ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೊನಿ ಜನರಿಗೆ ಕಂಟಕವಾದ ಶೌಚಾಲಯ ಗುಂಡಿ!

Last Updated 25 ಜನವರಿ 2012, 6:25 IST
ಅಕ್ಷರ ಗಾತ್ರ

ಹರಪನಹಳ್ಳಿ: ಬಲಿಗಾಗಿ ಬಾಯ್ತೆರೆದು ದುರ್ನಾಥ ಸೂಸುವ ಶೌಚಾಲಯ ಗುಂಡಿ. ಘನತ್ಯಾಜ್ಯ ವಿಲೇವಾರಿಯ ಅಸಮರ್ಪಕ ನಿರ್ವಹಣೆ. ಹೂಳು ತುಂಬಿಕೊಂಡಿರುವ ಚರಂಡಿ. ಕಣ್ಣು ತೆರೆಯದ ಬೀದಿದೀಪ...

-ಇವು ಪಟ್ಟಣದ ಕೊಟ್ಟೂರು ರಸ್ತೆಯ ಅಗ್ನಿಶಾಮಕ ಠಾಣೆಯ ಮುಂಭಾಗದಲ್ಲಿರುವ ಕರ್ನಾಟಕ ಹೌಸಿಂಗ್ ಬೋರ್ಡ್(ಕೆಎಚ್‌ಬಿ) ಕಾಲೊನಿ ನಿವಾಸಿಗಳನ್ನು ಹರಿದು ತಿನ್ನುತ್ತಿರುವ ಸಮಸ್ಯೆಗಳು. ಹೆಸರಿಗೆ ಇದು ಸರ್ಕಾರಿ ನೌಕರರು, ಉದ್ಯಮಿಗಳು, ವರ್ತಕರು ವಾಸಿಸುತ್ತಿರುವ ಮಧ್ಯಮ ಹಾಗೂ ಸುಶಿಕ್ಷಿತ ಕುಟುಂಬಗಳು ವಾಸಿಸುವ ಶ್ರೀಮಂತರ ಕಾಲೊನಿ. ಆದರೆ, ಅಭಿವೃದ್ಧಿಯ ದೃಷ್ಟಿಯಿಂದ ಮಾತ್ರ ಕಾಲೊನಿ `ಬಡ~ವಾಗಿದೆ.
ಕಳೆದ ದಶಕದ ಅವಧಿಯಲ್ಲಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಈ ಕಾಲೊನಿಯನ್ನು ನಿರ್ಮಿಸಿತು.

100ಮನೆಗಳ ವಿಸ್ತೀರ್ಣ ಉಳ್ಳ ಈ ಕಾಲೊನಿಯಲ್ಲಿ 40ಮನೆಗಳನ್ನು ಕಟ್ಟಡ ಕಾಮಗಾರಿಯನ್ನು ಮಂಡಳಿಯೇ ನಿರ್ಮಿಸಿತು. ಉಳಿದ ಖಾಲಿ ನಿವೇಶನ ಹಾಗೂ ವಾಸಕ್ಕೆ ಸಿದ್ಧಗೊಂಡಿದ್ದ ಮನೆಗಳನ್ನು ಬಹಿರಂಗ ಹರಾಜ್ ಮೂಲಕ ಫಲಾನುಭವಿಗಳಿಗೆ ವಿತರಿಸಲಾಯಿತು. ಜತೆಗೆ ಒಂದಿಷ್ಟು ಮೂಲಸೌಕರ್ಯ ಕಲ್ಪಿಸಿ, ನಿರ್ವಹಣೆಯ ಜವಾಬ್ದಾರಿಯನ್ನು ಸ್ಥಳೀಯ ಪುರಸಭೆಗೆ ವರ್ಗಾಯಿಸಿತು.

ಕಾಲೊನಿಯ ಪ್ರತಿ ಮನೆಯ ಸ್ನಾನ ಹಾಗೂ ಶೌಚಾಲಯದ ಕೊಳಚೆ ನೀರು ಒಂದೆಡೆ ಸಂಗ್ರಹವಾಗಲು ಕಾಲೊನಿಯ ಒಂದು ಭಾಗದಲ್ಲಿ ಶೌಚಾಲಯದ ಗುಂಡಿ ನಿರ್ಮಿಸಲಾಗಿದೆ. ನಿತ್ಯವೂ ಒಳಚರಂಡಿ ಮೂಲಕ ಹರಿದು ಬರುತ್ತಿರುವ ಕೊಳಚೆನೀರಿನಿಂದ ಈಗಾಗಲೇ ಶೌಚಾಲಯ ಗುಂಡಿ ಭರ್ತಿಯಾಗಿದೆ. ಕಾಲಕಾಲಕ್ಕೆ  ಗುಂಡಿಯಲ್ಲಿನ ಕೊಳೆನೀರನ್ನು ತೆರವುಗೊಳಿಸದ ಪರಿಣಾಮ ರಸ್ತೆಯ ಮೇಲ್ಭಾಗದಲ್ಲಿ ಕೊಳಚೆನೀರು ಜಿನುಗುತ್ತಿದೆ. ಗುಂಡಿಯ ಮೇಲ್ಭಾಗದಲ್ಲಿನ ತೆರೆದ ದ್ವಾರ ಹಾಗೂ ಜಿನುಗುತ್ತಿರುವ ಕೊಚ್ಚೆನೀರು ಇಡೀ ಕಾಲೊನಿಯ ತುಂಬೆಲ್ಲಾ ದುರ್ಗಂಧ ಹರುಡುತ್ತದೆ. ಇಲ್ಲಿ ಹಾದು ಹೋದರೆ ಸುಧಾರಿಸಿಕೊಳ್ಳಲು ನಿವಾಸಿಗಳಾದ ಕವಿತಾ, ಉಮಾ ಇತರರು.

ಗುಂಡಿಯ ಮೇಲ್ಭಾಗದಲ್ಲಿನ ಪ್ರವೇಶದ್ವಾರವನ್ನು ಮುಚ್ಚದಿರುವ ಪರಿಣಾಮ ಮಕ್ಕಳು ಹಾಗೂ ಅಪರಿಚಿತರು ಆ ಮಾರ್ಗ ಮೂಲಕ ಸಂಚರಿಸುವಾಗಿ ಗುಂಡಿಗೆ ಬಿದ್ದರೇ, ಹೆಣವಾಗುವುದರಲ್ಲಿ ಸಂಶಯವಿಲ್ಲ. ದ್ರವತ್ಯಾಜ್ಯವನ್ನು ತೆರವುಗೊಳಿಸುವಂತೆ ಇಲ್ಲಿನ ನಿವಾಸಿಗಳು ಸಾಕಷ್ಟು ಬಾರಿ ಪುರಸಭೆಗೆ ಮನವಿ ಮಾಡಿದ್ದಾರೆ. `ಸಾರ್ವಜನಿಕ ಶೌಚಾಲಯಗಳನ್ನು ಮಾತ್ರ ಉಚಿತವಾಗಿ ಶುಚಿಗೊಳಿಸಲು ಅವಕಾಶವಿದೆ. ಆದರೆ, ಕಾಲೊನಿಯಲ್ಲಿನ ಶೌಚಾ ಗುಂಡಿ ವೈಯಕ್ತಿಕ ಶೌಚಾಲಯ~. ಹೀಗಾಗಿ ನಿವಾಸಿಗಳು ಪುರಸಭೆಗೆ ವಂತಿಗೆ ಕಟ್ಟಿದರೆ ಮಾತ್ರ ಶುಚಿಗೊಳಿಬಹುದು ಎನ್ನುತ್ತವೆ ಪುರಸಭೆಯ ಮೂಲಗಳು.

ಘನತ್ಯಾಜ್ಯ ಸಹ ಸಮರ್ಪಕವಾಗಿ ವಿಲೇವಾರಿಯಾಗುತ್ತಿಲ್ಲ. ಪರಿಣಾಮ ಕಾಲೊನಿಯ ಖಾಲಿ ನಿವೇಶನಗಳಲ್ಲಿಯೇ ಜನ ಅಲ್ಲಲ್ಲಿ ಕಸ ಎಸೆಯುತ್ತಾರೆ. ಪುರಸಭೆಯ ಸಿಬ್ಬಂದಿ ಕಣ್ಣು ತೆರೆಯದಿದ್ದಲ್ಲಿ ಎಷ್ಟೋ ಬಾರಿ ನಾವೇ ಹಣಕೊಟ್ಟು ತ್ಯಾಜ್ಯವನ್ನು ಸುಟ್ಟು ಹಾಕಿಸುತ್ತೇವೆ ಎನ್ನುತ್ತಾರೆ ನಿವಾಸಿ ಶಿಲ್ಪಾ.
ಬೀದಿದೀಪಗಳು ಅದ್ಯಾವಾಗ ಕಣ್ಣು ತೆರೆದು, ಕಾಲೊನಿಗೆ ಬೆಳಕಿನ ಭಾಗ್ಯ ಕರುಣಿಸುತ್ತಿವೆಯೋ? ಯಾರಿಗೂ ಗೊತ್ತಿಲ್ಲ. ಹೀಗಾಗಿ ಇಲ್ಲಿನ ಕೆಲ ನೌಕರರು, ತಾವೇ ತಮ್ಮ ಮನೆ ಮುಂದಿನ ವಿದ್ಯುತ್ ಕಂಬಕ್ಕೆ ಬಲ್ಪ್ ಅಳವಡಿಸಿದ್ದಾರೆ. ಉಳಿದ ಕಡೆಯಲ್ಲೆಲ್ಲಾ ರಾತ್ರಿಯ ಕಾರ್ಗತ್ತಲು ಕಾಲೊನಿಗೆ ಕವಿದಿರುತ್ತಿದೆ.

ಕಾಲೊನಿ ಮಾರ್ಗವಾಗಿ ಸಂಚರಿಸುತ್ತಿರುವ ರಸ್ತೆಸಾರಿಗೆ ಸಂಸ್ಥೆಗಳ ಬಸ್‌ಗಳು ಕೋರಿಕೆಯ ನಿಲುಗಡೆ ಮಾಡದಿರುವ ಪರಿಣಾಮ, ಇಲ್ಲಿನ ನಿವಾಸಿಗಳು ಮತ್ತೊಂದು ಬಗೆ ಸಮಸ್ಯೆ ಎದುರಿಸುತ್ತಿದ್ದಾರೆ. ನಿತ್ಯವೂ ನೌಕರರು ಗ್ರಾಮೀಣ ಪ್ರದೇಶ ತಲುಪಬೇಕಾಗಿರುವುದರಿಂದ ಆಟೋರಿಕ್ಷಾಕ್ಕೆರೂ 40 ಬಿಚ್ಚಲೇಬೇಕು. ಕೋರಿಕೆಯ ನಿಲುಗಡೆಗೆ ಅವಕಾಶ ಕೊಡಿ ಎಂದು ಸ್ಥಳೀಯ ಡಿಪೋ ಮ್ಯಾನೇಜರ್ ಅವರನ್ನು ಕೇಳಿದರೂ, ಅವರು ಸಹ, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬುದು ನಿವಾಸಿಗಳ ಆರೋಪ.

ಸುಸಜ್ಜಿತ ಬಡಾವಣೆ ಎಂಬ ಕನಸುಗಳೊಂದಿಗೆ ಇಲ್ಲಿ ವಾಸ್ತವ್ಯ ಹೂಡಿದ ಕುಟುಂಬಗಳಿಗೆ ದಿನಕಳೆದಂತೆ ಸಮಸ್ಯೆಯ ಬಳ್ಳಿ ಸುತ್ತಿಕೊಳ್ಳತೊಡಗಿದೆ. ಹೀಗಾಗಿ,  ಇಲ್ಲಿನ ನಿವಾಸಿಗಳು `ಶಿವನೇ ಭಗವಂತ, ಈ ನರಕಕೂಪದಿಂದ ನಮ್ಮನ್ನು ಪಾರುಮಾಡು ತಂದೆ...~ ಸುಪ್ರಭಾತದ ಪ್ರಾರ್ಥನೆಯೊಂದಿಗೆ ದೈನಂದಿನ ಜೀವನ ಆರಂಭಿಸುವಂತಾಗಿದೆ.
ಮಂಜುನಾಥ ಯಲ್ಲಾಪುರದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT