ತದೆ ಎಂಬ ಕಾರಣಕ್ಕೆ ಒಂದಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ನಂತರ ಐದು ವರ್ಷಗಳ ಕಾಲ ತಲೆಕೆಡಿಸಿಕೊಳ್ಳುವುದಿಲ್ಲ.
 
ಇದರಿಂದ ಗುಣಮಟ್ಟ ಸುಧಾರಣೆ ಆಮೆವೇಗದಲ್ಲಿ ನಡೆಯಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. 6 ತಿಂಗಳಿಗೊಮ್ಮೆ ಮೌಲ್ಯಮಾಪನ ನಡೆಯುತ್ತದೆ ಎಂದರೆ, ಸದಾ ಎಚ್ಚರದಿಂದ ಇರಬೇಕಾಗುತ್ತದೆ ಮತ್ತು ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನಿಸಬೇಕಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೂ ಅನುಕೂಲ ಆಗುತ್ತದೆ ಎಂಬ ಉದ್ದೇಶ ಹೊಂದಲಾಗಿದೆ ಎನ್ನುತ್ತಾರೆ ಅವರು.

ಹೊಸ ಯೋಜನೆಯಿಂದ ಅನುಕೂಲಗಳೇನು?

4 ಗುಣಮಟ್ಟ ವೃದ್ಧಿಗೆ ಪ್ರೇರಣೆ
4 ಕಾಲೇಜುಗಳಲ್ಲಿನ ಕೊರತೆಗೆ `ಕನ್ನಡಿ~
4 ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ತಿಳಿಯುತ್ತದೆ
4 ಬೋಧಕ, ಬೋಧಕೇತರ ಸಿಬ್ಬಂದಿ ಅಗತ್ಯವಿದ್ದರೆ ಗೊತ್ತಾಗುತ್ತದೆ
4 ಅನುದಾನ ಹೇಗೆ ಬಳಕೆ ಆಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ
4 ಇಲಾಖೆಗೆ ಕಾಲೇಜುಗಳ ತಾಜಾ ಮಾಹಿತಿ ದೊಡ್ಡ ಪ್ರಮಾಣದಲ್ಲಿ ಸಿಗುತ್ತದೆ
4 ಕೊರತೆಗಳು, ಸಮಸ್ಯೆಗಳಿದ್ದರೆ ಹೋಗಲಾಡಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT